ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಮೂರು ತೆಲುಗು ಸುದ್ದಿ ವಾಹಿನಿಗಳಾದ ‘ಎನ್‌ಟಿವಿ, ಟಿವಿ9 ಮತ್ತು ಸಾಕ್ಷಿ’ಯ ಪ್ರಸಾರ ಸ್ಥಗಿತಗೊಂಡಿತ್ತು. ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳನ್ನು ಗೆದ್ದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ರಾಜ್ಯದ ಪ್ರಮುಖ ಮೂರು ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಿದೆ ಎಂದು ಆರೋಪಿಸಲಾಗಿತ್ತು.
ಆದರೆ, ಟಿಡಿಪಿ ಚಾನೆಲ್ ನಿರ್ಬಂಧಿಸಿದ ಆರೋಪ ನಿರಾಕರಿಸಿತ್ತು. ಈ ಮೂರು ಚಾನೆಲ್‌ಗಳು ವೈಎಸ್‌ಆರ್ ಕಾಂಗ್ರೆಸ್ ಪರ ಇವೆ. ಹಾಗಾಗಿ, ಅವುಗಳ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಟೀಕಿಸಿತ್ತು.
‘ಸಾಕ್ಷಿ’ ಚಾನೆಲ್ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಒಡೆತನದಲ್ಲಿದೆ. ಪ್ರಸ್ತುತ ಜಗನ್ ಅವರ ಪತ್ನಿ ವೈಎಸ್ ಭಾರತಿ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಎನ್‌ಟಿವಿ ರಚನಾ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ (ಆರ್‌ಟಿಪಿಎಲ್) ಒಡೆತನದಲ್ಲಿದೆ. ಇದು ನರೇಂದ್ರ ಚೌಧರಿ ಅವರಿಗೆ ಸೇರಿದ್ದು. ಆಳಂದ ಮೀಡಿಯಾವು ಟಿವಿ9 ತೆಲುಗಿನಲ್ಲಿ ಬಹುಪಾಲು ಪಾಲನ್ನು ಹೊಂದಿರುವ ಮೈ ಹೋಮ್ ಗ್ರೂಪ್‌ನ ಅಧ್ಯಕ್ಷ ಜೂಪಲ್ಲಿ ರಾಮೇಶ್ವರ ರಾವ್ ಅವರ ಒಡೆತನದಲ್ಲಿದೆ. ಈ ಮೂವರೂ ವೈಎಸ್‌ಆರ್ ಕಾಂಗ್ರೆಸ್ ಪರವಿದ್ದಾರೆ ಎಂಬ ಆರೋಪ ಟಿಡಿಪಿ ವಲಯದಲ್ಲಿದೆ.
ಎನ್‌ಟಿವಿ, ಟಿವಿ9 ತೆಲುಗು, 10ಟಿವಿ ಮತ್ತು ಸಾಕ್ಷಿ ಚಾನೆಲ್‌ಗಳನ್ನು ಜೂನ್ 6 ರಿಂದ ನಿರ್ಬಂಧಿಸಲಾಗಿತ್ತು. ದೆಹಲಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದಿಂದಾಗಿ ಎಲ್ಲಾ ಚಾನೆಲ್‌ಗಳನ್ನು ಪುನಃ ಸ್ಥಾಪಿಸಲಾಗಿದೆ. ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.
ಜಗನ್ ಮೋಹನ್ ರೆಡ್ಡಿ ಒಡೆತನ ‘ಸಾಕ್ಷಿ ಚಾನೆಲ್’ ನೇರವಾಗಿ ಟಿಡಿಪಿ ವಿರುದ್ಧವಿದ್ದರೆ, ಟಿವಿ9 ತೆಲುಗು ಮತ್ತು ಎನ್‌ಟಿವಿಯಂತಹ ಚಾನೆಲ್‌ಗಳು ಇತರ ಪಕ್ಷಗಳಿಗಿಂತ ವೈಎಸ್‌ಆರ್‌ಸಿಪಿಗೆ ಹೆಚ್ಚಿನ ಪ್ರಚಾರ ನೀಡಿವೆ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ.
