ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಂಡಳಿಯು ದರ ಏರಿಕೆಗೆ ಶಿಫಾರಸನ್ನು ಅನುಮೋದಿಸಿದ್ದು, ಹಾಗಾಗಿ ಬೆಂಗಳೂರಿನಲ್ಲಿ ಇನ್ನು ಮುಂದೆ ಮೆಟ್ರೊ ಪ್ರಯಾಣ ಕೂಡಾ ದುಬಾರಿಯಾಗಲಿದೆ. ಯಾವ ಮಟ್ಟದಲ್ಲಿ ದರ ಹೆಚ್ಚಳ ಆಗಲಿದೆ ಮತ್ತು ಯಾವತ್ತಿನಿಂದ ಇದು ಜಾರಿಯಾಗಲಿದೆ ಎಂಬ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎಂದು ವರದಿಯಾಗಿದೆ.
2017 ರಿಂದ ಬಿಎಂಆರ್‌ಸಿಎಲ್ ಮಾಡುತ್ತಿರುವ ಮೊದಲ ದರ ಪರಿಷ್ಕರಣೆ ಇದಾಗಿದೆ. ಎರಡು ವಾರಗಳ ಹಿಂದೆಯಷ್ಟೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಟಿಕೆಟ್ ಮತ್ತು ಪಾಸ್ ಬೆಲೆಗಳನ್ನು ಶೇಕಡಾ 15 ರಷ್ಟು ಹೆಚ್ಚಿಸಿತ್ತು. ಪ್ರಸ್ತುತ ಮೆಟ್ರೋ ದರಗಳು ರೂ. 10 ರಿಂದ ರೂ. 60 ರವರೆಗೆ ಇದ್ದು, ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ.
“ಸ್ಮಾರ್ಟ್ ಕಾರ್ಡ್‌ಗಳು ಮತ್ತು ಇತರ ಟಿಕೆಟ್ ವ್ಯವಸ್ಥೆಗಳಿಗೆ ರಿಯಾಯಿತಿಗಳ ವಿವರಗಳೊಂದಿಗೆ ಯಾವ ಮಟ್ಟದಲ್ಲಿ ಹೆಚ್ಚಳವಾಗಲಿದೆ ಎಂಬುವುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು” ಎಂದು ಬಿಎಂಆರ್‌ಸಿಎಲ್ ವಕ್ತಾರರು ತಿಳಿಸಿದ್ದಾರೆ. ಬೆಂಗಳೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಿಎಂಆರ್‌ಸಿಎಲ್ ಪ್ರಸ್ತುತ 77 ಕಿ.ಮೀ ಮೆಟ್ರೋ ರೈಲಿನ ಜಾಲವನ್ನು ನಿರ್ವಹಿಸುತ್ತಿದ್ದು, ಪರ್ಪಲ್ ಲೈನ್ 43.5 ಕಿ.ಮೀ ಮತ್ತು ಗ್ರೀನ್ ಲೈನ್ 33.5 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಬೈಯಪ್ಪನಹಳ್ಳಿ-ಎಂಜಿ ರಸ್ತೆ ಮಾರ್ಗದಲ್ಲಿ 2011 ರಲ್ಲಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ, ಬಿಎಂಆರ್‌ಸಿಎಲ್ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ವರದಿಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,280 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಹೇಳಿದೆ.
ಆದಾಗ್ಯೂ, 2022-23 ರಲ್ಲಿ 476 ಕೋಟಿ ರೂ. ನಷ್ಟವಾಗಿದ್ದು, 2023-24 ರಲ್ಲಿ ಇದು 341 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ ಎಂದು ನಿಗಮ ವರದಿ ಮಾಡಿದೆ. ರಜಾದಿನಗಳಲ್ಲದ ವಾರದ ದಿನಗಳಲ್ಲಿ ದೈನಂದಿನ ಮೊಟ್ರೋ ಪ್ರಯಾಣಿಕರ ಸಂಖ್ಯೆ 8.5 ಲಕ್ಷ ತಲುಪಿದ್ದು, ನಷ್ಟ ಇಳಿಕೆಗೆ ಕಾರಣ ಎಂದು ವರದಿ ಉಲ್ಲೇಖಿಸಿವೆ.
ಸಾರ್ವಜನಿಕ ಸಮಾಲೋಚನೆಯ ನಂತರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾಗಿದೆ. ಸಮಿತಿಯು ದರಗಳಲ್ಲಿ 15-20 ಪ್ರತಿಶತದಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ “45% ದರ ಏರಿಕೆ ಮಾಡುವ” ಕ್ರಮವನ್ನು ಟೀಕಿಸಿದ್ದು, ಈ ನಿರ್ಧಾರದಿಂದ ಅವರು “ನಿರಾಶೆ”ಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ವಾರ, ಮೋಹನ್ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರನ್ನು ಮೆಟ್ರೋ ದರ ಪರಿಷ್ಕರಣೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ದರ ಪರಿಷ್ಕರಣೆಯು ಜನರನ್ನು ಸಾರ್ವಜನಿಕ ಸಾರಿಗೆಯಿಂದ ಖಾಸಗಿ ಸಾರಿಗೆಗೆ ಹೊರಳುವಂತೆ ಮಾಡುತ್ತದೆ, ಇದು ಕೊನೆಗೆ ನಗರದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
“ಬಿಎಂಆರ್‌ಸಿಎಲ್ ತನ್ನ ಸೇವೆಗಳಲ್ಲಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ತುರ್ತಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಮೆಟ್ರೋದಲ್ಲಿ ಜನದಟ್ಟಣೆಯಿಂದಾಗಿ ಬಾಗಿಲುಗಳ ಅಸಮರ್ಪಕ ಕಾರ್ಯಗಳು ಮತ್ತು ಪ್ರಯಾಣಿಕರಲ್ಲಿ ವಿವಾದಗಳು ಉಂಟಾಗಿದ್ದು, ಇದು ಸ್ವೀಕಾರಾರ್ಹವಲ್ಲ. ಬಿಎಂಆರ್‌ಸಿಎಲ್ ಮೆಟ್ರೋ ