Homeಕರ್ನಾಟಕಬೆಳಗಾವಿ ಅಧಿವೇಶನ; ಚರ್ಚೆಯಾಗಬೇಕಾದ್ದೇನು? ಆಗುತ್ತಿರುವುದೇನು?

ಬೆಳಗಾವಿ ಅಧಿವೇಶನ; ಚರ್ಚೆಯಾಗಬೇಕಾದ್ದೇನು? ಆಗುತ್ತಿರುವುದೇನು?

- Advertisement -
- Advertisement -

ಜನರ ಕುಂದುಕೊರತೆಗಳು ಅಧಿವೇಶನಗಳಲ್ಲಿ ಚರ್ಚೆಯಾಗಿ ಅವರ ಆಶೋತ್ತರಗಳು ಅಲ್ಲಿ ಫಲಿತವಾಗಬೇಕು ಎಂಬುದು ಸಂವಿಧಾನದ ಆಶಯ. ಅದಕ್ಕಾಗಿಯೇ ವರ್ಷದಲ್ಲಿ ಇಂತಿಷ್ಟು ದಿನಗಳ ಒಳಗಾಗಿ ಇಂತಿಷ್ಟು ದಿನ ಅಧಿವೇಶನ ನಡೆಯಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಅಧಿವೇಶನದ ಹಲವಾರು ಕಲಾಪಗಳಲ್ಲಿ ಔಚಿತ್ಯಪೂರ್ಣ ಚರ್ಚೆಗಳು ನಡೆದಿವೆ. ವಿರೋಧ ಪಕ್ಷಗಳು ಆಳುವವರನ್ನು ತರಾಟೆಗೆ ತೆಗೆದುಕೊಂಡಿದ್ದಿದೆ. ಅದೇ ರೀತಿಯಲ್ಲಿ ಆಡಳಿತ ಪಕ್ಷಗಳು ಸ್ನೇಹಪೂರ್ವಕವಾಗಿ ವಿರೋಧ ಪಕ್ಷದ ಶಾಸಕರ ಮನಗೆದ್ದ ನೂರಾರು ಉದಾಹರಣೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಚರ್ಚೆ ಸಂವಾದಗಳು ವಿರಳವಾಗುತ್ತಿರುವುದು ದುರಂತ. ಕೇವಲ ಗದ್ದಲ, ಕಲಾಪ ಮುಂದೂಡಿದೆ, ಕೂಗಾಟ ಚೀರಾಟಗಳಲ್ಲಿ ಮಸೂದೆಗಳಿಗೆ ಅಂಗೀಕಾರ ನಡೆಯುತ್ತಿವೆ. 2019ರಲ್ಲಿ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಸಮಯದಲ್ಲಿ ಮಾತ್ರ ಒಂದು ಗಂಭೀರ ಚರ್ಚೆ ನಡೆದಿದ್ದನ್ನು ಉಲ್ಲೇಖಿಸಬಹುದು.

ಯಾವುದೇ ಮಸೂದೆಗಳು ಮಂಡನೆಯಾಗುವುದು ಆಧಿವೇಶನಗಳಲ್ಲಿ. ಆ ಸಂದರ್ಭದಲ್ಲಿ ಅವುಗಳ ಸಾಧಕಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು. ಅಲ್ಲದೇ ಜನರ ಸಮಸ್ಯೆಗಳು ಅಧಿವೇಶನದಲ್ಲಿ ಧ್ವನಿಸಬೇಕು. ಅದಕ್ಕಾಗಿ ಅಧಿವೇಶನದ ಸಮಯದಲ್ಲಿ ನೂರಾರು ಪ್ರತಿಭಟನೆಗಳು, ಮನವಿ ಸಲ್ಲಿಕೆಗಳು ನಡೆಯುವುದನ್ನು ನಾವು ಕಾಣುತ್ತೇವೆ. ಅಂದರೆ ಜನತೆ ಇಂದಿಗೂ ಆಳುವವರು ಮತ್ತು ವಿರೋಧ ಪಕ್ಷಗಳ ಮೇಲೆ ನಂಬಿಕೆಯಿಟ್ಟಿವೆ. ಆದರೆ ನಿಜವಾಗಿಯೂ ಅರ್ಥಪೂರ್ಣ ಚರ್ಚೆ ಸಾಧ್ಯವೇ? ಜನರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವವರೆ ಎಂದರೆ ಉತ್ತರ ನಿರಾಶದಾಯಕ ಅಂತಲೇ ಹೇಳಬೇಕು.

