Homeಮುಖಪುಟದೇಶದ ಹಲವೆಡೆ ಕ್ರೈಸ್ತರ ಮೇಲೆ ಮತಾಂಧ ಕೋಮುವಾದಿಗಳ ದಾಳಿ : ಕ್ರಿಸ್‌ಮಸ್ ಆಚರಣೆಗೆ ಅಡ್ಡಿ

ದೇಶದ ಹಲವೆಡೆ ಕ್ರೈಸ್ತರ ಮೇಲೆ ಮತಾಂಧ ಕೋಮುವಾದಿಗಳ ದಾಳಿ : ಕ್ರಿಸ್‌ಮಸ್ ಆಚರಣೆಗೆ ಅಡ್ಡಿ

- Advertisement -
- Advertisement -

ಪ್ರತಿ ವರ್ಷದಂತೆ ಈ ವರ್ಷವೂ ಡಿಸೆಂಬರ್ ತಿಂಗಳಲ್ಲಿ, ವಿಶೇಷವಾಗಿ ಡಿಸೆಂಬರ್ 25ರಂದು ಇಡೀ ಜಗತ್ತು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದೆ. ಏಸು ಕ್ರಿಸ್ತನ ಜನ್ಮದಿನದ ಪ್ರಯುಕ್ತ ಜನರು ಗಡಿಗಳನ್ನು ಮೀರಿ ಪರಸ್ಪರ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ, ವೈವಿದ್ಯತೆಯ ದೇಶ ಎನಿಸಿಕೊಂಡಿರುವ ನಮ್ಮ ಭಾರತದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ದೇಶದ ವಿವಿದೆಡೆ ಕ್ರೈಸ್ತ ಸಮುದಾಯದವರ ಮೇಲೆ ಮತಾಂಧ, ಕೋಮುವಾದಿ ಭಯೋತ್ಪಾದಕರ ದೌರ್ಜನ್ಯ ಹೆಚ್ಚಳವಾಗಿದೆ.

ಅನೈತಿಕ ಪೊಲೀಸ್‌ಗಿರಿ ಮೂಲಕ ಕ್ರೈಸ್ತ ಸಮುದಾಯದ ಜನರಿಗೆ ಸಂವಿಧಾನ ಕೊಟ್ಟ ಧಾರ್ಮಿಕ ಆಚರಣೆಯ ಹಕ್ಕನ್ನು ಈ ಮತಾಂಧರು ಹಿಂಸಾತ್ಮಕ ರೀತಿಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಇದಕ್ಕೆ ಕೆಲ ಅಧಿಕಾರಶಾಹಿಗಳು ಬಹಿರಂಗ ಬೆಂಬಲ ಕೊಡುವ ಮೂಲಕ ಸಂವಿಧಾನದ ಆಶಯಗಳನ್ನು ಮತ್ತು ಈ ದೇಶದ ಅಸ್ಮಿತೆಯಾದ ಸರ್ವಧರ್ಮ ಸಹಬಾಳ್ವೆ, ಸಾಮರಸ್ಯವನ್ನು ಮಣ್ಣುಪಾಲು ಮಾಡುತ್ತಿದ್ದಾರೆ.

ಇಡೀ ಜಗತ್ತು ವಿಜ್ಞಾನದ ಹಿಂದೆ ಹೋಗುತ್ತಿರುವಾಗ, ನಮ್ಮ ದೇಶದ ಮತಾಂಧರು ಮಾತ್ರ ವಿಕೃತಿ ಮೆರೆಯುತ್ತಾ ದೇಶದ ಮಾನವನ್ನು ಜಗತ್ತಿನ ಮುಂದೆ ಹರಾಜು ಹಾಕುತ್ತಿದ್ದಾರೆ.

ಕಳೆದೆರೆಡು ವಾರಗಳಿಂದ ದೇಶದ ಹಲವೆಡೆ ಕ್ರೈಸ್ತ ಧರ್ಮೀಯರ ಮೇಲೆ ಕೋಮುವಾದಿ ಭಯೋತ್ಪಾದಕರು ದಾಳಿ ನಡೆಸುತ್ತಿರುವ ಬಗ್ಗೆ ನಿರಂತರ ವರದಿಯಾಗುತ್ತಿದೆ. ಈ ದುಷ್ಕರ್ಮಿಗಳು ಕ್ರೈಸ್ತರು ಕ್ರಿಸ್‌ಮಸ್‌ ಆಚರಿಸಲೇಬಾರದು, ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂಬ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅಮಾಯಕ ಜನರ ಮೇಲೆ ನೇರ ದಾಳಿಗಳನ್ನು ಮಾಡುತ್ತಿದ್ದಾರೆ.

ಈ ವರ್ಷದ ಕ್ರಿಸ್‌ಮಸ್‌ ಆಚರಣೆಗೆ ಸಂಬಂಧಪಟ್ಟಂತೆ ದೇಶದ ವಿವಿದೆಡೆ ಕೋಮುವಾದಿಗಳು ಕ್ರೈಸ್ತ ಸಮುದಾಯವರು, ಅವರ ಆರಾಧನಾಲಯಗಳು ಮತ್ತು ಕ್ರಿಸ್‌ಮಸ್‌ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಿದ, ಕಿರುಕುಳ ನೀಡಿದ ವರದಿಯನ್ನು ಕೆಳಗಡೆ ನೋಡಬಹುದು.

