Homeಚಳವಳಿಕೊರೊನಾ ಕಾಲದಲ್ಲೂ 'ಆಶಾ'ರೋಧನ..! : ಈಗಲಾದರೂ ಮರುಗುವುದೇ ಸರ್ಕಾರ?

ಕೊರೊನಾ ಕಾಲದಲ್ಲೂ ‘ಆಶಾ’ರೋಧನ..! : ಈಗಲಾದರೂ ಮರುಗುವುದೇ ಸರ್ಕಾರ?

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಜುಲೈ 10 ರಿಂದ ತಮ್ಮ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಇಂದು ಮುಖ್ಯಮಂತ್ರಿ ಮನೆ ಮುತ್ತಿಗೆಗೂ ಕರೆ ನೀಡಿದ್ದಾರೆ.

- Advertisement -
- Advertisement -

ಭಾರತದಂತಹ ದೇಶದಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವೈದ್ಯರನ್ನು ಒದಗಿಸುವುದು ಯಾವ ಸರ್ಕಾರಗಳಿಗೂ ಈವರೆಗೆ ಸಾಧ್ಯವಾಗಿಲ್ಲ. ಹೀಗಾಗಿ ಭಾರತದಲ್ಲಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಆಲದ ಬೇರಿನಂತೆ ಹರಡಿಕೊಂಡಿರುವ ಆಶಾ ಕಾರ್ಯಕರ್ತೆಯರ ಸೇವೆ ಬಡ ಜನರ ಪಾಲಿಗೆ ಜೀವಾಮೃತ ಎಂದರೂ ಅತಿಶಯೋಕ್ತಿಯಲ್ಲ.

ಆಶಾ ಕಾರ್ಯಕರ್ತೆಯರ ಕಾರ್ಯಕ್ಷೇತ್ರಕ್ಕೆ ನಿಗದಿತ ಚೌಕಟ್ಟಿಲ್ಲ. ಹಲವು ಕಾರ್ಯವಿಧಾನಗಳನ್ನು ಅನುಸರಿಸಿ ಇವರು ಕೆಲಸ ಮಾಡಬೇಕು. ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುತ್ತಾ ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಕುಟುಂಬ ಯೋಜನೆ, ಶೌಚಾಲಯ ಬಳಕೆ, ಸಮಗ್ರ ಅಭಿವೃದ್ಧಿ ಕುರಿತು ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಯಲ್ಲಿ ಇವರದ್ದು ಮೌನಕ್ರಾಂತಿ.

ಇನ್ನು ಈ ದೇಶಕ್ಕೆ ಕೊರೊನಾ ಹಾವಳಿ ಇಟ್ಟ ನಂತರ ಇವರ ಜವಾಬ್ದಾರಿಗಳು ಮತ್ತಷ್ಟು ಅಧಿಕವಾಗಿವೆ. ಜವಾಬ್ದಾರಿಗಳ ಜೊತೆ ಜೊತೆಗೆ ಅಪಾಯವೂ ಪೆಡಂಭೂತದಂತೆ ಬೆದರಿಕೆಯೊಡ್ಡಿರುವುದು ಸುಳ್ಳಲ್ಲ. ಆದರೆ, ಇದ್ಯಾವ ಬೆದರಿಕೆಗೂ ಜಗ್ಗದ ಆಶಾ ಕಾರ್ಯಕರ್ತೆಯರು ಈವರೆಗೆ ತಮ್ಮ ಕೆಲಸವನ್ನು ಚಾಚೂ ತಪ್ಪದೆ ಪಾಲಿಸುತ್ತಾ-ನಿರ್ವಹಿಸುತ್ತಾ ಬಂದಿದ್ದಾರೆ.

ಕೊರೊನಾ ರೋಗಿಗಳ ಕುರಿತು ಮಾಹಿತಿ ಕಲೆ ಹಾಕಲು ತೆರಳಿದ್ದ ಸಂದರ್ಭದಲ್ಲೂ ಸಹ ಆಶಾ ಕಾರ್ಯಕರ್ತೆಯರ ಮೇಲೆ ಜನ ಹಲ್ಲೆಗೆ ಮುಂದಾದ ಕುರಿತು ಸಾಕಷ್ಟು ವರದಿಗಳಾಗಿದ್ದವು. ಆದರೆ, ಯಾವ ಹಲ್ಲೆಗಳು-ಅಪಾಯಗಳಿಗೂ ಸ್ಥಗಿತವಾಗದ ಆಶಾ ಕಾರ್ಯಕರ್ತೆಯರ ಕೆಲಸ ಇದೀಗ ಸರ್ಕಾರದಿಂದಲೇ ಸ್ಥಗಿತವಾಗಿರುವುದು ಮಾತ್ರ ವಿಪರ್ಯಾಸ.

ಹೌದು! ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಜುಲೈ 10 ರಿಂದ ತಮ್ಮ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಇಂದು ಮುಖ್ಯಮಂತ್ರಿ ಮನೆ ಮುತ್ತಿಗೆಗೂ ಕರೆ ನೀಡಿದ್ದಾರೆ. ಆದರೆ, ಇಷ್ಟಾದರೂ ಯಾವೊಬ್ಬ ಸಚಿವರೂ ಇವರ ಮನವಿಯನ್ನು ಆಲಿಸಲು ಸಿದ್ಧರಿಲ್ಲ. ಇವರ ಬೇಡಿಕೆಯನ್ನು ಕೇಳಿಸಿಕೊಳ್ಳುವ ವ್ಯವಧಾನವಂತೂ ಸರ್ಕಾರಕ್ಕೆ ಮೊದಲೇ ಇಲ್ಲ.


ಇದನ್ನೂ ಓದಿ: ಆಶಾ ಕಾರ್ಯಕರ್ತರ ಬೇಡಿಕೆಗೆ ಸರ್ಕಾರ ಜಗ್ಗದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ: ಡಿಕೆಶಿ


ಹಾಗೆಂದು ಇದು ಕೊರೊನಾ ಸಂಕಷ್ಟ ಕಾಲದ ಹೋರಾಟ ಮಾತ್ರವಲ್ಲ. ಬದಲಿಗೆ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಈ ಹಿಂದೆಯೂ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಶಾ ಕಾರ್ಯಕರ್ತೆಯರು ಹಲವು ಬಾರಿ ಬೀದಿಗಿಳಿದಿದ್ದರು. ಆದರ್‍ಲೆ ಅಧಿಕಾರದಲ್ಲಿದ್ದ ಯಾವ ಸರ್ಕಾರಗಳೂ ಇವರ ಬೇಡಿಕೆಯನ್ನು ಈಡೇರಿಸಿಲ್ಲ. ಇದಕ್ಕೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವೂ ಹೊರತಲ್ಲ.

ಆಶಾ ಕಾರ್ಯಕರ್ತೆಯರ ಹೋರಾಟ ಏತಕ್ಕಾಗಿ? ಇವರ ಬೇಡಿಕೆಯಾದರೂ ಏನು? ಕೊರೊನಾ ಕಾಲದಲ್ಲಿ ಇವರು ಸಂಧಿಸುತ್ತಿರುವ ಅಪಾಯವಾದರೂ ಎಂತಾದ್ದು? ಆಶಾ ಕಾರ್ಯಕರ್ತೆಯರೆಂದರೆ ಸರ್ಕಾರಕ್ಕೆ ಏಕಿಷ್ಟು ತಾತ್ಸಾರ?

‘ಆಶಾ’ರೋಧನ..!

ಆಶಾ ಅಂದರೆ ‘ಅಕ್ರೆಡಿಟೆಡ್ ಸೋಷಿಯಲ್ ಹೆಲ್ತ್ ಆಕ್ಟಿವಿಸ್ಟ್’ (ASHA). ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ 2005ರಲ್ಲಿ ಆಶಾ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ರಾಜ್ಯದಲ್ಲಿ 2008-09 ಸಾಲಿನಿಂದ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಡಿ ತರಬೇತಿ ನೀಡಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬರಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 35 ಸಾವಿರಕ್ಕೂ ಹೆಚ್ಚು, ಪ್ರತಿ 2000 ಜನಸಂಖ್ಯೆಗೆ ಒಬ್ಬರಂತೆ, ನಗರ ಕೊಳಚೆ ಪ್ರದೇಶಗಳಲ್ಲಿ 3000ಕ್ಕೂ ಹೆಚ್ಚು, ಒಟ್ಟು ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಆಶಾಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ 25 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಆಶಾಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನಿಷ್ಠ ಎಂಟನೇ ತರಗತಿ ಓದಿರುವ ಆಯಾ ಗ್ರಾಮಗಳ ಹೆಣ್ಣು ಮಕ್ಕಳೇ ಈ ಆಶಾ ತಾರೆಯರು.

