ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ ಸಲಗದಲ್ಲಿ ಉತ್ತರ ಕನ್ನಡದ ಸಿದ್ದಿ ಬುಡಕಟ್ಟು ಜನಾಂಗದ ಜಾನಪದ ಹಾಡೊಂದನ್ನು ಸೇರಿಸಲಾಗಿದೆ; ಆ ಹಾಡನ್ನು ಯಲ್ಲಾಪುರದ ಸಿದ್ದಿ ಮಹಿಳೆಯರೆ ಹಾಡಿ ಕುಣಿದಿದ್ದಾರೆಂದು ಭರ್ಜರಿ ಪ್ರಚಾರ ಮಾಡಲಾಗಿತ್ತು. ಸ್ವತಃ ನಿರ್ದೇಶಕ-ನಟ ವಿಜಯ್ ಅವರೆ ಈ ಟಿಣಿಂಗ ಮಿಣಿಂಗ ಟಿಶ್ಯಾ ಎಂಬ ಹಾಡಿನ ಕುರಿತು, ಸಿದ್ದಿ ಹಾಡುಗಾರ್ತಿಯರ ಬಗ್ಗೆ ಹೆಮ್ಮೆ-ಖುಷಿಯಿಂದ ಮಾತಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಹಾಡಂತೂ ಯೂಟ್ಯೂಬ್ ಮತ್ತಿತರೆಡೆ ವೈರಲ್ ಆಗಿ ಹವಾ ಸೃಷ್ಟಿಸಿತ್ತು.
ಈಗ ಸಲಗ ಸಿನೆಮಾ ಬಿಡುಗಡೆಯಾಗಿದ್ದು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ ಸಿನಿಮಾದ ಯಾವ ಭಾಗದಲ್ಲೂ ಮಂಚಿಕೇರಿ ಸಾವ್ಕಾರ್ ಅಂದರ್ ಬುಲಾಯಾ… ದರ್ವಾಜಾ ಲಗಾಯಾಟಿಣಿಂಗ ಮಿಣಿಂಗ ಟಿಶ್ಯಾ.. ಹಾಡಿಲ್ಲವೇ ಇಲ್ಲ. ಈ ಹಾಡು ಸಲಗ ಸಿನಿಮಾದ್ದು ಎಂಬುದಕ್ಕಿಂತ ಯಲ್ಲಾಪುರದ ಮಂಚಿಕೇರಿ ಬಳಿಯ ಸಿದ್ದಿಗಳ ಕೇರಿಯ ಪ್ರತಿಭಾನ್ವಿತ ಗಾಯಕಿ ಗಿಜಾ ಸಿದ್ದಿ ತಂಡ ಹಾಡಿ ನೃತ್ಯ ಮಾಡಿದೆ ಎಂಬುದೆ ಹೆಚ್ಚು ಪ್ರಚಾರಕ್ಕೆ ಕಾಣವಾಗಿತ್ತು.
ತಮ್ಮವರು ಹಾಡಿದ-ನಟಿಸಿದ ಚಿತ್ರವೆಂಬ ಆಕರ್ಷಣೆಯಿಂದ ಯಲ್ಲಾಪುರ ಸೀಮೆಯ ಸಿದ್ದಿಗಳು ಮತ್ತು ಉತ್ತರ ಕನ್ನಡದ ಸಿನಿಮಾಸಕ್ತರು ಶಿರಸಿಯ ನಟರಾಜ ಥೇಟರಿಗೆ ಹೋಗಿದ್ದಾರೆ. ಆದರೆ ಸಿನಿಮಾದಲ್ಲಿ ತಾವು ನಿರೀಕ್ಷಿಸಿದ ಹಾಡಿಲ್ಲದೆ ನಿರಾಸೆ ಮತ್ತು ಬೇಸರದಿಂದ ಹೊರಬಂದಿದ್ದಾರೆ. ಅಲ್ಲಲ್ಲಿ ಸಣ್ಣ ಸಣ್ಣ ಹಾಡಿನ ತುಣುಕು ಇದೆ ಹೊರತು ಪೂರ್ತಿ ಹಾಡು ಇಲ್ಲ ಎಂಬುದು ಅವರ ಬೇಸರಕ್ಕೆ ಕಾರಣ. ಸಲಗ ಸಿನಿಮಾ ತಂಡದ ತಾತ್ಸಾರದಿಂದ ತಮಗೆ ಅವಮಾನ ಮಾಡಿದಂತಾಗಿದೆಯೆಂದು ಸಿದ್ದಿ ಯುವಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ವಿಶಿಷ್ಟ ಸಂಸ್ಕೃತಿಯ ಸಿದ್ದಿ ಸಮುದಾಯದ ಪ್ರತಿಭೆ, ಮುಗ್ದತೆ ಸಿನಿಮಾ ಪ್ರಪಂಚ ಪ್ರಚಾರದ ಸರಕಾಗಿ ಬಳಸಿಕೊಂಡಿದೆಯೆಂಬ ಮಾತೀಗ ಕೇಳಿಬರುತ್ತಿದೆ.
ಉತ್ತರ ಕನ್ನಡದಲ್ಲಿರುವ ಆಫ್ರಿಕಾದ ನಿಗ್ರೊ ಮೂಲದ ಸಿದ್ದಿ ಬುಡಕಟ್ಟು ಜನಾಂಗಕ್ಕೆ ಅದರದೇ ಆದ ಸಂಸ್ಕ್ರತಿ, ಸಾಹಿತ್ಯ, ಕಲೆ, ಸಂಗೀತ, ಹಾಡು ಆಚರಣೆಗಳಿವೆ. ಮದುವೆ, ಹಬ್ಬ, ಉತ್ಸವ ಮುಂತಾದ ವಿಶೇಷ ಸಂದರ್ಭದಲ್ಲಿ ಜಾನಪದ ಶೈಲಿಯ ಹಾಡು ಹಾಡಿ, ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಸಿದ್ದಿಗಳ ಡಮಾಮಿ ಕುಣಿತಕ್ಕಂತೂ ಚೆತೋಹಾರಿ ಸೊಬಗಿದೆ.
ಕಾಡಿನ ವಾಸಿಗಳಾದ ಸಿದ್ದಿಗಳ ವಿಶಿಷ್ಟ ಹಾಡುಗಳೀಗ ಸಾಮಾಜಿಕ ಜಾಲತಾಣಕ್ಕೂ ವ್ಯಾಪಿಸಿ ಮೆಚ್ಚಿಗೆ ಗಳಿಸುತ್ತಿದೆ. ಈ ಬೆನ್ನಲ್ಲೆ ಸಿದ್ದಿ ಹಾಡೊಂದನ್ನು ಖ್ಯಾತ ನಟ ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು.
ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಸಿದ್ದಿ ಹಾಡನ್ನು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ತಂಡ ತುಂಬಾ ಆಕರ್ಷಕವಾಗಿ ಹಾಡಿದೆ. ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ. ಎ2 ಮ್ಯೂಸಿಕ್ ಕಂಪನಿ ಸಿದ್ದಿ ಕಲಾವಿದರು ಹಾಡಿರುವ ಹಾಡನ್ನು ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ. ಈ ಹಾಡನ್ನು ಈಗಾಗಲೇ 8 ಲಕ್ಷ ಜನರು ನೋಡಿದ್ದಾರೆ. ಸಿದ್ದಿಗಳ ಕಲೆಗೆ ಸಿಕ್ಕಿರುವ ಈ ಮನ್ನಣೆ ದಾಖಲೆಯೇ ಸರಿ.
ಇದನ್ನೂ ಓದಿ: ‘ಸಲಗ’ ಸಿನಿಮಾಕ್ಕೆ ಸಿದ್ದಿ ಜಾನಪದ ಹಾಡು!