ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಆರೋಪಿ ಧರ್ಮರಾಜ್ ಕಶ್ಯಪ್‌ನ ‘ಆಸಿಫಿಕೇಶನ್’ ಪರೀಕ್ಷೆಯನ್ನು ನಡೆಸಿದ್ದು, ಇದರಲ್ಲಿ ಅವನು ಅಪ್ರಾಪ್ತನಲ್ಲ ಎಂದು ಸಾಬೀತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.
ಬಾಂದ್ರಾ ಉಪನಗರದಲ್ಲಿ ಶನಿವಾರ ಮೂವರು ದುಷ್ಕರ್ಮಿಗಳು ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಮುಂಬೈ ಪೊಲೀಸರು ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಅವರನ್ನು ಬಂಧಿಸಿದ್ದರು. ಆದರೆ, ಗುಂಡಿನ ದಾಳಿ ಸಮಯದಲ್ಲಿ ಸ್ಥಳದಲ್ಲಿದ್ದ ಒಬ್ಬ ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರೋಪಿಗಳನ್ನು ಅಪರಾಧ ವಿಭಾಗದ ತಂಡವು ನ್ಯಾಯಾಲಯಕ್ಕೆ ಹಾಜರುಪಡಿಸಿತು, ಅಲ್ಲಿ ಧರ್ಮರಾಜ್ ಕಶ್ಯಪ್ ಅವರ ವಕೀಲರು ಅವರು ಅಪ್ರಾಪ್ತ ಎಂದು ಹೇಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯಾಯಾಲಯವು ಭಾನುವಾರ ಕಶ್ಯಪ್ ಅವರ ಆಸಿಫಿಕೇಶನ್ ಪರೀಕ್ಷೆಗೆ ಆದೇಶಿಸಿದೆ. ಇದರಲ್ಲಿ ಆತ ಅಪ್ರಾಪ್ತನಲ್ಲ ಎಂದು ಸಾಬೀತಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ತಡರಾತ್ರಿಯ ಬೆಳವಣಿಗೆಯಲ್ಲಿ, ಮುಂಬೈ ಪೊಲೀಸರ ಅಪರಾಧ ವಿಭಾಗವು ಪುಣೆಯ 28 ವರ್ಷದ ಪ್ರವೀಣ್ ಲೋಂಕರ್‌ನನ್ನು ಬಂಧಿಸಿತು. ಈತ ನಿರ್ಮಲ್ ನಗರ ಫೈರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಶುಭಂ ಲೋಂಕರ್ ಸಹೋದರನಾಗಿದ್ದಾನೆ.
ಸಹೋದರರು ಸಿದ್ದಿಕಿಯನ್ನು ಕೊಲ್ಲುವ ಸಂಚು ರೂಪಿಸಿದ್ದರು. ಕಶ್ಯಪ್ ಮತ್ತು ಶಿವಕುಮಾರ್ ಗೌತಮ್ ಅವರನ್ನು ಸಂಚು ರೂಪಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ; ಬಾಬಾ ಸಿದ್ದಿಕ್ ಹತ್ಯೆ | ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೈವಾಡ ಖಚಿತಪಡಿಸಿದ ಪೊಲೀಸರು


