ಲಕ್ಷದ್ವೀಪ ಮೂಲದ ನಟಿ ಮತ್ತು ನಿರ್ಮಾಪಕಿ ಆಯಿಷಾ ಸುಲ್ತಾನಾ ಅವರ ವಿರುದ್ಧದ ರಾಷ್ಟ್ರದ್ರೋಹ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಆಯಿಷಾ ಅವರಿಗೆ ನಿನ್ನೆ ನಿರೀಕ್ಷಣಾ ಜಾಮೀನು ನೀಡಿದೆ. ಪ್ರಕರಣದ ವಿಚಾರಣೆ ವೇಳೆ “ಆಯಿಷಾ ಸುಲ್ತಾನ್ ಅವರ ಹೇಳಿಕೆಗಳು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಹಾಗೂ ಸಮುದಾಯಗಳ ನಡುವೆ ಯಾವುದೇ ದ್ವೇಷವನ್ನು ಹುಟ್ಟುಹಾಕುವಂತದಲ್ಲ” ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
50,000 ಮೊತ್ತದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ಪಡೆದುಕೊಂಡು ಆಯಿಷಾ ಸುಲ್ತಾನಾ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಲಯವು ಲಕ್ಷದ್ವೀಪ ಆಡಳಿತದ ವಾದವನ್ನು ತಳ್ಳಿ ಹಾಕಿತು. ಕಳೆದ ವಾರ ಆಯಿಷಾ ಸಲ್ತಾನಾ ಅವರ ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದ್ದ ಕೇರಳ ಹೈಕೋರ್ಟ್ ನಿನ್ನೆ ಶುಕ್ರವಾರ CrPC ಸೆಕ್ಷನ್ 432 ರ ಅಡಿಯಲ್ಲಿ ಸುಲ್ತಾನಾ ಅವರಿಗೆ ನಿರೀಕ್ಷಿಣಾ ಜಾಮೀನು ನೀಡಿದೆ.
ಕೇರಳ ಹೈಕೋರ್ಟ್‌ನಲ್ಲಿ ಲಕ್ಷದ್ವೀಪ ಆಡಳಿತವು ಗುರುವಾರ ಮತ್ತೊಂದು ಅರ್ಜಿಯನ್ನು ಸಲ್ಲಿಸಿ ಆಯಿಷಾ ಸುಲ್ತಾನಾ ಅವರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೊಪ ಮಾಡಿತ್ತು.
ಕಮರತ್ತಿ ಪೊಲೀಸರು ಬಿಜೆಪಿ ಲಕ್ಷದ್ವೀಪ ಮುಖ್ಯಸ್ಥ ಸಿ. ಅಬ್ದುಲ್ ಖಾದಿರ್ ಹಾಜಿ ಅವರ ದೂರಿನ ಆಧಾರದ ಮೇಲೆ IPC ಸೆಕ್ಷನ್ 124A ( ದೇಶದ್ರೋಹ) ಮತ್ತು ಸೆಕ್ಷನ್ 153B (ಸಮುದಾಯಗಳ ನಡುವೆ ದ್ವೇಷ ಭಿತ್ತುವ ಕೃತ್ಯ) ಅಡಿಯಲ್ಲಿ FIR ದಾಖಲಿಸಿಕೊಂಡಿತ್ತು.
ಲಕ್ಷದ್ವೀಪದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಕೊರೋನಾ ಎರಡನೇ ಅಲೆಯೂ ತೀವ್ರವಾಗಿ ಹರಡಲು ಕಾರಣವಾಯಿತು. ನಿರ್ಬಂಧಗಳನ್ನು ಸಡಿಲಿಸಿದ ಲಕ್ಷದ್ವೀಪ ಆಡಳಿತಾಧಿಕಾರಿಯ ನಿರ್ಧಾರವನ್ನು ಬಯೋ ವೆಪನ್ ಆಗಿ ಪರಿಣಮಿಸಿತು ಎಂದಷ್ಟೇ ಹೇಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಮಾಡುವ ಯಾವ ಉದ್ದೇಶವೂ ಇದರಲ್ಲಿ ಇಲ್ಲ ಎಂದು ಆಯಿಷಾ ಸುಲ್ತಾನ್ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದರು.
ಶುಕ್ರವಾರ ಆಯಿಷಾ ಸುಲ್ತಾನಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಪ್ರಕರಣದಲ್ಲಿ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಹೇಳಿಕೆಯನ್ನು ಅರ್ಜಿದಾರರು ನೀಡಿಲ್ಲ. ಸರ್ಕಾರದ ಯೋಜನೆಗಳನ್ನು ಟೀಕಿಸುವುದನ್ನು ದೇಶದ್ರೋಹ ಅಥವಾ ಧರ್ಮ ದ್ವೇಷ ಸೃಷ್ಟಿಸುವ ಕೃತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ . ಮೇಲ್ನೋಟಕ್ಕೆ ಅರ್ಜಿದಾರರನ್ನು ಬಂಧಿಸುವ ಅಗತ್ಯವಿಲ್ಲವೆಂಬುದು ಕಂಡು ಬರುತ್ತದೆ ಎನ್ನುವ ಮೂಲಕ ಲಕ್ಷದ್ವೀಪ ಆಡಳಿತದ ವಾದವನ್ನು ತಳ್ಳಿ ಹಾಕಿತು.
ಲಕ್ಷದ್ವೀಪ ಬಿಜೆಪಿಯ 15 ಮುಖಂಡರು ಆಯಿಷಾ ಸುಲ್ತಾನಾ ವಿರುದ್ಧ ಪ್ರಕರಣವನ್ನು ದಾಖಲಿಸಿರವುದನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿ ಪ್ರತಿಭಟಿಸಿದ್ದಾರೆ. ಹೊಸ ಆಡಳಿತಾಧಿಕಾರಿ ಪ್ರಪುಲ್ ಖೋಡಾ ಪಟೇಲ್ ಅವರ ಯೋಜನೆಗಳಿಂದ ಲಕ್ಷದ್ವೀಪದ ಜನ ಜೀವನ ಮತ್ತು ಸಂಸ್ಕೃತಿ ಹಾಳಾಗುತ್ತಿರುವುದು ಬಿಜೆಪಿಗೂ ಗೊತ್ತಿದೆ ಎಂದು ಪ್ರತಿಭಟನಾನಿರತ ಬಿಜೆಪಿ ಮುಖಂಡರು ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ಆಡಳಿತಾಧಿಕಾರಿಯ 2 ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ತಡೆ


