ಉತ್ತರಾಖಂಡದ ಹರಿದ್ವಾರ ಬಳಿಯ ಜಮಾಲ್ಪುರ್ ಕಲಾನ್‌ನಲ್ಲಿ ಮಸೀದಿ ನಿರ್ಮಾಣವು ಅಗತ್ಯ ಅನುಮತಿಗಳಿಲ್ಲದೆ ಕೆಲಸ ನಡೆಯುತ್ತಿದೆ ಎಂದು ಹಿಂದೂ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ಜನವರಿ 23ರಂದು ನಡೆಯುವ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಆಡಳಿತವು ಕ್ಷೇತ್ರದಲ್ಲಿ ಹಿಡಿತಸಾಧಿಸಲು ಈ ಅಕ್ರಮ ನಿರ್ಮಾಣಕ್ಕೆ ಕೈಹಾಕಿದೆ ಎಂದು ಈ ಹಿಂದೂ ಗುಂಪುಗಳು ಆರೋಪಿಸಿವೆ.
ಬಜರಂಗದಳ ನಾಯಕ ಅಮಿತ್ ಮುಲ್ತಾನಿಯನ್ ಈ ನಿಟ್ಟಿನಲ್ಲಿ ಹರಿದ್ವಾರ-ರೂರ್ಕಿ ಅಭಿವೃದ್ಧಿ ಪ್ರಾಧಿಕಾರಕ್ಕೆ (HRDA) ಔಪಚಾರಿಕವಾಗಿ ದೂರು ನೀಡಿದ್ದಾರೆ. ತನಿಖೆಯ ನಂತರ ನಿರ್ಮಾಣವು ಅನಧಿಕೃತವಾಗಿದೆ ಎಂದು ಕಂಡುಬಂದಿದೆ ಎಂದು HRDA ಉಪಾಧ್ಯಕ್ಷ ಅಂಶುಲ್ ಸಿಂಗ್ ಗುರುವಾರ ದೃಢಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಕ್ರಮ ನಿರ್ಮಾಣದ ಕುರಿತು ಬಜರಂಗದಳದಿಂದ ದೂರು ಬಂದಿದೆ. ನಮ್ಮ ಎಂಜಿನಿಯರ್‌ಗಳು ಸ್ಥಳವನ್ನು ತನಿಖೆ ಮಾಡಿ ಬಜರಂಗದಳದ ದೂರು ಸತ್ಯವಿದೆ ಎಂದು ಕಂಡುಕೊಂಡಿದ್ದಾರೆ. ಇದರ ನಂತರ ಮಸೀದಿ ನಿರ್ಮಾಣವನ್ನು ನಿಲುಗಡೆಗೊಳಿಸಲಾಗಿದೆ ಮತ್ತು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಈ ರೀತಿ ಅಕ್ರಮ ನಿರ್ಮಾಣವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಹಿಂದೂ ಗುಂಪುಗಳು ತಿಳಿಸಿವೆ. ಏಕೆಂದರೆ ಯಾವುದೇ ಧಾರ್ಮಿಕ ನಿರ್ಮಾಣ ಅಥವಾ ದುರಸ್ತಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಅಥವಾ ಸಂಬಂಧಿತ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಿರ್ಮಿಸುತ್ತಿರುವ ಮಸೀದಿಗೆ ಅಂತಹ ಅನುಮೋದನೆ ದೊರೆತಿಲ್ಲ ಮತ್ತು ಇದನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣವು ಈ ಹಿಂದೆ ಹರಿದ್ವಾರದಲ್ಲಿ ನಡೆದ ಇದೇ ರೀತಿಯ ಘಟನೆಗೆ ಹೋಲುತ್ತದೆ. ಅಲ್ಲಿ ಉಪಚುನಾವಣೆಯ ಸಮಯದಲ್ಲಿ ಜ್ವಾಲಾಪುರ ಪ್ರದೇಶದಲ್ಲಿ ಮಸೀದಿಯ ದ್ವಾರವನ್ನು ನಿರ್ಮಿಸಲಾಯಿತು. ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಈ ರಚನೆಯನ್ನು ಕೆಡವಲಾಯಿತು.
ಹರಿದ್ವಾರದಲ್ಲಿ ಮಸೀದಿಗಳು, ಸಮಾಧಿಗಳು ಮತ್ತು ಮದರಸಾಗಳ ನಿರ್ಮಾಣವನ್ನು ಸ್ಥಳೀಯ ಹಿಂದೂ ಸಂಘಟನೆಗಳು ಪ್ರಶ್ನಿಸುತ್ತಿವೆ. ಈ ಗುಂಪುಗಳು ಹರಿದ್ವಾರ ಕುಂಭ ಪ್ರದೇಶವನ್ನು “ಸನಾತನ ವಲಯ” ಎಂದು ಘೋಷಿಸಬೇಕೆಂದು ಒತ್ತಾಯಿಸಿವೆ. ಈ ಪ್ರದೇಶದ ಪ್ರಮುಖ ಧಾರ್ಮಿಕ ಸಂಸ್ಥೆಯಾದ ಶ್ರೀ ಗಂಗಾ ಸಭಾವು ಅತಿಕ್ರಮಣ ವಿರೋಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸುತ್ತಲೇ ಇದೆ.
ಉತ್ತರಾಖಂಡದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಚುನಾವಣಾ ಆಯೋಗವು ಜನವರಿ 23ರಂದು ಚುನಾವಣೆಯನ್ನು ನಿಗದಿಪಡಿಸಿದೆ.


