ಬೆಳಗಾವಿಯಲ್ಲಿ ಪದೇ ಪದೇ ಅಶಾಂತಿ ಸೃಷ್ಟಿಸುತ್ತಿರುವ, ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಪಾಲರನ್ನು ಭೇಟಿಯಾಗಿ ಒತ್ತಾಯಿಸಿದೆ.
ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ಮಾಧ್ಯಮ ಕಾರ್ಯದರ್ಶಿ ದಿನೇಶ್ ಕುಮಾರ್ ಎಸ್.ಸಿ, ಅರುಣ್ ಜಾವಗಲ್ ಮತ್ತಿತರನ್ನು ಒಳಗೊಂಡ ನಿಯೋಗ ರಾಜಭವನದಲ್ಲಿ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಮಹಾರಾಷ್ಟ್ರ ರಾಜಕಾರಣಿಗಳು, ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇಪದೇ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತ ಬಂದಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘಟನೆ/ರಾಜಕೀಯ ಪಕ್ಷವನ್ನು ಹುಟ್ಟುಹಾಕಿ, ಅದಕ್ಕೆ ಮಹಾರಾಷ್ಟ್ರದಿಂದ ಹಣಕಾಸಿನ ನೆರವು ಹರಿಸಿ ಬೆಳಗಾವಿಯ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟಿ ಹಲವು ದಶಕಗಳಿಂದ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ. ಎಂಇಎಸ್ ಜತೆಗೆ ಶಿವಸೇನೆ ಎಂಬ ರಾಜಕೀಯ ಪಕ್ಷದ ಘಟಕವೂ ಬೆಳಗಾವಿಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ ಎಂದು ಕರವೇ ದೂರಿದೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಬೇಡಿಕೆಯಲ್ಲಿ ಯಾವ ಅರ್ಥವೂ ಇಲ್ಲ. ಯಾಕೆಂದರೆ ಅದು ಕನ್ನಡಿಗರ ನೆಲ. ಬೆಳಗಾವಿಯ ಮೇಲೆ ಹಕ್ಕು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಮಾಡಿದ ಹುನ್ನಾರಗಳು ಒಂದೊಂದಲ್ಲ. ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಿ ಗಡಿವಿವಾದ ಇತ್ಯರ್ಥಕ್ಕೆ ಮೆಹರ್ ಚಂದ್ ಮಹಾಜನ್’ ಅವರ ನೇತೃತ್ವದ ಆಯೋಗವನ್ನು ಸ್ಥಾಪನೆ ಮಾಡಿಸಿದರು. ಅವರೇ ಬಯಸಿದ ಆಯೋಗ ತನ್ನ ಅಂತಿಮ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ತೀರ್ಪು ನೀಡಿತು. ಮಹಾರಾಷ್ಟ್ರದ ರಾಜಕಾರಣಿಗಳು ಕುತ್ಸಿತ ನೀತಿ ಅನುಸರಿಸಿ ಮಹಾಜನ್ ಆಯೋಗದ ವರದಿ ಒಪ್ಪುವುದಿಲ್ಲ, ಅದರ ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿದರು. ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆಸಿ ಕನ್ನಡಿಗರ ಮೇಲೆ ದಾಳಿ ನಡೆಸಲಾಯಿತು. ಹೀಗಾಗಿ ಮಹಾಜನ್ ಆಯೋಗದ ವರದಿ ಜಾರಿಯಾಗಲಿಲ್ಲ. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ಸೇರಬೇಕಾದ ಅಪ್ಪಟ ಕನ್ನಡದ ಜಿಲ್ಲೆ ಕಾಸರಗೋಡು ಕೈತಪ್ಪಿ, ಕೇರಳದಲ್ಲೇ ಉಳಿದುಕೊಂಡಿತು. ಮಾತ್ರವಲ್ಲದೆ ಮಹಾರಾಷ್ಟ್ರ ಸೇರಿರುವ ನೂರಾರು ಕನ್ನಡದ ಹಳ್ಳಿ, ಪಟ್ಟಣಗಳು ಕರ್ನಾಟಕಕ್ಕೆ ಸಿಗಲಿಲ್ಲ. ಇಷ್ಟಾದ ಮೇಲೂ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಯಿತು. