Homeಕರ್ನಾಟಕಭ್ರಷ್ಟಾಚಾರದಲ್ಲಿ ಹುಟ್ಟಿದ ಸರಕಾರವನ್ನು ಭ್ರಷ್ಟಾಚಾರವೇ ಕೆಡವೀತೇ?

ಭ್ರಷ್ಟಾಚಾರದಲ್ಲಿ ಹುಟ್ಟಿದ ಸರಕಾರವನ್ನು ಭ್ರಷ್ಟಾಚಾರವೇ ಕೆಡವೀತೇ?

- Advertisement -
- Advertisement -

ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2019ರಿಂದೀಚೆಗೆ ಕಂಡಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಕರ್ನಾಟಕ ಹಿಂದೆಂದೂ ಕಾಣದೆ ಹೋಗಿದ್ದರೂ, ಮುಂಬರಲಿರುವ ಚುನಾವಣೆಯಲ್ಲಿ ಭ್ರಷ್ಟಾಚಾರದ ವಿಚಾರ ಪ್ರಮುಖ ಪಾತ್ರವಹಿಸದಂತೆ ಮಾಡಲು ಏನೆಲ್ಲಾ ಆಗಬೇಕೋ ಅದನ್ನೆಲ್ಲಾ ಮಾಡಿಕೊಂಡಿತ್ತು ಭಾರತೀಯ ಜನತಾ ಪಕ್ಷ. ಆದರೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ತನ್ನ ಕಚೇರಿಯಲ್ಲೇ ಕುಳಿತು ಗುತ್ತಿಗೆದಾರರೊಬ್ಬರಿಂದ ಕಮಿಷನ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬೀಳುವುದರೊಂದಿಗೆ ಪರಿಸ್ಥಿತಿ ಬದಲಾಗುತ್ತಿದೆ. ಆಪರೇಷನ್ ಕಮಲ ಎಂಬ ಮಹಾ ಭ್ರಷ್ಟ ಪ್ರಕ್ರಿಯೆಯ ಮೂಲಕ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕದ ಎರಡನೆಯ ಬಿಜೆಪಿ ಸರಕಾರ, ಭ್ರಷ್ಟಾಚಾರದ ಭಾರಕ್ಕೆ ಚುನಾವಣೆಯಲ್ಲಿ ಕುಸಿದು ಬೀಳುವ ಸಾಧ್ಯತೆಯೊಂದು ಗೋಚರಿಸುತ್ತದೆ.

ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಇತ್ತು ಅಂತ ಬಿಜೆಪಿಯವರು ಹೇಳುತ್ತಿದ್ದಾರೆ. ಅದು ನಿಜ. ಭಾರತದ ಇಂದಿನ ರಾಜಕೀಯದಲ್ಲಿ ಅಕ್ರಮವಾಗಿ ಹಣಸಂಪಾದನೆ ಮಾಡದೆ ಯಾವ ರಾಜಕೀಯ ಪಕ್ಷವೂ ಅಧಿಕಾರಕ್ಕೆ ಬರುವ ಪರಿಸ್ಥಿತಿ ಇಲ್ಲ. ಇದು ಎಲ್ಲರಿಗೂ ಗೊತ್ತಿರುವುದರಿಂದಲೇ ಭಾರತದಲ್ಲಿ ರಾಜಕೀಯ ಭ್ರಷ್ಟಾಚಾರದ ಬಗ್ಗೆ ಒಂದು ವಿಚಿತ್ರ ರೀತಿಯ ಸಹನೆ ಕಾಣಿಸುತ್ತಿರುವುದು. ಹಾಗಂತ ಈ ಸಹನೆಯ ಕಟ್ಟೆಯೂ ಆಗಾಗ ಒಡೆಯುವುದಿದೆ. ಕರ್ನಾಟಕದಲ್ಲಿ ಇಂತಹದ್ದೊಂದು ಪರಿಸ್ಥಿತಿ ಬಂದಿರಬಹುದು ಅಂತ ಅನ್ನಿಸಲು ಕೇವಲ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಮಾತ್ರ ಕಾರಣವಲ್ಲ. ಈ ಪ್ರಕರಣ ಒಂದರ್ಥದಲ್ಲಿ ಶವಪೆಟ್ಟಿಗೆಯ ಕೊನೆಯ ಮೊಳೆ. ಈ ಹಿಂದೆ ಅಂದರೆ ಈ ಸರಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ನಿರಂತರವಾಗಿ ಒಂದಾದ ನಂತರ ಒಂದು ಎಂಬಂತೆ ಬಹಿರಂಗವಾದ ಭ್ರಷ್ಟಾಚಾರ ಪ್ರಕರಣಗಳು ಒಂದು ರೀತಿಯಲ್ಲಿ ಸಾರ್ವಜನಿಕರ ಸಹನೆಯನ್ನು ಎಡೆಬಿಡದೆ ಪರೀಕ್ಷಿಸಿವೆ. ಆದರೂ ಸಹಿಸಿಕೊಂಡಿದ್ದ ಮತದಾರರಿಗೆ ಇನ್ನೇನು ಚುನಾವಣೆ ಬಂದೇಬಿಟ್ಟಿತು ಎನ್ನುವ ಹಂತದಲ್ಲಿ ಕಣ್ಣಿಗೆ ರಾಚುವಂತೆ ಬಹಿರಂಗವಾದ ’ಮಾಡೆಲ್’ ಪ್ರಕರಣ ಇದು; ಜನರಿಗೆ ಇದು ಸ್ವಲ್ಪ ಅತಿಯಾಯಿತು ಅಂತ ಅನ್ನಿಸುವ ಹಾಗೆ ಮಾಡಿದಂತಿದೆ. ಆ ಕಾರಣದಿಂದಲೇ, ಯಾವುದೇ ತಪ್ಪನ್ನು ಕೂಡಾ ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಿದ್ದ ಭಾರತೀಯ ಜನತಾ ಪಕ್ಷದ ವಕ್ತಾರರೆಲ್ಲರೂ ಈ ಬಾರಿ ಸಪ್ಪೆಯಾಗಿಬಿಟ್ಟಿದ್ದಾರೆ. ಟಿವಿ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳಲ್ಲಿ ತುಂಬಾ ಎಚ್ಚರಿಕೆಯಿಂದ, ನಯ ವಿನಯದಿಂದ, ಸಮತೋಲನದ ಮಾತು ಆಡುತ್ತಿದ್ದಾರೆ. ಭ್ರಷ್ಟಾಚಾರದ ವಿಚಾರವಾಗಿ ತಮ್ಮ ಪಕ್ಷದ ಸತ್ಯ ಏನು ಎಂದು ಜನರಿಗೆ ಗೊತ್ತಾಗಿಬಿಟ್ಟಿದೆ ಎನ್ನುವ ಸತ್ಯ ಕರ್ನಾಟಕದಲ್ಲಿ ಬಿಜೆಪಿಯವರನ್ನು ಸ್ವಲ್ಪ ವಿಚಲಿತಗೊಳಿಸಿದ ಹಾಗೆ ಕಾಣಿಸುತ್ತದೆ.

ಮಾಡಾಳ್ ವಿರೂಪಾಕ್ಷಪ್ಪ

ಈ ಹಿಂದಿನ ಯಾವ ಸರಕಾರದ ಅವಧಿಯನ್ನು ಪರಿಗಣಿಸಿದರೂ ಅಲ್ಲಿ ಒಂದು ಅಥವಾ ಎರಡು ದೊಡ್ಡ ಹಗರಣಗಳು ಸದ್ದು ಮಾಡಿರಬಹುದು. ಎಂಭತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ ಸರಕಾರ ಇರುವಾಗ ಭೂವ್ಯವಹಾರಗಳಿಗೆ ಸಂಬಂಧಿಸಿದ ರೇವಜಿತು ಹಗರಣ ಮತ್ತು ಸಾರಾಯಿ ಬಾಟಲಿಂಗ್ ಹಗರಣಗಳು ಭಾರೀ ಚರ್ಚೆಗೊಳಗಾದ ಹಗರಣಗಳು. ಆ ನಂತರ ಬಂದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕ್ಲಾಸಿಕ್ ಕಂಪ್ಯೂಟರ್ ಹಗರಣ ದೊಡ್ಡ ಸುದ್ದಿಯಾಗಿತ್ತು. ಈ ಹಗರಣಗಳ ಕಾರಣಕ್ಕೆ ಹೆಸರು ಕೆಡಿಸಿಕೊಂಡ ಎರಡೂ ಸರಕಾರಗಳು ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದವು. ಈ ಬಾರಿಯ ವಿಶೇಷ ಎಂದರೆ ಒಂದಲ್ಲ, ಎರಡಲ್ಲ, ಒಂದಾದ ನಂತರ ಒಂದು ಎಂಬಂತೆ ಸಾಲುಸಾಲು ಹಗರಣಗಳು. ಮೊದಲನೆಯ ಬಾರಿಗೆ ಬಿಜೆಪಿ ಕರ್ನಾಟಕದಲ್ಲಿ ಸರಕಾರ ರಚಿಸಿದಾಗಲೂ ಇದೇ ರೀತಿ ಆಗಿತ್ತು. ಎರಡನೆಯ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದಿನ ಮೊದಲ ಅವಧಿಯಲ್ಲಿ ಕಂಡ ಭ್ರಷ್ಟಾಚಾರದ ಅಗಾಧತೆಯನ್ನೂ ಮೀರಿಸುವ ಪ್ರಮಾಣದ ಹಗರಣಗಳು ಬಹಿರಂಗಗೊಂಡಿವೆ. ಮೊದಲ ಅವಧಿಯ ಬಿಜೆಪಿ ಸರಕಾರದಲ್ಲಿ ಒಂದೆರಡು ಮಂತ್ರಿಗಳು ಮತ್ತು ಕೊನೆಗೆ ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕಾಗಿ ಬರುವಷ್ಟು ಪ್ರಮಾಣದ ಭ್ರಷ್ಟಾಚಾರ ಕಾಣಿಸಿದರೂ ಎರಡನೆಯ ಅವಧಿಯಲ್ಲಿ ಜರುಗಿದ್ದು ಅದಕ್ಕಿಂತಲೂ ಹೆಚ್ಚು ಅಂತ ಅನ್ನಿಸಲು ಕಾರಣಗಳಿವೆ. ಅದರಲ್ಲಿ ಮೊದಲನೆಯದ್ದು: ಎರಡನೆಯ ಅವಧಿಯಲ್ಲಿ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತಿದ್ದದ್ದು ಹೊರಗಿನವರಲ್ಲ. ಅಂದರೆ, ವಿರೋಧ ಪಕ್ಷಗಳು, ಮಾಧ್ಯಮಗಳು ಅಥವಾ ಸಾಮಾಜಿಕ ಸಂಘಟನೆಗಳಲ್ಲ. ಬದಲಿಗೆ, ಸರಕಾರದ ಒಳಗಿರುವವರೇ ಈ ಆರೋಪಗಳನ್ನು ಹೊರಿಸುತಿದ್ದದ್ದು. ಆಳುವ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು ತಮ್ಮ ಸರಕಾರದ ಮುಖ್ಯಮಂತ್ರಿಗಳ ಮೇಲೆ, ಇತರ ಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದ್ದರು. ಇವೆಲ್ಲವನ್ನೂ ನೋಡುತ್ತಿದ್ದರೆ, ಭ್ರಷ್ಟಾಚಾರ ಎನ್ನುವುದು ಅಪವಾದ ಎನ್ನುವುದಕ್ಕಿಂತ ಹೆಚ್ಚಾಗಿ ಈ ಸರಕಾರದ ಆಡಳಿತದ ಸಹಜ ಭಾಗ ಎನ್ನುವಂತೆ ಕಾಣಿಸುತ್ತಿತ್ತು. ಎರಡನೆಯದ್ದಾಗಿ: ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಶೇ.40ರಷ್ಟು ಕಮಿಷನ್ ನೀಡದೆ ಯಾವ ಗುತ್ತಿಗೆಯೂ ದೊರೆಯುವುದಿಲ್ಲ, ದೊರೆತರೂ ಬಿಲ್ ಪಾವತಿಯಾಗುವುದಿಲ್ಲ ಎಂದು ಕರ್ನಾಟಕ ಸರಕಾರೀ ಗುತ್ತಿಗೆದಾರರ ಸಂಘ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದದ್ದು ಮತ್ತು ಬಹಿರಂಗವಾಗಿ ಹೇಳಿಕೆ ನೀಡತೊಡಗಿದ್ದು. ಇದು ಭಾರತದ ರಾಜಕೀಯ ಭ್ರಷ್ಟಾಚಾರದ ಚರಿತ್ರೆಯಲ್ಲೇ ಅತ್ಯಂತ ವಿಲಕ್ಷಣ ಬೆಳವಣಿಗೆ. ಯಾಕೆಂದರೆ, ಸಾಮಾನ್ಯವಾಗಿ ಗುತ್ತಿಗೆದಾರರು ಯಾವುದೇ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವುದಿಲ್ಲ.

ಇದನ್ನೂ ಓದಿ: ಲಂಚಾರೋಪಿ ಮಾಡಾಳ್‌ಗೆ ಜಾಮೀನು ವಿಚಾರ: ವಕೀಲರ ಸಂಘದಿಂದ ತೀವ್ರ ಕಳವಳ ವ್ಯಕ್ತ; ಸಿಜೆಐಗೆ ಪತ್ರ

ಸರಕಾರದ ಭ್ರಷ್ಟಾಚಾರದಲ್ಲಿ ಮೊದಲ ಭಾಗೀದಾರರೆಂದರೆ ಗುತ್ತಿಗೆದಾರರು. ಅಧಿಕಾರಸ್ಥರು ಮತ್ತು ಗುತ್ತಿಗೆದಾರರು, ಭ್ರಷ್ಟಾಚಾರದ ವಿಚಾರವಾಗಿ ಒಬ್ಬರನ್ನೊಬ್ಬರು ಅರಿತುಕೊಂಡೆ ವ್ಯವಹಾರ ನಡೆಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿದ್ಯಮಾನ. ಈ ಸರಕಾರದ ಅವಧಿಯಲ್ಲಿ ಅಂತಹ ಗುತ್ತಿಗೆದಾರರೇ ಸರಕಾರದ ವಿರುದ್ಧ ತಿರುಗಿ ಬಿದ್ದರು. ಒಬ್ಬ ಗುತ್ತಿಗೆದಾರ ಲಂಚದ ಹಾವಳಿ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡದ್ದಾಯಿತು. ಇತರರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾಯಿತು. ಇಷ್ಟೆಲ್ಲಾ ಆದರೂ ನಾನು ತಿನ್ನುವುದಿಲ್ಲ, ಇತರರನ್ನೂ ತಿನ್ನಲು ಬಿಡುವುದಿಲ್ಲ ಎಂದು ವೀರಾವೇಶದಿಂದ ಅಬ್ಬರಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ನಾಟಕದ ಗುತ್ತಿಗೆದಾರರ ಆರ್ತನಾದಕ್ಕೆ ಕನಿಷ್ಠ ಸೌಜನ್ಯಕ್ಕಾದರೂ ಪ್ರತಿಕ್ರಿಯಿಸದೆ ಹೋದದ್ದು ಕರ್ನಾಟಕದ ಬಿಜೆಪಿ ಸರಕಾರಕ್ಕೆ ಮತ್ತು ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ಭ್ರಷ್ಟಾಚಾರ ನಿವಾರಣೆಯ ವಿಷಯದಲ್ಲಿ ಇರುವ ಬದ್ಧತೆಯ ಬಗ್ಗೆ ಸಾವಿರಾರು ಕತೆಗಳನ್ನು ಹೇಳುತ್ತವೆ. ಇಷ್ಟು ಸಾಲದು ಎಂಬಂತೆ ಉನ್ನತ ಆಡಳಿತ ಸೇವೆಯಲ್ಲಿ ಇರುವ ಅಧಿಕಾರಿಗಳು ಪರಸ್ಪರರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಮಾಧ್ಯಮಗಳ ಮೂಲಕ ಕಚ್ಚಾಡಿಕೊಳ್ಳುವ ವಿರಳಾತಿವಿರಳ ಘಟನೆಗಳೂ ಈ ಸರಕಾರದ ಅವಧಿಯಲ್ಲಿ ಸಂಭವಿಸಿದವು.

ಇಷ್ಟೆಲ್ಲಾ ಆದ ನಂತರವೂ ಸಾರ್ವಜನಿಕ ಅಭಿಪ್ರಾಯ ಭ್ರಷ್ಟಾಚಾರದ ವಿಚಾರದಲ್ಲಿ ಸರಕಾರ ಮತ್ತು ಬಿಜೆಪಿಯ ವಿರುದ್ಧ ತಿರುಗಿಬೀಳದಂತೆ ನೋಡಿಕೊಳ್ಳುವಲ್ಲಿ ಆಳುವ ಪಕ್ಷದ ಸಂವಹನ ವಿಭಾಗ ಯಶಸ್ವಿಯಾಗಿತ್ತು. ಮುಖ್ಯವಾಗಿ ಅದು ಎಲ್ಲಾ ವಿರೋಧ ಪಕ್ಷಗಳೂ ತನಗಿಂತ ಎಷ್ಟೋ ಪಾಲು ಹೆಚ್ಚು ಭ್ರಷ್ಟರು ಎಂದು ಜನರನ್ನು ನಂಬಿಸಿತ್ತು. ಮಾಧ್ಯಮಗಳನ್ನು ಖರೀದಿಸುವ ಮೂಲಕ ಮತ್ತು ಬೆದರಿಸುವ ಮೂಲಕ ಭ್ರಷ್ಟಾಚಾರದ ವಿಷಯದಲ್ಲಿ ಮೃದು ಧೋರಣೆ ಅನುಸರಿಸುವಂತೆ ಮಾಡಿತು. ಇವೆಲ್ಲದರ ಜತೆಗೆ ಆಳುವ ಪಕ್ಷದ ವರ್ಚಸ್ಸು ವಿಶೇಷವಾಗಿ ಕೆಡದೆ ಉಳಿದಿದ್ದಕ್ಕೆ ಇನ್ನೊಂದು ಕಾರಣವಿದೆ. ಅದೇನೆಂದರೆ, ಭ್ರಷ್ಟಾಚಾರ ಇತ್ತೀಚೆಗೆ ಅದೆಷ್ಟೇ ತೀವ್ರ ಸಮಸ್ಯೆಯಾದರೂ ಅದೊಂದು ಚುನಾವಣಾ ವಿಷಯ ಆಗುವಷ್ಟರ ಮಟ್ಟಿಗೆ ಜನ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಲ್ಲಾ ಪಕ್ಷದವರೂ ಭ್ರಷ್ಟರು ಎನ್ನುವ ಒಂದು ರೀತಿಯ ಸಿನಿಕತನ ಇದಕ್ಕೆ ಕಾರಣ ಇರಬಹುದು. ಭ್ರಷ್ಟಾಚಾರ ವಿರೋಧಿ ಪಕ್ಷಗಳೆಂದು ಹಣೆಪಟ್ಟಿಕಟ್ಟಿಕೊಂಡು ಭಾರೀ ನಿರೀಕ್ಷೆ ಹುಟ್ಟಿಸಿದ ಆಮ್ ಆದ್ಮಿ ಪಕ್ಷದಂತಹ ಪಕ್ಷಗಳೂ ಕೂಡಾ ಬರಬರುತ್ತಾ ಹತ್ತರೊಂದಿಗೆ ಹನ್ನೊಂದನೆಯದ್ದು ಎಂಬಂತೆ ಆಗಿರುವುದು ಕೂಡ ಜನರಲ್ಲಿ ಈ ರೀತಿಯ ಸಿನಿಕತನ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಬೆಳವಣಿಗೆಯಾಗಿದೆ. ಅದರ ಜತೆಗೆ ಜನರೂ ಕೂಡ ರಾಜಕೀಯ ಭ್ರಷ್ಟಾಚಾರದ ಫಲಾನುಭವಿಗಳಾಗುತ್ತಿರುವುದೂ ಇದಕ್ಕೆ ಕಾರಣ ಇರಬಹುದು. ಅಂದರೆ, ರಾಜಕೀಯ ನಾಯಕರು ಎಷ್ಟೇ ಭ್ರಷ್ಟರಾದರೂ ಪರವಾಗಿಲ್ಲ ಅವರು ನಮ್ಮ ಕಷ್ಟಕ್ಕೆ ನೆರವಾದರೆ ಸಾಕು ಎನ್ನುವ ಮನೋಭಾವ. ಇನ್ನೂ ಚುನಾವಣಾ ದಿನಾಂಕಗಳ ಘೋಷಣೆ ಆಗುವುದಕ್ಕೆ ಮೊದಲೇ ರಾಜ್ಯದ ಪ್ರತೀ ಕ್ಷೇತ್ರದಲ್ಲೂ ಸಂಭಾವ್ಯ ಅಭ್ಯರ್ಥಿಗಳು ಚೆಲ್ಲುತ್ತಿರುವ ಹಣದ ಪ್ರಮಾಣ ಊಹೆಗೂ ಸಿಗಲಾರದಷ್ಟು ಅಗಾಧವಾಗಿದೆ. ಸೀರೆ, ಕುಕ್ಕರ್‌ಗಳಿಂದ ಹಿಡಿದು, ವಿವಿಧ ಗೃಹ ಉಪಯೋಗಿ ವಸ್ತುಗಳನ್ನು ಮನಸೋ ಇಚ್ಛೆ ವಿತರಿಸಲಾಗುತ್ತಿದೆ. ಸಂಭಾವ್ಯ ಅಭ್ಯರ್ಥಿಗಳು ದೇವಸ್ಥಾನಗಳಿಗೆ, ಭಜನಾ ಮಂಡಳಿಗಳಿಗೆ, ಕ್ರೀಡಾ ಕ್ಲಬ್‌ಗಳಿಗೆ ಯಥೇಚ್ಛವಾಗಿ ದೇಣಿಗೆ ನೀಡುತ್ತಿದ್ದಾರೆ. ವಿವಿಧ ರೀತಿಯ ಪುಕಟ್ಟೆ ತೀರ್ಥಯಾತ್ರೆಗಳನ್ನು ಸಂಘಟಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಇನ್ನೂ ಅಧಿಕೃತವಾಗಿ ಜಾರಿಗೆ ಬಾರದೆ ಇರುವುದರಿಂದ ಚುನಾವಣಾ ಆಯೋಗ ಈ ರೀತಿಯ ವೆಚ್ಚಗಳ ಬಗ್ಗೆ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಇವೆಲ್ಲವೂ ಅಧಿಕೃತ ಚುನಾವಣಾ ಲೆಕ್ಕದ ಭಾಗವಾಗಿಯೂ ಇರುವುದಿಲ್ಲ. ಆದರೆ ಹೀಗೆ ಖರ್ಚು ಮಾಡಿದವರಲ್ಲಿ ಯಾರೋ ಒಬ್ಬ ಗೆಲ್ಲುತ್ತಾನೆ ಮತ್ತು ಗೆದ್ದವ ಮಾಡಿದ ಖರ್ಚನ್ನು ಬಡ್ಡಿ ಸಹಿತ ವಾಪಸ್ ಸಂಪಾದಿಸುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜಕೀಯ ಭ್ರಷ್ಟಾಚಾರದ ಮೂಲ ಇರುವುದು ಇಲ್ಲಿ. ಈ ಚುನಾವಣಾ ಅವ್ಯವಸ್ಥೆಯಲ್ಲಿ ಭಾಗೀದಾರರಾಗಿರುವ ಮತದಾರರಿಗೆ ರಾಜಕೀಯ ಭ್ರಷ್ಟಾಚಾರವನ್ನು ಪ್ರಶ್ನಿಸುವ ಅಥವಾ ಅದರ ಕುರಿತು ಕೋಪಗೊಳ್ಳುವ ನೈತಿಕ ಹಕ್ಕು ಇರುವುದಿಲ್ಲ. ಇತ್ತೀಚಿಗೆ ಒಂದು ಕ್ಷೇತ್ರದ ಶಾಸಕರೊಬ್ಬರು ತಾನು ಅಕ್ರಮ ಸಂಪಾದನೆ ಮಾಡುತ್ತಿಲ್ಲವಾದ್ದರಿಂದ ಊರಲ್ಲಿ ಅದ್ದೂರಿ ದಸರಾ ಆಚರಿಸಲು ಹಣ ನೀಡಲಾರೆ; ಸರಳವಾಗಿ ದಸರಾ ಆಚರಿಸೋಣ ಎಂದರಂತೆ. ಇದು ಆ ಕ್ಷೇತ್ರದ ದೊಡ್ಡ ಸಂಖ್ಯೆಯ ಮತದಾರರಿಗೆ ಸಮ್ಮತವಾಗಿರಲಿಲ್ಲ. ಅವರೆಲ್ಲಾ, ನಮ್ಮ ಶಾಸಕರು ಈ ಕಾಲಕ್ಕೆ ತಕ್ಕ ಹಾಗೆ ಇಲ್ಲ ಎಂದು ಹೇಳುತ್ತಿದ್ದಾರೆ. ಇದರ ಅರ್ಥ ರಾಜಕೀಯ ಭ್ರಷ್ಟಾಚಾರ ಈಗ ವ್ಯವಸ್ಥೆಯಲ್ಲಿ ಸಾಂಸ್ಥಿಕವಾಗಿಬಿಟ್ಟಿದೆ. ಅದು ಜನ ಮತ್ತು ರಾಜಕೀಯ ನಾಯಕರು ಪರಸ್ಪರ ಒಪ್ಪಂದದಿಂದ ನಡೆಸುವ ಒಂದು ವ್ಯವಹಾರ ಎನ್ನುವಷ್ಟರಮಟ್ಟಿಗೆ ಚುನಾವಣಾ ರಾಜಕೀಯದ ಭಾಗವಾಗಿಬಿಟ್ಟಿದೆ. ಇಂತಹದ್ದೊಂದು ಸ್ಥಿತಿಯಲ್ಲೂ ಮಾಡಾಳ್ ಪ್ರಕರಣ ಜನಮನವನ್ನು ಸ್ವಲ್ಪ ಮಟ್ಟಿಗಾದರೂ ತಟ್ಟಿದೆ ಎಂದರೆ ಕರ್ನಾಟಕ ಭ್ರಷ್ಟಾಚಾರದ ಗ್ರಾಫ್‌ನಲ್ಲಿ ದಾಖಲಿಸಿದ ಏರಿಕೆಯ ಪ್ರಮಾಣವನ್ನು ನಾವು ಊಹಿಸಿಕೊಳ್ಳಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...