ಇತ್ತೀಚಿಗೆ ತಾನೇ ಅಯೋಧ್ಯಾ ಬಗ್ಗೆ ಪುಸ್ತಕ ಬರೆದಿದ್ದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ರವರ ನೈನಿತಾಲ್‌ನಲ್ಲಿದ್ದ ಮನೆಗೆ ದುಷ್ಕರ್ಮಿಗಳು ಇಂದು ಬೆಂಕಿ ಹಚ್ಚಿದ್ದಾರೆ.
ಈ ಕುರಿತು ಸ್ವತಃ ಸಲ್ಮಾನ್ ಖುರ್ಷಿದ್‌ರವರೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ನೀಡಿದ್ದು, ತಮ್ಮ ಮನೆಗೆ ಬೆಂಕಿ ಹಚ್ಚಿರುವುದರ ಫೋಟೊ, ವಿಡಿಯೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಬಾಗಿಲಿಗೆ ಬೆಂಕಿ ಬಿದ್ದಿ ಧಗಧಗನೇ ಉರಿಯುವ ದೃಶ್ಯಗಳು ವಿಡಿಯೋದಲ್ಲಿವೆ.
ಪ್ರಕರಣದ ಕುರಿತು ರಾಕೇಶ್ ಕಪಿಲ್ ಸೇರಿ 20 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಐ (ಕುಮೌನ್) ನೀಲೇಶ್ ಆನಂದ್ ಹೇಳಿದ್ದಾರೆ.
— Salman Khurshid (@salman7khurshid) November 15, 2021
ಸಲ್ಮಾನ್ ಖುರ್ಷಿದ್ ರವರು ತಮ್ಮ “ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ವುಡ್ ಇನ್ ಅವರ್ ಟೈಂ” ಎಂಬ ಪುಸ್ತಕವನ್ನು ನವೆಂಬರ್ 10 ರಂದು ಬಿಡುಗಡೆ ಮಾಡಿದ್ದರು. ಈ ಪುಸ್ತಕದ ಬಗ್ಗೆ ಬಿಜೆಪಿ ಪಕ್ಷವು ಅಪಸ್ವರವೆತ್ತಿತ್ತು. ಇದು ಹಿಂದುತ್ವಕ್ಕೆ ಮಾಡುವ ಅವಮಾನ ಎಂದು ಟೀಕಿಸಿತ್ತು. ಈ ಕುರಿತು ಖುರ್ಷಿದ್ ವಿರುದ್ಧ ದೂರು ಸಹ ದಾಖಲಾಗಿತ್ತು.
ಖುರ್ಷಿದ್ ತಮ್ಮ ಪುಸ್ತಕದಲ್ಲಿ “ಹಿಂದಿನ ಋಷಿಗಳು, ಸಂತರು ಹೇಳಿದ್ದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂ ಧರ್ಮವಾದವನ್ನು ಇಂದಿನ ಉಗ್ರ ಹಿಂದುತ್ವವು ಪಕ್ಕಕ್ಕೆ ತಳ್ಳಿದೆ. ಹಿಂದುತ್ವವೆಂಬುದು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಮಾನದಂಡಗಳಲ್ಲಿಯೂ ISIS ಮತ್ತು ಬೊಕೊ ಹರಾಮ್‌ನಂತಹ ಜಿಹಾದಿಸ್ಟ್ ಇಸ್ಲಾಂ ಗುಂಪುಗಳನ್ನು ಹೋಲುವ ರಾಜಕೀಯ ಆವೃತ್ತಿಯಾಗಿದೆ” ಎಂದು ಬರೆದಿದ್ದರು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಈ ಪುಸ್ತಕವು ಹಿಂದೂಗಳ ಭಾವನೆಗೆ ಘಾಸಿಯನ್ನುಂಟು ಮಾಡಿದೆ. ಕಾಂಗ್ರೆಸ್ ಮುಸ್ಲಿಮ ಮತಗಳಿಗಾಗಿ ಕೋಮುವಾದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.
ಪುಸ್ತಕದ ಕುರಿತು ಕಾಂಗ್ರೆಸ್ ಒಳಗಿನಿಂದಲೇ ಟೀಕೆಗಳು ವ್ಯಕ್ತವಾಗಿದ್ದವು. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ರವರು “ನಾವು ಹಿಂದುತ್ವವನ್ನು ರಾಜಕೀಯ ಸಿದ್ಧಾಂತವಾಗಿ ಒಪ್ಪದಿರಬಹುದು ಆದರೆ ಅದನ್ನು ಐಸಿಸ್ ಮತ್ತು ಜಿಹಾದಿಸ್ಟ್ ಇಸ್ಲಾಂನೊಂದಿಗೆ ಹೋಲಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಉತ್ಪ್ರೇಕ್ಷೆಯಾಗಿದೆ” ಎಂದು ಪ್ರತಿಕ್ರಿಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, ಹಿಂದುತ್ವ ಮತ್ತು ಹಿಂದೂ ಧರ್ಮ ಎಂಬುದು ಒಂದೇ ಅಲ್ಲ. ಅವು ಎರಡು ವಿಭಿನ್ನ ಪರಿಕಲ್ಪನೆಗಳು ಎಂದಿದ್ದರು. ಮಹರಾಷ್ಟ್ರದ ವಾರ್ಧದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, “ಹಿಂದೂ ಧರ್ಮವು ಸಿಖ್ಖರನ್ನು ಅಥವಾ ಮುಸಲ್ಮಾನರನ್ನು ಹೊಡೆಯಿರಿ ಎಂದು ಹೇಳುತ್ತದೆಯೇ? ಹಾಗೆಂದು ಯಾವ ಪುಸ್ತಕದಲ್ಲಿ ಬರೆಯಲಾಗಿದೆ? ನಾನು ಉಪನಿಷತ್ತುಗಳನ್ನು ಓದಿದ್ದೇನೆ, ಎಲ್ಲಿಯೂ ಹಾಗೆ ಹೇಳಿಲ್ಲ. ಆದರೆ ಹಿಂದುತ್ವವು ಸಹಜವಾಗಿಯೇ ಏಕೆ ದ್ವೇಷಿಸಲು ಕರೆ ಕೊಡುತ್ತದೆ? ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವೆ ವ್ಯತ್ಯಾಸವಿದೆ ಎಂದು ನಾವು ಹೇಳುತ್ತೇವೆ. ಇದು ಸರಳವಾದ ತರ್ಕ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು? ನಿಮಗೆ ಈ ಹೊಸ ಹೆಸರು ಏಕೆ ಬೇಕು?” ಎಂದು ಹೇಳಿದ್ದರು.
ಇದನ್ನೂ ಓದಿ: ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ: ಹಿಂದುತ್ವ ಎಂದರೆ ರಾಜಕೀಯ – ನಟಿ ರಮ್ಯಾ