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಈಗಾಗಲೇ ಒಕ್ಕೂಟ ಸರ್ಕಾರ ಸುಪ್ರೀಂಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ್ದು ತೀರ್ಪು ಬರುವುದು ಬಾಕಿ ಇದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಕಾನೂನಾತ್ಮಕವಾಗಿ ಬೆಳಗಾವಿಯನ್ನು ಪಡೆಯಲು ವಿಫಲರಾಗಿರುವ ಮಹಾರಾಷ್ಟ್ರ ರಾಜಕಾರಣಿಗಳು ವಾಮಮಾರ್ಗವನ್ನು ಆಯ್ಕೆ ಮಾಡಿಕೊಂಡು ಎಂಇಎಸ್, ಶಿವಸೇನೆ ಮೂಲಕ ಬೆಳಗಾವಿಯಲ್ಲಿ ಸದಾ ಸಂಘರ್ಷದ ವಾತಾವರಣ ನಿರ್ಮಿಸಿದ್ದಾರೆ. ಎಂಇಎಸ್ ಹೆಸರಿನಲ್ಲಿ ಸಾವಿರಾರು ಮಹಾರಾಷ್ಟ್ರೀಯನ್ನರು ಗಡಿದಾಟಿ ಬೆಳಗಾವಿಗೆ ಬಂದು ‘ಮರಾಠಿ ಮಹಾಮೇಳ’ಗಳನ್ನು ನಡೆಸುವುದು, ಕನ್ನಡಿಗರ ವಿರುದ್ಧ, ಕರ್ನಾಟಕ ಸರ್ಕಾರದ ವಿರುದ್ಧ ಮಾನಹಾನಕಾರಿ, ಪ್ರಚೋದನಾತ್ಮಕ ಭಾಷಣಗಳನ್ನು ಮಾಡುವುದು, ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವುದು ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ನೆಮ್ಮದಿ, ಶಾಂತಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ. ಬೆಳಗಾವಿಯಲ್ಲಿರುವ ಕನ್ನಡಿಗರು, ಮರಾಠಿಗರು ಮತ್ತು ಇನ್ನಿತರ ಭಾಷಾ ಸಮುದಾಯಗಳು ಎಂಇಎಸ್ ಮತ್ತು ಶಿವಸೇನೆಗಳನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಹೀಗಾಗಿ ಹತಾಶೆಗೆ ಒಳಗಾದ ಈ ಸಂಘಟನೆಗಳು ಹಿಂಸಾಚಾರಕ್ಕೆ ಇಳಿದಿವೆ ಎಂದು ಕರವೇ ತಿಳಿಸಿದೆ.
ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲೂ ಸಹ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಕಿತಾಪತಿ ನಡೆಸಿ, ಬೆಳಗಾವಿ ಬಂದ್ ನಡೆಸಿ ಹಿಂಸಾಚಾರ ನಡೆಸಿದವು. ತಾಯ್ನೆಲಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಲಾಯಿತು ಇಡೀ ಮನುಕುಲಕ್ಕೆ ಕಾಯಕಧರ್ಮವನ್ನು ನೀಡಿದ ಮಹಾಮಾನವತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿಯಲಾಯಿತು. ಬೆಳಗಾವಿ ಮತ್ತು ಮಹಾರಾಷ್ಟ್ರಗಳಲ್ಲಿ ಕನ್ನಡಿಗರ ಆತ್ಮಾಭಿಮಾನದ ಪ್ರತೀಕವಾಗಿರುವ ಕನ್ನಡ ಧ್ಚಜಕ್ಕೆ ಬೆಂಕಿ ಇಡಲಾಯಿತು.ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸೇರಿದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈಗಲೂ ಸಹ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕನ್ನಡಿಗರನ್ನು ಥಳಿಸಿ, ಹಲ್ಲೆ ನಡೆಸಲಾಗುತ್ತಿದೆ, ಕನ್ನಡಿಗರ ಆಸ್ತಿಪಾಸ್ತಿ, ವಾಹನಗಳನ್ನು ನಷ್ಟಗೊಳಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಗಳ ಗೂಂಡಾಗಳು. ಈ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದೆ ಎಂದಿದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನ; ಚರ್ಚೆಯಾಗಬೇಕಾದ್ದೇನು? ಆಗುತ್ತಿರುವುದೇನು?


