ಪಂಚ ನ್ಯಾಯಮೂರ್ತಿಗಳ ಸುಪ್ರೀಂಕೋರ್ಟಿನ ಪೀಠವು ನೀಡಿದ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು ಏನು? ಈ ಕುರಿತು ಮುಖ್ಯ ನ್ಯಾಯಮೂರ್ತಿಗಳೇ ಓದಿದ ತೀರ್ಪಿನ ವರದಿ ಏನು ಹೇಳುತ್ತದೆ? ಅದರ ಪ್ರಕಾರ ‘ಕೋರ್ಟು ಸಾಕ್ಷಿಗಳ ಮೇಲಷ್ಟೇ ಹೋಗಬೇಕು. ಧಾರ್ಮಿಕ ಶ್ರದ್ಧೆಯನ್ನು ಕೋರ್ಟು ಗೌರವಿಸುತ್ತದೆ; ಆದರೆ ಅದು ವ್ಯಕ್ತಿಗತ ಆಯ್ಕೆ. ನಂಬಿಕೆಯ ಮೇಲೆ ತೀರ್ಪು ನೀಡಲಾಗುವುದಿಲ್ಲ’ ಎನ್ನುತ್ತದೆ. ಅದೇ ಸಂದರ್ಭದಲ್ಲಿ ಮಸೀದಿಯಿದ್ದ ಜಾಗವೇ ರಾಮನ ಜನ್ಮಭೂಮಿ ಎಂಬ ನಂಬಿಕೆ ಇದೆ ಎನ್ನುವುದನ್ನೂ ಕೋರ್ಟು ಗುರುತಿಸಿದೆ. ಇವೆರಡಕ್ಕೂ ತೀರ್ಪಿನಲ್ಲಿ ಏನು ಸ್ಪಷ್ಟೀಕರಣ ಒದಗಿಸಲಾಗಿದೆ ಎಂಬುದೂ ಕುತೂಹಲಕಾರಿ.
ಹಾಗಾದರೆ, ಯಾವ ಆಧಾರದ ಮೇಲೆ ಸದರಿ ಜಾಗವು ಮಂದಿರ ನಿರ್ಮಾಣಕ್ಕಾಗಿ ಸರ್ಕಾರ ರಚಿಸಬೇಕಾದ ಟ್ರಸ್ಟ್‍ಗೆ ಹೋಗಬೇಕು ಎಂದು ಕೋರ್ಟು ಹೇಳಿದೆ?
ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ- ಭಾರತೀಯ ಸರ್ವೇಕ್ಷಣಾ ಇಲಾಖೆಯು ನಡೆಸಿದ ಉತ್ಖನನ ಮತ್ತು ಸಂಶೋಧನೆಯನ್ನು ಕೋರ್ಟು ಒಂದು ಮಹತ್ವದ ಸಾಕ್ಷ್ಯವಾಗಿ ಪರಿಗಣಿಸಿದಂತೆ ಮೇಲ್ನೋಟಕ್ಕೆ ತೋರುತ್ತದೆ. (ಈ ಉತ್ಖನನ ನಡೆದ ರೀತಿಯ ಕುರಿತು ಸರ್ವೇಕ್ಷಣಾ ತಜ್ಞರು ಮತ್ತು ಇತಿಹಾಸಜ್ಞರಲ್ಲಿ ಒಮ್ಮತವಿರಲಿಲ್ಲ). ಅದರ ಪ್ರಕಾರ 1528ರಲ್ಲಿ ಮಸೀದಿಯು (ದೊರೆ ಬಾಬರ್‍ನ ಸೈನ್ಯದ ಸುಬೇದಾರನೊಬ್ಬನಿಂದ) ನಿರ್ಮಾಣವಾದಾಗ, ಅದರ ಕೆಳಗೆ ಬೇರೊಂದು ಕಟ್ಟಡ ಇತ್ತು. ಆದರೆ, ಅಲ್ಲಿ ಮಂದಿರವಿತ್ತೆಂಬುದನ್ನು ಇಲಾಖೆಯು ಒಪ್ಪಿಲ್ಲ. ಅಲ್ಲಿ ಮಂದಿರವಿತ್ತೆನ್ನುವುದಕ್ಕೆ ಸಾಕ್ಷಿಯಿಲ್ಲ; ಅದೇ ರೀತಿ ಅಲ್ಲಿ ಇಸ್ಲಾಮಿಕ್ ಕಟ್ಟಡವೂ ಇರಲಿಲ್ಲ ಎಂದು ಸರ್ವೇಕ್ಷಣಾ ಇಲಾಖೆಯು