ಆದರೆ, ಈ ಹೆಣ್ಣುಮಕ್ಕಳನ್ನು ಸರ್ಕಾರ ತನ್ನ ಅನುಕೂಲಕ್ಕಾಗಿ ಬಳಸಿಕೊಂಡು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದು ದೊಡ್ಡ ಆರೋಪ ಮತ್ತು ನೋವಿನ ಸಂಗತಿಯಾಗಿದೆ. ಆಕೆ ಕೂಡಾ ಮೂಕಳಂತೆ ಏನನ್ನೂ ಪ್ರಶ್ನಿಸದೆ ತನ್ನ ಪಾಡಿಗೆ ದುಡಿಯುತ್ತಾಳೆ. ಈ ಪಾಟಿ ದುಡಿದೂ ನೆಟ್ಟಗೆ ಕಾಸು ಕೊಡಲ್ಲ ಅಂದರೆ ಇದ್ಯಾವ ಸೀಮೆ ದುಡಿಮೆ? ಎನ್ನುವುದು ಈ ಜೀವಗಳ ಬೆನ್ನ ಹಿಂದೆ ನಿಂತ ಕಾರ್ಮಿಕ ಪರ ಸಂಘಟನೆಗಳ, ಸಾಮಾಜಿಕ ಚಿಂತಕರ ಆಕ್ರೋಶ.

ತಳಸಮುದಾಯಗಳ ಕುಟುಂಬಕ್ಕೆ ಸೇರಿದ 25-50 ವಯೋಮಾನದ ಹೆಣ್ಣು ಮಕ್ಕಳು ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಆಶಾ ಕಾರ್ಯಕರ್ತೆಯರಾಗಿದ್ದಾರೆ. ವಿಧವೆಯರು, ಪತಿಯ ಮರಣಾ ನಂತರ ಮಕ್ಕಳ ಜವಾಬ್ದಾರಿ ಹೊತ್ತ ತಾಯಂದಿರು, 5-6 ಜನ ಸದಸ್ಯರಿರುವ ಸಂಸಾರದ ನೊಗ ಹೊತ್ತ ಮಹಿಳೆಯರು, ಗಂಡ ತೊರೆದು ಹೋದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೃತ್ತಿಯಲ್ಲಿದ್ದಾರೆ. ಅನೇಕ ಒಂಟಿ ಜೀವಿಗಳೂ ಆಶಾಗಳಾಗಿ ದುಡಿಯುತ್ತಿದ್ದಾರೆ.

ಈ ಪೈಕಿ ಬಹುತೇಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬದುಕು ಈಗ ಬಲು ದುಬಾರಿ. ಮಕ್ಕಳ ಶಿಕ್ಷಣ, ಸಾರಿಗೆ, ಆರೋಗ್ಯ ವೆಚ್ಚ, ಬೆಲೆ ಏರಿಕೆಯಿಂದ ಜೀವನ ಸಾಗಿಸುವುದು ಸುಲಭವಲ್ಲ. ದಿನದ ಬದುಕು ಹಸನಾಗಿಸಲು ಹಲ್ಲುಮುಡಿ ಕಚ್ಚಿ ಹೆಣಗುತ್ತಿದ್ದಾರೆ.


ಇದನ್ನೂ ಓದಿ: ಕನಿಷ್ಠ 12,000 ವೇತನ ನೀಡಿ: ’ಆಶಾ’ ಕಾರ್ಯಕರ್ತರ ಪ್ರತಿಭಟನೆ


ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇಧಿತರನ್ನು ಆಶಾಗಳಾಗಿ ನೇಮಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲಾಗುತ್ತದೆ ಎನ್ನುವುದು ಸರ್ಕಾರದ ಘೋಷಣೆ. ಆದರೆ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎಂಬುದು ಮಾತ್ರ ವಾಸ್ತವ. ತಿಂಗಳಿಗೆ ರಾಜ್ಯ ಸರ್ಕಾರ ನೀಡುವ 4000 ಪ್ರೋತ್ಸಾಹ ಧನ ಹೊಟ್ಟೆ ತುಂಬಿಸೀತೇ? ಕಷ್ಟವಿದ್ದರೂ, ಸಂಸಾರಕ್ಕೆ ಆಧಾರವಾದೀತು, ಏನೋ ಒಂದು ಸರ್ಕಾರಿ ಕೆಲಸ. ಇಂದಲ್ಲ ನಾಳೆ ಹೊಟ್ಟೆ ತುಂಬುವಷ್ಟಾದರೂ ಸರ್ಕಾರ ವೇತನ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ದುಡಿಯುತ್ತಿದ್ದೇವೆ ಎಂಬುದು ಈ ತಾಯಂದಿರ ಅಳಲು.

ಆಶಾಗಳು ಪ್ರೋತ್ಸಾಹ ಧನ ಪಡೆಯುವುದೂ ಅಷ್ಟು ಸುಲಭವಲ್ಲ

ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಕಧನ ವಿತರಿಸಲು ರಾಜ್ಯ ಸರ್ಕಾರ ಆಶಾ ಸಾಫ್ಟ್ ಎಂಬ ತಂತ್ರಾಂಶ ಅಳವಡಿಸಿದೆ. ನಿಗದಿತ ದಿನ ನಿಯತವಾಗಿ ಪ್ರೋತ್ಸಾಹಧನ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂಬುದು ಅಧಿಕಾರಿಗಳ ಸಮರ್ಥನೆ.

ಆಶಾಗಳು ಮಾಡಿದ ಕೆಲಸದ ವಿವರಗಳನ್ನು ಈ ತಂತ್ರಾಂಶದಲ್ಲಿ ತುಂಬಬೇಕು. ಆದರೆ, ಅದನ್ನು ತುಂಬುವ ವ್ಯವಸ್ಥೆ ಅಸಮರ್ಪಕವಾಗಿದೆ. ಸಿಬ್ಬಂದಿ ಕೊರತೆ, ಅಸಹಕಾರ, ಮೂಲಸೌಕರ್ಯಗಳ ಕೊರತೆ, ಹಳ್ಳಿಗಳಲ್ಲಿ ವಿದ್ಯುತ್ ಕೊರತೆ, ತಂತ್ರಾಂಶದ ಲೋಪದೋಷಗಳು ಇವೆಲ್ಲ ತಾಪತ್ರಯಗಳು. ಇವುಗಳಿಂದ ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕದೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

ಬಹುತೇಕ ಜಿಲ್ಲೆಗಳಲ್ಲಿ ಆಶಾಗಳಿಗೆ ಮಾಸಿಕ ಕೇವಲ ಶೇ 40ರಿಂದ ಶೇ 70ರಷ್ಟು ಮಾತ್ರ ಪ್ರೋತ್ಸಾಹಧನ ದೊರೆಯುತ್ತಿದೆ. ಉದಾಹರಣೆಗೆ ಒಬ್ಬ ಆಶಾ ಮಾಸಿಕ 3000 ರೂನಷ್ಟು, ಮತ್ತೊಬ್ಬ ಆಶಾ 2500 ರೂ ನಷ್ಟು ಕೆಲಸ ಮಾಡಿರುವುದಕ್ಕೆ ಅಲ್ಲಿ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಸಹಾಯಕರು ದೃಢೀಕರಿಸಿರುತ್ತಾರೆ. ಆದರೆ ಅವರಿಗೆ 1500 ರಿಂದ 800 ರೂ ಮಾತ್ರ ಆಶಾ ಸಾಫ್ಟ್ನಲ್ಲಿ ಫೀಡ್ ಆಗುತ್ತದೆ. ಉಳಿದದ್ದನ್ನು ಫೀಡ್ ಮಾಡಿದಾಗ ಸಾಫ್ಟ್‌ವೇರ್ ನಿರಾಕರಿಸುತ್ತೆ, ಆದುದರಿಂದ ಉಳಿದ ಮಾಹಿತಿಯನ್ನು ಮುಂದಿನ ತಿಂಗಳಲ್ಲಿ ಫೀಡ್ ಮಾಡಲು ತಿಳಿಸಿರುತ್ತಾರೆ ಎಂದು ಹಲವರು ಆರೋಪಿಸುತ್ತಿದ್ದಾರೆ.