ಘಟನೆ -1 : ಅಂಧ ಕ್ರಿಶ್ಚಿಯನ್ ಮಹಿಳೆ ಬಿಜೆಪಿ ನಾಯಕಿ ಹಲ್ಲೆ

ಡಿಸೆಂಬರ್ 22,2025ರಂದು ಮಧ್ಯಪ್ರದೇಶ ಜಬಲ್‌ಪುರದ ಚರ್ಚ್ ಅಥವಾ ಶೆಲ್ಟರ್ ಹೋಮ್‌ ಒಂದರಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಸಮುದಾಯದ ಅಂಧ ಬಾಲಕಿಯರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಅಲ್ಲಿಗೆ ಬಿಜೆಪಿ ಜಬಲ್‌ಪುರ ನಗರ ಘಟಕದ ಉಪಾಧ್ಯಕ್ಷೆ ಅಂಜು ಭಾರ್ಗವ ಅವರ ನೇತೃತ್ವದಲ್ಲಿ ಗುಂಪೊಂದು ನುಗ್ಗಿತ್ತು. ಈ ಗುಂಪು ಕ್ರಿಸ್‌ಮಸ್‌ ಕಾರ್ಯಕ್ರಮವನ್ನು ಮತಾಂತರ ಮಾಡುವ ಸಭೆ ಎಂದು ಆರೋಪಿಸಿ ಅಂಧ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿತ್ತು.

ಅಂಜು ಭಾರ್ಗವ ಅಂಧ ಮಹಿಳೆಯರನ್ನು ‘ಧಂಧಾ’ (ಲೈಂಗಿಕ ವ್ಯಾಪಾರ)ದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೌಖಿವಾಗಿ ನಿಂದಿಸಿದ್ದಾರೆ. ಅಲ್ಲದೆ, ಒಬ್ಬರು ಮಹಿಳೆಗೆ “ನೀನು ಈ ಜನ್ಮದಲ್ಲಿ ಕುರುಡಿಯಾಗಿದ್ದೀಯ, ಮುಂದಿನ ಜನ್ಮದಲ್ಲೂ ಕುರುಡಿಯಾಗಿಯೇ ಇರುತ್ತೀಯ” ಎಂದು ನಿಂದಿಸಿದ್ದಾರೆ. ಆ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ-2 : ದೆಹಲಿಯಲ್ಲಿ ಕ್ಯಾರೋಲ್ ಗುಂಪಿನ ಮೇಲೆ ದಾಳಿ

ದೆಹಲಿಯ ಲಜಪತ್ ನಗರದಲ್ಲಿ ಬಜರಂಗದಳದ ಸದಸ್ಯರು ಸಾಂತಾ ಟೋಪಿ ಧರಿಸಿದ ಕ್ರಿಶ್ಚಿಯನ್ ಮಹಿಳೆಯರು ಮತ್ತು ಮಕ್ಕಳ ಕ್ರಿಸ್‌ಮಸ್ ಕ್ಯಾರೋಲ್ ಗುಂಪಿಗೆ ಬೆದರಿಕೆ ಹಾಕಿದ ಘಟನೆ ಡಿಸೆಂಬರ್ 22, 2025ರಂದು ನಡೆದಿದೆ. ಕ್ಯಾರೋಲ್ ಗುಂಪಿನಲ್ಲಿದ್ದವರು ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಬಜರಂಗದಳದವರು, ಅವರ ಕ್ರಿಸ್‌ಮಸ್‌ ಆಚರಣೆಗೆ ಅಡ್ಡಿಪಡಿಸಿದ್ದಾರೆ. ಈ ಕುರಿತು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವರದಿಗಳು ಹೇಳಿವೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಘಟನೆ-3 : ಕ್ರೈಸ್ತರ ಪ್ರಾರ್ಥನಾ ಸಭೆಗೆ ನುಗ್ಗಿ ಬೆದರಿಕೆ, ನಿಂದನೆ

ಹಿಂದುತ್ವ ಗುಂಪೊಂದು ಕ್ರೈಸ್ತರ ಪ್ರಾರ್ಥನಾ ಸಭೆಗೆ ನುಗ್ಗಿ ಬೆದರಿಕೆ ಹಾಕಿದ್ದಲ್ಲದೆ, ಕ್ರೈಸ್ತ ಸಮುದಾಯ, ಏಸುಕ್ರಿಸ್ತ ಮತ್ತು ಅವರ ಇತರ ಧಾರ್ಮಿಕ ಭಾವನೆಗಳನ್ನು ತುಚ್ಛವಾಗಿ ನಿಂದಿಸಿದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಆರಂಭದಲ್ಲಿ ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ, ಕೋರಮಂಗಲ ಪೊಲೀಸರು ಆ ಘಟನೆ ಬೆಂಗಳೂರಿನಲ್ಲಿ ಅಥವಾ ಕರ್ನಾಟಕದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ, ಎನ್‌ಸಿಆರ್ (Non-Cognizable Report-NCR) ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದರು.

ಆ ಬಳಿಕ ವೈರಲ್ ವಿಡಿಯೋದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ ಎಂದು ಸುದ್ದಿಯಾಗಿತ್ತು. ನಂತರ ಅದು ಉತ್ತರ ಪ್ರದೇಶದ ಘಟನೆ ಎಂದು ವರದಿಯಾಗಿದೆ.

