ತಿಳಿ ಗುಲಾಬಿ ಸೀರೆಯ ಸಹೋದರಿಯರ ಮೊಗದಲ್ಲೊಂದು ಒಂದು ‘ಆಶಾ’ದಾಯಕ ಸಮಾಧಾನ ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗಳಲ್ಲಿ ಹಲವನ್ನು ಈಡೇರಿಸಲು ಒಪ್ಪಿಕೊಂಡಿದೆ.
7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಕಾರ್ಮಿಕ ಹಕ್ಕುಗಳ ರಕ್ಷಣೆ ಮತ್ತು ಕನಿಷ್ಠ ವೇತನವನ್ನು ಕೋರಿ ಮಹಾರಾಷ್ಟ್ರದ 70 ಸಾವಿರ ಆಶಾ ಕಾರ್ಯಕರ್ತೆಯರು ಜೂನ್ 15 ರಿಂದ ಮುಷ್ಕರ ನಡೆಸುತ್ತಿದ್ದರು. ಮಹಾರಾಷ್ಟ್ರ ಸರ್ಕಾರವು ತೀರಾ ಇತ್ತೀಚಿನವರೆಗೂ ಈ ಬೇಡಿಕೆಗಳಿಗೆ ಸ್ಪಂದಿಸಿರಲಿಲ್ಲ.
ಬುಧವಾರ, ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದಾರೆ. ಮಾಸಿಕ ವೇತನದಲ್ಲಿ 1 ಸಾವಿರ ರೂ ಹೆಚ್ಚಳ ಮತ್ತು ಕೋವಿಡ್ ಪರಿಹಾರವಾಗಿ ಮಾಸಿಕ 500 ರೂ. ನೀಡಲು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ.
ಇದಲ್ಲದೆ ಪ್ರತಿ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಕೂಡ ನೀಡಲು ಸರ್ಕಾರ ಒಪ್ಪಿಕೊಂಡಿದೆ. ಆಶಾ ಕಾರ್ಯಕರ್ತೆಯರು ನಡೆಸಿದ ಪ್ರತಿಭಟನೆಯ ನಂತರ ಸರ್ಕಾರದ ಈ ಪ್ರಕಟಣೆ ಬಂದಿದೆ.
ಸದ್ಯದ ಮಟ್ಟಿಗೆ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇದು ದೊಡ್ಡ ಗೆಲುವೇ. ಆದರೆ ಹೋರಾಟದ ಹಾದಿ ಇನ್ನೂ ಸುದೀರ್ಘವಾಗಿದೆ.
ಇದನ್ನೂ ಓದಿ: ಕೊರೊನಾ ಕಾಲದಲ್ಲೂ ‘ಆಶಾ’ರೋಧನ..! : ಈಗಲಾದರೂ ಮರುಗುವುದೇ ಸರ್ಕಾರ?
ದೈನಂದಿನ ಕಾರ್ಯಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಆಶಾ ಕಾರ್ಯಕರ್ತೆಯರ ಗುಂಪಿನ ಮುಖ್ಯಸ್ಥರಿಗೆ ಮಾಸಿಕ ಸಂಬಳದಲ್ಲಿ 1,200 ರೂ. ಹೆಚ್ಚಳ, ಜೊತೆಗೆ ಹೆಚ್ಚುವರಿ ಕೋವಿಡ್ ಭತ್ಯೆಯಾಗಿ ತಿಂಗಳಿಗೆ 500 ರೂ.ಗಳನ್ನು, ಲಸಿಕಾ ಕೇಂದ್ರಗಳಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯರ್ತೆಯರಿಗೆ ಹೆಚ್ಚುವರಿ ಮಾಸಿಕ 200 ರೂ. ಭತ್ಯೆ ನೀಡಲೂ ಸರ್ಕಾರ ಒಪ್ಪಿದೆ. ಕೋವಿಡ್ ಕಾರಣಕ್ಕೆ ಸಾವನ್ನಪ್ಪಿದ ಆಶಾ ಕಾರ್ಯಕರ್ತೆಯರ ರಕ್ತಸಂಬಂಧಿಗಳಿಗೆ ಸಹ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೋವಿಡ್ ಭತ್ಯೆ ಮತ್ತು ವೇತನ ಪರಿಷ್ಕರಣೆಯಿಂದಾಗಿ ಮಹಾರಾಷ್ಟ್ರದ ಆಶಾ ಕಾರ್ಯಕರ್ತೆಯರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡಿದ್ದಾರೆ. ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯಗಳ ನಡುವಿನ ಸೇತುವೆಯಾಗಿ ಆಶಾ ಕಾರ್ಯಕರ್ತೆಯರು ಅಮೂಲ್ಯ ಸೇವೆ ಮಾಡುತ್ತಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅವರನ್ನು ಇನ್ನೂ “ಆರೋಗ್ಯ ಸ್ವಯಂಸೇವಕರು” ಎಂದು ಗುರುತಿಸುತ್ತಿದೆ. ಮೂಲ ಅಗತ್ಯತೆಗಳು ಮತ್ತು ಉದ್ಯೋಗ ಭದ್ರತೆಗಾಗಿ ಅವರು ಆಗ್ರಹಿಸುತ್ತಿದ್ದು, ಇದಕ್ಕಾಗಿ ತಮ್ಮನ್ನು ಮುಂಚೂಣಿಯ ಆರೋಗ್ಯ ಕಾರ್ಯಕರ್ತರಾಗಿ ಗುರುತಿಸಬೇಕೆಂದು ನಿರಂತರವಾಗಿ ಒತ್ತಾಯಿಸಿದ್ದಾರೆ. “ಆರೋಗ್ಯ ಸ್ವಯಂಸೇವಕ” ಎಂಬ ಹಣೆಪಟ್ಟಿ ಹಚ್ಚುವ ಮೂಲಕ ಅವರ ಬೇಡಿಕೆಗಳಿಗೆ ಹಿನ್ನಡೆ ಮಾಡುತ್ತ ಬರಲಾಗಿದೆ.
ಸಮುದಾಯಗಳ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ವರ್ಧನೆಗೆ ದಿನವೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು, ಗರ್ಭಿಣಿಯರಿಗೆ ಪ್ರಾಥಮಿಕ ಉಪಚಾರ ಮತ್ತು ಅವರನ್ನು ಹೆರಿಗೆ ಸಮಯದಲ್ಲಿ ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸುವ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರ ಸೇವೆ ಅನುಪಮವಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಶ್ರಮದ ನಂತರವೂ ಅವರಿಗೆ ಕೇವಲ 1,000 ದಿಂದ 3000 ರೂವರೆಗೆ ವೇತನ ನೀಡುತ್ತ ಬರಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಆಶಾ ಒಕ್ಕೂಟಗಳು ಪ್ರತಿಭಟನೆ ಮತ್ತು ಮುಷ್ಕರ ನಡೆಸುತ್ತ ಬಂದಿವೆ. ಈಗ ಮಹಾರಾಷ್ಟ್ರದಲ್ಲಿ ಅವರಿಗೊಂದು ಜಯ ಸಿಕ್ಕಿದ್ದು ಮುಂದಿನ ಹೋರಾಟಕ್ಕೆ ದೊಡ್ಡ ಮೆಟ್ಟಿಲಾಗಿದೆ.
ಇದನ್ನೂ ಓದಿ: ಪ್ರತಿದಿನ ಭಯದಲ್ಲೇ ಮನೆಗೆ ಹೋಗುವ ನಮಗೆ, ನಮ್ಮ ಹಳ್ಳಿಗಳಲ್ಲೇ ಗೌರವವಿಲ್ಲ: ಆಶಾ ಕಾರ್ಯಕರ್ತರ ಅಳಲು