ಉತ್ತರಪ್ರದೇಶದ ಅಯೋಧ್ಯೆಯ ಕೌನ್ಸಿಲ್ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವಾಗಿ ಅನ್ನ ಹಾಗೂ ಉಪ್ಪನ್ನು ನೀಡಲಾಗಿದೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಕ್ಕಳು ಅನ್ನ ಮತ್ತು ಉಪ್ಪನ್ನು ತಿನ್ನುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಬಿಕಾಪುರ ಬ್ಲಾಕ್‌ನಲ್ಲಿರುವ ಬೈಂತಿ ಚೌರೆ ಬಜಾರ್‌ನ ಪಾಂಡೆ ಪ್ರಾಥಮಿಕ ಶಾಲೆಯ ವಿಡಿಯೊ ಇದಾಗಿದೆ ವರದಿಯಾಗಿದೆ. ಮಕ್ಕಳಿಗೆ ಮಂಗಳವಾರ ಮಧ್ಯಾಹ್ನದ ಊಟದ ವೇಳೆ ಸಾದಾ ಅನ್ನ ಮತ್ತು ಉಪ್ಪು ನೀಡಲಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ. ಇದೇ ರೀತಿಯ ಕೃತ್ಯ ಹಲವಾರು ದಿನಗಳಿಂದ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
A video of children at a primary school in UP's Ayodhya being served boiled rice and salt as mid day meal has surfaced. pic.twitter.com/5wVaE9XWKC
— Piyush Rai (@Benarasiyaa) September 28, 2022
ಪ್ರಾಥಮಿಕ ಶಿಕ್ಷಣಾಧಿಕಾರಿ (ಬಿಎಸ್‌ಎ) ಸಂತೋಷ್‌ಕುಮಾರ್ ರೈ ಮಾತನಾಡಿ, “ವಿಷಯ ಗಮನಕ್ಕೆ ಬಂದ ತಕ್ಷಣ ಬ್ಲಾಕ್ ಶಿಕ್ಷಣಾಧಿಕಾರಿಯಿಂದ ವರದಿ ತರಿಸಿಕೊಳ್ಳಲಾಗಿದೆ, ತಪ್ಪಿತಸ್ಥರು ಹಾಗೂ ಕಾರಣರಾದ ಶಿಕ್ಷಕರ ವಿರುದ್ಧ ಇಲಾಖೆ ಕ್ರಮ ಜರುಗಿಸುತ್ತದೆ” ಎಂದಿರುವುದಾಗಿ ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ.
“ವಿಡಿಯೋ ನೋಡಿದ ಅಯೋಧ್ಯೆಯ ಶಿಕ್ಷಣಾಧಿಕಾರಿ ಶಾಲೆಯ ಪ್ರಾಂಶುಪಾಲರನ್ನು, ಶಾಲೆಯ ಪ್ರಧಾನರನ್ನು ಅಮಾನತುಗೊಳಿಸಿದ್ದಾರೆ” ಎಂದು ಪತ್ರಕರ್ತ ಪಿಶೂರ್ ರೈ ಟ್ವೀಟ್ ಮಾಡಿದ್ದಾರೆ.
Acting on the video, DM Ayodhya has suspended the prncipal of the school. A notice has been served to the pradhan. pic.twitter.com/AkcUzFcmnv
— Piyush Rai (@Benarasiyaa) September 28, 2022
“ಉತ್ತರಪ್ರದೇಶ ಸರ್ಕಾರ ಪ್ರಾಥಮಿಕ ಶಾಲೆಯ ಪ್ರತಿ ವಿದ್ಯಾರ್ಥಿಯ ಮಧ್ಯಾಹ್ನದ ಊಟಕ್ಕೆ ದಿನವೊಂದಕ್ಕೆ 4.97 ರೂ.ಗಳನ್ನು ನೀಡುತ್ತದೆ. ಈ ಹಣದಲ್ಲಿ ಆರೋಗ್ಯಕರವಾದ ಊಟವನ್ನು ನೀಡಲು ಸಾಧ್ಯವಿಲ್ಲ ಎಂದು ಹಲವಾರು ಸಂದರ್ಭಗಳಲ್ಲಿ, ಪ್ರಾಂಶುಪಾಲರು ಮತ್ತು ಪ್ರಧಾನರು ದೂರಿದ್ದಾರೆ. ಅನುದಾನವನ್ನು ಹೆಚ್ಚಿಸುವ ಬಗ್ಗೆ ಸರಕಾರ ಚಿಂತನೆ ನಡೆಸಬೇಕು” ಎಂದು ಪಿಶೂಯ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
Every primary school in UP is given Rs 4.97 per student/day for the mid day meal. On several occasion, principals and pradhans have complained this sum is too little to ensure proper, wholesome meal. The govt should consider raising it.
