ಎನ್‌ಸಿಪಿ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಎರಡನೇ ಆರೋಪಿಯ ವಯಸ್ಸನ್ನು ದೃಢಪಡಿಸಲು ಮೂಳೆ ಪರೀಕ್ಷೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಮುಂಬೈನ ನ್ಯಾಯಾಲಯ ಇಂದು ಈ ಆದೇಶ ನೀಡಿದ್ದು, ಸದ್ಯಕ್ಕೆ ಆತನ ಪೊಲೀಸ್ ಕಸ್ಟಡಿಯನ್ನು ತಡೆಹಿಡಿದಿದೆ. ಉತ್ತರ ಪ್ರದೇಶದಿಂದ ಬಂಧಿತನಾಗಿರುವ ಯುವಕನ ಆಧಾರ್‌ನಲ್ಲಿ 19 ವರ್ಷ ಎಂದು ದಾಖಲಾಗಿಒದ್ದರೂ, ಆತ ತಾನು ಅಪ್ರಾಪ್ತ ಎಂದು ಹೇಳಿಕೊಂಡಿದ್ದಾನೆ.
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (66) ಅವರನ್ನು ನಿನ್ನೆ ರಾತ್ರಿ ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್‌ಸಿಪಿ) ಪಕ್ಷದ ಅಜಿತ್ ಪವಾರ್ ಬಣದ ನಾಯಕನಾಗಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರೆ, ಮೂವರು ಶೂಟರ್‌ಗಳು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ ಮತ್ತು ಉತ್ತರ ಪ್ರದೇಶದ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮೂರನೇ ಆರೋಪಿಯನ್ನು ಉತ್ತರ ಪ್ರದೇಶದ ಶಿವಕುಮಾರ್ ಗೌತಮ್ ಎಂದು ಗುರುತಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ.
ಏಕನಾಥ್ ಶಿಂಧೆ ಸರ್ಕಾರದ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸುವ ಮೂಲಕ ರಾಜ್ಯ ಚುನಾವಣೆಗೆ ಮುನ್ನ ಈ ಕೊಲೆ ರಾಜಕೀಯ ಕೆಸರೆರಚಾಟವನ್ನು ಹುಟ್ಟುಹಾಕಿದೆ.
“ಬಾಬಾ ಸಿದ್ದಿಕ್ ಅವರ ದುರಂತ ಮರಣವು ಆಘಾತಕಾರಿ ಮತ್ತು ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬದೊಂದಿಗೆ ಇವೆ. ಈ ಭಯಾನಕ ಘಟನೆಯು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ಬಹಿರಂಗಪಡಿಸುತ್ತದೆ. ಸರ್ಕಾರವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ನ್ಯಾಯವು ಮೇಲುಗೈ ಸಾಧಿಸಬೇಕು” ಎಂದು ಎಕ್ಸ್‌ನಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
“ನ್ಯಾಯವನ್ನು ಖಾತರಿಪಡಿಸಬೇಕು ಮತ್ತು ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಸಮಗ್ರ ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರನ್ನು ಆದಷ್ಟು ಬೇಗ ಕಾನೂನು ಕ್ರಮಕ್ಕೆ ತರಬೇಕು. ಉತ್ತರದಾಯಿತ್ವವು ಅತಿಮುಖ್ಯವಾಗಿದೆ” ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ಮಧ್ಯಪ್ರದೇಶ: ಕಳ್ಳರೆಂದು ಶಂಕಿಸಿ ಮೂವರು ಅಪ್ರಾಪ್ತರಿಗೆ ಚಿತ್ರಹಿಂಸೆ; ಕೈಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ


