“ಬಹುಜನರೆಂದರೆ ಬಿಜೆಪಿಗೆ ಹಿಂದೂಗಳು; ನಮಗೆ ಬಹುಜನರೆಂದರೆ ಈ ದೇಶದ ದುಡಿಯುವ ಜನ. ಮಧ್ಯಮ ವರ್ಗದ ಹಿಂದೂಗಳನ್ನು ಕೇಂದ್ರ ಬಜೆಟ್ ಮೂಲಕ ಓಲೈಸಲಾಗುತ್ತಿದೆ, ಮಾಧ್ಯಮಗಳಲ್ಲೂ ಅದೇ ರೀತಿ ಬಿಂಬಿಸಲಾಗುತ್ತಿದೆ” ಎಂದು ಕಾರ್ಮಿಕ ಮುಖಂಡರಾದ ಮೀನಾಕ್ಷಿ ಸುದರಂ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿರುವ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಹಾಗೂ ರಾಜ್ಯದ ಬಜೆಟ್ ಎರಡೂ ನಮ್ಮ ಮುಂದಿವೆ; ದೇಶದ ಶ್ರಮಜೀವಿಗಳು ಹಾಗೂ ದುಡಿಯುವ ಜನರ ಪರವಾಗಿ ಒಕ್ಕೂಟ ಸರ್ಕಾರ-ಕರ್ನಾಟಕ ಬಜೆಟ್‌ನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಹಲವು ವರ್ಷಗಳಿಂದ ಮಾತನಾಡುತ್ತಿದ್ದೇವೆ. ಬಜೆಟ್ ಪೂರ್ವ ಸಭೆಗಳಲ್ಲಿ ನಮ್ಮ ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದ್ದೇವೆ. ದೇಶದ ಎಲ್ಲರನ್ನೂ ಒಳಗೊಂಡ ಬಜೆಟ್ ಹಾಗೂ ನೀತಿಗಳು ಬಿಂಬಿತ ಆಗಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಆಗುತ್ತಿಲ್ಲ” ಎಂದರು.
“ಕೇಂದ್ರದ ಬಜೆಟ್ ದೇಶದ ದುಡಿಯುವ ಜನರಲ್ಲಿ ಬದಲಾವಣೆ ತರುತ್ತದೆ ಎಂಬ ನಿರೀಕ್ಷೆ ಏನೂ ಇರಲಿಲ್ಲ. ದೇಶದ ಬಹುಜನರಿಗೆ ಮಾನ್ಯತೆ ನೀಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ, ಬಿಜೆಪಿ ಪಾಲಿಗೆ ಬಹುಜನರೆಂದರೆ ಹಿಂದೂಗಳು, ನಮಗೆ ಬಹುಜನರೆಂದರೆ ಈ ದೇಶದ ದುಡಿಯುವ ಜನ. ಮಾಧ್ಯಮಗಳಲ್ಲಿ ಕೂಡ ಇದೇ ರೀತಿ ಬಿಂಬಿಸಲಾಗುತ್ತಿದೆ” ಎಂದು ಹೇಳಿದರು.
“ಮಧ್ಯಮ ವರ್ಗಕ್ಕೆ ಸ್ವರ್ಗವನ್ನೇ ತಂದಿದ್ದೇವೆ ಎಂದು ಮಾಧ್ಯಮಗಳಲ್ಲಿ ಕೇಂದ್ರ ಬಜೆಟ್ ಬಗ್ಗೆ ಚರ್ಚೆಯಾಗುತ್ತಿದೆ. ಎಲ್ಲ ವೇದಿಕೆಗಳಲ್ಲಿ ಈ ಬಗ್ಗೆ ವ್ಯವಸ್ಥಿತವಾಗಿ ಚರ್ಚೆ ಮಾಡುತ್ತಿದ್ದಾರೆ. ಆದರೆ, ಕೇಂದ್ರದ ಬಜೆಟ್‌ನಲ್ಲಿ, ನಮ್ಮ ದೇಶದ ದುಡಿಯುವ ಜನ ಹಾಗೂ ಸ್ವ-ಉದ್ಯೋಗಿಗಳ ವೇತನ ಮಟ್ಟ ಕೋವಿಡ್ ಪೂರ್ವದಲ್ಲಿ ಇದ್ದಷ್ಟೇ 2025 ರಲ್ಲೂ ಇದೆ ಎಂದು ಹೇಳುತ್ತದೆ. ಆದರೆ, ಕಳೆದ 15 ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಆದಾಯ ಹೆಚ್ಚಾಗಿದೆ.. ಅದಕ್ಕೆ ಕಾರಣ ಏನಿರಬಹುದು? ಅವರ ‘ವಿಕಸಿತ ಭಾರತ’ದಲ್ಲಿ ಯಾರು ಅಭಿವೃದ್ಧಿ ಆಗಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ” ಎಂದು ಕೇಂದ್ರ ಬಜೆಟ್ ಕುರಿತು ವಿಶ್ಲೇಷಿಸಿದರು.
“ಸಾರ್ವಜನಿಕ ನಿಧಿಯ ಮೂಲಕ ಖಾಸಗಿ ಕಂಪನಿಗಳ ಲಾಭ ಖಾತ್ರಿಪಡಿಸುವುದಕ್ಕೆ ಸಾಕಷ್ಟು ಕಾರ್ಯಕ್ರಮ ಜಾರಿ ಮಾಡಿ, ಅದಕ್ಕೆ ಬೇರೆಬೇರೆ ಹೆಸರು ಇಟ್ಟಿದ್ದಾರೆ. ಅದರಲ್ಲಿ ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರಿಗೆ ಉಚಿತವಾಗಿ ನೀಡುವುದು ಸೇರಿದೆ. ಕೇವಲ ಸ್ಥಿರ ಆಸ್ತಿಗಳು ಮಾತ್ರವಲ್ಲ, ಅದರಲ್ಲಿ ನಾವು ಕೊಡುವ ತೆರಿಗೆ ಹಣವೂ ಸೇರಿದೆ. ನಾವು ದುಡಿಯುವ ಒಂದು ರೂಪಾಯಿಯಲ್ಲಿ ಕನಿಷ್ಠ 20 ಪೈಸೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದೇವೆ. ಪಬ್ಲಿಕ್ ಫಂಡ್ಸ್ ಫಾರ್ ಪ್ರೈವೇಟ್ (ಪಿಪಿಪಿ) ಮತ್ತು ಹಣಕಾಸಿನ ಶಿಸ್ತು ಹೆಸರಿನಲ್ಲಿ ಇದನ್ನೆಲ್ಲಾ ಮಾಡಲಾಗುತ್ತಿದೆ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಶೇ.3ಕ್ಕೆ ಇಳಿದರೆ ಮಾತ್ರ ಶಿಸ್ತುಬದ್ಧ ಆರ್ಥಿಕತೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದು, ಕಳೆದ ಬಜೆಟ್‌ನಲ್ಲಿ ನಮ್ಮ ಆದಾಯಕ್ಕಿಂತ ಖರ್ಚಿನ ಪ್ರಮಾಣ ಶೇ.5ರಷ್ಟಿತ್ತು. ಅದನ್ನು ಈ ಬಜೆಟ್‌ನಲ್ಲಿ ಸರಿದೂಗಿಸಲಾಗಿದೆ ಎಂದು ಕೇಂದ್ರ ಹೇಳಿದೆ” ಎಂದರು.
“ಕಾರ್ಪೊರೇಟ್ ಕಂಪನಿಗಳು ಕೇಂದ್ರಕ್ಕೆ ಪಾವತಿಸುತ್ತಿರುವ ತೆರಿಗೆ ಕೇವಲ ಶೇ.10 ಮಾತ್ರ. ಆದರೆ, ಜನರ ಪರೋಕ್ಷ ತೆರಿಗೆ ಮೂಲಕ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿದೆ. ಬಡವರಮೇಲೆ ತೆರಿಗೆ ಹೊರೆ ಹೆಚ್ಚಿಸಿ, ಶ್ರೀಮಮಂತರಿಗೆ ವಿನಾಯಿತಿ ನೀಡಲಾಗುತ್ತಿದೆ” ಎಂದು ಹೇಳಿದರು.
“ರಾಷ್ಟ್ರದ ಅಭಿವೃದ್ಧಿ ಉದ್ದೇಶದಿಂದ ಹಲವು ಹೊಸ ಸ್ವರೂಪದ ನಿಧಿಗಳನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರದ ಹಣ ಹೂಡಿ, ಅದರ ಮೂಲಕ ದೇಶದ ಅಭಿವೃದ್ಧಿ ಮಾಡುವುದು ಇದರ ಉದ್ದೇಶ. ಅದರಲ್ಲಿ ನಾಗರೀಕರ ಸವಾಲುಗಳ ನಿಧಿ, ಮೂಲಭೂತ ಸೌಕರ್ಯ ನಿಧಿ ಸೇರಿದಂತೆ ಹಲವು ನಿಧಿಗಳಿಗೆ ಕೇಂದ್ರ ಸರ್ಕಾರ ಹಣ ನೀಡುತ್ತದೆ. ಈ ಫಂಡ್ ನಿರ್ವಹಣೆ ಮಾಡುವುದು ‘ಪ್ರೈವೇಟ್ ಪಬ್ಲಿಕ್’ ಸಹಯೋಗದಲ್ಲಿ. ಅಂದರೆ, ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದು ಇದರ ಉದ್ದೇಶ” ಎಂದು ವಿವರಿಸಿದರು.
“ಕೇಂದ್ರದ ಬಜೆಟ್‌ನಲ್ಲಿ ಉತ್ಪಾದಕರಿಗೆ ಕೊಡುವ ಪ್ರೋತ್ಸಾಹ ವಾರ್ಷಿಕ ಧನ ₹2 ಲಕ್ಷ ಕೋಟಿ. ಆದರೆ, ಅದನ್ನು ಕಾರ್ಮಿಕರಿಗೆ ಕೊಡುವುದಿಲ್ಲ, ಹೊಸದಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯೋಗದಾತರಿಗೆ ನೀಡಲಾಗುತ್ತದೆ. ಸರ್ಕಾರ ನೇರವಾಗಿ ಬಡವರಿಗೆ ಹಣ ಕೊಡುವುದಕ್ಕೆ ತಯಾರಿಲ್ಲ. ಮನರೇಗಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಹಣ ಹೆಚ್ಚಿಸಿಲ್ಲ. ಬಂಡವಾಳ ಹೂಡಿದವರಿಗೆ ರಿಯಾಯಿತಿ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ₹76 ಸಾವಿರ ಕೋಟಿ ನಿಗದಿ ಮಾಡಿದೆ” ” ಎಂದರು.

ಕೇಂದ್ರವನ್ನು ಅನುಸರಿಸಿರುವ ಸಿದ್ದರಾಮಯ್ಯ
“ಕೇಂದ್ರದ ಬಜೆಟ್ ಅನ್ನೇ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲೂ ಅನುಕರಿಸಿದ್ದಾರೆ. ಇಡೀ ಬಜೆಟ್‌ನಲ್ಲಿ ಕಾರ್ಮಿಕರಿಗಾಗಿ ಕೊಟ್ಟಿರುವುದು, ಸೆಸ್ ಮೂಲಕ ಸಂಗ್ರಹವಾಗುವ ಹಣದ ಯೋಜನೆಗಳು ಮಾತ್ರ. ಇಡೀ ಬಜೆಟ್‌ನಲ್ಲಿ ಕಾರ್ಮಿಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ” ಎಂದು ಹೇಳಿದರು.
“ಕರ್ನಾಟಕದ ಆರ್ಥಿಕ ಸಮೀಕ್ಷೆ ಪ್ರಕಾರ, ನಮ್ಮ ರಾಜ್ಯದ ಸರಾಸರಿ ತಲಾ ಆದಾಯ (ಜಿಡಿಪಿ) ₹3.32 ಲಕ್ಷ ಎಂದು ಹೇಳಿದೆ. ಕೇಂದ್ರ ಸರ್ಕಾರದ ಜಿಡಿಪಿ ₹1.85 ಸಾವಿರ ಇದೆ. ದೇಶಕ್ಕಿಂತ ನಾವು ಹೆಚ್ಚಿನ ತಲಾ ಆದಾಯ ಹೊಂದಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತದೆ. ಆದರೆ, ಎಲ್ಲರೂ ಇಷ್ಟೇ ಆದಾಯ ಗಳಿಸುತ್ತಿದ್ದಾರೆ ಎಂದು ನಂಬಲು ಸಾಧ್ಯವಿಲ್ಲ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ವಾಸಿಸುವವರ ಆದಾಯ ಅಂದಾಜು ₹7 ಲಕ್ಷ ಇದ್ದರೆ, ಕಲಬುರಗಿಯಲ್ಲಿ ₹1.6 ಲಕ್ಷ ಇದೆ. ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಯಾವುದೇ ತಲಾ ಆದಾಯ ₹3 ಲಕ್ಷ ದಾಟುತ್ತಿಲ್ಲ. ಎಲ್ಲಿ ಆದಾಯ ಹೆಚ್ಚಿದೆಯೋ ಅಲ್ಲಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಲಾಗಿದೆ. ಆದರೆ, ಅಭಿವೃದ್ಧಿಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಪ್ರೋತ್ಸಾಹಕ ಯೋಜನೆಗಳು ಇಲ್ಲ” ಎಂದು ಆರೋಪಿಸಿದರು.
“ಅಸಂಘಟಿತ ಕಾರ್ಮಿಕರನ್ನು ಲೆಕ್ಕ ಮಾಡುವುದಕ್ಕೆ ಇ-ಶ್ರಮ್ ಪೋರ್ಟಲ್‌ನಲ್ಲಿ ನೊಂದಣಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ರಾಜ್ಯದಲ್ಲಿ 1.89 ಲಕ್ಷ ಜನ ನೋದದಣಿ ಆಗಿದ್ದಾರೆ. ಇವರಿಗಾಗಿ ಸರ್ಕಾರ ಬಜೆಟ್‌ನಲ್ಲಿ ಮಾಡಿವುದಾದರೂ ಏನು? ಆರು ಕೋಟಿ ಜನರ ಒಂದಲ್ಲ ಒಂದು ಕುಟುಂಬದಲ್ಲಿ ಶ್ರಮಜೀವಿಗಳು ಇದ್ದಾರೆ. ಅವರಿಲ್ಲದೆ ರಾಜ್ಯ ಸರ್ಕಾರ ನಡೆಯುವುದಿಲ್ಲ” ಎಂದರು.
“ಕೇಂದ್ರ ಸರ್ಕಾರದ ಜಿಎಸ್‌ಟಿ ಸಂಗ್ರಹಕ್ಕೆ ಕರ್ನಾಟಕದ ಜನ ಹೆಚ್ಚಿನ ಕೊಡುಗೆ ನೀಡುತ್ತಿದ್ದೇವೆ. ಆದರೆ, ನಮಗೆ ನ್ಯಾಯಯುತ ಪಾಲು ಸಿಗುತ್ತಿಲ್ಲ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾಗಿರುವುದನ್ನು ರಾಜ್ಯ ಸರ್ಕಾರ ಪಟ್ಟಿ ಮಾಡಿದೆ. ತೆರಿಗೆ ಜೊತೆಗೆ ಕೇಂದ್ರ ಸರ್ಕಾರ ಸೆಸ್ ಹಾಕಿದ್ದು, ಅದರಲ್ಲಿ ರಾಜ್ಯ ಸರ್ಕಾರಕ್ಕೆ ಪಾಲಿಲ್ಲ. ಕರ್ನಾಟಕ ಸರ್ಕಾರ ಯಾವ ತರ್ಕದಲ್ಲಿ ಪಾಲು ಕೇಳುತ್ತಿದೆಯೋ, ಅದೇ ತರ್ಕದಲ್ಲಿ ನಾವು ಕಾರ್ಮಿಕರ ಪಾಲು ಕೇಳುತ್ತಿದ್ದೇವೆ. ರಾಜ್ಯದಲ್ಲಿ ದುಡಿಯುತ್ತಿರುವ ರೈತರು ಹಾಗೂ ಕಾರ್ಮಿಕರ ಒಂದು ರೂಪಾಯಿ ಕೂಲಿಯ ಉತ್ಪಾದನೆಯ ಮೌಲ್ಯ ಏಳು ರೂಪಾಯಿ ಇದೆ. ಏಳು ರೂಪಾಯಿ ಮೌಲ್ಯ ಉತ್ಪಾದನೆ ಮಾಡುವ ಕಾರ್ಮಿಕರಿಗೆ ಒಂದು ರೂಪಾಯಿ ಕೊಡುವುದು ಎಷ್ಟು ಸರಿ? ಕೇಂದ್ರದ ತೆರಿಗೆ ಪಾಲಿನ ತರ್ಕವನ್ನೇ ಇಲ್ಲೂ ಪಾಲಿಸಬೇಕು. ನಿಮ್ಮ ತೆರಿಗೆ ತರ್ಕವನ್ನು ನಾವು ಬೆಂಬಲಿಸುತ್ತೇವೆ; ನಮ್ಮ ತರ್ಕವನ್ನೂ ನೀವೂ ಬೆಂಬಲಿಸಬೇಕು” ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಎಐಸಿಸಿಯುಸಿ ರಾಜ್ಯಾಧ್ಯಕ್ಷರಾದ ಪಿಪಿ ಅಪ್ಪಣ್ಣ, ಐಎನ್‌ಟಿಯುಸಿ ರಾಜ್ಯ ಕಾರ್ಯದರ್ಶಿ ರಾಜ್ಯ ಕಾರ್ಯದರ್ಶಿ ಶಾಮಣ್ಣ ರೆಡ್ಡಿ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆವಿ ಭಟ್, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಸತ್ಯಾನಂದ, ಎಐಸಿಸಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಇದ್ದರು.
ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ: ಟಿ.ಆರ್.ಚಂದ್ರಶೇಖರ್


