ಪ್ರವರ್ಗ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಬೆಳಗಾವಿಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸಾಚಾರಕ್ಕೆ ತಿರುಗಿದೆ. ಈ ಮಧ್ಯೆ, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ‘ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ’ ಆಗ್ರಹಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಒಕ್ಕೂಟದ ಮುಖಂಡರು, “ಒಂದು ವೇಳೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಿದರೆ, ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಮನವಿ ಪತ್ರಸಲ್ಲಿ ಏನಿದೆ..?
“ನಮ್ಮ ರಾಜ್ಯದಲ್ಲಿ 2002 ರಿಂದ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಎಂಬುದಾಗಿ ವಿಂಗಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವರ್ಗ-1ಕ್ಕೆ ಶೇಕಡಾ 48 ರಷ್ಟು, ಪ್ರವರ್ಗ-2ಎಗೆ ಶೇಕಡಾ 15 ರಷ್ಟು, ಪ್ರವರ್ಗ-2ಬಿಗೆ ಶೇಕಡಾ 4 ರಷ್ಟು, ಪ್ರವರ್ಗ-3ಎಗೆ ಶೇಕಡಾ 4 ರಷ್ಟು ಹಾಗೂ ಪ್ರವರ್ಗ-3ಬಿಗೆ ಶೇಕಡಾ 5 ರಷ್ಟು ಒಟ್ಟು ಮೀಸಲಾತಿಯ ಶೇಕಡಾ 32 ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನಿಗಧಿಪಡಿಸಲಾಗಿದೆ. 2002ರಿಂದ ಈವರೆವಿಗೂ ಅದೇ ರೀತಿ ಮೀಸಲಾತಿಯನ್ನು ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಪಡೆಯುತ್ತಿವೆ. ರಾಜ್ಯದಲ್ಲಿನ ಪಂಚಮಸಾಲಿ ಲಿಂಗಾಯತರು ಉಲ್ಲೇಖ-2ರ ಸರ್ಕಾರದ ಆದೇಶದ ಅನ್ವಯ ಪ್ರವರ್ಗ-3ಬಿ ಮೀಸಲಾತಿಯನ್ನು ಪಡೆಯುತ್ತಿದ್ದು, ಇತ್ತಿಚೆಗೆ ಈ ಸಮುದಾಯವನ್ನು ಪ್ರವರ್ಗ-3 ಯಿಂದ ಪ್ರವರ್ಗ-2ಎಗೆ ಬದಲಾಯಿಸಿ ಶೇಕಡಾ 15 ರಷ್ಟರ ಮೀಸಲಾತಿಯಡಿಯಲ್ಲಿ ಪ್ರವರ್ಗ-2ಎ ನಲ್ಲಿ ಮೀಸಲಾತಿ ಕೊಡಲು ಒತ್ತಾಯಿಸಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದು, ಧರಣಿಗಳನ್ನು ಮಾಡಿತ್ತಿದ್ದು, ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ.
2022-23ರಲ್ಲಿ ಬಿಜೆಪಿ ಸರ್ಕಾರದಲ್ಲಿ ಪ್ರವರ್ಗ-2ಬಿರಲ್ಲಿ ಬರುವ ಮುಸ್ಲಿಂರ ಶೇಕಡಾ 41 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2ಡಿ ಎಂದು ಹೊಸದಾಗಿ ವರ್ಗಿಕರಿಸಿ ಪ್ರವರ್ಗ-2ಸಿಗೆ ಶೇಕಡಾ 2 ರಷ್ಟು ಮತ್ತು ಪ್ರವರ್ಗ-2ಡಿಗೆ ಶೇಕಡಾ 2 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದು ಆದೇಶವನ್ನು ಹೊರಡಿಸಲಾಗಿತ್ತು.
ಈ ಹಿಂದೆ ಪ್ರವರ್ಗ-3ಎನಲ್ಲಿ ಬರುವ ಇತಿಗಳನ್ನು ಪ್ರವರ್ಗ-2ಸಿಗೆ ಸೇರಿಸಿ ಮತ್ತು ಪ್ರವರ್ಗ-3ಬಿ ನಲ್ಲಿ ಬರುವ ಜಾತಿಗಳನ್ನು ಪ್ರವರ್ಗ-2ಡಿಗೆ ಸೇರಿಸಿ ಈ ಹಿಂದೆ ಪ್ರವರ್ಗ-3ರ ಮೀಸಲಾತಿ ಶೇಕಡಾ 4 ರಷ್ಟು ಮತ್ತು ಹೊಸ ಆದೇಶದ ಮೀಸಲಾತಿ ಶೇಕಡಾ 2 ರಷ್ಟು ಒಟ್ಟು ಸೇರಿ ಪ್ರವರ್ಗ-2ಸಿಗೆ ಒಟ್ಟು ಶೇಕಡಾ 6 ರಷ್ಟು ಮತ್ತು ಪ್ರವರ್ಗ-2ಡಿಗೆ ಶೇಕಡಾ 7 ರಷ್ಟು ಮೀಸಲಾತಿಯನ್ನು ನಿಗಧಿಪಡಿಸಿ ಆದೇಶವನ್ನು ಹೊರಡಿಸಲಾಗಿದೆ.
ಬಿಜೆಪಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಂದಿನ ಬಿಜೆಪಿ ಸರ್ಕಾರದ ವಕೀಲರು ಸುಪ್ರೀಂ ಕೋರ್ಟಿನಲ್ಲಿ 2002ರ ಆದೇಶವನ್ನು ಪಾಲನೆ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಸ್ ಬಾಕಿ ಇರುವುದರಿಂದ ಬಿಜೆಪಿ ಸರ್ಕಾರದ ಆದೇಶವು ಜಾರಿಯಾಗಿಲ್ಲ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎಗೆ ಯಾವುದೇ ಸಮುದಾಯ/ ವರ್ಗಗಳನ್ನು ಸೇರ್ಪಡೆಗೊಳಿಸಬಾರದೆಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ರಾಜ್ಯದ ಹಿಂದುಳಿದ ವರ್ಗದ ಮೀಸಲಾತಿ ಪಟ್ಟಿಯ ಪ್ರವರ್ಗ 2ಎಗೆ ಯಾವುದೇ ಜಾತಿಗಳನ್ನು ಸೇರಿಸಬಾರದೆಂದು ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ.
ಪಂಚಮಸಾಲಿ ಅಂಗಾಯತ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರೆದ ಸಮುದಾಯವಾಗಿದೆ. ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿ ವರದಿಗಳ ಪ್ರಕಾರ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜವಾಗಿರುತ್ತದೆ. ಒಂದು ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ವರ್ಗಕ್ಕೆ ಸೇರ್ಪಡೆ ಮಾಡಿದರೆ ಪ್ರವರ್ಗ-2ಎ ಅಡಿಯಲ್ಲಿರುವ ಹಿಂದುಳಿದ ಜಾತಿಗಳಾದ ಆಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಎಲ್ಲಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ.
“ಪಂಚಮಸಾಲಿ ಸಮುದಾಯವೇ ಎಲ್ಲ ಉದ್ಯೋಗ, ಶಿಕ್ಷಣ, ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಪಂಚಮಸಾಲಿ ಅಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಗೆ ಸೇರಿಸಬಾರದು” ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಮನವಿ ಮಾಡಿದೆ.
“ಒಂದು ವೇಳೆ ಪಂಚಮಸಾಲಿ ಅಂಗಾಯತ ಸಮುದಾಯವು ಪ್ರವರ್ಗ-2ಎ ಮೀಸಲಾತಿಗೆ ಸೇರಿದ್ದೇ ಆದಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಹಾಗೂ ಹೋರಾಟಗಳನ್ನು ನಡೆಸುತ್ತದೆ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ” ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ; ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಸಾವು : ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತು, ಅತಿಥಿ ಶಿಕ್ಷಕರು ವಜಾ