ಚಾನೆಲ್‌ಗಳ ಪ್ರಸಾರ ನಿರ್ಬಂಧಿಸಲಾಗಿದೆ ಎಂಬ ಆರೋಪ ಆಂಧ್ರಕ್ಕೆ ಹೊಸತಲ್ಲ. ತೆಲುಗು ರಾಜ್ಯಗಳಲ್ಲಿ ಸುದ್ದಿ ವಾಹಿನಿಗಳು ಪಕ್ಷದ ಆಧಾರದ ಮೇಲೆ ವಿಭಜನೆಗೊಂಡಿವೆ. ಎಬಿಎನ್ ಆಂಧ್ರ ಜ್ಯೋತಿ ಮತ್ತು ಈನಾಡು ಟಿಡಿಪಿ ಪರ ಒಲವು ಹೊಂದಿವೆ. ಜಗನ್ ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದಾಗ ಟಿವಿ5 ಮತ್ತು ಎಬಿಎನ್ ಆಂಧ್ರ ಜ್ಯೋತಿ ಎಂಬ ಎರಡು ಚಾನೆಲ್‌ಗಳು ಕೇಬಲ್‌ನಲ್ಲಿ ಪ್ರಸಾರವಾಗಿರಲಿಲ್ಲ. ಜಗನ್ ಸರ್ಕಾರ ಕೇಬಲ್ ಆಪರೇಟರ್‌ಗಳ ಮೇಲೆ ಒತ್ತಡ ಹೇರಿ ಚಾನೆಲ್ ಪ್ರಸಾರ ಸ್ಥಗಿತಗೊಳಿಸಿದೆ ಎಂದು ಚಾನೆಲ್‌ಗಳು ಆರೋಪಿಸಿತ್ತು. ಆದರೆ, ರಾಜ್ಯ ಸರ್ಕಾರ ಚಾನೆಲ್‌ಗಳು ಕ್ಯಾರಿಯರ್ ಶುಲ್ಕ ಪಾವತಿಸಿಲ್ಲ ಎಂದು ವಾದಿಸಿತ್ತು.
ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸುವುದು ಎರಡು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಚಾನೆಲ್‌ನ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಧಿಕಾರದಲ್ಲಿರುವ ಪಕ್ಷದ ಕುರಿತು ಸುದ್ದಿ ಮಾಡುವುದನ್ನು ತಡೆಯುತ್ತದೆ. ವಿಶೇಷವಾಗಿ ಜೂನ್ 12 ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಚಾನೆಲ್ ನಿರ್ಬಂಧಿಸಿರುವುದು ಚಾನೆಲ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ದೆಹಲಿ ಹೈಕೋರ್ಟ್ ಜೂನ್ 24 ರಂದು ಟಿವಿ9 ತೆಲುಗಿಗೆ ಮಧ್ಯಂತರ ಪರಿಹಾರ ನೀಡಿದೆ. ಚಾನೆಲ್ ಪ್ರಸಾರ ಅಡೆತಡೆಯಿಲ್ಲದೆ ಮುಂದುವರಿಯಲಿದೆ ಎಂದು ಆದೇಶಿಸಿದೆ. ನಂತರದ ದಿನಗಳಲ್ಲಿ ಎನ್‌ಟಿವಿ ಮತ್ತು ಸಾಕ್ಷಿ ಕೂಡ ಇದೇ ರೀತಿಯ ಅನುಕೂಲಕರ ಆದೇಶವನ್ನು ಪಡೆದಿವೆ. ಆದರೆ, ಇದು ತಾತ್ಕಾಲಿಕ ಪರಿಹಾರ ಮಾತ್ರ. ಜೂನ್‌ನಲ್ಲಿ ನ್ಯಾಯಮಂಡಳಿಯ ರಜೆ ಮುಗಿದ ನಂತರ ಚಾನೆಲ್‌ಗಳು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ)ಯ ಮೊರೆ ಹೋಗಬೇಕಿದೆ.
ತಮ್ಮ ಚಾನೆಲ್ ಅನ್ನು ನಿರ್ಬಂಧಿಸುವ ಮೊದಲು ತಮಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ ಎಂದು ಟಿವಿ9 ತೆಲುಗು ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದೆ. ಇದೇ ವಿಷಯವನ್ನು ವೈಎಸ್‌ಆರ್‌ಸಿಪಿ ರಾಜ್ಯಸಭಾ ಸದಸ್ಯ ನಿರಂಜನ್ ರೆಡ್ಡಿ ಅವರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಟ್ರಾಯ್‌ನ ನಿಯಮ 17 ರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರಂಜನ್ ರೆಡ್ಡಿ ಪತ್ರದಲ್ಲಿ ಕೋರಿದ್ದಾರೆ. ಯಾವುದೇ ಸೇವಾ ಪೂರೈಕೆದಾರರು ಕನಿಷ್ಠ ಮೂರು ವಾರಗಳ ಕಾಲ ಸೂಚನೆ ನೀಡದೆ ದೂರದರ್ಶನ ಚಾನೆಲ್‌ಗಳ ಸಿಗ್ನಲ್‌ಗಳ ಸಂಪರ್ಕ ಕಡಿತಗೊಳಿಸಬಾರದು ಎಂದು ನಿಯಮ 17 ಹೇಳುತ್ತದೆ. ಉದ್ದೇಶಿತ ಸಂಪರ್ಕ ಕಡಿತಕ್ಕೆ ಕಾರಣಗಳನ್ನು ನೀಡಬೇಕು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.