ಹೇಳಿದ್ದನ್ನು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಬೇರೆ ಬೇರೆ ಅವಧಿಗಳಿಂದ ವಿವಾದಿತ ಜಾಗದ ಒಳಾವರಣದಲ್ಲಿ ನಮಾಜ್ ನಡೆಯುತ್ತಿತ್ತು ಮತ್ತು ಹೊರಾವರಣದಲ್ಲಿ ಪೂಜೆ ನಡೆಯುತ್ತಿತ್ತು ಎಂಬುದನ್ನೂ ಕೋರ್ಟು ಗಮನಿಸಿದೆ. ಆದರೆ, ಇದು ಯಾರಿಗೆ ಸದರಿ ಜಾಗ ಸೇರಬೇಕು ಎಂಬುದಕ್ಕೆ ಆಧಾರವಾದಂತಿಲ್ಲ. ಬದಲಿಗೆ ಬೇರೊಂದು ಕಟ್ಟಡವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಲಾಗಿದೆ, ಕೆಡವಲಾದ ಕಟ್ಟಡ ಇಸ್ಲಾಮಿಕ್ ಕಟ್ಟಡ ಆಗಿರಲಿಲ್ಲ ಎಂಬುದು ಆ ಸ್ಥಳ ಸುನ್ನಿ ವಕ್ಫ್ ಬೋರ್ಡ್ ಅಥವಾ ಮುಸ್ಲಿಮರಿಗೆ ಸೇರಬಾರದು ಎಂಬುದನ್ನು ತೀರ್ಮಾನಿಸಲು ಆಧಾರವಾದಂತಿದೆ.
ಅದೇ ಸಂದರ್ಭದಲ್ಲಿ 19ನೇ ಶತಮಾನದಿಂದ ಈ ಜಾಗಕ್ಕಾಗಿ ಕಾನೂನು ವ್ಯಾಜ್ಯನಿರತವಾಗಿದ್ದ ನಿರ್ಮೋಹಿ ಅಖಾರಾಕ್ಕೂ ವಿವಾದಿತ ಜಾಗವನ್ನು ನೀಡಿಲ್ಲ. ಏಕೆಂದರೆ ಸದರಿ ಜಾಗದ ಒಡೆತನವು ಅಧಿಕೃತವಾಗಿ ಸುನ್ನಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಇತ್ತೇ ಹೊರತು ಬೇರೆಯವರು ಅದನ್ನು ಪಡೆಯಲು ಸಾಧ್ಯವಿರಲಿಲ್ಲ.
ಹಾಗಾದರೆ ಈ ಜಾಗ ಯಾರಿಗೆ ಸೇರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲಹಾಬಾದ್ ಹೈಕೋರ್ಟ್ ಅದನ್ನು ಸುನ್ನಿ ವಕ್ಫ್ ಬೋರ್ಡ್, ಬಾಲರಾಮ (ದೇವರು) ಮತ್ತು ನಿರ್ಮೋಹಿ ಅಖಾರಾಕ್ಕೆ ಮೂರು ಭಾಗಗಳಾಗಿ ಹಂಚಿತ್ತು. ಆದರೆ, ಸುಪ್ರೀಂಕೋರ್ಟ್ ಇದನ್ನು ರಾಮಮಂದಿರ ನಿರ್ಮಾಣಕ್ಕಾಗಿ ಬಾಲರಾಮನಿಗೆ ನೀಡಲಾಗಿದೆ. ಬಾಲರಾಮನನ್ನು ಪ್ರತಿನಿಧಿಸುತ್ತೇವೆಂದು ಹೇಳಿಕೊಂಡವರಿಗೆ ಅದನ್ನು ವಹಿಸಿಲ್ಲ; ಬದಲಿಗೆ ಸರ್ಕಾರವೇ ಮೂರು ತಿಂಗಳಲ್ಲಿ ಒಂದು ಟ್ರಸ್ಟ್ ಮಾಡಲಿ, ಆ ಟ್ರಸ್ಟ್‍ನಲ್ಲಿ ನಿರ್ಮೋಹಿ ಅಖಾರಾದವರೂ ಇರಲಿ ಎಂದು ಕೋರ್ಟ್ ಹೇಳಿದೆ.
ಅಂದರೆ ಸದರಿ ಜಾಗದ ಒಡೆತನದ ಮೇಲಿದ್ದ ಸಿವಿಲ್ ವ್ಯಾಜ್ಯಕ್ಕೆ ನಿರ್ದಿಷ್ಟವಾಗಿ ಯಾರಿಗೂ ಸೇರಿದ್ದಲ್ಲ ಎಂಬುದನ್ನು ಲಭ್ಯವಿದ್ದ ಸಾಕ್ಷಿಗಳ ಮೇಲೆ ಕೋರ್ಟು ತೀರ್ಮಾನಿಸಿದೆ; ಅದಕ್ಕೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ಸಾಕ್ಷಿಯನ್ನು ಪ್ರಧಾನವಾಗಿ ಪರಿಗಣಿಸಿದಂತಿದೆ. ಆದರೆ ನಂಬಿಕೆಯ ಆಧಾರದ ಮೇಲೆಯೇ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಂತಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಂದರೆ ವ್ಯಕ್ತಿಗತ ನಂಬಿಕೆ, ರಾಜಕಾರಣ, ಧರ್ಮ ಇವುಗಳನ್ನು ದಾಟಿ ನ್ಯಾಯಾಲಯವು ಸಾಕ್ಷಿಯ ಆಧಾರದ ಮೇಲೆ ತೀರ್ಪು ನೀಡುತ್ತದೆ ಎಂದು ಹೇಳಿದ ಕೋರ್ಟು, ಅರ್ಧ ಅದೇ ರೀತಿ ತೀರ್ಮಾನ ಮಾಡಿದೆ; ಇನ್ನರ್ಧವನ್ನು ನಂಬಿಕೆ ಯಾವಾಗಿನಿಂದ ಇತ್ತು ಎಂಬುದಕ್ಕೆ ಇದ್ದ ಸಾಕ್ಷ್ಯಗಳನ್ನು ಗಣನೆಗೆ ತೆಗೆದುಕೊಂಡಿದೆ.
ಇಲ್ಲಿಯೂ ಯಾರ ನಂಬಿಕೆ ಎಂಬ ಪ್ರಶ್ನೆ ಏಳುತ್ತದೆ. ಆ ವಿಚಾರದಲ್ಲಿ ಅದೇ ಜಾಗದಲ್ಲಿ ಭಗವಾನ್ ರಾವi ಹುಟ್ಟಿದ್ದು ಎಂಬ ನಂಬಿಕೆಗೆ ಮಹತ್ವ ನೀಡಲಾಗಿದೆ. ಇದಕ್ಕೂ ತೀರ್ಪಿನ 167ರಿಂದ 170ನೇ ಅಂಶಗಳಲ್ಲಿ ಉತ್ತರವಿದ್ದಂತಿದೆ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುಂಚಿನಿಂದಲೂ ಈ ನಂಬಿಕೆ ಇದೆ ಎಂಬುದಕ್ಕೆ ಹಲವು ಆಧಾರಗಳನ್ನು ಕೋರ್ಟ್ ಒದಗಿಸಿದೆ.