ಈ ಬಾರಿಯ ಚಳಿಗಾಲದ ಅಧಿವೇಶನ ಮೂರು ವರ್ಷಗಳ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಯುತ್ತಿದೆ. ಅಧಿಕಾರ ವಿಕೇಂದ್ರಿಕರಣದ ಬೇಡಿಕೆ, ಉತ್ತರ ಕರ್ನಾಟಕದ ಕಡೆಗಣನೆಯ ದಶಕಗಳ ಕಾಲದ ಆರೋಪದ ನಂತರ ಬೆಂಗಳೂರು ಮಾತ್ರವಲ್ಲದೇ ಬೆಳಗಾವಿಯಲ್ಲಿಯೂ ಅಧಿವೇಶನ ನಡೆಸುವ ಪರಿಪಾಠ ಆರಂಭವಾಗಿದೆ. ಆದರೆ ಪ್ರವಾಹ ಮತ್ತು ಕೊರೊನಾ ಕಾರಣದಿಂದಾಗಿ ಈ ಮೂರು ವರ್ಷ ಬೆಂಗಳೂರಿನ ವಿಧಾನಸೌಧದಲ್ಲಿಯೇ ಅಧಿವೇಶನ ನಡೆಸಲಾಯಿತು. ಇನ್ನು ಈಗ ಬರೀ 10 ದಿನಗಳು ಸಾಲುವುದಿಲ್ಲ, ಅವಧಿ ಹೆಚ್ಚು ಮಾಡಬೇಕು ಎಂಬ ವಿರೋಧ ಪಕ್ಷಗಳ ಕೂಗನ್ನು ಒಮೈಕ್ರಾನ್ ನೆಪ ಹೇಳಿ ಸರ್ಕಾರ ನಿರ್ಲಕ್ಷಿಸಿದೆ.

ಈ 10 ದಿನಗಳ ಅಧಿವೇಶನದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಹೈಲೈಟ್ ಮಾಡಲು, ಅಧಿವೇಶನದಲ್ಲಿ ಚರ್ಚೆಯಾಗುವಂತೆ ಮಾಡಲು 50ಕ್ಕೂ ಹೆಚ್ಚು ಪ್ರತಿಭಟನೆಗಳು ಬೆಳಗಾವಿಯಲ್ಲಿ ನಡೆಯುತ್ತಿವೆ. ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಜಾಡಮಾಲಿಗಳನ್ನು ಕಾಯಂ ಮಾಡಬೇಕು, ಕೆಲಸದಿಂದ ತೆಗೆಯಬಾರದು, ಮುಧೋಳ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು, ಗುತ್ತಿಗೆ ಪದ್ದತಿ ರದ್ದುಗೊಳಿಸಬೇಕು, ಲಿಂಗಾಯತ, ವೀರಶೈವರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬೇಕು, ಎಸಿಬಿ ರದ್ದುಪಡಿಸಿ ಲೋಕಾಯುಕ್ತಾ ಬಲಪಡಿಸಬೇಕು, ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಮರಾಠ ಸಮುದಾಯಕ್ಕೆ ಮೀಸಲಾತಿ, ಬೆಳೆ ಪರಿಹಾರ ಮತ್ತು ಬೆಂಬಲ ಬೆಲೆಯಡಿ ಖರೀದಿ ಕೇಂದ್ರ, ಅಗ್ರಿಗೋಲ್ಡ್ ಸಂಸ್ಥೆಯಿಂದಾಗಿ ಅನ್ಯಾಯದ ವಿರುದ್ಧ, ಮತಾಂತರ ನಿಷೇಧ ಮಸೂದೆ ಜಾರಿಮಾಡಬಾರದು, ಸದಾಶಿವ ವರದಿ ಜಾರಿಯಾಗಬೇಕು, ದೈಹಿಕ ಶಿಕ್ಷಕರ ನೇಮಕಾತಿಯಾಗಬೇಕು, ರೈತವಿರೋಧಿ ಕೃಷಿ ಕಾಯ್ದೆಗಳು ವಾಪಸ್ ಆಗಬೇಕು ಹೀಗೆ ಹಲವಾರು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಧರಣಿಗಳು ಆರಂಭವಾಗಿವೆ.

ಕೇಂದ್ರದ ಕೃಷಿ ಕಾನೂನುಗಳಿಗೆ ಅನುಗುಣವಾಗಿ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ, ಎಪಿಎಂಸಿ, ಭೂಸುಧಾರಣಾ ತಿದ್ದುಪಡಿಗಳು ಮತ್ತು ಜಾನುವಾರು ನಿಷೇಧ ಪ್ರತಿಬಂಧಕ ಕಾಯ್ದೆ ವಾಪಸ್ ಪಡೆಯಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ಡಿಸೆಂಬರ್ 12ರಂದು ರೈತ ಅಧಿವೇಶನ ನಡೆಸಿತ್ತು. ಇದೇ ವಿಷಯಕ್ಕೆ ಡಿಸೆಂಬರ್ 13ರಂದು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಬೃಹತ್ ಪ್ರತಿಭಟನೆ ಮತ್ತು ಸುವರ್ಣಸೌಧ ಮುತ್ತಿಗೆ ಹೋರಾಟ ನಡೆಸಿತು.

ಇನ್ನೊಂದೆಡೆ ಪ್ರವಾಹದಿಂದಾದ ಬೆಳೆಹಾನಿಗೆ ಸಮರ್ಪಕ ನಷ್ಟ ಪರಿಹಾರ ಕೊಡಬೇಕು, ಮತಾಂತರ ನಿಷೇಧ ಮಸೂದೆ ಜಾರಿಗೊಳಿಸಬಾರದು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಜೊತೆಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ 40% ಕಮಿಷನ್ ಮತ್ತು ಬಿಟ್‌ಕಾಯಿನ್ ಹಗರಣಗಳನ್ನಿಟ್ಟುಕೊಂಡು ಚರ್ಚೆಗೆ ಸಿದ್ಧಗೊಂಡಿವೆ.

11 ಮಸೂದೆಗಳ ಮಂಡನೆಗೆ ಸಿದ್ಧವಾಗಿರುವ ಸರ್ಕಾರ

ಕರ್ನಾಟಕ ಕೆಲವು ಇನಾಂ ಅಬಾಲಿಷನ್ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ

ತಲೆಮಾರುಗಳಿಂದ ’ಇನಾಂ ಭೂಮಿ’ ಉಳುಮೆ ಮಾಡುತ್ತಿದ್ದರೂ ರೈತರು ಮತ್ತು ಎಸ್ಸಿ-ಎಸ್ಟಿ ವರ್ಗದ ಜನರು ಭೂಮಿಯ ಒಡೆತನ ಪಡೆಯಲಾಗಿಲ್ಲ. ಈ ಹಿಂದೆ ಇನಾಂ ಭೂಮಿ ಮಂಜೂರಿಗೆ ಅರ್ಜಿ ಕರೆಯಲಾಗಿತ್ತು. ಆದರೆ, ಬಹುತೇಕ ರೈತರು ಹಾಗೂ ಉಳುಮೆದಾರರು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಮರು ಮಂಜೂರು ವಂಚಿತರು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ಈ ಮಸೂದೆ ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ

ಈ ವಿಧೇಯಕದಡಿ ಜಮೀನು ಗುರುತಿಸಲು ಅಗತ್ಯವಿರುವ ವಿವರಣೆ ಹಾಗೂ ಭೂ ಸಮೀಕ್ಷೆ ನಕ್ಷೆ ಅಥವಾ ಭೂಮಾಪನ ನಕ್ಷೆ (ನಿಗದಿತ ಅರ್ಜಿ ನಮೂನೆ-11ಇ)ಯನ್ನು ಇನ್ನು ಮುಂದೆ ಸರ್ಕಾರಿ ಭೂಮಾಪಕರು ನೀಡಲು ಅವಕಾಶ ಕಲ್ಪಿಸಲಾಗುವುದು. ಈವರೆಗೆ ಪರವಾನಿಗೆ ಪಡೆದ ಭೂಮಾಪಕರು ಮಾತ್ರ 11ಇ ಸ್ಕೆಚ್ ನೀಡಬಹುದಾಗಿತ್ತು. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮೂಲಕ ಸರ್ಕಾರಿ ಭೂಮಾಪಕರಿಗೂ ಅನುಮತಿ ನೀಡಲಾಗುವುದು ಎನ್ನಲಾಗಿದೆ.

ಕರ್ನಾಟಕ ಮಹಾನಗರಪಾಲಿಕೆಗಳು ಮತ್ತು ಇತರೆ ಕಾನೂನು (ಮೂರನೇ ತಿದ್ದುಪಡಿ) ವಿಧೇಯಕ-2021

ಈ ವಿಧೇಯಕದಡಿ ವಾಣಿಜ್ಯ ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯಿಂದ ಕೈಗಾರಿಕೆಗಳನ್ನು ಪ್ರತ್ಯೇಕಗೊಳಿಸಿ ನೂತನ ಆಸ್ತಿ ತೆರಿಗೆ ಮಿತಿ ವಿಧಿಸಲಾಗುತ್ತದೆ. ಪ್ರಸ್ತುತ ವಿಧಿಸುತ್ತಿರುವ ವಾಣಿಜ್ಯ ತೆರಿಗೆಯ ಶೇ.70 ತೆರಿಗೆಯನ್ನು ಕೈಗಾರಿಕೆಗೆ ಸೀಮಿತಗೊಳಿಸಲಾಗುತ್ತದೆ. ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ ಸಂಬಂಧ ಈಗಾಗಲೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬಿಬಿಎಂಪಿಯು ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರೂ.ಗಳ ಮರುಪಾವತಿ ಮಾಡುವುದರಿಂದ ಎದುರಾಗುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಈ ವಿಧೇಯಕ ರೂಪಿಸಲಾಗಿದೆ. ಬಿಬಿಎಂಪಿಯು ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಶುಲ್ಕ ಮತ್ತು ದಂಡಗಳನ್ನು ಮಾನ್ಯಗೊಳಿಸಲಿದೆ.

ಕೃಷಿ ವಿಜ್ಞಾನಗಳ ವಿವಿ (ತಿದ್ದುಪಡಿ) ವಿಧೇಯಕ-2021

ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯ ವಿಧೇಯಕ-2021ಕ್ಕೆ ತಿದ್ದುಪಡಿ ಮತ್ತು ನಿಬಂಧನೆ ಸೇರ್ಪಡೆಗಳು ಈ ಅಧಿವೇಶನದಲ್ಲಿ ಮಂಡನೆಯಾಗಲಿವೆ.

ಕೃಷಿ ಕಾಯ್ದೆಗಳು ರಾಜ್ಯದಲ್ಲಿಯೂ ವಾಪಸ್ ಆಗುವವೆ?

ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ರದ್ದುಗೊಳಿಸಲು ಮಸೂದೆ ಮಂಡನೆಯಾಗುವುದೇ ಎಂಬುದರ ಬಗ್ಗೆ ಸ್ಪಷ್ಟತೆಗಳಿಲ್ಲ. ಆದರೆ ಮೋದಿ ಸರ್ಕಾರವೇ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಲ್ಲದೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರದ್ದತಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಜೊತೆಗೆ ಎಂಎಸ್‌ಪಿ ಸೇರಿದಂತೆ ಇತರ ರೈತರ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡಿದೆ. ಇದೇ ಹಾದಿಯಲ್ಲಿ ರಾಜ್ಯ ಸರ್ಕಾರ ಮುಂದುವರೆಯುವುದೇ ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ.

ರೈತರ ಎಲ್ಲಾ ಬೇಡಿಕೆಗಳ ಬಗ್ಗೆ ಅವರೊಂದಿಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಇದ್ದರೆ ಕೃಷಿ ಕಾನೂನುಗಳು ಮತ್ತು ಇತರ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ರೈತರೊಂದಿಗೆ ಮಾತನಾಡಲು ಮುಕ್ತರಾಗಿದ್ದೇವೆ. ಅವರು ಏನನ್ನು ಬಯಸುತ್ತಾರೆ ಎಂಬುದನ್ನು ಆಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದ್ದಾರೆ.

ಈ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುತ್ತದೆಯೋ ಇಲ್ಲವೋ ಎಂಬ ಅನಿಶ್ಚಿತತೆಯ ನಡುವೆ, ವಿದ್ಯುತ್ ಮಸೂದೆ ಸಹ ಮಂಡನೆಯಾಗಬಹುದು ಎಂಬ ಆತಂಕದಲ್ಲಿ ರೈತರಿದ್ದಾರೆ.

ಈ ಮೇಲಿನ ಮಸೂದೆಗಳ ಕುರಿತು ಸಮರ್ಪಕ ಚರ್ಚೆಯಾಗುತ್ತಿಲ್ಲ. ಆದರೆ ಮತಾಂತರ ನಿಷೇಧ ಮಸೂದೆ 2021 ಮತ್ತು ಲವ್ ಜಿಹಾದ್ ತಡೆ ಮಸೂದೆ 2021ರ ಕುರಿತು ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ ಎನ್ನಬಹುದು.

ಮತಾಂತರ ನಿಷೇಧ ಮಸೂದೆ 2021

ಮತಾಂತರ ನಿಷೇಧ ಮಸೂದೆ ಇಲಾಖೆಯ ಪರಿಶೀಲನಾ ಸಮಿತಿಯಲ್ಲಿದ್ದು, ಅಲ್ಲಿ ಒಪ್ಪಿಗೆಯಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಬೇಕು. ನಂತರ ಸದನದಲ್ಲಿ ಮಂಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ ಹಲವು ಸಚಿವರು ಈ ಅಧಿವೇಶನದಲ್ಲಿ ಖಂಡಿತ ಈ ಮಸೂದೆ ಜಾರಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ದೇಶದ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಭಾರತದ ಸಂವಿಧಾನವು ಅನುಚ್ಛೇದ 25ರಲ್ಲಿ ಈ ದೇಶದ ಪ್ರತಿ ಪ್ರಜೆಗೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದು, ತಮ್ಮ ಧರ್ಮವನ್ನು ಸ್ವತಂತ್ರವಾಗಿ ಪ್ರಚಾರಮಾಡಬಹುದು ಎಂದೂ ಸಹ ಹೇಳಿದೆ. ಹಾಗಾಗಿ ಬಿಜೆಪಿಯವರು ಬಲವಂತದ ಮತಾಂತರ ನಿಷೇಧ ಕಾಯ್ದೆ ತರುತ್ತೇವೆ ಎಂದು ಹಲವರು ಅರೋಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಈ ಮಸೂದೆಯನ್ನು ಬಲವಾಗಿ ವಿರೋಧಿಸಿದೆ. ಕೆಲವೊಂದು ಜಾತಿ, ಧರ್ಮಗಳನ್ನು ಗುರಿಯಾಗಿಸಿಕೊಂಡು ಅವರಿಗೆ ತೊಂದರೆ ನೀಡುವ ರಾಜಕೀಯ ದುರುದ್ದೇಶವಿರುವುದರಿಂದ ಈ ಮಸೂದೆ
ಜಾರಿಯಾಗಬಾರದು ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಆರೋಪಿಸಿದ್ದಾರೆ.