ವೈರಲ್ ವಿಡಿಯೋದಲ್ಲಿ ಸತ್ಯನಿಷ್ಠ ಆರ್ಯ ಎಂಬಾತ ಗುಂಪೊಂದನ್ನು ಕರೆದುಕೊಂಡು ಕ್ರೈಸ್ತರ ಪ್ರಾರ್ಥನಾ ಸಭೆಗೆ ನುಗ್ಗಿ ಅಡ್ಡಿಪಡಿಸಿ ಉಗ್ರವಾಗಿ ಬೆದರಿಕೆ ಹಾಕಿದ್ದಲ್ಲದೆ, ಇದು ಹಿಂದೂ ರಾಷ್ಟ್ರ ಇಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಅವಕಾಶವಿಲ್ಲ ಎಂದು ಹೇಳಿರುವುದು ಇದೆ.

ಈ ಸತ್ಯನಿಷ್ಠ ಆರ್ಯ ಮೂಲತಃ ಬಾಂಗ್ಲಾದೇಶದವನು ಹಾಗೂ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದ. ಆತನ ಹೆಸರು … ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಉಗ್ರ ಹಿಂದುತ್ವವಾದಿಯಾಗಿ ಬದಲಾಗಿದ್ದಾನೆ ಎಂದು ಮಾಹಿತಿ ದೊರೆತಿದೆ.

ಘಟನೆ-4 : ಕೇರಳದಲ್ಲಿ ಮಕ್ಕಳ ಕ್ಯಾರೋಲ್ ಗುಂಪಿನ ಮೇಲೆ ದಾಳಿ

ಇತ್ತೀಚೆಗೆ ವಲಸೆ ಕಾರ್ಮಿಕನ ಗುಂಪು ಹತ್ಯೆ ನಡೆದ ವಲಯಾರ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಕೇರಳದ ಪಾಲಕ್ಕಾಡ್‌ನ ಪುದುಶ್ಶೇರಿಯಲ್ಲಿ ಮಕ್ಕಳನ್ನೊಳಗೊಂಡ ಕ್ರಿಸ್‌ಮಸ್ ಕ್ಯಾರೋಲ್ ಗುಂಪಿನ ಮೇಲೆ ಸಂಘಪರಿವಾರದ (ಬಿಜೆಪಿ-ಆರ್‌ಎಸ್‌ಎಸ್‌) ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಡಿಸೆಂಬರ್ 22ರಂದು ರಾತ್ರಿ ನಡೆದಿದೆ. ಈ ಸಂಬಂಧ ಪುದುಶ್ಶೇರಿಯ ಕಲಾದಿತ್ತರ ನಿವಾಸಿ ಅಶ್ವಿನ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಿಜೆಪಿ-ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

ಪುದುಶ್ಶೇರಿಯ ಸುರಭಿ ನಗರದಲ್ಲಿ ಡಿಸೆಂಬರ್ 22ರಂದು ತಡರಾತ್ರಿ ಈ ಘಟನೆ ನಡೆದಿದ್ದು, ಅಶ್ವಿನ್ ರಾಜ್ ಮತ್ತು ಇತರ ಇಬ್ಬರು ಸುಮಾರು 10 ಜನರಿದ್ದ ಮಕ್ಕಳ ಕ್ಯಾರೋಲ್ ಗುಂಪಿನ ಮೇಲೆ ಹಲ್ಲೆ ನಡೆಸಿ, ಆ ಪ್ರದೇಶದಲ್ಲಿ ಇಂತಹ ಪ್ರದರ್ಶನಗಳನ್ನು ಅನುಮತಿಸುವುದಿಲ್ಲ ಎಂದು ಕೂಗಿರುವುದಾಗಿ ವರದಿಯಾಗಿದೆ.

ಮಕ್ಕಳ ಮೇಲೆ ನಡೆದಿರುವ ದಾಳಿಯನ್ನು ಬಿಜೆಪಿ ಮುಖಂಡ ಸಿ.ಕೃಷ್ಣಕುಮಾರ್ ಎಂಬಾತ ಸಮರ್ಥಿಸಿಕೊಂಡಿದ್ದು, “ಕ್ಯಾರೋಲ್ ತಂಡ ಅಪರಾಧಿಗಳ ಗುಂಪಾಗಿದ್ದು, ಅದರ ಸದಸ್ಯರು ಪಾನಮತ್ತರಾಗಿದ್ದರು” ಎಂದು ಹೇಳಿದ್ದರು. ಈ ಹೇಳಿಕೆ ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೃಷ್ಣಕುಮಾರ್ ಹೇಳಿಕೆ ಖಂಡಿಸಿ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಒಂದೆಡೆ ಈ ಘಟನೆ ಕೇರಳದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾದೆ, ಮತ್ತೊಂದೆಡೆ ಮಕ್ಕಳ ಮೇಲೆ ನಡೆದ ದಾಳಿಗೆ ರಾಜ್ಯದಾದ್ಯಂತ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಸರ್ವಧರ್ಮಗಳ ಜನರು ಸೇರಿಕೊಂಡು ಕ್ಯಾರೋಲ್ ಮೆರವಣಿಗೆ ಮಾಡುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ. ಹಲ್ಲೆಗೊಳಗಾದ ಮಕ್ಕಳಿಗೆ ಮತ್ತು ಕ್ರೈಸ್ತ ಸಮುದಾಯಕ್ಕೆ ಧೈರ್ಯ ತುಂಬಿದ್ದಾರೆ. ಘಟನೆಯನ್ನು ಖಂಡಿಸುವ ಸಲುವಾಗಿ ಪಾಲಕ್ಕಾಡ್ ಜಿಲ್ಲೆಯ ಎಲ್ಲಾ 2,500 ಘಟಕಗಳಲ್ಲಿ ಕೂಡ ಕ್ಯಾರೋಲ್ ನಡೆಸಲಾಗುವುದು ಎಂದು ಡಿವೈಎಫ್‍ಐ ಹೇಳಿಕೆ ನೀಡಿದೆ.