ಮುಂದಿನ ತಿಂಗಳಿನಲ್ಲಿ ಫೀಡ್ ಮಾಡಿದರೂ ಸಹಾ ಸಂಪೂರ್ಣ ಮಾಹಿತಿಯನ್ನು ಸಾಫ್ಟ್‌ವೇರ್ ಸ್ವೀಕರಿಸುವುದಿಲ್ಲ. ಬಹುತೇಕವಾಗಿ ಇದಕ್ಕೆ ಕಾರಣ ಎಂಸಿಟಿಎಸ್ ಅಪ್ಡೇಟ್ ಆಗದಿರುವುದು. ಎ.ಎನ್.ಎಮ್ ಅಥವಾ ಡೇಟಾ ಎಂಟ್ರಿ ಆಪರೇಟರ್‌ಗಳು ಎಂಸಿಟಿಎಸ್ ಅಪ್ಡೇಟ್ ಮಾಡುತ್ತಿಲ್ಲ. ಇದು ಅಪ್ಡೇಟ್? ಆಗದೆ ಆಶಾಗಳಿಗೆ ವೇತನವಿಲ್ಲ. ಇಲಾಖೆಯ ಅಧಿಕಾರಿಗಳು ಜಾರಿಗೊಳಿಸಿದ ಈ ಅವೈಜ್ಞಾನಿಕ-ಅತಾರ್ಕಿಕ ನೀತಿಯಿಂದಾಗಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಸಂಕಟ ಅನುಭವಿಸುವಂತಾಗಿದೆ. ಇದೇ ಕಾರಣಕ್ಕೆ ತಮಗೆ ಕನಿಷ್ಟ ವೇತನ ನಿಗದಿ ಮಾಡಿ ಎಂಬುದು ಅವರ ಅಳಲು. ಇದೇ ಕಾರಣಕ್ಕೆ ಸಾಕಷ್ಟು ಹೋರಾಟಗಳೂ ನಡೆದಿವೆ.

ಈ ಹಿಂದೆಯೂ ನಡೆದಿತ್ತು ಹೋರಾಟ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, (AIUTUC) ಪ್ರತಿ ಜಿಲ್ಲೆಯಲ್ಲಿ ಘಟಕ ಹೊಂದಿದೆ. ಆಶಾಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾವೇಶ, ಮೆರವಣಿಗೆ, ವಿಚಾರ ಸಂಕಿರಣಗಳ ಮೂಲಕ ಹೋರಾಟ, ಪ್ರತಿಭಟನೆ ಹಮ್ಮಿಕೊಳ್ಳುವ ಈ ಸಂಘಟನೆ ಈ ವರ್ಗದ ಆಶಾಕಿರಣ.

ಈ ಸಂಘಟನೆಯ ಮುಂದಾಳತ್ವದಲ್ಲಿ ಆಶಾ ಕಾರ್ಯಕರ್ತೆಯರ ಮಾಸಿಕ ವೇತನ ನಿಗದಿ ಮಾಡಬೇಕು, ಕೆಲಸವನ್ನು ಖಾಯಂಗೊಳಿಸಬೇಕು ಎಂದು 2011ರಿಂದಲೂ ದೊಡ್ದ ಪ್ರಮಾಣದ ಹೋರಾಟಗಳನ್ನು ಮಾಡುತ್ತಲೇ ಇವೆ.

2017ರಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಮಹಿಳೆಯರು ತಮ್ಮ ಬೇಡಿಕೆಗಾಗಿ ಅಹೋರಾತ್ರಿ ಹೋರಾಟಕ್ಕೆ ಮುಂದಾಗಿದ್ದರು. ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಬಂದಿದ್ದ ಮಹಿಳೆಯರು ಮೂರು ದಿನ ರಾಜಧಾನಿಯಲ್ಲೇ ಕಳೆದಿದ್ದರು. ಈ ಸಂದರ್ಭದಲ್ಲಿ ಆಶಾಗಳ ಪರವಾಗಿ ಸರ್ಕಾರ ಸ್ಪಂದಿಸದಿದ್ದರೂ ಇಲ್ಲಿನ ಸ್ಥಳೀಯ ಜನ ಮಾನವೀಯತೆಯಿಂದ ಸ್ಪಂದಿಸಿದ ರೀತಿಯನ್ನು ಭಾಗಶಃ ಯಾರೂ ಮರೆತಿರಲಿಕ್ಕಲ್ಲ.


ಇದನ್ನೂ ಓದಿ: ಬೆಂಗಳೂರು ತುಂಬಿಕೊಂಡ ಆಶಾ ಕಾರ್ಯಕರ್ತರು: ಎಲ್ಲೆಲ್ಲೂ ಗುಲಾಬಿ ಬಣ್ಣ.. ಸರ್ಕಾರಕ್ಕೆ ದಿಟ್ಟ ಮಹಿಳೆಯರ ಖಡಕ್‌ ಎಚ್ಚರಿಕೆ


ಇನ್ನೂ ಇದೇ ವರ್ಷ ಫೆಬ್ರವರಿಯಲ್ಲೂ ಆಶಾಗಳು ಹೋರಾಟಕ್ಕೆ ಮುಂದಾಗಿದ್ದರು. ಆದರೆ, ಸಿಎಎ ವಿರೋಧಿ ಹೋರಾಟ ಮತ್ತು ನಂತರ ಬಂದೆರಗಿದ ಕೊರೊನಾ ಕಂಟಕದಿಂದಾಗಿ ಅವರ ಹೋರಾಟಕ್ಕೆ ಸರ್ಕಾರ ಅವಕಾಶ ನೀಡಿರಲಿಲ್ಲ. ಆದರೆ, ಇದೀಗ ಮೊದಲ ಬಾರಿಗೆ ಆಶಾಗಳು ತಮ್ಮ ಕೆಲಸವನ್ನೇ ಸ್ಥಗಿತಗೊಳಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಇಷ್ಟಕ್ಕೂ ಅವರ ಬೇಡಿಕೆಯಾದರೂ ಏನು ಗೊತ್ತಾ?

‘ಆಶಾ’ಗಳ ಬೇಡಿಕೆ ಏನು?

ಆಶಾ ಕಾರ್ಯಕರ್ತೆಯರನ್ನು ಖಾಯಂ ಸರ್ಕಾರಿ ಉದ್ಯೋಗಿಗಳೆಂದು ಪರಿಗಣಿಸಿಲ್ಲ ಮತ್ತು ಇವರಿಗೆ ನಿಗದಿತ ವೇತನ ಇಲ್ಲ. ಹೀಗಾಗಿ ತಮ್ಮನ್ನು ಸರ್ಕಾರಿ ಉದ್ಯೋಗಿಗಳು ಎಂದು ಖಾಯಂಗೊಳಿಸಬೇಕು, ಮಾಸಿಕ ಕನಿಷ್ಟ 12,000 ವೇತನ ನಿಗದಿ ಮಾಡಬೇಕು, ಇಎಸ್‌ಐ ಸೌಲಭ್ಯ ನೀಡಬೇಕು ಮತ್ತು ಕೊರೊನಾ ಕಾಲದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾಗಳಿಗೆ ಕನಿಷ್ಟ ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಸೇರಿದಂತೆ ಅಗತ್ಯ ಪರಿಕರಗಳನ್ನು ನೀಡಿ ಎಂಬುದಷ್ಟೆ ಅವರ ಬೇಡಿಕೆ.

ಕೊರೊನಾ ಕಾಲದಲ್ಲೂ ಧೈರ್ಯವಾಗಿ ಕೆಲಸ ನಿರ್ವಹಿಸುತ್ತಿರುವ ಆಶಾಗಳು ಕನಿಷ್ಟ ಸೌಲಭ್ಯಗಳನ್ನು ಕೇಳುವುದರಲ್ಲಿ ತಪ್ಪೇನಿದೆ? ಅವರಿಗೆ ಸಿಗುವ ಅಲ್ಪ ಪ್ರೋತ್ಸಾಹ ಧನದಲ್ಲಿ ಮಾಸ್ಕ್, ಸ್ಯಾನಿಟೈಜರ್‌ಗಳಿಗೆ ಅವರೇ ಸ್ವಂತ ಹಣ ಖರ್ಚು ಮಾಡಬೇಕೆ? ಎಂದು ಹಲವಾರು ಕಾರ್ಮಿಕ ಸಂಘಟನೆಗಳು ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಆದರೆ, ಆಳುವ ವರ್ಗ ಮಾತ್ರ ಆಶಾ ಕಾರ್ಯಕರ್ತೆಯರ ಎಲ್ಲಾ ಬೇಡಿಕೆಗಳ ವಿರುದ್ಧವೂ ಎಂದಿನಂತೆ ಜಾಣ ಮೌನ ವಹಿಸಿದೆ.

ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಇಂದಿಗೆ ಒಂದು ವರ್ಷ ಕಳೆದಿದೆ. ಸಂಭ್ರಮದ ಆಚರಣೆಗಳ ಸಮಯದಲ್ಲಿ ನಾಗರಿಕರಿಗೆ ಏನಾದರೂ ಕೊಡುಗೆ ಕೊಡುವುದು ರೂಢಿ. ಈ ಹಿನ್ನೆಲೆಯಲ್ಲಾದರೂ ಆಶಾಗಳ ದಶಕಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಬಾರದೇಕೆ? ಆಶಾ ತಾಯಂದಿರ ಅಳಲನ್ನು ಆಲಿಸುತ್ತಾ ಅವರಿಗೆ ಸೂಕ್ತ, ಸಮಾಧಾನಕರ ಪರಿಹಾರ ದೊರಕಿಸಿಕೊಡಲಿ – ಆ ನಿಟ್ಟಿನಲ್ಲಾದರೂ ಪ್ರಸಕ್ತ ರಾಜ್ಯ ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಪೂರೈಸಿ ಅದನ್ನು ಸಾಧನೆಯಾಗಿ ತೋರಿಸಿಕೊಳ್ಳಲಿ.

ಬಿ ಎ ತೇಜಸ್ವಿ, ಯುವ ಪತ್ರಕರ್ತರು.


ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪಿದ ಜಗನ್ ಸರ್ಕಾರ: ಎಚ್ಚರಿಸಲೆಂದು ಆಶಾ ಕಾರ್ಯಕರ್ತೆಯರಿಂದ ‘ಚಲೋ ವಿಜಯವಾಡ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಸರ್‌…‌ಆಶಾ ಕಾರ್ಯಕರ್ತೆಯರ ಸಂಘವು ಸಿ.ಐ.ಟಿ
    ಯು. ನೇತೃತ್ವದಲ್ಲಿ ‌ಇಲ್ಲ. ಪತ್ರಿಕೆಯಲ್ಲಿ ಎ.ಐ.ಯು.ಟಿ.ಯು.ಸಿ. ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡುತ್ತಿದೆ ಅಂತ ಓದಿರುವ ನೆನಪು.

  2. ಸರ್ ನಿಮ್ಮ ವರದಿ ಆಶಾ ಕಾರ್ಯಕರ್ತೆಯರ ಬಗ್ಗೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ಬರೆದಿರುವಿರಿ. ನಿಮಗೆ ತುಂಬಾ ಧನ್ಯವಾದಗಳು. ಆದರೆ ಆಶಾ ಕಾರ್ಯಕರ್ತೆಯರ ಹೋರಾಟವನ್ನು ಮುನ್ನಡೆಸುತ್ತಿರುವುದು “ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ”. AIUTUC (All India united trade union Center) ನೊಂದಿಗೆ ಸಂಯೋಜಿತಗೊಂಡು ಇದರ ನೇತೃತ್ವದಲ್ಲಿ ಇಡೀ ದೇಶಾದ್ಯಂತ ಹೋರಾಟವನ್ನು ಮುನ್ನಡೆಸುತ್ತಿದೆ. ಆದರೆ ಸಂಘಟನೆಯ ಹೆಸರು CITU ಎಂದು ತಪ್ಪಾಗಿ ವರದಿಯಾಗಿದೆ. AIUTUC ಸಂಘಟನೆಯ ಹೆಸರು ಬರಬೇಕು..

LEAVE A REPLY

Please enter your comment!
Please enter your name here

- Advertisment -

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...