ನ.19 ರಿಂದ ’ಸಲಗ’ದಲ್ಲಿ ಸಿದ್ಧಿ ಬುಡಕಟ್ಟಿನ ಟಿಣಿಂಗ ಮಿಣಿಂಗ ಟಿಶ್ಯಾ ಹಾಡು ಸೇರ್ಪಡೆ

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಚಿತ್ರದ ಪ್ರಮೋಷನಲ್ ಸಾಂಗ್ ಎಂದು ಬಿಡುಗಡೆ ಮಾಡಿದ್ದ ‘ಟಿಣಿಂಗ ಮಿಣಿಂಗ ಟಿಶ್ಯಾ’ ಹಾಡು ಸಿನಿಮಾದಲಿಲ್ಲ ಎಂಬ ಬೇಸರದ ಮಾತುಗಳು ಕೇಳಿ ಬಂದಿದ್ದವು.

ಹಲವು ಮಂದಿ ಸಿನಿಮಾದಲ್ಲಿ ಮತ್ತೆ ಹಾಡನ್ನು ಸೇರಿಸಬೇಖು ಎಂದು ಹೇಳಿದ್ದರು. ಜನರ ಒತ್ತಾಯಕ್ಕೆ ಮಣಿದಿರುವ ಚಿತ್ರತಂಡ ಸಲಗಕ್ಕೆ ಹಾಡನ್ನು ಸೇರಿಸಲು ನಿರ್ಧರಿಸಿದೆ. ನ.19 ರಿಂದ ಸಲಗ ಚಿತ್ರದಲ್ಲಿ ಈ ಹಾಡನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಬಹುದು.

ಸಲಗದಲ್ಲಿ ಉತ್ತರ ಕನ್ನಡದ ಸಿದ್ದಿ ಬುಡಕಟ್ಟು ಜನಾಂಗದ ಜಾನಪದ ಹಾಡೊಂದನ್ನು ಸೇರಿಸಲಾಗಿತ್ತು. ಆ ಹಾಡನ್ನು ಯಲ್ಲಾಪುರದ ಸಿದ್ದಿ ಮಹಿಳೆಯರೆ ಹಾಡಿ ಕುಣಿದಿದ್ದಾರೆಂದು ಭರ್ಜರಿ ಪ್ರಚಾರ ಮಾಡಲಾಗಿತ್ತು. ಸ್ವತಃ ನಿರ್ದೇಶಕ-ನಟ ವಿಜಯ್ ಈ ಟಿಣಿಂಗ ಮಿಣಿಂಗ ಟಿಶ್ಯಾ ಎಂಬ ಹಾಡಿನ ಕುರಿತು, ಸಿದ್ದಿ ಹಾಡುಗಾರ್ತಿಯರ ಬಗ್ಗೆ ಹೆಮ್ಮೆ-ಖುಷಿಯಿಂದ ಮಾತಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಹಾಡಂತೂ ಯೂಟ್ಯೂಬ್ ಮತ್ತಿತರೆಡೆ ವೈರಲ್ ಆಗಿ ಹವಾ ಸೃಷ್ಟಿಸಿತ್ತು. ಆದರೆ ಸಿನಿಮಾದಲ್ಲಿ ಈ ಹಾಡು ಇರಲಿಲ್ಲ. ಇದಕ್ಕೆ ಸಿದ್ದಿ ಜನಾಂಗದವರು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‘ಸಲಗ’ ಸಿನಿಮಾಕ್ಕೆ ಸಿದ್ದಿ ಜಾನಪದ ಹಾಡು!

ಯಲ್ಲಾಪುರದ ಮಂಚಿಕೇರಿ ಬಳಿಯ ಸಿದ್ದಿಗಳ ಕೇರಿಯ ಪ್ರತಿಭಾನ್ವಿತ ಗಾಯಕಿ ಗಿರಿಜಾ ಸಿದ್ದಿ ತಂಡ ಹಾಡು ಹಾಡಿ ನೃತ್ಯ ಮಾಡಿದೆ ಎಂಬುದು ಹೆಚ್ಚು ಪ್ರಚಾರಕ್ಕೆ ಕಾರಣವಾಗಿತ್ತು. ತಮ್ಮವರು ಹಾಡಿದ-ನಟಿಸಿದ ಚಿತ್ರವೆಂಬ ಆಕರ್ಷಣೆಯಿಂದ ಯಲ್ಲಾಪುರ ಸೀಮೆಯ ಸಿದ್ದಿಗಳು ಮತ್ತು ಉತ್ತರ ಕನ್ನಡದ ಸಿನಿಮಾಸಕ್ತರು ಶಿರಸಿಯ ನಟರಾಜ ಥೇಟರಿಗೆ ಹೋಗಿದ್ದರು. ಆದರೆ ಸಿನಿಮಾದಲ್ಲಿ ತಾವು ನಿರೀಕ್ಷಿಸಿದ ಹಾಡಿಲ್ಲದೆ ನಿರಾಸೆ ಮತ್ತು ಬೇಸರದಿಂದ ಹೊರಬಂದಿದ್ದರು. ಅಲ್ಲಲ್ಲಿ ಸಣ್ಣ ಸಣ್ಣ ಹಾಡಿನ ತುಣುಕು ಇದೆ ಹೊರತು ಪೂರ್ತಿ ಹಾಡು ಇಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ನಾನುಗೌರಿ.ಕಾಂ ವರದಿ ಮಾಡಿತ್ತು.

ಈಗ ನಿರ್ದೇಶಕ, ನಟ ದುನಿಯಾ ವಿಜಯ್‌ ಸಿದ್ದಿ ಬುಡಕಟ್ಟು ಜನಾಂಗದ ಜೊತೆಗೆ ಹಾಡನ್ನು ಇಷ್ಟಪಟ್ಟಿದ್ದ ಜನರಿಗೂ ಗುಡ್‌ ನ್ಯೂಸ್ ನೀಡಿದ್ದಾರೆ. ಟಿಣಿಂಗ ಮಿಣಿಂಗ ಪ್ರಮೋಷನಲ್​ ಸಾಂಗ್​ ಬೆಳ್ಳಿ ಪರದೆ ಮೇಲೆ ಬರಲು ರೆಡಿಯಾಗಿದೆ. ಈ ಹಾಡನ್ನು ಸೇರ್ಪಡೆ ಮಾಡಿ ನವೆಂಬರ್​​ 19 ರಂದು ಮತ್ತೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಸಲಗ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಸಲಗ ಸಿನಿಮಾದಲ್ಲಿಲ್ಲ ಸಿದ್ದಿ ಬುಡಕಟ್ಟಿನ ಹಾಡು: ಪ್ರೇಕ್ಷಕರಿಗೆ ನಿರಾಸೆ-ಸಿದ್ದಿಗಳಿಗೆ ಬೇಸರ

LEAVE A REPLY

Please enter your comment!
Please enter your name here