Homeಮುಖಪುಟಬಿಹಾರ: ಯುವ ಪತ್ರಕರ್ತನ ಅಪಹರಿಸಿ-ಕೊಲೆ; ಮಹಿಳೆ ಸೇರಿ 6 ಜನರ ಬಂಧನ

ಬಿಹಾರ: ಯುವ ಪತ್ರಕರ್ತನ ಅಪಹರಿಸಿ-ಕೊಲೆ; ಮಹಿಳೆ ಸೇರಿ 6 ಜನರ ಬಂಧನ

- Advertisement -
- Advertisement -

24 ವರ್ಷದ ಪತ್ರಕರ್ತ ಬುದ್ದಿನಾಥ್ ಝಾ ಅಲಿಯಾಸ್ ಅವಿನಾಶ್ ಝಾ ಅವರ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಿ ಒಬ್ಬ ಮಹಿಳೆ ಸೇರಿದಂತೆ ಆರು ಜನರನ್ನು ಬಿಹಾರದ ಮಧುಬನಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಜಿಲ್ಲೆಯ ಬೆನಿಪಟ್ಟಿ ಠಾಣೆಯ ಪೊಲೀಸರ ಪ್ರಕಾರ, ಬುದ್ಧಿನಾಥ್ ಅವರನ್ನು ನವೆಂಬರ್ 9 ರ ಮಂಗಳವಾರ ರಾತ್ರಿ ಅಪಹರಿಸಲಾಗಿತ್ತು. ನಂತರ ಅವರ ಮೃತದೇಹವು ಸುಟ್ಟು ಕರುಕಲಾದ ಸ್ಥಿತಿಯಲ್ಲಿ, ಶುಕ್ರವಾರ ಸಂಜೆ ರಾಜ್ಯ ಹೆದ್ದಾರಿ 52 ರ ಉರೇನಾ ಗ್ರಾಮದಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೂಲಭೂತವಾದಿ ಮುಸ್ಲಿಮರಿಂದ ಧ್ವಂಸಗೊಂಡಿದ್ದ ಹಿಂದೂ ದೇವಾಲಯ ಪುನರ್‌ನಿರ್ಮಾಣ: ಮುಖ್ಯ ನ್ಯಾಯಮೂರ್ತಿಗಳಿಂದ ಉದ್ಘಾಟನೆ

ಸಾವಿಗೀಡಾಗಿರುವ ಪತ್ರಕರ್ತ ಬುದ್ಧಿನಾಥ್‌‌ ತಮ್ಮ ವೆಬ್ ಪೋರ್ಟಲ್ ಮತ್ತು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಮಧುಬನಿಯಲ್ಲಿ ಸಕ್ರಿಯವಾಗಿರುವ ‘ವೈದ್ಯಕೀಯ ಮಾಫಿಯಾ’ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಭಾಗವಾಗಿ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಆಸ್ಪತ್ರೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅವರ ತನಿಖೆಯ ಮೇರೆಗೆ ಜಿಲ್ಲಾ ಸಿವಿಲ್ ಸರ್ಜನ್ ನಾಲ್ಕು ನೋಂದಣಿಯಾಗದ ಮತ್ತು ಗುಣಮಟ್ಟವಿಲ್ಲದ ಆಸ್ಪತ್ರೆಗಳಿಗೆ 50,000 ರೂ.ಗಳ ದಂಡವನ್ನು ವಿಧಿಸಿದ್ದರು.

ಇನ್ನೂ ಹತ್ತು ನೋಂದಣಿಯಾಗದ ಮತ್ತು ಕಳಪೆ ಗುಣಮಟ್ಟದ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಅವರು ನವೆಂಬರ್ 7 ರಂದು ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ, ‘ನವೆಂಬರ್ 15 ರಂದು ಇತರ ಆಸ್ಪತ್ರೆಗಳ ಕಾರ್ಯನಿರ್ವಹಣೆಯ ವರದಿಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದು ಘೋಷಿಸಿದ್ದರು.

ಆರ್‌ಟಿಐ ಕಾಯ್ದೆಯ ಮೂಲಕ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಕುರಿತು ಮಾಹಿತಿ ಕೇಳಿದ್ದ ಅವರು ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಅವರ ಹಿರಿಯ ಸಹೋದರ ಚಂದ್ರಶೇಖರ್ ಕುಮಾರ್ ಅವರು ನೀಡಿರುವ ದೂರಿನಲ್ಲಿ, “ನಕಲಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಪಟ್ಟಿಯನ್ನು ಬುದ್ಧಿನಾಥ್‌ ಸಲ್ಲಿಸಿದ್ದು, ಅವುಗಳ ವೈದ್ಯರು, ಪ್ರವರ್ತಕರು ಮತ್ತು ಸಿಬ್ಬಂದಿಗಳು ಅವಿನಾಶ್‌ನ ಅಪಹರಣ ಮತ್ತು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲೊಂದು ಹೇಯ ಕೃತ್ಯ: 16 ವರ್ಷದ ಬಾಲಕಿಯ ಮೇಲೆ 400 ಜನರಿಂದ ಅತ್ಯಾಚಾರ

