ಕಾರ್ಖಾನೆ ಆವರಣದಲ್ಲಿಯೇ ಗಾರ್ಮೆಂಟ್ ಉದ್ಯೋಗಿ ಮಹಿಳೆಯ ಮೇಲೆ, ಅದೇ ಕಂಪನಿಯ ಬಸ್ ಹರಿದಿದೆ. ಪರಿಣಾಮ, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಕಳಿಯಲ್ಲಿ ನಡೆದಿದೆ.
ಕಾರ್ಖಾನೆಯ ನಿರ್ಲಕ್ಷ್ಯ ಮತ್ತು ಚಾಲಕನ ಅಜಾಗರೂಕತೆಯಿಂದಲೇ ದುರ್ಘಟನೆ ನಡೆದಿದೆ ಎಂದು ಗಾರ್ಮೆಂಟ್ ಉದ್ಯೋಗಿಗಳು ಆರೋಪಿಸಿದ್ದಾರೆ. ಆದರೆ, ಪರಿಹಾರ ನೀಡಲು ಗಾರ್ಮೆಂಟ್ ಆಡಳಿತ ಮಂಡಳಿ ನಿರಕಾರಿಸಿದೆ ಎಂದು ವರದಿಯಾಗಿದೆ.
ಮಾಕಳಿಯ ‘ಗೋಲ್ಡನ್ ಸೀಮ್ಸ್’ ಗಾರ್ಮೆಂಟ್ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಅದೇ ಕಾರ್ಖಾನೆಯ ಉದ್ಯೋಗಿ ನಳಿನ ಎಂದು ಗುರುತಿಸಲಾಗಿದೆ. ಅವರು ನಾಲ್ಕು ವರ್ಷಗಳಿಂದ ‘ಗೋಲ್ಡನ್ ಸೀಮ್ಸ್’ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಎಂದಿನಂತೆ ನಳಿನ ಅವರು ಮಂಗಳವಾರ ಬೆಳಗ್ಗೆ ಕಾರ್ಖಾನೆಯ ಬಸ್‌ನಲ್ಲಿಯೇ ಕೆಲಸಕ್ಕಾಗಿ ಗಾರ್ಮೆಂಟ್‌ಗೆ ಬಂದಿದ್ದಾರೆ. ಕಾರ್ಖಾನೆ ಆವರಣದಲ್ಲಿ ಬಸ್ ಇಳಿದು, ಕಾರ್ಖಾನೆ ಒಳಗೆ ನಡೆದುಕೊಂಡು ಹೋಗುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದ ಬಸ್ ಆಕೆಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾರ್ಮೆಂಟ್ ಉದ್ಯೋಗಿಗಳು ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಗಾರ್ಮೆಂಟ್ ಆಡಳಿತವು ಪರಿಹಾರ ನೀಡಲು ನಿರಾಕರಿಸಿದೆ ಎಂದು ಆರೋಪಿಸಲಾಗಿದೆ.
ಘಟನೆ ಮತ್ತು ಗಾರ್ಮೆಂಟ್‌ಗಳ ಧೋರಣೆ ಬಗ್ಗೆ ಮಾತನಾಡಿದ ಗಾರ್ಮೆಂಟ್ ಉದ್ಯೋಗಿ ರಾಜು, “ರಾಜ್ಯದ ಗಾರ್ಮೆಂಟ್‌ಗಳಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಗಾರ್ಮೆಂಟ್‌ಗಳು ತಮ್ಮ ಲಾಭಕ್ಕೊಸ್ಕರ ಕಡಿಮೆ ವೇತನ ದುಡಿಸಿಕೊಳ್ಳಲು ಗ್ರಾಮೀಣ ಭಾಗದಿಂದ ಮಹಿಳೆಯರನ್ನು ಕರೆತರುತ್ತಾರೆ. ಕಾರ್ಮಿಕರನ್ನು ಕರೆತರಲು ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನೂ ಬಳಸುವುದಿಲ್ಲ. ಕಳಪೆ ಬಸ್‌ಗಳನ್ನು ಒದಗಿಸಿ ಕಾರ್ಮಿಕರನ್ನು ಸಾವಿಗೆ ದವಡೆಗೆ ದೂಡುತ್ತಿದ್ದಾರೆ. ಆ ಬಸ್‌ಗಳನ್ನು ಚಾಲಕರು ಮದ್ಯಪಾನ ಮಾಡಿ ಚಲಾಯಿಸುತ್ತಾರೆ. ಇದರಿಂದಾಗಿ ಹಲವಾರು ಅಪಘಾತಗಳು ನಡೆದು, ಕಾರ್ಮಿಕರು ಜೀವ ಕಳೆದುಕೊಂಡಿರುವ ಉದಾಹರಣೆಗಳಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕಾರ್ಖಾನೆಗಳ ಬೇಜವಾಬ್ದಾರಿಯಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಆಡಳಿತ ಮಂಡಳಿಗೆ ಯಾವುದೇ ಕಾಳಜಿ ಇಲ್ಲ. ಇಂತಹ ಘಟನೆಗಳಿಗೆ ಕಾರ್ಖಾನೆಗಳ ಮಾಲೀಕರೇ ನೇರ ಜಬಾಬ್ದಾರರು” ಎಂದು ಆರೋಪಿಸಿದ್ದಾರೆ.
“ಮೃತ ಕಾರ್ಮಿಕ ಮಹಿಳೆಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಕಳಪೆ ಬಸ್‌ಗಳನ್ನು ಬಿಟ್ಟು, ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಒದಗಿಸಬೇಕು. ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಗಾರ್ಮೆಂಟ್ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಹರಿಸಬೇಕು. ಸಮಸ್ಯೆಗಳನ್ನು ಪರಿಹರಿಸಬೇಕು. ಕಾರ್ಮಿಕರನ್ನು ಶೋಷಿಸುತ್ತಿರುವ ಗಾರ್ಮೆಂಟ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ಸ್ಟೇಟ್ ಗಾರ್ಮೆಂಟ್ ಅಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ ಹಾಗೂ ಯುನೈಟೆಡ್ ಯೂನಿಯನ್ ಆಫ್ ಗಾರ್ಮೆಂಟ್ ವರ್ಕರ್ಸ್ ಸಂಘಟನೆಗಳು ಆಗ್ರಹಿಸಿವೆ.
ಇದನ್ನೂ ಓದಿ; 25 ವರ್ಷಗಳಿಂದ ಹಿಮಾಚಲ ವೃದ್ಧಾಶ್ರಮದಲ್ಲಿ ವಾಸ; ಕನ್ನಡಿಗ ಐಪಿಎಸ್ ಅಧಿಕಾರಿಯಿಂದ ಕುಟುಂಬ ಸೇರಿದ ಸಾಕಮ್ಮ