ಇದರ ಕುರಿತು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ರಾಜೀವ್ ಧವನ್ ಮಂಡಿಸಿದ ವಾದವನ್ನು ಕೋರ್ಟ್ ಒಪ್ಪಿಲ್ಲ. 450 ವರ್ಷಗಳಿಂದ ಇದ್ದ ತಮ್ಮ ಪ್ರಾರ್ಥನಾ ಮಂದಿರವನ್ನು ಕಾನೂನುಬಾಹಿರವಾಗಿ ನಡೆದ ಕೃತ್ಯವೊಂದರಿಂದ ಮುಸ್ಲಿಮರು ಕಳೆದುಕೊಳ್ಳಬೇಕಾಯಿತು ಎಂದು ಉಲ್ಲೇಖಿಸುವ ಕೋರ್ಟು, ಈ ವಿವಾದದ ಬಹು ಹಿಂದಿನ ಮೈಲುಗಲ್ಲುಗಳಾದ 1856ಕ್ಕಿಂತ ಮುಂಚೆಯೂ ಆ ಪ್ರಾರ್ಥನಾ ಮಂದಿರ ಮುಸ್ಲಿಮರ ವಶದಲ್ಲಿತ್ತು ಎಂಬುದಕ್ಕೆ ದಾಖಲೆಗಳನ್ನು ಕೇಳುವುದು ಆಶ್ಚರ್ಯಕರವಾಗಿದೆ. ಬೇರೆ ದೇಶಗಳಿಂದ ಇಲ್ಲಿಗೆ ಆಗಮಿಸಿದ ಪ್ರವಾಸಿಗಳು ಉಲ್ಲೇಖಿಸಿದ ಹಿಂದೂ ಪೂಜೆಯ ವಿವರಗಳನ್ನು ಉಲ್ಲೇಖಿಸುವ ಕೋರ್ಟು, ಅದೊಂದು ಮಸೀದಿಯಾಗಿತ್ತು ಮತ್ತು ನಮಾಜ್ ನಡೆಯುತ್ತಿತ್ತು ಎಂಬುದಕ್ಕೆ ದಾಖಲೆಗಳು ಇಲ್ಲ ಎಂದು ಹೇಳುತ್ತದೆ. ಅದನ್ನು ಕಟ್ಟಿದ್ದೇ ಮಸೀದಿಯಾಗಿ ಎಂಬುದನ್ನಾಗಲೀ, ಆ ಕಾರಣಕ್ಕೇ ವಿವಾದ ಹುಟ್ಟಿಕೊಂಡಿತ್ತು ಎಂಬುದನ್ನು ಗಣನೆಗೆ ತೆಗೆದುಕೊಳ್ಳದಿರುವುದು ಕಂಡು ಬರುತ್ತದೆ.
ಹೀಗಾಗಿ ಕೇವಲ ಭಾರತೀಯ ಸರ್ವೇಕ್ಷಣಾ ಇಲಾಖೆಯ ಸಾಕ್ಷ್ಯವಲ್ಲದೇ, ರಾಮಮಂದಿರಕ್ಕಾಗಿ ಭೂಮಿ ನೀಡುವುದರಲ್ಲಿ ತಾರ್ಕಿಕವಲ್ಲದ ಕಾರಣಗಳು ಕೆಲಸ ಮಾಡಿವೆ ಎಂಬುದು ಎದ್ದು ಕಾಣುತ್ತದೆ. ಆದರೆ ನಂಬಿಕೆಯ ಆಧಾರದ ಮೇಲೆ ನಾವು ತೀರ್ಮಾನಕ್ಕೆ ಬಂದಿಲ್ಲ ಎಂತಲೂ ಕೋರ್ಟ್ ಹೇಳಳುತ್ತದೆ.
ಅದೇನೇ ಇದ್ದರೂ ಸಂಬಂಧಪಟ್ಟವರೆಲ್ಲರೂ ಕೋರ್ಟ್ ತೀರ್ಪನ್ನು ಗೌರವಿಸುತ್ತ, ಶಾಂತಿ ಸೌಹಾರ್ದತೆ ಕಾಪಾಡಲು ಹೇಳಿರುವುದು ಇಂದಿನ ಮಹತ್ವದ ಬೆಳವಣಿಗೆಯಾಗಿದೆ. ತೀರ್ಪಿನ ಕುರಿತು ಅಸಮಾಧಾನ ಇದ್ದು, ಪುನರ್‍ಪರಿಶೀಲನಾ ಅರ್ಜಿ ಸಲ್ಲಿಸಬೇಕೇ ಎಂಬುದನ್ನೂ ಚರ್ಚಿಸುತ್ತೇವೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಪರವಾಗಿ ಹೇಳಿಕೆ ಬಂದಿದ್ದು, ಮೇಲಿನ ಅಂಶಗಳ ವಿಶ್ಲೇಷಣೆ ಹಾಗೂ ಚರ್ಚೆ ಮುಂದಿನ ದಿನಗಳಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
- ದಿ ವೈರ್