ಮತ್ತೊಂದೆಡೆ ಜೆಡಿಎಸ್ ಪಕ್ಷ ಈ ಕುರಿತು ಪ್ರತಿಕ್ರಿಯಿಸಿಲ್ಲ. ಯಡಿಯೂರಪ್ಪ ಸೇರಿದಂತೆ ಇಡೀ ಬಿಜೆಪಿ ಕುರಿತು ಜೆಡಿಎಸ್‌ಗೆ ಸಹಾನುಭೂತಿ ಇರುವುದರಿಂದ ಒಂದು ವೇಳೆ ಈ ಮಸೂದೆ ಮಂಡನೆಯಾದಲ್ಲಿ ಜೆಡಿಎಸ್ ಬೆಂಬಲಿಸಬಹುದು ಎನ್ನಲಾಗುತ್ತಿದೆ.

ಲವ್ ಜಿಹಾದ್ ತಡೆ ಮಸೂದೆ 2021

ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ಅವರು 2020ರ ಫೆಬ್ರವರಿ 04 ರಂದು “ಲವ್ ಜಿಹಾದ್” ಎಂಬ ಪದವನ್ನು ಈಗಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಅಲ್ಲದೇ ಇದುವರೆಗೂ ’ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಲೋಕಸಭೆಗೆ ತಿಳಿಸಿದ್ದರು. ಅದಾದ ಒಂದು ವರ್ಷದಲ್ಲಿಯೇ ಉತ್ತರ ಪ್ರದೇಶ ಸೇರಿ ಹಲವಾರು ರಾಜ್ಯಗಳು ಲವ್ ಜಿಹಾದ್ ತಡೆ ಕಾಯ್ದೆ ತಂದಿವೆ. ಈಗ ಕರ್ನಾಟಕ ಸಹ ಆ ಮಸೂದೆ ಮಂಡಿಸುವ ತರಾತುರಿಯಲ್ಲಿದೆ.

ಕೊರೊನಾದಿಂದಾಗಿ ರಾಜ್ಯದ ಆರ್ಥಿಕತೆ ಮತ್ತು ಜನಜೀವನ ಕುಸಿದು ಬಿದ್ದಿದೆ. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ಕೇಂದ್ರದಿಂದ ಪರಿಹಾರ, ಜಿಎಸ್‌ಟಿ ಬಾಕಿ ಸಮರ್ಪಕವಾಗಿ ತಲುಪಿಲ್ಲ. ಈಗ ಮತ್ತೊಂದು ಕೋವಿಡ್ ಅಲೆಯ ಭೀತಿ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮತ್ತೆ ಭಾವನಾತ್ಮಕ ವಿಚಾರಗಳತ್ತಲೇ ಗಿರಕಿ ಹೊಡೆಯುತ್ತಿದೆ. ಅಂತಹ ವಿಷಯಗಳನ್ನೇ ಚರ್ಚೆಗೆ ತರಲಾಗುತ್ತಿದೆ. ಇಷ್ಟೆಲ್ಲಾ ಬಿಕ್ಕಟ್ಟುಗಳ ನಡುವೆ ಜನ ಸಮುದಾಯಗಳ ಚಿತ್ತವನ್ನು ವಿಚಲಿಸಲು ಸರ್ಕಾರ ಯಶಸ್ವಿಯಾಗುತ್ತದೆಯೇ? ಮಾಧ್ಯಮಗಳು ಜನ ಸಮುದಾಯಗಳ ಕಾಳಜಿಯನ್ನು ಹೈಲೈಟ್ ಮಾಡುತ್ತವೆಯೇ?


ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್‌ ವಿರೋಧ ಇರಲಿದೆ: ಡಿ.ಕೆ.ಶಿವಕುಮಾರ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...