ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ವಿಫಲವಾದ ಹಿನ್ನೆಲೆ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಲೈವ್ ಟಿವಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ 361-401 ಸ್ಥಾನಗಳು, ಇಂಡಿಯಾ ಮೈತ್ರಿಕೂಟ 131-166 ಸ್ಥಾನಗಳು ಮತ್ತು ಇತರರು 8-20 ಸ್ಥಾನಗಳನ್ನು ಗೆಲ್ಲಬಹುದು ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಹೇಳಿತ್ತು.
ಆದರೆ, ಎಕ್ಸಿಟ್ ಪೋಲ್ ಸಂಪೂರ್ಣ ತಲೆಕೆಳಗಾಗಿದೆ. ಇದುವರೆಗಿನ ಮತ ಎಣಿಕೆಯ ಪ್ರಕಾರ, ಎನ್‌ಡಿಎ ಒಕ್ಕೂಟ 293, ಇಂಡಿಯಾ ಮೈತ್ರಿಕೂಟ 233 ಮತ್ತು ಇತರರು 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹಾಗಾಗಿ, ಇಂಡಿಯಾ ಟುಡೇ ವಾಹಿನಿಯ ಲೈವ್ ಟಿವಿ ಡಿಬೇಟ್‌ನಲ್ಲಿ ಪ್ರದೀಪ್ ಗುಪ್ತಾ ಕಣ್ಣೀರಿಟ್ಟಿದ್ದಾರೆ.
Watch the moment when Axis My India chief @PradeepGuptaAMI broke down.
Watch Live: https://t.co/BFPUOaBn3X#ResultsonIndiaToday #ElectionsResults | @RahulKanwal @PreetiChoudhry @sardesairajdeep pic.twitter.com/jrUauZzJ1p
— IndiaToday (@IndiaToday) June 4, 2024
ಮತ ಎಣಿಕೆಯ ಮುನ್ನಾದಿನ (ಜೂನ್ 3) ಎಎನ್‌ಐ ಜೊತೆ ಮಾತನಾಡಿದ್ದ ಪ್ರದೀಪ್ ಗುಪ್ತಾ, “ಆಕ್ಸಿಸ್ ಮೈ ಇಂಡಿಯಾ ಕಳೆದ 10 ವರ್ಷಗಳಿಂದ ನಿರಂತರವಾಗಿ ಎಕ್ಸಿಟ್ ಪೋಲ್‌ಗಳನ್ನು ಮಾಡಿದೆ. ಎರಡು ಲೋಕಸಭೆ ಚುನಾವಣೆ ಸೇರಿದಂತೆ 69 ಚುನಾವಣೆಗಳಿಗೆ ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿದ್ದೇವೆ. ಇದುವರೆಗೆ 65 ಬಾರಿ ನಮ್ಮ ಊಹೆ ಸರಿಯಾಗಿದೆ” ಎಂದಿದ್ದರು.
“ಎಕ್ಸಿಟ್ ಪೋಲ್ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತುವ ಜನರು ನಮ್ಮ ದಾಖಲೆಯನ್ನು ನೋಡಬೇಕು. ಅವರು ತೃಪ್ತರಾಗುತ್ತಾರೆ” ಎಂದು ಹೇಳಿದ್ದರು.
ಜೂನ್ 1ರಂದು ಶನಿವಾರದ ಅಂತಿಮ ಸುತ್ತಿನ ಮತದಾನದ ನಂತರ ಪ್ರಕಟಗೊಂಡ ಬಹುಪಾಲು ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಮುನ್ನಡೆ ಸಾಧಿಸಲಿದೆ ಎಂದು ಹೇಳಿತ್ತು. ವರದಿಗಳ ಪ್ರಕಾರ, ಒಟ್ಟು 14 ಎಕ್ಸಿಟ್ ಪೋಲ್‌ಗಳನ್ನು ಒಟ್ಟುಗೂಡಿಸಿ ನಡೆಸಿದ ಪೋಲ್ ಆಫ್ ಪೋಲ್‌ನಲ್ಲೂ ಎನ್‌ಡಿಎ 365 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿತ್ತು.
ಇದನ್ನೂ ಓದಿ : ರಾಜ್ಯ ರಾಜಧಾನಿಯಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ: ಬೆಂಗಳೂರಿನ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲು


