ಮುಂಬೈ: ಮಾದಕ ವಸ್ತು ಪ್ರಕರಣದಲ್ಲಿ ಬಂಧಿತರಾಗಿರುವ ಗರ್ಭಿಣಿ ಮಹಿಳಾ ಖೈದಿಗೆ ಸೆರೆಮನೆಯ ವಾತಾವರಣವು ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಉಲ್ಲೇಖಿಸಿ ಮುಂಬೈ ಹೈಕೋರ್ಟ್‌ನ ನಾಗಪುರ ಪೀಠವು ಜಾಮೀನು ಮಂಜೂರು ಮಾಡಿದೆ.
ಏಕ ಸದಸ್ಯ ಪೀಠದ ಉರ್ಮಿಳಾ ಜೋಷಿ ಪಾಲ್ಕೆಯವರು ಈ ಆದೇಶವನ್ನು ನೀಡಿದ್ದು, ಮಹಿಳಾ ಖೈದಿ ಸುರಭಿ ಸೋನಿಯನ್ನು 6 ತಿಂಗಳ ಕಾಲ ತಾತ್ಕಾಲಿಕ ಜಾಮೀನಿನ ಬಿಡುಗಡೆಗೆ ಆದೇಶಿಸಿದ್ದಾರೆ. ಮಹಿಳೆಯು 2024ರ ಎಪ್ರಿಲ್ ನಲ್ಲಿ ಗೊಂಡಿಯಾ ರೈಲ್ವೆ ಭದ್ರತಾ ಪಡೆಯು ರೈಲುವೊಂದರ ಮೇಲೆ ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಸೋನಿಯನ್ನು ಒಳಗೊಂಡಂತೆ ಐವರನ್ನು ಬಂಧಿಸಿದ್ದರು. ಎನ್‌ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.
ಬಂಧಿತರಿಂದ ಆಗ ಮಾದಕ ವಸ್ತು, 33 ಕಿ.ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಸೋನಿಯಾ ಬ್ಯಾಗಿನಲ್ಲಿ ಸುಮಾರು 7 ಕಿ.ಗ್ರಾಂ. ನಷ್ಟು ಮಾದಕ ವಸ್ತು ಪತ್ತೆಯಾಗಿತ್ತು. ಬಂಧನದ ಸಮಯದಲ್ಲಿ ಸೋನಿಯು 2 ತಿಂಗಳ ಗರ್ಭಿಣಿಯಾಗಿದ್ದರು. ಗರ್ಭಿಣಿಯಾಗಿರುವ ಕಾರಣ ಸೆರೆಮನೆಯಿಂದ ಹೊರಗಡೆ ಮಾನವೀಯ ನೆಲೆಯಲ್ಲಿ ಹೆರಿಗೆಗಾಗಿ ಜಾಮೀನು ನೀಡಬೇಕೆಂದು ಹೈಕೋರ್ಟ್ ಗೆ ಅವರು ಅರ್ಜಿ ಸಲ್ಲಿದ್ದರು.
ವಿಚಾರಣಾ ನ್ಯಾಯಾಲಯವು ಸೋನಿಯಾ ಅರ್ಜಿಯನ್ನು ಮೊದಲು ತಿರಸ್ಕರಿಸಿತ್ತು ಮತ್ತು ಖೈದಿಯ ಹೆರಿಗೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಹೇಳಿತ್ತು.
ಬಂಧನದಲ್ಲಿರುವಾಗಲೂ ಹೆರಿಗೆಗಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಿದೆ ಎಂದು ಪೀಠವು ಹೇಳಿತ್ತು. ಆದಾಗ್ಯೂ, ಹೆರಿಗೆ ಸಂದರ್ಭದಲ್ಲಿ ಜೈಲಿನ ವಾತಾವರಣವು ಅರ್ಜಿದಾರೆಯಾಗಿರುವ ಸೋನಿಯ ಮೇಲೆ ಮಾತ್ರವಲ್ಲದೇ ಮಗುವಿನ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಹೈಕೋರ್ಟ್ ಪೀಠವು ಹೇಳಿದೆ.
ಖೈದಿಗಳು ಒಳಗೊಂಡಂತೆ ಪರಿಸ್ಥಿತಿಯು ಬೇಡುವ ಘನತೆಗೆ ಯಾವುದೇ ವ್ಯಕ್ತಿಯು ಅರ್ಹರಾಗಿದ್ದಾರೆ. ಜೈಲಿನಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿ ಸೇರಿದಂತೆ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದನ್ನು ಮಾನವೀಯತೆಯಲ್ಲಿ ಪರಿಗಣಿಸಬೇಕು ಎಂದು ಪೀಠವು ತಿಳಿಸಿದೆ.
ಮೇಲ್ನೋಟಕ್ಕೆ ಆರೋಪಿ ಸೋನಿ ವಿರುದ್ಧ ಅಪರಾಧದ ಕುರಿತು ಸೂಕ್ತ ಸಾಕ್ಷ್ಯಗಳು ದೊರಕಿವೆ. ಈಗಾಗಲೇ ತನಿಖೆಯು ಪೂರ್ಣಗೊಂಡಿದ್ದು, ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಈ ತೀರ್ಪಿನಿಂದ ತನಿಖೆ ಮೇಲೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲವೆಂದು ನ್ಯಾಯಾಲಯ ಹೇಳಿದೆ.
ಇದನ್ನು ಓದಿ…ಉತ್ತರಕಾಶಿ ಮಸೀದಿ ವಿವಾದ : ಹಿಂದುತ್ವ ಗುಂಪಿನ ‘ಮಹಾಪಂಚಾಯತ್’ಗೆ ಅನುಮತಿ ನಿರಾಕರಣೆ


