‘ಉಳುವವರಿಗೆ ಭೂಮಿ’ ನಿನಾದದೊಂದಿಗೆ ಸ್ವತಂತ್ರಗೊಂಡ ಭಾರತದಲ್ಲಿ 79 ವರ್ಷಗಳಾದರೂ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಕೋಟ್ಯಾಂತರ ಬಡ ಕುಟುಂಬಗಳಿಗೆ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ನೆತ್ತಿಯ ಮೇಲೊಂದು ಸೂರೂ ಇಲ್ಲವಾಗಿದೆ. ಸತ್ತ ಮೇಲೂ ಹೂಳಲು ಪರದಾಡುವ ಪರಿಸ್ಥಿತಿ ಇದೆ. ಭೂಮಿಯೆಲ್ಲಾ ಬಲಾಡ್ಯರ, ಕಂಪನಿಗಳ ಕೈಯಲ್ಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹೇಳಿದೆ. ಬಡವರಿಗೆ ಸರ್ಕಾರ ಭೂಮಿ ಮಂಡೂರಾತಿ ಮಾಡಿ ಒನ್ ಟೈಮ್ ಸೆಟಲ್ಮೆಂಟ್ ಮಾಡಿಕೊಡಬೇಕು ಎಂದು ಆಗ್ರಹಿಸಿ ನವೆಂಬರ್ 26ರಂದು ಬೆಂಗಳೂರು ಚಲೋ ಹೋರಾಟಕ್ಕೆ ಕರೆ ನೀಡಿದ್ದಾರೆ.
ರಾಜ್ಯದ ದುಡಿಯುವ ಜನರಿಗೆ ಅದರಲ್ಲೂ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡಲು ಭೂಮಿ ಮಂಜೂರಾತಿ ಸಮಿತಿಗಳನ್ನು ಸರ್ಕಾರ ರಚಿಸಿದ್ದರೂ ಕಾಲಕಾಲಕ್ಕೆ ಸರಿಯಾಗಿ ಸಭೆಗಳಾಗದೆ, ಮಂಜೂರಾತಿಯೂ ಆಗುತ್ತಿಲ್ಲ. ಮಂಜೂರಾತಿಗೆ ಹತ್ತಾರು ಕಾನೂನುಗಳ ವಿಘ್ನಗಳನ್ನು ಮುಂದೆ ಮಾಡಲಾಗುತ್ತಿದೆ. ವಸತಿ ರಹಿತರ ವಿಚಾರಕ್ಕೆ ಸರ್ಕಾರದ ಸರಿಯಾದ ಯೋಜನೆ ಮತ್ತು ಆದ್ಯತೆ ಇಲ್ಲದಿರುವುದರಿಂದ ಕುಟುಂಬಗಳು ಬೆಳೆದಂತೆ ವಾಸಕ್ಕೆ ಜಾಗ ಸಾಕಾಗದೇ ಕುಟುಂಬದೊಳಗೇ ಆಂತರಿಕ ಕಲಹವಾಗಿ ಮಾರ್ಪಾಡಾಗುತ್ತಿದೆ.
ಇನ್ನು ಅರಣ್ಯದ ಹೆಸರಿನಲ್ಲಿರುವ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರ ಕಥೆ ಬೇರೆಯೇ ಇದೆ. ಅರಣ್ಯ ಅಧಿಕಾರಿಗಳಂತೂ ಆರಣ್ಯ ವಾಸಿಗಳಿಗೆ, ಸಾಗುವಳಿ ಮಾಡುವ ಜನರಿಗೆ ಪೀಡಕರಾಗಿದ್ದಾರೆ. ತಲೆ-ತಲಾಂತರಗಳಿಂದ ಆರಣ್ಯವಾಸಿಗಳಾಗಿ ಜೀವನ ಕಟ್ಟಿಕೊಂಡು ಅರಣ್ಯವನ್ನೂ ಕಾಪಾಡುತ್ತಾ ಬದುಕಿದವರಿಗೆ ನೆಲೆಗೊಂದು ಹಕ್ಕುಪತ್ರ, ಬದುಕಿಗೊಂದಿಷ್ಟು ತುಂಡು ಭೂಮಿಯ ಹಕ್ಕನ್ನು ನಿರಾಕರಿಸಲಾಗುತ್ತಿದೆ. ಕಳೆದ 60-50 ವರ್ಷಗಳಿಂದಲೂ ಸಾಗುವಳಿ ಮಾಡುತ್ತಾ, ಅರ್ಜಿ ಸಲ್ಲಿಸಿದ್ದರೂ ಭೂಮಿ ಮಂಜೂರಾತಿ ನೀಡದೆ ಈಗ ನಗರ ಮಿತಿಯ ನೆಪದಲ್ಲಿ ಲಕ್ಷಾಂತರ ಸಂಖ್ಯೆಯ ಭೂರಹಿತರು ಭೂಮಿಯಿಂದ ವಂಚನೆಗೊಳಗಾಗುತ್ತಿದ್ದಾರೆ. ಇದು ಬಡವರ ಪಾಲಿಗೆ