“ಜಾಹೀರಾತುಗಳಿಗೆ ಈಗಾಗಲೇ ಹಣ ಪಾವತಿಸಿರುವ ಜಾಹೀರಾತುದಾರರಿಂದ ಭಾರೀ ಒತ್ತಡ ಬರುತ್ತಿದೆ. ಚಾನೆಲ್ ಪ್ರಸಾರವಾಗದಿದ್ದರೆ ಜಾಹೀರಾತುದಾರರು ತಮ್ಮ ಪ್ರಚಾರವನ್ನು ಹಿಂತೆಗೆದುಕೊಳ್ಳಬಹುದು. ಇದು ಚಾನೆಲ್ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು” ಎಂದು ಸಾಕ್ಷಿ ಟಿವಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ಹೇಳಿದೆ.
ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಮತ್ತು ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ (ಐಎಫ್‌ಜೆ) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಮೂರು ಚಾನೆಲ್‌ಗಳ ಮೇಲಿನ ನಿರ್ಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಜಗನ್ ಸರ್ಕಾರ ಮತ್ತು ಮಾಧ್ಯಮ ತಿಕ್ಕಾಟ
ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿಯು ರಾಮೋಜಿ ರಾವ್ ಮಾಲೀಕತ್ವದ ಈನಾಡು, ಆಂಧ್ರ ಜ್ಯೋತಿ ಮತ್ತು ಟಿವಿ5 ಮೇಲೆ ಮಾನನಷ್ಟ ಮೊಕದ್ದಮೆಗಳ ಬೆದರಿಕೆಯೊಡ್ಡುವ ಮೂಲಕ ದಾಳಿ ಮಾಡಿದೆ ಎಂದು ಟಿಡಿಪಿ ಈ ಹಿಂದೆ ಆರೋಪಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ 2019 ರ ಬಜೆಟ್ ಅಧಿವೇಶನದ ವೇಳೆ ಈ ಚಾನೆಲ್‌ಗಳು ವಿಧಾನಸಭೆಯಿಂದ ನೇರ ಪ್ರಸಾರ ಮಾಡದಂತೆ ಸರ್ಕಾರ ತಡೆಯೊಡ್ಡಿತ್ತು. ಇದು ಭಾರೀ ತಿಕ್ಕಾಟಕ್ಕೆ ಕಾರಣವಾಗಿತ್ತು. ನಂತರ ಜಗನ್ ಸರ್ಕಾರ ಈನಾಡು ಸಮೂಹದ ಒಡೆತನದ ಮತ್ತೊಂದು ಕಂಪನಿ ಮಾರ್ಗದರ್ಶಿ ಚಿಟ್‌ಫಂಡ್ ಮೇಲಿನ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಿತ್ತು.
ಆಗಸ್ಟ್ 2023ರಲ್ಲಿ, ಆಂಧ್ರ ಪ್ರದೇಶ ಅಪರಾಧ ತನಿಖಾ ಇಲಾಖೆ (ಸಿಐಡಿ) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಪ್ರೈವೇಟ್ ಲಿಮಿಟೆಡ್ (ಎಂಸಿಎಫ್‌ಪಿಎಲ್) ವಿರುದ್ಧ 10 ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ದಾಖಲಿಸಿತ್ತು.
ವಂಚನೆ, ನಂಬಿಕೆ ದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಮಾರ್ಗದರ್ಶಿ ಚಿಟ್ ಫಂಡ್ ವಿರುದ್ದ ಹೊರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ನಿಧನರಾದ ರಾಮೋಜಿ ರಾವ್, ಅವರ ಸೊಸೆ ಮತ್ತು ಎಂಸಿಎಫ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕಿ ಸಿ ಸೈಲಜಾ ಕಿರಣ್ ಅವರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿದೆ.
