HomeUncategorizedಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

ಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

- Advertisement -
ಲೇಖನ: ಸಿದ್ದು. ಯಾಪಲಪರವಿ 
ನಟರಾಜ್ ಹೊನ್ನವಳ್ಳಿ ಅವರು ನಿರ್ದೇಶಿಸಿದ ಔರಂಗಜೇಬ್ ನಾಟಕವನ್ನು ಸಾಣೆಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವೀಕ್ಷಿಸುವ ಅವಕಾಶ ಲಭಿಸಿತು. ಈಗಿರುವ ಸೂಕ್ಷ್ಮ ವಾತಾವರಣದಲ್ಲಿ ಮುಸ್ಲಿಂ ದೊರೆಗಳ ಜೀವನ ಆಧರಿಸಿ ನಾಟಕ ಆಡುವುದು ಕೊಂಚ ರಿಸ್ಕ್. ಅನವಶ್ಯಕ ವಿವಾದಗಳು ಸುತ್ತಿಕೊಳ್ಳುವ ಹೊತ್ತಿನಲ್ಲಿ ಯಾರ ಪರವಾಗಿ ಮಾತನಾಡಿದರೂ ಕಷ್ಟ.
ಪರ, ವಿರೋಧವೆಂಬ ಪೂರ್ವಗ್ರಹ ಇಟ್ಟುಕೊಂಡು ನಾಟಕ ನೋಡಿದೆ. ಆದರೆ ನಾಟಕ ನೋಡಿದ ಮೇಲೆ ಸಮಾಧಾನವಾಯಿತು. ನಾಟಕ ಯಾರ ಪರ ಅಥವಾ ವಿರೋಧವಾಗಿಯೂ ಇರದೆ ಕೇವಲ ಜೀವ ಪರವಾಗಿದೆ. ಶಹಜಾನ್, ದಾರಾ ಮತ್ತು ಔರಂಗಜೇಬ್ ಪಾತ್ರಗಳ ಮೂಲಕ ಮನುಷ್ಯನ ವಿವಿಧ ಮುಖಗಳನ್ನು ನಾಟಕ ಪರಿಚಯಿಸುವುದರಲ್ಲಿ ಯಶಸ್ವಿಯಾಗಿದೆ.
ಬುದ್ಧ ಬೋಧಿಸಿದ ಅನಾರೋಗ್ಯ, ಮುಪ್ಪು ಮತ್ತು ಸಾವಿನ ಭಯಾನಕತೆ ನಾಟಕ ನೋಡುವಾಗ ಅನುಭವಕ್ಕೆ ದಕ್ಕುತ್ತದೆ. ಸಾಯುವ ಹಂತದಲ್ಲಿ ಇರುವ ಮುದುಕ ಶಹಜಾನ್ ಕಾಣುವ ಕಪ್ಪು ಶಿಲೆಯ ಕನಸಿನ ಮಹಲಿನಿಂದ ನಾಟಕ ಆರಂಭವಾಗುತ್ತದೆ. ತಂದೆಯ ಕನಸು ನನಸಾಗಿಸಲು ಒಪ್ಪಿಕೊಳ್ಳುವ ದಾರಾನ ಜ್ಞಾನ, ಮಾನವೀಯತೆ ಮತ್ತು ಧರ್ಮ ಸಹಿಷ್ಣುತೆ ತಂದೆಯ ಕನಸನ್ನು ನನಸಾಗಿಸಲು ಸಾಲುವುದಿಲ್ಲ.
ಸಂಸ್ಕೃತಿ ಮತ್ತು ಕಲೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಧಾರ್ಮಿಕ ನಂಬಿಕೆಗಳ ಕಾರಣದಿಂದ ವಿರೋಧಿಸುವ ಔರಂಗಜೇಬ್ ತಂದೆಯ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಾನೆ. ಮುಸ್ಲಿಂ ಆಡಳಿತದ ಸಂದರ್ಭದಲ್ಲಿ ಅನೇಕ ಗೊಂದಲಗಳಿದ್ದವು, ಇಸ್ಲಾಂ ಧರ್ಮದ ಪರಿಪಾಲನೆಯ ಭರದಲ್ಲಿ ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ಆದದ್ದು ಸಹಜ.
ಧರ್ಮ ಮತ್ತು ರಾಜಕೀಯ ಸಂಘರ್ಷದ ಮೂಲ ಉದ್ದೇಶ ಅಧಿಕಾರ ಹಿಡಿದು ತಾವು ನಂಬಿದ ಸಿದ್ಧಾಂತಗಳೇ ಸರಿ ಎಂಬ ಅಭಿಪ್ರಾಯ ರೂಪಿಸುವುದು. ರಾಜ ಮಹಾರಾಜರುಗಳ ಮೋಜು ಮಸ್ತಿಗೆ ಬಹುಪತ್ನಿತ್ವ ಬಹು ದೊಡ್ಡ ಪ್ರತಿಷ್ಠೆಯಾಗಿತ್ತು ಎಂಬುದನ್ನು ನಾಟಕಕಾರ ಔರಂಗಜೇಬ್ ಮೂಲಕ ಹೇಳಿಸುತ್ತಾನೆ. ಹಾಗಂತ ಅವನೇನು ಸಾಚಾ ಅಲ್ಲ. ಅಧಿಕಾರದ ಆಸೆಗೆ ಅಣ್ಣನನ್ನೇ ಕೊಲ್ಲುತ್ತಾನೆ.
