ಮೊಗಲ್ ದೊರೆ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ), ಬಜರಂಗದಳ ಸೇರಿದಂತೆ ಬಲಪಂಥೀಯ ಗುಂಪುಗಳು ನಾಗ್ಪುರದಲ್ಲಿ ಸೋಮವಾರ (ಮಾ.17) ಪ್ರತಿಭಟಿಸಿತ್ತು. ಈ ವೇಳೆ ಮುಸ್ಲಿಮರ ಪವಿತ್ರ ಗ್ರಂಥ ಖುರ್‌ಆನ್‌ನ ಪ್ರತಿಯನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹರಡಿದ ಕಾರಣ ಹಿಂಸಾಚಾರ ಉಂಟಾಗಿದೆ.
ಸೋಮವಾರ ಮಧ್ಯಾಹ್ನ ಹಿಂದುತ್ವ ಸಂಘಟನೆಗಳು ಪ್ರತಿಭಟಿಸಿತ್ತು. ಸಂಜೆಯಾಗುತ್ತಿದ್ದಂತೆ ಎರಡು ಸಮುದಾಯಗಳ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ನಗರದ ಗಣೇಶಪೇಟೆ, ಮಹಲ್, ಗಾಂಧಿಬಾಗ್ ಮತ್ತು ಚಿಟ್ನಿಸ್ ಪಾರ್ಕ್ ಪ್ರದೇಶಗಳಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಗಳ ಮೇಲೆ ಕಲ್ಲೂ ತೂರಾಟ ನಡೆಸಲಾಗಿದೆ. ಅಂಗಡಿ-ಮುಂಗಟ್ಟುಗಳಿಗೆ ಹಾನಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ.
ಹಿಂಸಾಚಾರದಲ್ಲಿ ಸುಮಾರು 30 ಪೊಲೀಸ್ ಸಿಬ್ಬಂದಿ ಮತ್ತು 5-6 ನಾಗರಿಕರು ಗಾಯಗೊಂಡಿದ್ದಾರೆ, ವರದಿಗಳ ಪ್ರಕಾರ, 60ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಬಹುತೇಕ ಮಾಧ್ಯಮ ವರದಿಗಳು 15 ಜನರನ್ನು ಬಂಧಿಸಲಾಗಿದೆ ಎಂದಿವೆ. ಸರ್ಕಾರ ಆರಂಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಇತ್ತೀಚಿನ ವರದಿ ಪ್ರಕಾರ ಕರ್ಫ್ಯೂ ಜಾರಿ ಮಾಡಲಾಗಿದೆ.
ಹಿಂಸಾಚಾರ ಪ್ರಾರಂಭಗೊಂಡಿದ್ದು ಹೇಗೆ?
ಸೋಮವಾರ ಬೆಳಿಗ್ಗೆ 7-9 ಗಂಟೆಯ ನಡುವೆ, ಮಹಲ್ ಪ್ರದೇಶದಲ್ಲಿರುವ ಮರಾಠ ದೊರೆ ಛತ್ರಪತಿ ಶಿವಾಜಿ ಪ್ರತಿಮೆಯ ಮುಂದೆ ‘ಶಿವ ಜಯಂತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಧ್ಯಾಹ್ನದ ಹೊತ್ತಿಗೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಬಜರಂಗದಳದ ಸುಮಾರು 40-50 ಕಾರ್ಯಕರ್ತರು ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದರು. ಈ ವೇಳೆ ಔರಂಗಜೇಬ್ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದರು.
ಈ ವೇಳೆ ಕುರ್‌ಆನ್ ಪ್ರತಿಯನ್ನೂ ಸುಡಲಾಗಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಣೆ, ಕೊಲ್ಹಾಪುರ, ನಾಸಿಕ್, ಮಾಲೆಗಾಂವ್, ನಾಗ್ಪುರ ಮತ್ತು ಅಹಮದ್‌ನಗರದಲ್ಲೂ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಿಹೆಚ್‌ಪಿ, ಬಜರಂಗದಳ ಸೋಮವಾರ ಪ್ರತಿಭಟಿಸಿದೆ.
ಸಂಜೆ 5 ರಿಂದ 7 ಗಂಟೆಯ ನಡುವೆ, ಮುಸ್ಲಿಂ ಸಮುದಾಯದ ಕೆಲ ಯುವಕರು ಮಹಲ್ ಪ್ರದೇಶದಲ್ಲಿ ಒಟ್ಟುಗೂಡಿ ಹಿಂದುತ್ವ ಸಂಘಟನೆಗಳ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ. ನೋಡ ನೂಡುತ್ತಲೇ ಸಾವಿರಾರು ಯುವಕರು ಬೀದಿಗಿಳಿದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ್ದಾರೆ.
ಸಂಜೆ 7.30ರ ಸುಮಾರಿಗೆ ಹಿಂಸಾಚಾರ ಹೆಚ್ಚಾಗಿದ್ದು, ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಮಹಲ್ ಪ್ರದೇಶದ ಹಲವಾರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ಕೈ ಮೀರುವುದನ್ನು ಗಮನಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಅಶ್ರುವಾಯು ಸಿಡಿಸಿದ್ದಾರೆ.
ಘಟನೆ ಸಂಬಂಧ ಆರಂಭದಲ್ಲಿ ಸುಮಾರು 25 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಹೆಚ್ಚಿನವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವದಂತಿ ಹರಡಿ ಗಲಭೆಗೆ ಕಾರಣರಾವಾದ 100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ಕುರಿತು ಮಹಾರಾಷ್ಟ್ರ ಪೊಲೀಸರ ಸೈಬರ್ ವಿಭಾಗ ತನಿಖೆ ಆರಂಭಿಸಿದೆ.
ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕರ್ಫ್ಯೂ ಜಾರಿ
ಹಿಂಸಾಚಾರದ ಬಳಿಕ, ಪ್ರಸ್ತುತ ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 163 (1) (2) (3) ರ ಅಡಿಯಲ್ಲಿ, ಪರಿಸ್ಥಿತಿ ಸಾಮಾನ್ಯವಾಗುವವರೆಗೆ ನಗರದ ವಿವಿದೆಡೆ ಕರ್ಫ್ಯೂ ಜಾರಿಗೊಳಿಸಿ ನಾಗ್ಪುರ ನಗರ ಪೊಲೀಸ್ ಆಯುಕ್ತ ಡಾ. ರವೀಂದ್ರ ಕುಮಾರ್ ಸಿಂಘಾಲ್ ಆದೇಶ ಹೊರಡಿಸಿದ್ದಾರೆ.
ಕೊತ್ವಾಲಿ, ಗಣೇಶಪೇಟೆ, ತೆಹಸಿಲ್, ಲಕಡ್ಗಂಜ್, ಪಚ್ಪೋಲಿ, ಶಾಂತಿನಗರ, ಸಕರ್ದಾರ, ನಂದನವನ್, ಇಮಾಮವಾಡ, ಯಶೋಧರನಗರ ಮತ್ತು ಕಪಿಲನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಮಣಿಪುರ| ಹಮರ್ ಬುಡಕಟ್ಟು ನಾಯಕನ ಮೇಲೆ ಹಲ್ಲೆ; ಚುರಾಚಂದ್‌ಪುರದಲ್ಲಿ ಕರ್ಫ್ಯೂ ಜಾರಿ