ಬುದ್ದಿನಾಥ್‌ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿರುವುದಾಗಿ ಅವರ ಮನೆಯ ಹತ್ತಿರದ ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದೆ. ರಾತ್ರಿ 9 ರಿಂದ ಹಲವಾರು ಬಾರಿ ಕಿರಿದಾದ ಓಣಿಯಲ್ಲಿರುವ ತನ್ನ ಮನೆಯಿಂದ ಹೊರಗೆ ಬರುವುದು ಮತ್ತು ಹತ್ತಿರದ ಮುಖ್ಯ ರಸ್ತೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಕೊನೆಯ ಬಾರಿಗೆ ಅವರು ರಾತ್ರಿ 9.58 ಕ್ಕೆ ಕುತ್ತಿಗೆಗೆ ಹಳದಿ ಸ್ಕಾರ್ಫ್ ಧರಿಸಿ ಮನೆಯಿಂದ ಹೊರಟಿರುವುದಾಗಿ ಸಿಸಿಟಿವಿ ಫೂಟೇಜ್‌ನಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

“ಅವರ ಬೈಕ್‌ ಇನ್ನೂ ಮನೆಯಲ್ಲಿಯೇ ಇತ್ತು. ಲ್ಯಾಪ್‌ಟಾಪ್ ಕೂಡ ಆನ್ ಆಗಿತ್ತು. ಬುದ್ದಿನಾಥ್ ಅವರು ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ವಾಪಸ್ ಬರುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅವನು ಹಿಂತಿರುಗಲಿಲ್ಲ” ಎಂದಿರುವ ಅವರ ಕುಟುಂಬದವರು, ಮನೆಯಿಂದ ತೆರಳಿ ಒಂದು ದಿನವಾದರೂ ಅವರು ಮನೆಗೆ ಹಿಂದಿರುಗದೇ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರು ಮಂದಿಯನ್ನು ರೋಷನ್ ಕುಮಾರ್, ಬಿಟ್ಟು ಕುಮಾರ್, ದೀಪಕ್ ಕುಮಾರ್, ಪವನ್ ಕುಮಾರ್, ಮನೀಶ್ ಕುಮಾರ್ ಮತ್ತು ಪೂರ್ಣ ಕಲಾ ದೇವಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ತುಮಕೂರು: ಸ್ಥಳೀಯ ಪತ್ರಕರ್ತನ ಮೇಲೆ ಹಲ್ಲೆ, ದೂರು ದಾಖಲು

ಇದೀಗ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಹೇಳಿರುವಂತೆ, ಆರೋಪಿಗಳಲ್ಲಿ ಒಬ್ಬರಾಗಿರುವ ಪೂರ್ಣ ಕಲಾ ದೇವಿ ತಾನು ಬುದ್ಧಿನಾಥ್ ಝಾ ಅವರನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಬಂಧನಕ್ಕೆ ಒಳಗಾಗಿರುವ ಪವನ್ ಕುಮಾರ್ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದ.

“ಬಂಧಿತರಾಗಿರುವ ಪವನ್, ಬುದ್ಧಿನಾಥ್ ಝಾ ಮತ್ತು ಪೂರ್ಣ ಕಲಾ ದೇವಿ ಪರಸ್ಪರ ಮಾತನಾಡುತ್ತಿರುವುದನ್ನು ಸಹಿಸುತ್ತಿರಲಿಲ್ಲ. ಬುದ್ಧಿನಾಥ್ ಜೊತೆ ಮಾತನಾಡದಂತೆ ಆರೋಪಿ ಪವನ್, ಪೂರ್ಣ ಕಲಾ ದೇವಿ ಮೇಲೆ ಒತ್ತಡ ಹೇರುತ್ತಿದ್ದನು” ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ಪವನ್ ಕುಮಾರ್ ಮತ್ತು ರೋಷನ್ ಕುಮಾರ್ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಬುದ್ಧಿನಾಥ್ ಝಾ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದ ಬೆನಿಪಟ್ಟಿಯಲ್ಲಿ ಪರೀಕ್ಷಾ ಪ್ರಯೋಗಾಲಯವನ್ನು ನಡೆಸುತ್ತಿರುವ ರೋಷನ್ ಕುಮಾರ್ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ, ಇದುವರೆಗಿನ ತನಿಖೆಯಲ್ಲಿ ಬುದ್ದಿನಾಥ್ ಝಾ ಅವರನ್ನು ಸ್ಥಳೀಯ ಪತ್ರಕರ್ತ ಎಂದು ಪೊಲೀಸರು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ತ್ರಿಪುರಾ ಹಿಂಸಾಚಾರ ವರದಿ ಮಾಡಿದ ಪತ್ರಕರ್ತೆಯರ ಬಂಧನ: ರಾಹುಲ್ ಗಾಂಧಿ, ಮಾಧ್ಯಮ ಸಂಸ್ಥೆಗಳಿಂದ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...