ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ ‘ಹನುಕ್ಕಾ’ ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಬ್ಬ ಬಂದೂಕುಧಾರಿಯನ್ನು ಪೊಲೀಸರು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು ಇನ್ನೊಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತನ ಸ್ಥಿತಿಯೂ ಗಂಭೀರವಾಗಿದೆ. ಎಲ್ಲಾ ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೃಹತ್ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.
ಸ್ಥಳೀಯ ಕಾಲಮಾನ ಸಂಜೆ 6.30ರ ವೇಳೆ ಗುಂಡಿನ ದಾಳಿ ನಡೆದಿದೆ. ಹನುಕ್ಕಾ ಹಬ್ಬದ ಮೊದಲ ರಾತ್ರಿ ಆಚರಣೆಗೆ ಸಂಬಂಧಿಸಿದ ‘ಚಾನುಕಾ ಬೈ ದಿ ಸೀ’ ಕಾರ್ಯಕ್ರಮಕ್ಕಾಗಿ ನೂರಾರು ಜನರು ಬೀಚ್‌ನಲ್ಲಿ ಸೇರಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಸಿಡ್ನಿ ನಗರ ಇರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಪೊಲೀಸರ ಹೇಳಿಕೆಯ ಪ್ರಕಾರ, 20ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಪೊಲೀಸ್ ಅಧಿಕಾರಿಗಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ. ಘಟನಾ ಸ್ಥಳದ ಸುತ್ತಮುತ್ತ ಪತ್ತೆಯಾದ ಹಲವಾರು ಅನುಮಾನಾಸ್ಪದ ವಸ್ತುಗಳನ್ನು ತಜ್ಞ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ .
ಸಾರ್ವಜನಿಕರೊಬ್ಬರು ಸೆರೆ ಹಿಡಿದ ಆಸ್ಪ್ರೇಲಿಯಾದ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ವ್ಯಕ್ತಿಯೊಬ್ಬರು ಬಂಧೂಕುದಾರಿಯಿಂದ ಬಂದೂಕು ಕಿತ್ತುಕೊಂಡು ಗುರಿಯಿಡುವುದನ್ನು ನೋಡಬಹುದು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ವೇಳೆ ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿ ಸುಮಾರು 50 ಗುಂಡುಗಳು ಹಾರಿಸಲಾಗಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಾರ್ವಜನಿಕರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಬೋಂಡಿಯಲ್ಲಿನ ದೃಶ್ಯಗಳು ಅತ್ಯಂತ ಆಘಾತಕಾರಿಯಾಗಿದೆ. ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ,” ಎಂದು ಹೇಳಿದ್ದಾರೆ. ನ್ಯೂ ಸೌತ್ ವೇಲ್ಸ್ ಸರ್ಕಾರ ಮತ್ತು ಫೆಡರಲ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕಿ ಸುಸಾನ್ ಲೇ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಾವೆಲ್ಲರೂ ಪ್ರೀತಿಸುವ ಬೋಂಡಿಯಂತಹ ಸ್ಥಳದಲ್ಲಿ ದ್ವೇಷಪೂರಿತ ಹಿಂಸಾಚಾರ ನಡೆದಿದೆ. ಶಾಂತಿ ಮತ್ತು ಭರವಸೆಯ ಸಂಕೇತವಾಗಿದ್ದ ಹನುಕ್ಕಾ ಆಚರಣೆಯ ವೇಳೆ ಈ ದಾಳಿ ಸಂಭವಿಸಿರುವುದು ಆತಂತಕಾರಿಯಾಗಿದೆ,” ಎಂದು ಹೇಳಿದ್ದಾರೆ.