ಹುಚ್ಚ ಮುದುಕ ಶಹಜಾನ್ ಮಕ್ಕಳ ಸಾವು-ನೋವು ಲೆಕ್ಕಿಸದೆ ಕಪ್ಪು ಶಿಲೆಯ ಮಹಲಿನ ಕನಸು ಕಾಣುತ್ತಾನೆ.
ಪ್ರತಿಭಾ ಸಂಪನ್ನ ದಾರಾ ಸಾಯುವ ಕೊನೆಯ ಕ್ಷಣದ ತನಕ ತನ್ನ ಜೀವಪರ ಸಿದ್ಧಾಂತಗಳ ಪರವಾಗಿ ನಿಲ್ಲುತ್ತಾನೆ. ಮಹಾಭಾರತದ ದಾಯಾದಿ ಕಲಹ, ಮ್ಯಾಕ್‌‌ಬೆತ್ ನ ಮಹತ್ವಾಕಾಂಕ್ಷೆ, ಕಿಂಗ್ ಲಿಯರ್ ನ ಅಸಹಾಯಕತೆ ನಾಟಕ ನೋಡುವಾಗ ನೆನಪಾಗುವುದು ಸಹಜ.
ಪ್ರತಿಯೊಬ್ಬ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಎದುರಿಸುವ ಸಂಕಷ್ಟ ಮತ್ತು ಅಸಹಾಯಕತೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಲು ನಿರ್ದೇಶಕ ಯಶಸ್ವಿಯಾಗಿದ್ದಾರೆ. ವಿವಿಧ ಉದ್ಯೋಗದಲ್ಲಿರುವ ರಂಗಾಸಕ್ತ‌ ಯುವ ಕಲಾವಿದರು ಪ್ರೌಢಿಮೆಯಿಂದ ಅಭಿನಯಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರ ನಟನಾ ಕೌಶಲ್ಯದಲ್ಲಿ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ.
ಪ್ರೇಕ್ಷಕರು ತಮ್ಮ ಅಭಿರುಚಿ ಕಳೆದುಕೊಂಡ ಹೊತ್ತಿನಲ್ಲಿ ಗಂಭೀರ ನಾಟಕಗಳನ್ನು ತಲುಪಿಸುವುದು ಕಷ್ಟ ಹಾಗಂತ ನಾಟಕಕಾರರು ತಮ್ಮ ಗಂಭೀರ ಅಭಿರುಚಿ ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ ನಿರ್ದೇಶಕ ಹೊನ್ನವಳ್ಳಿ ಅವರದು. ಇಂತಹ ನಾಟಕಗಳ ಉದ್ದೇಶ ಕೇವಲ ಮನೋರಂಜನೆ ಅಲ್ಲ ಮನೋಪರಿವರ್ತನೆ ಎಂಬ ಕಾರಣಕ್ಕಾಗಿ ಇಡೀ ತಂಡದ ಪರಿಶ್ರಮವನ್ನು ಅಭಿನಂದಿಸಬೇಕು.
ತಮಿಳಿನ ಪ್ರಗತಿಪರ ಲೇಖಕ ಇಂದಿರಾ ಪಾರ್ಥಸಾರಥಿ ಅವರ  ನಾಟಕವನ್ನು ರಾಜಪ್ಪ ದಳವಾಯಿ ಮತ್ತು ಕನಕರಾಜ್ ಆರನಕಟ್ಟೆ ಕಾವ್ಯಾತ್ಮಕವಾಗಿ ಕನ್ನಡಿಕರಿಸಿದ್ದಾರೆ. ಗಂಭೀರತೆಯ ತೀವ್ರತೆಯನ್ನು ಕೊಂಚ ತಗ್ಗಿಸಲು ಒಂದೆರಡು ಕಾಮಿಕ್ ಪ್ರಸಂಗಗಳನ್ನು ಸೇರಿಸುವುದು ಒಳಿತು. ಅದು ಕೇವಲ ಪ್ರೇಕ್ಷಕರನ್ನು ಹಿಡಿದಿಡುವ ಕಾರಣದಿಂದಾಗಿ ಮಾತ್ರ. ಹತ್ತು ಹಲವು ಮಾನವನ ಮಿತಿಗಳನ್ನು ಕಣ್ಮುಂದೆ ಚಿತ್ರಿಸಿದ ಔರಂಗಜೇಬ್ ತಂಡವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial