ಮುಂಬೈ: ಎನ್ ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಅನ್ಮೋಲ್ ಬಿಷ್ಣೋಯಿಯನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಅನ್ಮೋಲ್ ಕೆನಡಾದಲ್ಲಿ ವಾಸಿಸುತ್ತಾ ನಿರಂತರವಾಗಿ ಯುಎಸ್ ಗೆ ಸಂಚಾರ ಮಾಡುತ್ತಿದ್ದನೆನ್ನಲಾಗಿದೆ. ಈತ ಲಾರೆನ್ಸ್ ಬಿಷ್ಣೋಯಿಯ ಕಿರಿಯ ಸಹೋದರನಾಗಿದ್ದು, ಈತನನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಬಂಧಿಸಲಾಗಿದೆ. ಅಮೆರಿಕದ ತನಿಖಾ ಸಂಸ್ಥೆಗಳು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತಿಲ್ಲವೆಂದು ಪೊಲೀಸ್ ಮೂಲಗಳು ಹೇಳಿವೆ.
ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದೀಕಿಯನ್ನು ಅಕ್ಟೋಬರ್ 12ರಂದು ಮುಂಬೈಯ ಬಾಂದ್ರಾ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದ್ದು, ಇದರ ಹೊಣೆಯನ್ನುಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿತ್ತು. ಅಲ್ಲದೇ ಎಪ್ರಿಲ್ 14ರಂದು ಸಲ್ಮಾನ್ ಖಾನ್ ಮನೆಯ ಹೊರಗಡೆ ನಡೆದ ಗುಂಡಿನ ದಾಳಿ ನಡೆಸಲಾಗಿತ್ತು. ಈ ಎರಡು ಘಟನೆಗಳಲ್ಲಿ ಅನ್ಮೋಲ್ ಪಾತ್ರವನ್ನು ಕುರಿತು ಮುಂಬೈ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.
ಬಂಧಿತ ಅನ್ಮೋಲ್ ನನ್ನು ಭಾರತಕ್ಕೆ ಹಸ್ತಾಂತರ ಮಾಡುವ ಕುರಿತು ಯುಎಸ್ ಆಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ..
ಎನ್ಐಎಯು ಅನ್ಮೋಲ್ ಬಂಧನಕ್ಕೆ ಸಂಬಂಧಿಸಿ 10 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು. ಈ ತಿಂಗಳ ಪ್ರಾರಂಭದಲ್ಲಿ ಅನ್ಮೋಲ್ ಬಂಧನಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೆವು. ತಮ್ಮ ದೇಶದಲ್ಲಿ ಅನ್ಮೋಲ್ ಉಪಸ್ಥಿತಿಯ ಕುರಿತ ಈ ಪ್ರಸ್ತಾಪವನ್ನು ಯುಎಸ್ ಆಡಳಿತಕ್ಕೆ ಮಾಹಿತಿ ನೀಡಿದ್ದೇವು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಷ್ಣೋಯಿ ಗ್ಯಾಂಗ್ ದೇಶದ ಪ್ರಮುಖ ನಾಯಕರನ್ನು ಹತ್ಯೆ ಮಾಡುವ ಪ್ರಮುಖ ಗುರಿಯನ್ನು ಇಟ್ಟುಕೊಂಡು ಕಾರ್ಯಾಚರಿಸುತ್ತಿದೆ. ಈ ಗ್ಯಾಂಗ್ 2020ರಲ್ಲಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ನಿಧಿ ಸಂಗ್ರಹ ಮತ್ತು ನೇಮಕಾತಿ ನಡೆಸುತ್ತಿರುವ ಸಂಬಂಧ ಎನ್ಐಎಯಿಂದ ದೂರೊಂದನ್ನು ದಾಖಲಾಗಿಸಿತ್ತು.


