ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಎಡಪಂಥೀಯ ಲೇಬರ್ ಪಕ್ಷವು ಶನಿವಾರ (ಮೇ 3, 2025) ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದೆ ಎಂದು ವರದಿಯಾಗಿದೆ.
ಈ ಮೂಲಕ , ಆಂಥೋನಿ ಅಲ್ಬನೀಸ್ ಅವರು 21 ವರ್ಷಗಳ ಬಳಿಕ ಮೂರು ವರ್ಷಗಳ ಅಧಿಕಾರವದಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಎರಡನೇ ಬಾರಿಗೆ ಆಯ್ಕೆಯಾದ ಮೊದಲ ಆಸ್ಟ್ರೇಲಿಯಾದ ಪ್ರಧಾನಿ ಎನಿಸಿಕೊಂಡಿದ್ದಾರೆ.
“ಪ್ರಚಾರದ ಸಮಯದಲ್ಲಿ ನಾವು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ. ಫಲಿತಾಂಶ ಬಂದಾಗ ಅದು ಸ್ಪಷ್ಟವಾಗಿದೆ. ಈ ಸೋಲಿನ ಸಂಪೂರ್ಣ ಹೊಣೆಯನ್ನು ನಾನು ಹೊರುತ್ತೇನೆ” ಎಂದು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಚುನಾವಣೆಯ ಸೋಲಿನ ಬಳಿಕ ಹೇಳಿದ್ದಾರೆ.
“ಚುನಾವಣೆಯಲ್ಲಿ ಗೆದ್ದಿರುವ ಪ್ರಧಾನಿ ಅಲ್ಬನೀಸ್ ಅವರಿಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ.
ಇದು ಲೇಬರ್ ಪಕ್ಷಕ್ಕೆ ಒಂದು ಐತಿಹಾಸಿಕ ಸಂದರ್ಭವಾಗಿದೆ. ನಾವು ಅದನ್ನು ಗುರುತಿಸುತ್ತೇವೆ” ಎಂದು ಡಟ್ಟನ್ ತಿಳಿಸಿದ್ದಾರೆ.
Thank you, Australia. pic.twitter.com/GTjL6QwPzV
— Anthony Albanese (@AlboMP) May 3, 2025
ಆಸ್ಟ್ರೇಲಿಯಾ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 150 ಸ್ಥಾನಗಳನ್ನು ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಧಾನಿ ಅಲ್ಬನೀಸ್ ನೇತೃತ್ವದ ಆಡಳಿತಾರೂಢ ಸೆಂಟರ್-ಲೆಫ್ಟ್ ಲೇಬರ್ ಪಾರ್ಟಿ 70 ಸ್ಥಾನಗಳು ಮತ್ತು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರ ಕನ್ಸರ್ವೇಟಿವ್ ಲಿಬರಲ್ ಪಾರ್ಟಿ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ 24 ಸ್ಥಾನಗಳನ್ನು ಗೆದ್ದಿವೆ. ಅಲಿಪ್ತ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 13 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ಚುನಾವಣಾ ವಿಶ್ಲೇಷಕ ಆಂಥೋನಿ ಗ್ರೀನ್, ಲೇಬರ್ ಪಾರ್ಟಿ 76 ಸ್ಥಾನ, ಕನ್ಸರ್ವೇಟಿವ್ ಒಕ್ಕೂಟ 36 ಸ್ಥಾನ ಮತ್ತು ಅಲಿಪ್ತ ಪಕ್ಷಗಳು 13 ಸ್ಥಾನಗಳನ್ನು ಅಂತಿಮವಾಗಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಲೇಬರ್ ಪಾರ್ಟಿ ಬಹುಮತದ ಅಥವಾ ಅಲ್ಪಮತದ ಸರ್ಕಾರ ರಚಿಸಬಹುದು. ಕನ್ಸರ್ವೇಟಿವ್ ಅಲ್ಪಮತದ ಸರ್ಕಾರ ರಚಿಸುವ ಯಾವುದೇ ಭರವಸೆ ಇಲ್ಲ ಎಂದು ಗ್ರೀನ್ ಹೇಳಿದ್ದಾರೆ.
ಇಂಧನ ನೀತಿ ಮತ್ತು ಹಣದುಬ್ಬರ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳಾಗಿತ್ತು. ದೇಶವು ಜನರ ಜೀವನ ವೆಚ್ಚದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.
ವಿರೋಧ ಪಕ್ಷದ ಡಟ್ಟನ್ ಅವರ ಕನ್ಸರ್ವೇಟಿವ್ ಲಿಬರಲ್ ಪಾರ್ಟಿ, ಹಣದುಬ್ಬರ ಮತ್ತು ಬಡ್ಡಿದರಗಳ ಹೆಚ್ಚಳಕ್ಕೆ ಸರ್ಕಾರಿ ದುಂದುವೆಚ್ಚ ಕಾರಣ ಎಂದು ಲೇಬರ್ ಪಾರ್ಟಿ ಸರ್ಕಾರವನ್ನು ದೂಷಿಸಿತ್ತು. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಲು ಅಧಿಕಾರಕ್ಕೆ ಬಂದರೆ ಐದು ಸಾರ್ವಜನಿಕ ಸೇವಾ ಉದ್ಯೋಗಗಳಲ್ಲಿ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಪ್ರತಿಜ್ಞೆ ಮಾಡಿತ್ತು.
2050ರ ವೇಳೆಗೆ ದೇಶವು ಶೂನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯ ಗುರಿಯನ್ನು ತಲುಪಬೇಕು ಎಂದು ಎರಡೂ ಕಡೆಯವರು ಹೇಳುತ್ತಿದ್ದರು. ಸೌರ ಮತ್ತು ಪವನ ಟರ್ಬೈನ್‌ಗಳಂತಹ ನವೀಕರಿಸಬಹುದಾದ ಇಂಧನ ಮೂಲಗಳ ಬದಲಿಗೆ, ಹೆಚ್ಚಿನ ಪರಮಾಣು ಶಕ್ತಿಯನ್ನು ಅವಲಂಬಿಸುವುದರಿಂದ ಕಡಿಮೆ ವೆಚ್ಚದ ವಿದ್ಯುತ್ ದೊರೆಯುತ್ತದೆ ಎಂದು ಡಟ್ಟನ್ ವಾದಿಸಿದ್ದರು.
ಲೇಬರ್ ಪಾರ್ಟಿ ವಿರೋಧ ಪಕ್ಷದ ನಾಯಕನನ್ನು “ಡಾಗ್-ವೈ ಡಟ್ಟನ್” ಎಂದು ಕರೆದಿತ್ತು. ಅವರ ಪಕ್ಷವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಸರ್ಕಾರಿ ದಕ್ಷತೆಯ ಇಲಾಖೆಯನ್ನು ಅನುಕರಿಸುತ್ತಿದೆ ಎಂದು ಆರೋಪಿಸಿತ್ತು. ಡಟ್ಟನ್ ಅವರ ವಿರೋಧ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದರೆ ಪರಮಾಣು ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಸರ್ಕಾರಿ ಸೇವೆಗಳನ್ನು ಕಡಿತಗೊಳಿಸಲಿದೆ ಎಂದು ಲೇಬರ್ ಪಕ್ಷ ಹೇಳಿತ್ತು.
“ಆಸ್ಟ್ರೇಲಿಯನ್ನರನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ಅಮೆರಿಕನ್ ಶೈಲಿಯ ರಾಜಕೀಯ ಮಾಡುವ ಪ್ರಯತ್ನವನ್ನು ಡಟ್ಟನ್ ಮಾಡುತ್ತಿದ್ದಾರೆ. ಇದು ಆಸ್ಟ್ರೇಲಿಯಾಕ್ಕೆ ಹೇಳಿದ್ದಲ್ಲ ಎಂದು” ಎಂದು ಅಲ್ಬನೀಸ್ ಚುನಾವಣೆ ಪ್ರಚಾರದ ವೇಳೆ ಕಿಡಿಕಾರಿದ್ದರು.
ಗಾಜಾದಾದ್ಯಂತ ಇಸ್ರೇಲ್ ನಡೆಸಿದ ಹೊಸ ವಾಯುದಾಳಿಗೆ 32 ಪ್ಯಾಲೆಸ್ತೀನಿಯನ್ನರು ಬಲಿ