ಕಾನೂನು ಹೋರಾಟಗಳ ಹೊರತಾಗಿ, ಜಗನ್ ಸರ್ಕಾರ ಮತ್ತು ಈನಾಡು ಸಮೂಹದ ನಡುವೆ ರಾಜಕೀಯ ತಿಕ್ಕಾಟವು ಬಹಿರಂಗವಾಗಿ ನಡೆಯುತ್ತಿದೆ. ಹಲವಾರು ರಾಜಕೀಯ ಭಾಷಣಗಳಲ್ಲಿ ಈನಾಡು ಸಮೂಹದ ವಾಹಿನಿಗಳ ವಿರುದ್ದ ವಾಗ್ದಾಳಿ ನಡೆಸಿರುವ ಜಗನ್ ಪಕ್ಷದ ನಾಯಕರು, ಈನಾಡು ಸಮೂಹದ ವಾಹಿನಿಗಳು ಪಕ್ಷಪಾತದಿಂದ ಕೂಡಿವೆ ಎಂದು ಆರೋಪಿಸಿದ್ದರು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರಾಮೋಜಿ ರಾವ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಿದ್ದರು. ಸ್ವತಃ ಜಗನ್ ಮೋಹನ್ ರೆಡ್ಡಿ ಆಗಾಗ ಈನಾಡು ಮತ್ತು ಆಂಧ್ರ ಜ್ಯೋತಿಯನ್ನು “ಹಳದಿ ಮಾಧ್ಯಮ” ಎಂದು ಸಂಬೋಂಧಿಸಿದ್ದಿದೆ.
ಜನವರಿ 2024ರಲ್ಲಿ, ಟಿವಿ9 ತೆಲುಗು ವಾಹಿನಿಯ ಸಹಾಯಕ ಸಂಪಾದಕಿ ಹಸೀನಾ ಶೇಕ್ ಅವರು ವೈಎಸ್‌ಆರ್ ಕಾಂಗ್ರೆಸ್ ನಾಯಕ ಕೊಡಲಿ ನಾನಿ ಅವರ ಸಂದರ್ಶನ ನಡೆಸಿದ್ದರು. ಆ ಬಳಿಕ ಹಸೀನಾ ಅವರು ಟಿಡಿಪಿಯ ಸಾಮಾಜಿಕ ಮಾಧ್ಯಮ ವಿಭಾಗದಿಂದ ಭಾರೀ ಕಿರುಕುಳಕ್ಕೊಳ ಅನುಭವಿಸಿದ್ದರು. “ಟಿವಿ9 ತೆಲುಗು ತಮ್ಮ ಪಕ್ಷಕ್ಕೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂಬ ಸಾಮಾನ್ಯ ಭಾವನೆ ಟಿಡಿಪಿ ಬೆಂಬಲಿಗರಲ್ಲಿದೆ. ಈ ಕಾರಣದಿಂದಾಗಿ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಹಸೀನಾ ಶೇಖ್ ಜನವರಿ 18, 2024 ರಂದು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ತಿಳಿಸಿದೆ.
ಎರಡು ಬಾರಿ ಆಂಧ್ರ ಪ್ರದೇಶದ ಸಿಎಂ ಆಗಿದ್ದ ಪ್ರಮುಖ ಕಾಂಗ್ರೆಸ್ ನಾಯಕ ವೈಎಸ್ ರಾಜಶೇಖರ ರೆಡ್ಡಿ ಅವರು ಈನಾಡು ಮತ್ತು ಆಂಧ್ರಜ್ಯೋತಿಯೊಂದಿಗೆ ವಿವಾದಾತ್ಮಕ ಸಂಬಂಧ ಹೊಂದಿದ್ದರು. ಅವುಗಳನ್ನು “ಹಳದಿ ಮಾಧ್ಯಮಗಳು” ಎಂದು ಕರೆದಿದ್ದರು.
2007ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರು ವಿಶೇಷ ಮಾಹಿತಿ ಆಯುಕ್ತರಿಗೆ ಸುಳ್ಳು, ಆಧಾರರಹಿತ, ಮಾನಹಾನಿಕರ ಸುದ್ದಿ ಪ್ರಕಟಿಸುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೆ ಮೊಕದ್ದಮೆ ಹೂಡಲು ಅಧಿಕಾರ ನೀಡಿತ್ತು. ಅಕ್ಟೋಬರ್ 2019 ರಲ್ಲಿ, ಜಗನ್, ಸಿಎಂ ಆದಾಗ ಈ ಅಧಿಕಾರವನ್ನು ವಿಸ್ತರಿಸಿದರು. ಎಲ್ಲಾ ಇಲಾಖೆಗಳ ಮುಖ್ಯಸ್ಥರಾಗಿರುವ ಅಧಿಕಾರಿಗೆ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು ನೀಡಿದರು.
ಕೃಪೆ : ದಿ ನ್ಯೂಸ್ ಮಿನಿಟ್
ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನುಗಳಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪ; ನಿಬಂಧನೆಗಳ ತಿದ್ದುಪಡಿಗೆ ಚಿಂತನೆ


