ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ನಾಳೆ (ಸೆ.30) ತೀರ್ಪು ಪ್ರಕಟಿಸಲಿದೆ. ನ್ಯಾಯಾಧೀಶ ಎಸ್.ಕೆ.ಯಾದವ್ ವಿಚಾರಣೆ ನಡೆಸಲಿದ್ದು, ತೀರ್ಪಿನ ವಿಚಾರಣೆಗಾಗಿ ಪ್ರಕರಣದ 32 ಆರೋಪಿಗಳನ್ನು ಆ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ನಾಳೆ ತೀರ್ಪು ಬರುವ ಹಿನ್ನೆಲೆ ಬಿಜೆಪಿ ನಾಯಕಿ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಮಾ ಭಾರತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಪತ್ರ ಬರೆದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಜಾಮೀನು ಕೋರುವುದಿಲ್ಲ. ತಪ್ಪಿತಸ್ಥರೆಂದು ಸಾಬೀತಾದರೇ ಗಲ್ಲಿಗೇರಿಸಲಿ ನಾನು ಸಿದ್ಧ ಎಂದಿದ್ದಾರೆ.
ಸೆಪ್ಟೆಂಬರ್ 26 ರಂದು ಬರೆದಿರುವ ಪತ್ರದಲ್ಲಿ “ಸೆಪ್ಟೆಂಬರ್ 30 ರಂದು ಅಯೋಧ್ಯೆಯ ತೀರ್ಪು ಏನೆಂದು ನನಗೆ ತಿಳಿದಿಲ್ಲ. ಆದರೆ ನಾನು ಜಾಮೀನು ಪಡೆಯುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಉಮಾಭಾರತಿ
“ಅಯೋಧ್ಯೆ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಅಯೋಧ್ಯೆ ಚಳವಳಿಯ ಭಾಗವಾಗಿದ್ದಕ್ಕಾಗಿ ಗಲ್ಲಿಗೇರುವ ಪರಿಸ್ಥಿತಿ ಬಂದರು, ಅದು ನನಗೆ ಸ್ವೀಕಾರಾರ್ಹ ಎಂದು ನಾನು ಯಾವಾಗಲೂ ಹೇಳಿದ್ದೇನೆ” ಎಂದು ಬರೆದಿದ್ದಾರೆ. “ತೀರ್ಪು ಏನು ಎಂದು ನನಗೆ ತಿಳಿದಿಲ್ಲ, ಆದರೆ ನಾನು ಜಾಮೀನು ತೆಗೆದುಕೊಳ್ಳುವುದಿಲ್ಲ. ಜಾಮೀನು ತೆಗೆದುಕೊಳ್ಳುವುದರಿಂದ ನಾನು ಚಳವಳಿಯಲ್ಲಿ ಭಾಗವಹಿಸಿದ್ದ ಘನತೆಗೆ ಕಳಂಕ ತರುತ್ತದೆ ಎಂದಿದ್ದಾರೆ. ಇಂತಹ ಸಂದರ್ಭಗಳಲ್ಲಿ, ನೀವು ನನ್ನನ್ನು ಹೊಸ ತಂಡದಲ್ಲಿ ಇರಿಸಿಕೊಳ್ಳಲು ಬಯಸುತ್ತೀರೋ ಇಲ್ಲವೋ, ಅದನ್ನು ನೀವು ಪರಿಗಣಿಸಬೇಕು” ಎಂದಿದ್ದಾರೆ.
ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೊಸ ಬಿಜೆಪಿ ಪದಾಧಿಕಾರಿಗಳನ್ನು ಘೋಷಿಸಿದ ದಿನದಂದು ಬರೆಯಲಾಗಿದೆ. ಅಂದೇ ಉಮಾ ಭಾರತಿಯನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿತ್ತು. ಆದರೆ ಪಕ್ಷದ ಸಾಂಸ್ಥಿಕ ಪುರ್ನರಚನೆ ಮುಂಚಿತವಾಗಿಯೇ ಈ ಪತ್ರವನ್ನು ಬರೆಯಲಾಗಿದೆ ಎಂದು ಉಮಾ ಭಾರತಿಯವರ ಖಾಸಗಿ ಕಾರ್ಯದರ್ಶಿ ವಿಷ್ಣುಗುಪ್ತ ವೈದ್ಯ ಹೇಳಿದ್ದಾರೆ.
ಉಮಾಭಾರತಿ ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಸಂಪುಟ ಸಭೆಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದರು.
ಇದನ್ನೂ ಓದಿ: ರಾಮ ಮಂದಿರದ ’ಭೂಮಿ ಪೂಜೆ’ಗೆ ಬಾಬರಿ ಮಸೀದಿ ಧ್ವಂಸಗೊಳಿಸಿದವರನ್ನು ಆಹ್ವಾನಿಸಿ: ದುಬೆ
ನಾಳೆ ಪ್ರಕರಣದ ತೀರ್ಪು ಹೊರಬೀಳಲಿದ್ದು, ಆರೋಪಿಗಳಾದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಮತ್ತು ರಾಜಸ್ಥಾನದ ಮಾಜಿ ಗವರ್ನರ್ ಕಲ್ಯಾಣ್ ಸಿಂಗ್, ಬಿಜೆಪಿ ಮುಖಂಡ ಎಂ.ಎಂ.ಜೋಶಿ, ಉಮಾ ಭಾರತಿ ಮತ್ತು ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ವಿಚಾರಣೆಯಂದು ನ್ಯಾಯಾಲಯದಲ್ಲಿರುವಂತೆ ತಿಳಿಸಲಾಗಿತ್ತು.
ಆದರೆ ಕೆಲವು ಹಿರಿಯ ರಾಜಕೀಯ ಮುಖಂಡರು, ಕೆಲವರ ವೈಯಕ್ತಿಕ ಕಾರಣದಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ತಿಳಿದು ಬಂದಿದೆ.
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಸೇರಿದಂತೆ 32 ಆರೋಪಿಗಳಲ್ಲಿ ಕೆಲವರು, ತಮ್ಮ ವಯಸ್ಸು ಮತ್ತು ಕೊರೊನಾ ರೋಗವನ್ನು ಮುಂದಿಟ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ನ್ಯಾಯಾಲಯವನ್ನು ಕೋರಬಹುದು ಎಂದು ಆರೋಪಿಗಳ ಪರ ವಕೀಲ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರಿಗೆ ಸೋಮವಾರ ಕೊರೊನಾ ಸೋಂಕು ತಗುಲಿರುವುದಾಗಿ ಟ್ವೀಟ್ ಮಾಡಿದ್ದಾರೆ. ಏಮ್ಸ್ ವೈದ್ಯರು ಅನುಮತಿ ನೀಡಿದರೆ ಮಾತ್ರ ನಾಡಿದ್ದು ನಾನು ಲಖನೌದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಾಜರಾಗುತ್ತೇನೆ ಎಂದಿದ್ದರು.
मैं अभी-अभी एम्स ऋषिकेश में भर्ती हो गई हूं। इसके तीन कारण है- (1) @drharshvardhan जी बहुत चिंता कर रहे हैं,
(2) मेरे को रात में बुखार बढ़ गया,
(3) मेरी एम्स में जांच-पड़ताल होने के बाद यदि मुझे सकारात्मक रिपोर्ट मिली तो मैं परसों लखनऊ की सीबीआई कोर्ट में पेश होना चाहती हूं।— Uma Bharti (@umasribharti) September 28, 2020
ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಘಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದಾರೆ.


