ಮೊಬೈಲ್ ರಿಚಾರ್ಜ್ ಹಾಗೂ ಡಾಟಾ ಪ್ಯಾಕ್ ದರ ಹೆಚ್ಚಳ ವಿರೋಧಿಸಿ ಎಐಡಿವೈಓ ರಾಜ್ಯ ಸಮಿತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಎಐಡಿವೈಓ ರಾಜ್ಯಾಧ್ಯಕ್ಷ ಕಾ. ಶರಣಪ್ಪ ಉದ್ಬಾಳ್. “ಕೋವಿಡ್ ಪರಿಸ್ಥಿತಿಯಲ್ಲಿ, ಸಾಮಾನ್ಯ ಜನರ ಆರ್ಥಿಕ ಸ್ಥಿತಿಯು ತೀವ್ರ ಸಂಕಷ್ಟದಲ್ಲಿದೆ. ಆದರೆ ತಮ್ಮ ಲಾಭದಾಹಕ್ಕಾಗಿ ಖಾಸಗಿ ಟಿಲಿಕಾಂ ಕಂಪನಿಗಳು ಮೊಬೈಲ್ ರಿಚಾರ್ಜ್ ದರ ಹಾಗೂ ಡಾಟಾ ಪ್ಲಾನ್ ದರಗಳನ್ನು ಒಂದು ವರ್ಷದಲ್ಲಿ ಪ್ರತಿಶತ 100ರಷ್ಟು ಹೆಚ್ಚಿಸಿವೆ. ಫೋನ್ ಮತ್ತು ಇಂಟರ್ನೆಟ್ ಮೇಲಿನ ಅವಲಂಬನೆಯು ಅಸಾಧಾರಣವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಮೊಬೈಲ್ ಬಳಕೆಯನ್ನು ಅಗಾಧವಾಗಿ ಅವಲಂಬಿಸಿದ್ದಾರೆ. ಆನ್‌ಲೈನ್ ತರಗತಿಗಳು, ಆನ್‌ಲೈನ್ ಅಪ್ಲಿಕೇಶನ್‌ಗಳು, ಆನ್‌ಲೈನ್ ವಹಿವಾಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ” ಎಂದಿದ್ದಾರೆ.
“ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಪರಿಸ್ಥಿತಿಯಲ್ಲಿ, ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾದಂತಹ ಮೊಬೈಲ್ ಕಂಪನಿಗಳು ನೆಟ್ ಪ್ಯಾಕ್ ಮತ್ತು ರೀಚಾರ್ಜ್ ದರಗಳನ್ನು ಶೇಕಡಾ 20 ರಿಂದ 25% ವರೆಗೆ ಹೆಚ್ಚಿಸಿವೆ. ಇದು ಸಂಪೂರ್ಣವಾಗಿ ಜನವಿರೋಧಿಯಾಗಿದೆ. ಈ ಸಂದರ್ಭದಲ್ಲಿ ಸೇವಾ ಪೂರೈಕೆದಾರರು ಮತ್ತು ಗ್ರಾಹಕರ ನಡುವೆ ತೀರ್ಪುಗಾರರ ಪಾತ್ರವನ್ನು ವಹಿಸಬೇಕಾದ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಸಂಪೂರ್ಣವಾಗಿ ಮೌನವಾಗಿರುವುದನ್ನು ನೋಡಿ ಆಘಾತವಾಗಿದೆ. ಈ ಕೂಡಲೇ ಟ್ರಾಯ್ ಮಧ್ಯ ಪ್ರವೇಶಿಸಿ ಖಾಸಗಿ ಟೆಲಿಕಾಂ ಕಂಪನಿಗಳ ಈ ಹಗಲು ದರೋಡೆಯನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಸರ್ಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕದಂತೆ ನಿರ್ಬಂಧ; ವಿದ್ಯಾರ್ಥಿನಿಯರ ಪ್ರತಿಭಟನೆ
ಎಐಡಿವೈಓ ರಾಜ್ಯ ಉಪಾಧ್ಯಕ್ಷ ಕಾ. ವಿನಯ್ ಸಾರಥಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, “ಸಾರ್ವಜನಿಕ ಉದ್ಯಮವಾಗಿದ್ದ ಬಿಎಸ್ಎನ್ಎಲ್ ದುರ್ಬಲಗೊಂಡ ನಂತರ, ಖಾಸಗಿ ಮೊಬೈಲ್ ಆಪರೇಟರ್ ಕಂಪನಿಗಳು ದೇಶದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವಾ ಮಾರುಕಟ್ಟೆಯ ಗಣನೀಯ ಭಾಗದ ಮೇಲೆ ತಮ್ಮ ಬಿಗಿಹಿಡಿತ ಸಾಧಿಸಿವೆ. ಆದ್ದರಿಂದ ಈ ಖಾಸಗಿ ಮೊಬೈಲ್ ಕಂಪನಿಗಳು ಭಾರೀ ಲಾಭ ಗಳಿಸಲು ತಮ್ಮ ಮೂಗಿನ ನೇರಕ್ಕೆ ದರಗಳನ್ನು ನಿಗದಿಮಾಡಿ, ಮೊಬೈಲ್ ಬಳಕೆದಾರರು ಅನಿವಾರ್ಯವಾಗಿ ಅಧಿಕ ಹಣ ಪಾವತಿಸುವಂತೆ ಮಾಡಿವೆ. ಖಾಸಗಿ ಮೊಬೈಲ್ ಕಂಪನಿಗಳ ಈ ಕ್ರಮವನ್ನು ನಾವು ವಿರೋಧಿಸುತ್ತೇವೆ. ಹಾಗೂ ಸಾಮಾನ್ಯ ಜನರ ಪರವಾಗಿ ದರಗಳ ಹೆಚ್ಚಳವನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ” ಎಂದರು.
ಪ್ರತಿಭಟನೆ ಬಳಿಕ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI)ದ ಕಚೇರಿಗೆ ಭೇಟಿ ನೀಡಿ ಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ.
ಹಕ್ಕೊತ್ತಾಯಗಳು
೧. ಅಸಮಂಜಸವಾದ ಪ್ರಿಪೇಯ್ಡ್ ರಿಚಾರ್ಜ್ ದರ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಿರಿ.
೨ ಖಾಸಗಿ ಟೆಲಿಕಾಂ ಕಂಪನಿಗಳಲ್ಲಿ ಸಕ್ರಿಯ ಪಾತ್ರ ವಹಿಸಲು ಮತ್ತು ಮೊಬೈಲ್ ಬಳಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲುTRAI ಮೂಕ ಪ್ರೇಕ್ಷಕರಾಗಿ ಉಳಿಯದೇ ತಕ್ಷಣವೇ ಕ್ರಮ ಕೈಗೊಳ್ಳಬೇಕು.
3. ಬಿಎಸ್ಎನ್ಎಲ್ ಪುನಶ್ಚೇತನಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ.
4. ಅತ್ಯಗತ್ಯ ಸೇವೆಯಾಗಿರುವ ಟೆಲಿಕಾಂ ವಲಯದ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು.



Yes this is very good job.🙏