ಘಟನೆ-5 : ಸಾಂತಾ ಟೋಪಿ ಮಾರಾಟಗಾರರಿಗೆ ಕಿರುಕುಳ

ಒಡಿಶಾದ ಭುವನೇಶ್ವರ ನಗರದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಸ್ತೆ ಬದಿ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಗಳಿಗೆ ದುಷ್ಕರ್ಮಿಗಳ ಗುಂಪು ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ.

ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ದುಷ್ಕರ್ಮಿಗಳ ಗುಂಪು, “ಇದು ಹಿಂದೂ ರಾಷ್ಟ್ರ, ಇಲ್ಲಿ ಕ್ರಿಶ್ಚಿಯನ್ ಸಾಮಗ್ರಿಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ” ಎಂದು ವ್ಯಾಪಾರಿಗಳನ್ನು ಬೆದರಿಸಿರುವುದು ಮತ್ತು “ನೀವು ಎಲ್ಲಿಯವರು ಹಾಗೂ ನೀವು ಹಿಂದೂಗಳೇ?” ಎಂದು ದುಷ್ಕರ್ಮಿಯೊಬ್ಬ ಪ್ರಶ್ನಿಸುತ್ತಿರುವುದು ಇದೆ.

ಈ ಪ್ರಶ್ನೆಗೆ, “ನಾವು ನಿಜವಾಗಿಯೂ ಹಿಂದೂಗಳಾಗಿದ್ದು, ಬಡವರಾಗಿರುವುದರಿಂದ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದೇವೆ” ಎಂದು ವ್ಯಾಪಾರಿಗಳು ಉತ್ತರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, “ಇಲ್ಲಿ ಕೇವಲ ಜಗನ್ನಾಥ ದೇವರು ಮಾತ್ರ ಆಳಲು ಸಾಧ್ಯ. ಹಿಂದುಗಳಾಗಿ ನೀವೇಗೆ ಇದನ್ನು ಮಾಡುತ್ತಿದ್ಧೀರಿ? ಮೂಟೆ ಕಟ್ಟಿ ಇಲ್ಲಿಂದ ತಕ್ಷಣವೇ ತೆರಳಿ. ನಿಮಗೇನಾದರೂ ಮಾರಾಟ ಮಾಡಬೇಕಿದ್ದರೆ ಜಗನ್ನಾಥ ದೇವರ ಸಾಮಗ್ರಿಗಳನ್ನು ಮಾರಾಟ ಮಾಡಿ” ಎಂದು ಆತ ಪ್ರತಿಕ್ರಿಯೆ ನೀಡಿದ್ದಾನೆ.

ಇದಕ್ಕೆ, ಒಂದಿಬ್ಬರು ವ್ಯಾಪಾರಿಗಳು ನಾವು ರಾಜಸ್ಥಾನದಿಂದ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ದುಷ್ಕರ್ಮಿ, “ನೀವು ಎಲ್ಲಿಯವರೆಗೆ ಕ್ರಿಶ್ಚಿಯನ್ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲವೊ, ಅಲ್ಲಿಯವರೆಗೂ ನಿಮಗೆ ಯಾವುದೇ ತೊಂದರೆಯಿಲ್ಲ” ಎಂದು ಹೇಳಿದ್ದಾನೆ.

ನಗರದಲ್ಲಿ ಮತ್ತೊಂದೆಡೆಯೂ ಸಾಂತಾ ಕ್ಲಾಸ್ ಟೋಪಿಗಳನ್ನು ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಗಳ ಬಳಿ ತೆರಳಿದ ದುಷ್ಕರ್ಮಿ “ಇದು ಹಿಂದೂ ರಾಷ್ಟ್ರ. ಇಲ್ಲಿ ಯಾರೂ ಕ್ರಿಸ್ಮಸ್ ಹಬ್ಬ ಆಚರಿಸಲು ನಾವು ಅವಕಾಶ ನೀಡುವುದಿಲ್ಲ. ಬಿಜೆಪಿ ಅಡಿಯ ಹೊಸ ಒಡಿಶಾಗೆ ಸುಸ್ವಾಗತ” ಎಂದು ನಿಂದಿಸಿ, ವ್ಯಾಪಾರಿಗೆ ಬೆದರಿಕೆ ಒಡ್ಡಿದ್ದಾನೆ.