ಮುಗಿಯದ ಗೋಳಿನ ಕಥೆಗಳ ದೊಡ್ಡ ಸರಮಾಲೆಯೇ ಆಗಿದೆಯಾದರೂ ಸರ್ಕಾರಗಳು ಇದನ್ನು ಸರಿಪಡಿಸುವ, ಬಡವರಿಗೆ ನ್ಯಾಯ ಕೊಡಿಸುವ ವಿಚಾರಕ್ಕೆ ಕೈಹಾಕದೆ ಕಾಲ ತಳ್ಳುತ್ತಲೇ ಇದ್ದಾರೆ. ಬಡವರು ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಹಲವು ರೀತಿಯ ಹೆಸರಿನಲ್ಲಿ ಭೂಮಿಗಳಿವೆ. ಸರ್ಕಾರಿ, ಗೋಮಾಳ (ಗಾಯರಾಣ), ಹುಲ್ಲುಬನಿ, ಖರಾಬ್, ಖಾರೀಜ್ ಖಾತಾ, ಸೊಪ್ಪಿನ ಬೆಟ್ಟ, ಹರಳು ಪ್ರದೇಶ, ಗುಡ್ಡ ಪ್ರದೇಶ, ಕಲ್ಲು ಪ್ರದೇಶ, ಸೇಂದಿವನ, ಅನಾಧೀನ, ಕಾವಲು, ಅಮೃತ ಮಹಲ್ ಕಾವಲು, ಬಾಣೆ, ಪೈಸಾರಿ, ಅರಣ್ಯ, ಸಾಮಾಜಿಕ ಅರಣ್ಯ, ಲ್ಯಾಂಡ್ ಬ್ಯಾಂಕ್ ಇನ್ನಿತರೆ ಹೆಸರಿನಲ್ಲಿರುವ ಈ ಎಲ್ಲಾ ಭೂಮಿಗಳಿಗೆ ಇವುಗಳ ಉಪಯೋಗದ ಬಗ್ಗೆ ಅದರದೇ ಆದ ಕಾನೂನುಗಳನ್ನು ರೂಪಿಸಲಾಗಿದೆ. ಈಗಿನ ಸರ್ಕಾರದ ಪ್ರಕಾರ ಮೇಲಿನ ಯಾವ ಭೂಮಿಗಳನ್ನೂ ಫಾರಂ ನಂ. 50-53-57ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಮಂಜೂರಾತಿ ಮಾಡಲು ಅವಕಾಶವಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ತಾನು ಬಡವರ ಪರ, ಸಂವಿಧಾನ ಪರ ಎಂದು ಸಾಬೀತು ಪಡಿಸಲು, ಈಗಿರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು.
5-6 ದಶಕಗಳ ಕಾಲದಿಂದಲೂ ಇರುವ ಸಮಸ್ಯೆಯಿಂದಾಗಿ ರೈತರು ಅಲೆದಲೆದು ಸವಕಳಿಯಾಗಿದ್ದಾರೆ. ಇನ್ನು ಮುಂದೆ ಅರ್ಜಿ ಹಿಡಿದು ಪುನಃ ಅಲೆಸುವುದೆಂದರೆ ಜನರನ್ನು ಹಿಂಸೆಗೆ ಗುರಿಪಡಿಸಿದಂತಾಗುತ್ತದೆ. ಆದ್ದರಿಂದ ಸರಕಾರ ಬಡವರಿಗಾಗಿ ‘ಒನ್ ಟೈಮ್ ಸೆಟಲೆಂಟ್’ ಎಂಬ ತೀರ್ಮಾನ ಕೈಗೊಂಡು, ಭೂಮಂಜೂರಾತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಆಗ್ರಹಿಸುತ್ತದೆ.
ಹೋರಾಟ ಸರಕಾರ ಭೂಮಿ-ಮತ್ತು ವಸತಿ ವಿಚಾರಕ್ಕೆ ಗಟ್ಟಿಯಾದ ತೀರ್ಮಾನವನ್ನು ಮಾಡಲೇಬೇಕೆಂದು ಒತ್ತಾಯಿಸಿ ನಾಡಿನ ರೈತ-ದಲಿತ-ಕಾರ್ಮಿಕ-ಮಹಿಳೆ-ವಿದ್ಯಾರ್ಥಿ ಯುವಜನ ಮತ್ತಿತರೆ ಸಮುದಾಯಗಳ ಐಕ್ಯ ವೇದಿಕೆಯಾದ ‘ಸಂಯುಕ್ತ ಕರ್ನಾಟಕ’ ನೇತೃತ್ವದಲ್ಲಿ ಇದೇ ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಸಂಬಂಧ ನವೆಂಬರ್ 21ರಂದು ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಪ್ರತಿಕಾಗೋಷ್ಠಿ ನಡೆಸಿದ ಹೋರಾಟಗಾರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿರಿಮನೆ ನಾಗರಾಜ್, ಕುಮಾರ್ ಸಮತಳ, ಕೆ. ಮರಿಯಪ್ಪ ಸೇರಿದಂತೆ ಹಲವು ಹೋರಾಟಗಾರರು ಭಾಗಿಯಾಗಿದ್ದರು.


