ದೇವಾಲಯ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಪರಿಶಿಷ್ಟ ಸಮುದಾಯದ (ಎಸ್‌ಸಿ) ಯುವಕನ್ನು ಪ್ರಬಲ ಜಾತಿ ಗುಂಪು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನಲ್ಲಿ ಸಂಭವಿಸಿದೆ.
ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದೂ ಅಲ್ಲದೆ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು; ತಾಲೂಕಿನ ಉಗಲವಾಟ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮದ 21 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮರನಾಥ ರೆಡ್ಡಿ ಶನಿವಾರ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅರ್ಜುನ್ ಮಾದರ ಎಂಬ 28 ವರ್ಷದ ಯುವಕ ಥಳಿತಕ್ಕೊಳಗಾಗಿದ್ದು, ಈ ಸಂಬಂಧ ಮುದ್ದಿನಗೌಡ ದ್ಯಾಮನಗೌಡ ಸತ್ಯನ್ನವರ, ಮಂಜುನಾಥ ಲೆಂಕೇಶ ಮೂಲಿಮನಿ, ತುಳಸಿಗೇರಪ್ಪ ಕಾಮಪ್ಪ ತಳವಾರ ಸೇರಿದಂತೆ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ.10ರಂದು ಅರ್ಜುನ್, ತನ್ನದೇ ಗ್ರಾಮದ ದ್ಯಾಮವ್ವ ಗುಡಿಯ ಒಳಗೆ ಹೋಗಿ ದೇವರಿಗೆ ನಮಸ್ಕಾರ ಮಾಡಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಪ್ರಬಲ ಜಾತಿ ಗುಂಪು, “ನೀನು ದಲಿತ ಸಮುದಾಯದವನು.. ಗುಡಿಯ ಒಳಗೆ ಹೋಗಿ ನಮಸ್ಕಾರ ಮಾಡಿದ್ದು ಯಾಕೆ” ಎಂದು ಆತನೊಂದಿಗೆ ವಾಗ್ವಾದ ನಡೆಸಿದ್ದಾರೆ. ಸಾಲದ್ದಕ್ಕೆ, ಆತನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
“20ಕ್ಕೂ ಅಧಿಕ ಜನರು ಸೇರಿ ಆತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿದ್ದಾರೆ” ಎಂದು ಹಲ್ಲೆಗೊಳಗಾದ ವ್ಯಕ್ತಿ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ 21 ಆರೋಪಿಗಳ ವಿರುದ್ದ ಪ್ರಕರಣ ಕೇಸ್ ದಾಖಲಿಸಿದ್ದಾರೆ. ಘಟನೆ ನಂತರ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಷಯ ತಿಳಿದ ಜಿಲ್ಲೆಯ ಹಲವು ದಲಿತ ಮುಖಂಡರು ಉಗಲವಾಟ ಗ್ರಾಮಕ್ಕೆ ಆಗಮಿಸಿ, ಅಲ್ಲಿನ ದಲಿತ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಘಟನೆ ಖಂಡಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಿಲ್ಲದ ದಲಿತರ ಮೇಲಿನ ದೌರ್ಜನ್ಯ:
ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕಳೆದ ತಿಂಗಳು, ದಲಿತ ಯುವಕನೊಬ್ಬ ತನಗೆ ಕ್ಷೌರ ಮಾಡಲು ಒತ್ತಾಯಿಸಿದ ನಂತರ, ಮಾತಿಗೆ ಮಾತು ಬೆಳೆದು ಕ್ಷೌರಿಕ ಕೊಲೆ ಮಾಡಿರುವ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿತ್ತು. ಯಮನೂರಪ್ಪ ಬಂಡಿಹಾಳ (23) ಕೊಲೆಯಾದ ಮೃತ ದಲಿತ ಯುವಕನಾಗಿದ್ದಾನೆ.
ಯಮನೂರಪ್ಪ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್‌ಗೆ ಹೋಗಿದ್ದ ಈ ವೇಳೆ ಸೆಲೂನ್ ಮಾಲೀಕ ಮುದುಕಪ್ಪ ಅಂದಪ್ಪ ಹಡಪದ ಅವರು, ‘ನೀನು ದಲಿತ. ಹಾಗಾಗಿ, ನಾವು ಕ್ಷೌರ ಮಾಡುವುದಿಲ್ಲ’ ಎಂದು ಹೇಳಿದ್ದಾನೆ. ಇದನ್ನ ಯುವಕ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಮುದುಕಪ್ಪ ಹಡಪದ ಕೈಯ್ಯಲ್ಲಿದ್ದ ಕತ್ತರಿಯಿಂದ ಯಮನೂರಪ್ಪ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.
ಮತ್ತೊಂದು ಪ್ರಕರಣದಲ್ಲಿ, ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಯುವಕನ ಮೇಲೆ ದೂರು ನೀಡಿದ ಕಾರಣಕ್ಕಾಗಿ, ಇಡೀ ಗ್ರಾಮದ ಪರಿಶಿಷ್ಟ ಸಮುದಾಯದ ಜನರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮೂರ್ನಾಲ್ಕು ದಿನಗಳ ಹಿಂದಷ್ಟೇ ಬೆಳಕಿಗೆ ಬಂದಿತ್ತು.
“14 ವರ್ಷದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಧಾನಕ್ಕೆ ಒಪ್ಪದ ಕುಟುಂಬ ಮತ್ತು ದಲಿತ ಕುಟುಂಬಗಳಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ. ತಮ್ಮ ಮಾತಿನಂತೆ ಸಂಧಾನಕ್ಕೆ ಒಪ್ಪದೆ ದೂರು ನೀಡಿದರು ಎಂಬ ಕಾರಣಕ್ಕೆ ದಲಿತ ಕುಟುಂಬವನ್ನು ಬಹಿಷ್ಕರಿಸಿರುವ ಸವರ್ಣೀಯರು, ಗ್ರಾಮದ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ ನೀಡದಂತೆ ಷರತ್ತು ವಿಧಿಸಿದ್ದಾರೆ. ಈ ಸಾಮಾಜಿಕ ಬಹಿಷ್ಕಾರದಿಂದಾಗಿ ಗ್ರಾಮದ ದಲಿತ ಸಮುದಾಯದ ಮಕ್ಕಳಿಗೆ ಅಗತ್ಯವಿರುವ ಪೆನ್ನು, ನೋಟುಬುಕ್ ಮತ್ತು ದೈನಂದಿನ ದಿನಸಿ ಸಾಮಗ್ರಿ ಸಿಗದೆ ಹಲವು ಕುಟುಂಬಗಳು ಪರದಾಡುತ್ತಿವೆ. ಗ್ರಾಮದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ದಲಿತರು, ಇದೀಗ ಸಾಮಾಜಿಕ ಬಹಿಷ್ಕಾರದಿಂದಾಗಿ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಇದೀಗ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕೆ ದಲಿತ ಯುವಕನಿಗೆ ಸವರ್ಣೀಯರು ಥಳಿಸಿದ್ದು, ತಿಂಗಳಲ್ಲಿ ಬೆಳಕಿಗೆ ಬಂದ ಮೂರನೇ ದಲಿತ ದೌರ್ಜನ್ಯ ಪ್ರಕರಣ ಇದಾಗಿದೆ.