ಈ ಕುರಿತ ವಿಡಿಯೋವನ್ನು ಕೆಳಗಡೆ ನೋಡಬಹುದು

ಘಟನೆ-6 : ಚರ್ಚ್ ಮುಂದೆ ಹನುಮಾನ್ ಚಾಲೀಸಾ ಪಠಣ

ಉತ್ತರ ಪ್ರದೇಶದ ಬರೇಲಿಯ ಕ್ಯಾಂಟನ್‌ಮೆಂಟ್ ಪ್ರದೇಶದಲ್ಲಿರುವ ಸೇಂಟ್ ಅಲ್ಫೋನ್ಸಸ್ ಕ್ಯಾಥೆಡ್ರಲ್ ಚರ್ಚ್ ಮುಂದೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಹನುಮಾನ್ ಚಾಲೀಸಾ ಪಠಿಸಿದ ಘಟನೆ ಕ್ರಿಸ್‌ಮಸ್‌ನ ಮುನ್ನಾದಿನವಾದ ಡಿಸೆಂಬರ್ 24ರಂದು ನಡೆದಿದೆ.

ಸಂಘಪರಿವಾರದ ಸುಮಾರು 15-20 ಕಾರ್ಯಕರ್ತರು ಚರ್ಚ್‌ನ ಮುಖ್ಯ ಗೇಟ್ ಬಳಿ ಕುಳಿತು ಹನುಮಾನ್ ಚಾಲೀಸಾ ಪಠಣ ಮಾಡಿದ್ದಾರೆ. “ಜೈ ಶ್ರೀ ರಾಮ್” ಮತ್ತು “ಹರ್ ಹರ್ ಮಹಾದೇವ್” ಘೋಷಣೆಗಳನ್ನು ಕೂಡ ಕೂಗಿದ್ದಾರೆ. ಈ ಪ್ರತಿಭಟನೆ ಪೊಲೀಸ್ ಉಪಸ್ಥಿತಿಯಲ್ಲಿ ನಡೆದಿದ್ದು, ಯಾವುದೇ ದೈಹಿಕ ಹಿಂಸೆ ಅಥವಾ ದಾಳಿ ಬಗ್ಗೆ ವರದಿಯಾಗಿಲ್ಲ. ಆದರೆ, ಇದು ಧಾರ್ಮಿಕ ಆಚರಣೆಯನ್ನು ಅಡಚಣೆ ಮಾಡುವ ಪ್ರಯತ್ನವಾಗಿ ಪರಿಗಣಿಸಲಾಗಿದೆ.

ಘಟನೆ -7: ರಾಯಪುರದ ಮಾಲ್‌ನಲ್ಲಿ ದಾಂಧಲೆ

ಛತ್ತೀಸ್‌ಗಢದ ರಾಜಧಾನಿ ರಾಯಪುರದ ಪ್ರಮುಖ ಶಾಪಿಂಗ್ ಮಾಲ್ ಆದ ಮ್ಯಾಗ್ನೆಟೋ ದಿ ಮಾಲ್‌ನಲ್ಲಿ ಡಿಸೆಂಬರ್ 24ರಂದು ಹಿಂದುತ್ವ ಗುಂಪು ದಾಂಧಲೆ ನಡೆಸಿದೆ.

ಕ್ರಿಸ್ ಮಸ್‌ ಈವ್ ಅಥವಾ ಕ್ರಿಸ್‌ಮಸ್‌ ಮುನ್ನಾದಿನ ‘ಸರ್ವ ಹಿಂದೂ ಸಮಾಜ’ ಕರೆ ನೀಡಿದ್ದ ಛತ್ತೀಸ್‌ಗಢ ಬಂದ್ ಸಂದರ್ಭದಲ್ಲಿ, ಹಿಂದುತ್ವ ಗುಂಪುಗಳ ಸದಸ್ಯರು (ಸುಮಾರು 80-100 ಜನರು) ಮಾಲ್‌ಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ್ದಾರೆ. ಲಾಠಿಗಳೊಂದಿಗೆ ತೆರಳಿ ಸಾಂತಾ ಕ್ಲಾಸ್ ಪ್ರತಿಮೆ, ರೈನ್‌ಡಿಯರ್ ಅಲಂಕಾರಗಳು ಮತ್ತು ಇತರ ಕ್ರಿಸ್‌ಮಸ್ ಸಂಬಂಧಿತ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. “ಸಾಂತಾ ಕ್ಲಾಸ್ ಬೇಡ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಲ್ ಸಿಬ್ಬಂದಿ ದುಷ್ಕರ್ಮಿಗಳ ಗುಂಪನ್ನು ತಡೆಯಲು ಪ್ರಯತ್ನಿಸಿದರೂ ತಡೆಯಲಾಗಿಲ್ಲ. ರಾಯಪುರ ಪೊಲೀಸರು ಸುಮಾರು 30 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆ-8: ಅಸ್ಸಾಂನಲ್ಲಿ ಶಾಲೆ, ಅಂಗಡಿಗಳಿಗೆ ನುಗ್ಗಿ ದಾಂಧಲೆ

ಡಿಸೆಂಬರ್ 24ರಂದು (ಕ್ರಿಸ್‌ಮಸ್ ಈವ್) ಅಸ್ಸಾಂನ ನಲ್ಬಾರಿ ಜಿಲ್ಲೆಯ ಪಾನಿಗಾಂವ್ ಗ್ರಾಮದಲ್ಲಿರುವ ಸೇಂಟ್ ಮೇರೀಸ್ ಶಾಲೆಗೆ ನುಗ್ಗಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಕ್ರಿಸ್‌ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ್ದಾರೆ.

ಸುಮಾರು 15-20 ಜನರ ಗುಂಪು “ಜೈ ಶ್ರೀ ರಾಮ್” ಮತ್ತು “ಜೈ ಹಿಂದೂ ರಾಷ್ಟ್ರ” ಎಂಬ ಘೋಷಣೆಗಳೊಂದಿಗೆ ಶಾಲೆಗೆ ನುಗ್ಗಿ, ಕ್ರಿಸ್‌ಮಸ್ ಬ್ಯಾನರ್‌ಗಳು, ಪೋಸ್ಟರ್‌ಗಳು, ಅಲಂಕಾರಗಳು ಮತ್ತು ಯೇಸುಕ್ರಿಸ್ತನ ಪ್ರತಿಮೆಯನ್ನು ಹಾನಿಗೊಳಿಸಿ ಬೆಂಕಿ ಹಚ್ಚಿದ್ದಾರೆ.

ಶಾಲಾ ಅಧಿಕಾರಿಗಳಿಗೆ ಕ್ರಿಸ್‌ಮಸ್ ಆಚರಣೆ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಶಾಲೆಯಲ್ಲಿ ನಿಗದಿಯಾಗಿದ್ದ ಕ್ರಿಸ್‌ಮಸ್ ಮಾಸ್ ರದ್ದುಗೊಳಿಸಲಾಗಿದೆ.

ನಂತರ ಈ ಗುಂಪು ನಲ್ಬಾರಿ ಪಟ್ಟಣದಲ್ಲಿ ಕ್ರಿಸ್‌ಮಸ್ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ಹೋಗಿ, ವಸ್ತುಗಳನ್ನು ಹೊರಗೆ ಎಸೆದು ಬೆಂಕಿ ಹಚ್ಚಿದ್ದಾರೆ (ಪ್ರಮುಖವಾಗಿ ಜೈನ ಮಂದಿರದ ಬಳಿ)

ವಿಹೆಚ್‌ಪಿ ಬಜರಂಗದಳದ ನಲ್ಬಾರಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ಡೇಕಾ, “ಕ್ರಿಶ್ಚಿಯನ್ ಹಬ್ಬಗಳನ್ನು ಇಲ್ಲಿ ಅನುಮತಿಸುವುದಿಲ್ಲ, ಭಾರತೀಯ ಮೂಲದ ಹಬ್ಬಗಳ ವ್ಯಾಪಾರ ಮಾತ್ರ ಮಾಡಿ” ಎಂದು ಬೆದರಿಕೆ ಹಾಕಿದ್ದಾನೆ.

ಪೊಲೀಸರು ಘಟನೆಯನ್ನು ದೃಢಪಡಿಸಿದ್ದಾರೆ. ಆದರೆ, ಶಾಲೆ ಅಥವಾ ಅಂಗಡಿ ಮಾಲೀಕರು ದೂರು ನೀಡದ ಕಾರಣ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆ-9: ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಿಂದ ಕ್ರಿಸ್‌ಮಸ್‌ ರಜೆ ರದ್ದು

ಪ್ರತಿವರ್ಷ ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಪ್ರಯುಕ್ತ ಶಾಲೆಗಳಿಗೆ ರಜೆ ನೀಡುವುದು ವಾಡಿಕೆ. ಆದರೆ, ಈ ವರ್ಷ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಸರ್ಕಾರಿ ಶಾಲೆಗಳಿಗೆ ರಜೆ ರದ್ದುಗೊಳಿಸಿದೆ. ಪ್ರಾಥಮಿ ಶಿಕ್ಷಣ ಇಲಾಖೆ ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿದೆ.

ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳು ಡಿಸೆಂಬರ್ 25ರಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ. ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳು (ಭಾಷಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು) ಆಯೋಜಿಸಲು ಆದೇಶಿಸಲಾಗಿದೆ. ಇದನ್ನು ‘ಗುಡ್ ಗವರ್ನೆನ್ಸ್ ಡೇ’ ಆಚರಣೆಯ ಭಾಗವಾಗಿ ಮಾಡಲಾಗುತ್ತಿದೆ.

ಘಟನೆ-10 : ರಾಜಸ್ಥಾನದ ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆ, ಸಾಂತಾ ಟೋಪಿಗೆ ನಿರ್ಬಂಧ

ಕ್ರಿಸ್‌ಮಸ್ ಸಂದರ್ಭದಲ್ಲಿ ರಾಜಸ್ಥಾನದ ಶಾಲೆಗಳಲ್ಲಿ ಸಾಂತಾ ಟೋಪಿ ಅಥವಾ ವೇಷಭೂಷಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನಿಷೇಧ ಹೇರಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ (ಮುಖ್ಯವಾಗಿ ಶ್ರೀಗಂಗಾನಗರ ಮತ್ತು ಜಾಲೋರ್) ಶಿಕ್ಷಣ ಇಲಾಖೆಯು ಶಾಲೆಗಳಿಗೆ ಬಲವಂತವಾಗಿ ಮಕ್ಕಳನ್ನು ಸಾಂತಾ ಕ್ಲಾಸ್ ಆಗಿ ವೇಷ ಧರಿಸಲು ಒತ್ತಡ ಹೇರದಂತೆ ಎಚ್ಚರಿಸಿದೆ.

ಡಿಸೆಂಬರ್ 22, 2025ರಂದು ಶ್ರಿಗಂಗಾನಗರ ಜಿಲ್ಲಾ ಶಿಕ್ಷಣ ಅಧಿಕಾರಿ ಅಶೋಕ್ ವಾಧ್ವಾ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಶಾಲೆಗಳು ಮಕ್ಕಳು ಅಥವಾ ಪೋಷಕರ ಮೇಲೆ ಒತ್ತಡ ಹೇರದಂತೆ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಇಲಾಖೆಯು ಶಾಲೆಗಳು ಮಕ್ಕಳನ್ನು ಸಾಂತಾ ಕ್ಲಾಸ್ ಆಗಿ ವೇಷ ಧರಿಸಲು ಬಲವಂತ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಆದರೆ ಪೋಷಕರು ಮತ್ತು ಮಕ್ಕಳ ಸಮ್ಮತಿಯೊಂದಿಗೆ ಕ್ರಿಸ್‌ಮಸ್ ಆಚರಣೆಗೆ ಯಾವುದೇ ಆಕ್ಷೇಪಣೆ ಇಲ್ಲ.

ಜಾಲೋರ್ ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆ ಶಾಲೆಗಳಿಗೆ ಕ್ರಿಸ್‌ಮಸ್ ಆಚರಣೆಗಳನ್ನು ಸ್ವೈಚ್ಛಿಕವಾಗಿ ಇರಿಸುವಂತೆ ಮತ್ತು ಬಲವಂತದ ಸಾಂತಾ ವೇಷಕ್ಕೆ ಒತ್ತಡ ಹೇರದಂತೆ ಸೂಚನೆ ನೀಡಿದೆ.

ರಾಜಸ್ಥಾನದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಡಿಸೆಂಬರ್ 25, 2025ರಿಂದ ಜನವರಿ 5, 2026ರವರೆಗೆ ಶೀತಕಾಲದ ರಜೆಯಲ್ಲಿವೆ (ಕ್ರಿಸ್‌ಮಸ್ ಸೇರಿದಂತೆ). ಹಾಗಾಗಿ, ಕ್ರಿಸ್‌ಮಸ್ ಆಚರಣೆಗೆ ರಾಜ್ಯವ್ಯಾಪಿ ನಿಷೇಧವಿಲ್ಲ.

ಘಟನೆ-11: ಕೇರಳದ ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಅಡ್ಡಿ, ಶಿಕ್ಷಣ ಸಚಿವ ಎಚ್ಚರಿಕೆ

ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂಬ ಆರೋಪದ ಕುರಿತು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಡಿಸೆಂಬರ್ 22ರಂದು ಪ್ರತಿಕ್ರಿಯಿಸಿದ್ದು, “ಶಿಕ್ಷಣ ಸಂಸ್ಥೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಘ ಪರಿವಾರ ನಡೆಸುತ್ತಿರುವ ಶಾಲೆಗಳು ಹಾಗೂ ಹಿಂದೂಗಳ ಆಡಳಿತ ಮಂಡಳಿಯನ್ನು ಹೊಂದಿರುವ ಖಾಸಗಿ ಶಾಲೆಯೊಂದು ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಸಿಪಿಐ(ಎಂ)ನ ಮುಖವಾಣಿಯಾದ ‘ದೇಶಾಭಿಮಾನಿ’ ಪತ್ರಿಕೆಯಲ್ಲಿ ಆರೋಪಿಸಲಾಗಿತ್ತು. ಆದರೆ, ಈ ಆರೋಪವನ್ನು ಶಾಲೆಗಳು ಹಾಗೂ ಅವುಗಳ ಆಡಳಿತ ಮಂಡಳಿಗಳು ನಿರಾಕರಿಸಿದ್ದವು.

ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಅಥವಾ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಜನರನ್ನು ವಿಭಜಿಸುವ ಉತ್ತರ ಭಾರತದ ಮಾದರಿಯನ್ನು ಪರಿಚಯಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ.

ಓಣಂ, ಕ್ರಿಸ್ಮಸ್ ಹಾಗೂ ಈದ್ ಅನ್ನು ರಾಜ್ಯದ ಶಾಲೆಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರಿಂದ ಮಕ್ಕಳು ಪರಸ್ಪರ ಗೌರವ, ಪ್ರೀತಿ ಮತ್ತು ಸಹಜೀವನವನ್ನು ಕಲಿಯಲು ಸಹಾಯಕವಾಗಿದೆ ಎಂದೂ ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ ಜನಶಕ್ತಿ ಸಕ್ರಿಯ ಕಾರ್ಯಕರ್ತೆ, ಹೋರಾಟದ ಒಡನಾಡಿ ಕೆ.ಪದ್ಮಾ ಇನ್ನಿಲ್ಲ

ಹಿರಿಯ ಹೋರಾಟಗಾರ್ತಿ, ಕರ್ನಾಟಕ ಜನಶಕ್ತಿ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಕೆ ಪದ್ಮಾ ಅವರು ಹೋರಾಟದ ಬದುಕನ್ನು ಮುಗಿಸಿದ್ದಾರೆ. ಬುಧವಾರ ರಾತ್ರಿ, ಬೆಂಗಳೂರಿನಲ್ಲಿ ಕೊನೆಯುಸಿಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ತಮ್ಮನ್ನು ಬಾಧಿಸುತ್ತಿದ್ದ...

ಹರಿಯಾಣ| ಕಳ್ಳತನ ಆರೋಪದ ಮೇಲೆ 12 ವರ್ಷದ ದಲಿತ ಬಾಲಕನಿಗೆ ಚಿತ್ರಹಿಂಸೆ; ಕಟ್ಟಿಹಾಕಿ ದೌರ್ಜನ್ಯ

12 ವರ್ಷದ ದಲಿತ ಬಾಲಕನ ಮೇಲೆ ಕಳ್ಳತನದ ಶಂಕೆಯಿಂದ ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅಕ್ರಮ ಬಂಧನದಲ್ಲಿಟ್ಟ ಆರೋಪದ ಮೇಲೆ ಕುಟುಂಬವೊಂದರ 10 ಸದಸ್ಯರ ವಿರುದ್ಧ ಹರಿಯಾಣದ ಪಲ್ವಾಲ್‌ನಲ್ಲಿ ಪೊಲೀಸರು ಪ್ರಕರಣ...

ಉನ್ನಾವೋ ಅತ್ಯಾಚಾರಿಯ ಶಿಕ್ಷೆ ಅಮಾನತು : ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಮುಂದಾದ ಸಿಬಿಐ

ಉನ್ನಾವೋ ಅತ್ಯಾಚಾರ ಅಪರಾಧಿಯ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ತನಿಖಾ ದಳ (ಸಿಬಿಐ) ಮುಂದಾಗಿದೆ ಎಂದು ಬುಧವಾರ (ಡಿ.24) ವರದಿಯಾಗಿದೆ. ಸಿಬಿಐ ಈ ಪ್ರಕರಣದ ತನಿಖೆ...

ಚಿತ್ರದುರ್ಗ | ಹೊತ್ತಿ ಉರಿದ ಖಾಸಗಿ ಬಸ್​​​​ : 10ಕ್ಕೂ ಹೆಚ್ಚು ಜನರು ಸಜೀವ ದಹನ, ಹಲವರಿಗೆ ಗಾಯ

ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದ ಪರಿಣಾಮ 10ಕ್ಕೂ ಹೆಚ್ಚು ಜನರು ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಗುರುವಾರ (ಡಿ.25) ನಡೆದಿದೆ. ರಾಷ್ಟ್ರೀಯ ಹೆದ್ದಾರಿ...

ಜಾಮಿಯಾ ಮಿಲ್ಲಿಯಾ |’ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ’ದ ಬಗ್ಗೆ ಪ್ರಶ್ನೆ ಕೇಳಿದ ಪ್ರಾಧ್ಯಾಪಕ ಅಮಾನತು

ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ "ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿವರಿಸಿ" ಎಂಬ ಪ್ರಶ್ನೆಯ ಬಗ್ಗೆ ದೂರುಗಳು ಬಂದ ನಂತರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಸಮಾಜ ಕಾರ್ಯ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಳವಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತ್ ರಾವ್ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ (ಡಿ.24) ಪ್ರತಿಭಟನೆ ನಡೆಯಿತು....

ಕೇಂದ್ರದ ಜಿ ರಾಮ್‌ ಜಿ ಕಾಯ್ದೆ ವಿರುದ್ದ ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆ

ಕೇಂದ್ರದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್) ಕಾಯ್ದೆ, 2025 (ವಿಬಿ-ಜಿ ರಾಮ್‌ ಜಿ) ವಿರುದ್ದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಮೈತ್ರಿಕೂಟವು ಬುಧವಾರ (ಡಿ.24) ರಾಜ್ಯದಾದ್ಯಂತ ಬೃಹತ್...

ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುತ್ತಿರುವ ಬಿಜೆಪಿ ನಾಯಕಿ ನಾಝಿಯಾ ಇಲಾಹಿ : ಕ್ರಮ ಕೈಗೊಳ್ಳದ ಪೊಲೀಸರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಎನ್ನಲಾದ ನಾಝಿಯಾ ಇಲಾಹಿ (ನಾಝಿಯಾ ಇಲಾಹಿ ಖಾನ್) ಪದೇ ಪದೇ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹಂಚಿಕೊಳ್ಳುತ್ತಿದ್ದು, ಪೊಲೀಸರು ಯಾವುದೇ ಕ್ರಮ...

ತೆಲಂಗಾಣ: ಸರಪಂಚ್ ಚುನಾವಣೆಯಲ್ಲಿ ಬೆಂಬಲಿಸದ ದಲಿತ ಕುಟುಂಬದ ಮನೆ ಕೆಡವಿದ ಕಾಂಗ್ರೆಸ್ ಸದಸ್ಯರು

ಕಾಂಗ್ರೆಸ್ ಬೆಂಬಲಿತ ಸರಪಂಚ್ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಪದ್ಮಾವತಿ ಮತ್ತು ಅವರ ಮಗ ಪ್ರಸಾದ್ ರೆಡ್ಡಿ ಎಂಬುವವರು ಸೋಮವಾರ ಕೊಹಿರ್ ಮಂಡಲದ ಸಜ್ಜಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ದಲಿತ ಕುಟುಂಬದ ಮನೆಯನ್ನು...

“ಆತ್ಮಹತ್ಯೆಗೆ ಮುಂದಾದೆ, ಕುಟುಂಬ ನೆನೆದು ಸುಮ್ಮನಾದೆ”: ನೋವು ತೋಡಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

"ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ" ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ (2025 ಡಿಸೆಂಬರ್ 24) ಸಂಜೆ ದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲುಹಾಸಿನ ಮೇಲೆ...