— Piyush Rai (@Benarasiyaa) September 28, 2022
“ಗ್ರಾಮದ ಸಮೀಪವೇ ಶಾಲೆ ಇರುವುದರಿಂದ ಅನೇಕ ಮಕ್ಕಳು ಮಧ್ಯಾಹ್ನದ ಊಟಕ್ಕಾಗಿ ಮನೆಗೆ ಹೋಗುತ್ತಿದ್ದಾರೆ. ಊಟ ಮುಗಿಸಿಕೊಂಡು ಮತ್ತೆ ಶಾಲೆಗೆ ಹಿಂತಿರುಗುತ್ತಾರೆ. ಉಪ್ಪು, ಅನ್ನ ನೀಡುತ್ತಿರುವ ವಿಚಾರವನ್ನು ಮಕ್ಕಳು ಪೋಷಕರಿಗೆ ತಿಳಿಸಿದಾಗ ಶಾಲೆಯಲ್ಲಿ ಊಟ ಮಾಡದಂತೆ ಪೋಷಕರು ತಿಳಿಸಿದ್ದಾರೆ” ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮಂಗಳವಾರವೂ ಇದೇ ರೀತಿಯ ಆಹಾರ ಕಂಡುಬಂದಾಗ ಗ್ರಾಮದ ಅನೇಕ ಪುರುಷರು ಮತ್ತು ಮಹಿಳೆಯರು ಶಾಲೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಿಗೆ ದೂರು ನೀಡಿದರೂ ಶಿಕ್ಷಕರು ಪಾಲಕರ ಮಾತನ್ನು ನಿರ್ಲಕ್ಷಿಸಿದ್ದಾರೆ.
ಈ ಘಟನೆಯನ್ನು ಗ್ರಾಮಸ್ಥರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಅಮಿತ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ ಎಂದು ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ.
ಬಿಎಸ್‌ಎ ಸಂತೋಷ್‌ಕುಮಾರ್ ರೈ ಮಾತನಾಡಿ, ಈ ಸಂಬಂಧ ಸಂಜೆ ವೇಳೆಗೆ ಬ್ಲಾಕ್ ಶಿಕ್ಷಣಾಧಿಕಾರಿಯಿಂದ ವರದಿ ಕೇಳಲಾಗಿದ್ದು, ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಉಪ್ಪು ನೀಡಿದ ಘಟನೆ ಇದೇ ಮೊದಲಲ್ಲ
ಉತ್ತರ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ಉಪ್ಪು ಬಡಿಸಿದ್ದು ಇದೇ ಮೊದಲೇನೂ ಅಲ್ಲ. 2019ರಲ್ಲಿ ಫ್ರೀಲ್ಯಾನ್ಸ್ ಪತ್ರಕರ್ತ ಪವನ್ ಜೈಸ್ವಾಲ್ ವಿಡಿಯೊವನ್ನು ಹಂಚಿಕೊಂಡಿದ್ದರು. ಘಟನೆಯನ್ನು ಬೆಳಕಿಗೆ ತಂದಿದ್ದಕ್ಕೆ ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿತ್ತು.
ಮಿರ್ಜಾಪುರ ಜಿಲ್ಲೆಯ ಶಿಯುರ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಉಪ್ಪು ಮತ್ತು ರೊಟ್ಟಿ (ಚಪಾತಿ) ನೀಡುತ್ತಿರುವ ವೀಡಿಯೊವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜೈಸ್ವಾಲ್ ವಿರುದ್ಧ 2019ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ನಂತರ ಕ್ಲೀನ್ ಚಿಟ್ ನೀಡಲಾಯಿತು.
ಕ್ಯಾನ್ಸರ್‌ನಿಂದ ಬಳಸುತ್ತಿದ್ದ ಪತ್ರಕರ್ತ ಜೈಸ್ವಾಲ್ ಕಳೆದ ಮೇ ತಿಂಗಳಿನಲ್ಲಿ ನಿಧನರಾದರು. ಜೈಸ್ವಾಲ್ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ನೀಡುವಂತೆ ಮನವಿ ಮಾಡಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ಪತ್ರಕರ್ತನಿಗೆ ಸಹಾಯ ಮಾಡಲು ಎಎಪಿ ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವರು ಮುಂದೆ ಬಂದಿದ್ದರು.


