ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಸಮಾಧಿಯನ್ನು ಧ್ವಂಸಗೊಳಿಸಬೇಕೆಂಬ ದುಷ್ಕರ್ಮಿಗಳ ಆಗ್ರಹದ ನಡುವೆ ನಾಗ್ಪುರದಲ್ಲಿ ಕೋಮು ಘರ್ಷಣೆಗಳ ಭುಗಿಲೆದ್ದಿದೆ. ಈ ಬಗ್ಗೆ ರಾಜ್ಯದಲ್ಲಿ ರಾಜಕೀಯ ವಾಗ್ವಾದ ನಡೆಯುತ್ತಿದ್ದು, ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಹಿಂಸಾತ್ಮಕ ಘಟನೆಗೆ ಸರ್ಕಾರವನ್ನು ದೂಷಿಸಿದೆ. ಅದಾಗ್ಯೂ, ಆಡಳಿತರೂಢ ಮಹಾಯುತಿ-ಎನ್‌ಡಿಎ ಮೈತ್ರಿಯು ಗಲಭೆಗಳನ್ನು ಶಾಂತಿಯನ್ನು ಕದಡುವ ಉದ್ದೇಶದಿಂದ “ಪೂರ್ವ ಯೋಜಿತ” ಎಂದು ಬಣ್ಣಿಸಿದೆ. ಔರಂಗಜೇಬ್ ವಿರುದ್ಧ
ಇಷ್ಟೆ ಅಲ್ಲದೆ, ಇತ್ತೀಚೆಗೆ ಬಿಡುಗಡೆಯಾದ ಛಾವಾ ಚಿತ್ರವು ಔರಂಗಜೇಬ್ ವಿರುದ್ಧ ಜನರ ಕೋಪವನ್ನು ಹುಟ್ಟುಹಾಕಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎತ್ತಿತೋರಿಸಿದ್ದಾರೆ. “ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಕ್ರಮ ಕೈಗೊಳ್ಳಲಾಗುವುದು” ಎಂದು ನಾಗ್ಪುರದ ಶಾಸಕರೂ ಆಗಿರುವ ಫಡ್ನವೀಸ್ ಹೇಳಿದ್ದಾರೆ. ಔರಂಗಜೇಬ್ ವಿರುದ್ಧ
ಮರಾಠಿಯಲ್ಲಿ ಛಾವಾ ಎಂದರೆ ಸಿಂಹದ ಮರಿ ಎಂದರ್ಥ. ಈ ಚಿತ್ರದಲ್ಲಿ ಮರಾಠಾ ರಾಜ ಛತ್ರಪತಿ ಶಿವಾಜಿಯ ಮಗ ಛತ್ರಪತಿ ಸಂಭಾಜಿಯ ಕಾಲ್ಪನಿಕ ಕತೆಯನ್ನು ಹೇಳಿದ್ದು, ದಿವಂಗತ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದ ‘ಛಾವಾ’ ಪುಸ್ತಕವನ್ನು ಆಧರಿಸಿದೆ. ಚಿತ್ರದಲ್ಲಿ ಸಂಭಾಜಿಯ ಪಾತ್ರದಲ್ಲಿ ವಿಕ್ಕಿ ಕೌಶಲ್, ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಮೊಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ.
ಮುಂಬೈನಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ, ಫಡ್ನವೀಸ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದರೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಪರಿಷತ್ತಿನಲ್ಲಿ ಮಾತನಾಡಿದರು.
ಗಲಭೆಯ ಬಗ್ಗೆ ಪಿತೂರಿ ನಡೆದಿದೆ ಎಂದು ಪ್ರತಿಪಾದಿಸಿದ ಸಿಎಂ, ಇದು ಪೂರ್ವ ಯೋಜಿತ ಕೃತ್ಯ ಎಂದು ಹೇಳಿದ್ದಾರೆ. “ಗಲಭೆಕೋರರು ನಿರ್ದಿಷ್ಟ ಮನೆಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ. ಇದು (ದಾಳಿ) ಪೂರ್ವ ಯೋಜಿತ ಪಿತೂರಿಯಂತೆ ಕಾಣುತ್ತದೆ. ಪೊಲೀಸರ ಮೇಲೆ ದಾಳಿ ಮಾಡಿದವರನ್ನು ಬಿಡಲಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ಮೂವರು ಡಿಸಿಪಿಗಳು ಸೇರಿದಂತೆ 33 ಪೊಲೀಸ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಐದು ನಾಗರಿಕರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಒಬ್ಬರನ್ನು ಐಸಿಯುಗೆ ದಾಖಲಿಸಲಾಗಿದೆ. ಧಾರ್ಮಿಕ ಗುರುತನ್ನು ಲೆಕ್ಕಿಸದೆ, ಪೊಲೀಸ್ ಅಧಿಕಾರಿಗಳ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ” ಎಂದು ರಾಜ್ಯ ಗೃಹ ಸಚಿವರೂ ಆಗಿರುವ ಫಡ್ನವೀಸ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಉಪ ಮುಖ್ಯಮಂತ್ರಿ ಶಿಂಧೆ ಕೂಡ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಹಲವು ಜನರು ಹೊರಗಿನಿಂದ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪೆಟ್ರೋಲ್ ಬಾಂಬ್‌ಗಳನ್ನು ಸಹ ಎಸೆಯಲಾಗಿದೆ. ಪೊಲೀಸರ ಮೇಲೂ ದಾಳಿ ನಡೆಸಿರುವುದು ದುರದೃಷ್ಟಕರ. ಈ ಘಟನೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಂತಿ ಕಾಪಾಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.
“ಔರಂಗಜೇಬ್ ಯಾರು? ಅವರು ಸಂತರೇ?… ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸವನ್ನು ಓದಬೇಕು ಮತ್ತು ಛಾವನನ್ನು ನೋಡಬೇಕು… ಅವರು ಚಿತ್ರಹಿಂಸೆ ನೀಡಿದರು. ಸಂಭಾಜಿ ಮಹಾರಾಜರನ್ನು 40 ದಿನಗಳ ಕಾಲ ಹಿಂಸಿಸಿದರು. ಔರಂಗಜೇಬ್ ಒಬ್ಬ ದೇಶದ್ರೋಹಿ,” ಎಂದು ಅವರು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮಹಾ ವಿಕಾಸ್ ಅಘಾಡಿ ತೀವ್ರ ಆಕ್ರೋಶ
ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ತನ್ನ ದಾಳಿಯನ್ನು ಹೆಚ್ಚಿಸಿದೆ. ಶಿವಸೇನೆ (UBT) ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿ, “ನಾಗ್ಪುರದಲ್ಲಿ ಹಿಂಸಾಚಾರ ಸಂಭವಿಸಲು ಯಾವುದೇ ಕಾರಣವಿಲ್ಲ. ಅದು ಆರೆಸ್ಸೆಸ್‌ನ ಪ್ರಧಾನ ಕಚೇರಿ ಇರುವ ಸ್ಥಳ. ಅದು ಸಿಎಂ ದೇವೇಂದ್ರ ಅವರ ಅವರ ಕ್ಷೇತ್ರವೂ ಆಗಿದೆ. ಅಲ್ಲಿ ಹಿಂಸಾಚಾರವನ್ನು ಹರಡಲು ಯಾರಿಗೆ ಧೈರ್ಯವಿದೆ?” ಎಂದು ಹೇಳಿದ್ದಾರೆ.
“ಹಿಂದೂಗಳನ್ನು ಹೆದರಿಸುವುದು, ಅವರ ಸ್ವಂತ ಜನರೇ ಅವರ ಮೇಲೆ ದಾಳಿ ಮಾಡುವಂತೆ ಮಾಡುವುದು ಮತ್ತು ನಂತರ ಅವರನ್ನು ಪ್ರಚೋದಿಸುವುದು, ನಂತರ ಗಲಭೆಗಳಲ್ಲಿ ತೊಡಗಿಸುವುದು ಇದು ಒಂದು ಹೊಸ ಮಾದರಿಯಾಗಿದೆ. ಔರಂಗಜೇಬ್ ಬಗ್ಗೆಗಿನ ವಿವಾದದ ಹಿನ್ನಲೆಯಲ್ಲಿ ಜನರ ಮನಸ್ಸಿನಲ್ಲಿ ಭಯವನ್ನು ಬಿತ್ತಿ, ಅವರು ಮಹಾರಾಷ್ಟ್ರ ಮತ್ತು ದೇಶವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನಾಗ್ಪುರ ಬಹಳ ಶಾಂತಿಯುತ ನಗರ, ಆದರೆ ಅದರ ಮೇಲೆ ಆಡಳಿತ ಪರ ಸಂಘಟನೆಗಳು ದಾಳಿ ಮಾಡಿವೆ. ಇದೆಲ್ಲವೂ ಅಸಂಬದ್ಧ ಹೇಳಿಕೆಗಳನ್ನು ನೀಡಿದ ಸಂಪುಟದಲ್ಲಿರುವ ಮಂತ್ರಿಗಳಿಂದಾಗಿ ನಡೆದಿದೆ. ಮುಖ್ಯಮಂತ್ರಿ ತಕ್ಷಣ ಈ ಸಚಿವರನ್ನು ಸಂಪುಟದಿಂದ ತೆಗೆದುಹಾಕಬೇಕು” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್ ಹೇಳಿದ್ದಾರೆ.
“ನಾಗ್ಪುರ ನಗರದಲ್ಲಿ ಎರಡು ಗುಂಪುಗಳ ನಡುವಿನ ಹಿಂಸಾಚಾರವು ದೊಡ್ಡ ಹಾನಿಯನ್ನುಂಟುಮಾಡಿದೆ. ಈ ಘಟನೆ ತುಂಬಾ ದುಃಖಕರ ಮತ್ತು ದುರದೃಷ್ಟಕರ. ನಾಗರಿಕರು ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾವು ಮನವಿ ಮಾಡುತ್ತೇವೆ. ಪರಸ್ಪರ ಸಾಮರಸ್ಯದ ವಾತಾವರಣವನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಇದು ಪ್ರಗತಿಪರ ವಿಚಾರಗಳ ಮಹಾರಾಷ್ಟ್ರ. ನಮ್ಮ ರಾಜ್ಯದ ಈ ಗುರುತನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಭಾಲ್‌ನ ಚಂದೌಸಿ ಪ್ರದೇಶದಲ್ಲಿ ಮಸೀದಿ ಮತ್ತು 34 ಮನೆಗಳ ಮೇಲೆ ಬುಲ್ಡೋಜರ್ ಭೀತಿ
ಸಂಭಾಲ್‌ನ ಚಂದೌಸಿ ಪ್ರದೇಶದಲ್ಲಿ ಮಸೀದಿ ಮತ್ತು 34 ಮನೆಗಳ ಮೇಲೆ ಬುಲ್ಡೋಜರ್ ಭೀತಿ

