‘ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ’ ಎಂಬುವುದು ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ಪ್ರಕರಣಕ್ಕೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಎನ್ನಲಾದ ಪ್ರೇಮ್ ಪ್ರಕಾಶ್ ಅವರಿಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಮೇಲಿನಂತೆ ತಿಳಿಸಿದೆ.
ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 45 ಜಾಮೀನು ನೀಡಲು ಎರಡು ಷರತ್ತುಗಳನ್ನು ವಿಧಿಸುತ್ತದೆ. ಆದರೆ, ಜಾಮೀನು ನಿಯಮ ಎಂಬ ಮೂಲಭೂತ ತತ್ವವನ್ನು ಅದು ಬದಲಾಯಿಸುವುದಿಲ್ಲ ಎಂದು ಪೀಠವು ಹೇಳಿದೆ.
ಹಣ ಅಕ್ರಮ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಆಗಸ್ಟ 9ರಂದು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ನೀಡಲಾದ ಜಾಮೀನಿನ ವಿಚಾರ ಉಲ್ಲೇಖಿಸಿದ ನ್ಯಾಯಪೀಠ, ‘ವ್ಯಕ್ತಿಯ ಸ್ವಾತಂತ್ರ್ಯ ಒಂದು ನಿಯಮ’ ಎಂದಿದೆ.
ಪೀಠವು ಅರ್ಜಿದಾರರ ದೀರ್ಘಾವಧಿಯ ಸೆರೆವಾಸ ಮತ್ತು ಹೆಚ್ಚಿನ ಸಂಖ್ಯೆಯ ಸಾಕ್ಷಿಗಳಿಂದಾಗಿ ವಿಚಾರಣೆಯಲ್ಲಿ ವಿಳಂಬವನ್ನು ಪರಿಗಣಿಸಿದೆ. ಅರ್ಜಿದಾರರಿಗೆ ಜಾಮೀನು ನಿರಾಕರಿಸಿದ ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದೆ.
ಇದನ್ನೂ ಓದಿ : ಮಲಯಾಳಂ ನಟ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು


