ಭೂಕಬಳಿಕೆ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರು ವಿರುದ್ಧ ದಾಖಲಾಗಿರುವ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಲ್ಲಿ ಅಲಹಾಬಾದ್ ಹೈಕೋರ್ಟ್ ವಿಳಂಬ ಮಾಡುತ್ತಿರುವುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ನಡೆಗೆ ಅಸಮಧಾನ ವ್ಯಕ್ತಪಡಿಸಿರುವ ಸುಪ್ರೀಂ, “ಇದು ನ್ಯಾಯದ ಅಪಹಾಸ್ಯ” ಎಂದು ಕಟುವಾಗಿ ಟೀಕಿಸಿದೆ.
“ಜಾಮೀನು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ” ಎಂದು ಆಜಂ ಖಾನ್ ಪರ ವಾದ ಮಂಡಿಸಿದ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಇದ್ದ ಪೀಠರವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, 87 ಪ್ರಕರಣಗಳ ಪೈಕಿ 86 ಪ್ರಕರಣಗಳಲ್ಲಿ ಖಾನ್ ಅವರಿಗೆ ಜಾಮೀನು ಸಿಕ್ಕಿರುವುದನ್ನು ಗಮನಿಸಿದ್ದಾರೆ. ಮೇ 11ರಂದು ಈ ವಿಷಯದ ಕುರಿತು ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದು, “ಆ ವೇಳೆಗೆ ಹೈಕೋರ್ಟ್ ಆದೇಶವನ್ನು ನೀಡುತ್ತದೆ” ಎಂದು ಭರವಸೆ ನೀಡಿದ್ದಾರೆ.
ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಪ್ರಾಜೆಕ್ಟ್‌ಗಾಗಿ ಆಸ್ತಿ ಕಬಳಿಕೆ ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಖಾನ್ ಅವರ ಜಾಮೀನು ಅರ್ಜಿಯ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಕಾಯ್ದಿರಿಸಿತ್ತು.
“ನಾವು ನಿಮಗೆ ಹೇಳುತ್ತೇವೆ ಎಂದು ಈಗ ತೀರ್ಪನ್ನು ಕಾಯ್ದಿರಿಸಲು ಸಾಧ್ಯವಿಲ್ಲ. 137 ದಿನಗಳಾಗಿವೆ. ಯಾವುದೇ ಆದೇಶ ಜಾರಿಯಾಗಿಲ್ಲ. ಆಜಂ ಖಾನ್ 86 ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇನ್ನೊಂದು ಪ್ರಕರಣ ಬಾಖಿ ಇದೆ. ಇದು ನ್ಯಾಯದ ಅಪಹಾಸ್ಯ. ನಾವು ಈಗ ಇಷ್ಟು ಮಾತ್ರ ಹೇಳಬಹುದು. ಅಗತ್ಯವಿದ್ದರೆ ನಾವು ಹೆಚ್ಚು ಹೇಳುತ್ತೇವೆ. ಬುಧವಾರ ಬರಲಿ. ನಾವು ಅವರಿಗೆ ಎರಡು ದಿನಗಳ ಕಾಲ ಅವಕಾಶ ನೀಡೋಣ” ಎಂದು ಪೀಠವು ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಖಾನ್ ವಿರುದ್ಧ ಬಾಕಿ ಉಳಿದಿರುವ 87 ಕ್ರಿಮಿನಲ್ ಪ್ರಕರಣಗಳಲ್ಲಿ 84 ಎಫ್‌ಐಆರ್‌ಗಳು 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ದಾಖಲಾಗಿವೆ ಎಂದು ‘ದಿ ವೈರ್’ ವರದಿ ಮಾಡಿದೆ.
ಈ 84 ಪ್ರಕರಣಗಳಲ್ಲಿ 81 ಪ್ರಕರಣಗಳು 2019ರ ಲೋಕಸಭೆ ಚುನಾವಣೆಯ ಮೊದಲು ಮತ್ತು ನಂತರದ ಅವಧಿಯಲ್ಲಿ ದಾಖಲಾಗಿವೆ.
ಖಾನ್ ಅವರನ್ನು ಅನಿರ್ದಿಷ್ಟಾವಧಿ ಜೈಲಿನಲ್ಲಿ ಇಡಲು ಬಿಜೆಪಿಯವರು ದಾಖಲಿಸಿದ ಎಫ್‌ಐಆರ್‌ಗಳು ಇವೆಂದು ಖಾನ್ ಬೆಂಬಲಿಗರು ಹೇಳುತ್ತಾರೆ.
ಫೆಬ್ರವರಿಯಲ್ಲಿ ಉತ್ತರ ಪ್ರದೇಶ ಚುನಾವಣೆಯ ಪ್ರಚಾರಕ್ಕಾಗಿ ಖಾನ್ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಅರ್ಜಿಯ ವಿಲೇವಾರಿಗಾಗಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಹೇಳಿತ್ತು.
ಆಜಂ ಖಾನ್ ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ.
ಇದನ್ನೂ ಓದಿರಿ: ಪಶ್ಚಿಮ ಬಂಗಾಳ: ಅನುಮಾನಾಸ್ಪದವಾಗಿ ಬಿಜೆಪಿ ಮುಖಂಡನ ಶವ ಪತ್ತೆ; ‘ರಾಜಕೀಯ ಕೊಲೆ’ ಎಂದ ಅಮಿತ್ ಶಾ
ಡಿಸೆಂಬರ್ 4, 2021 ರಂದು ಹೈಕೋರ್ಟ್ ಪ್ರಸ್ತುತ ಭೂಹಗರಣ ಪ್ರಕರಣದಲ್ಲಿ ಜಾಮೀನಿನ ನಿರ್ಧಾರವನ್ನು ಕಾಯ್ದಿರಿಸಿತ್ತು. ಆದರೆ, ರಾಜ್ಯ ಸರ್ಕಾರವು ನಂತರ ಅರ್ಜಿಯನ್ನು ಸಲ್ಲಿಸಿತು. ಗುರುವಾರ ಸಲ್ಲಿಸಿದ ಹೊಸ ಅಫಿಡವಿಟ್‌ಗಳ ಮೂಲಕ ಕೆಲವು ಹೊಸ ಸಂಗತಿಗಳನ್ನು ಪ್ರಸ್ತುತಪಡಿಸಲು ಅನುಮತಿ ಕೋರಿತು.
ನೂರಾರು ಕೋಟಿ ರೂಪಾಯಿಗಳಿಗೂ ಹೆಚ್ಚು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಅಡಿಯಲ್ಲಿ ಖಾನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.


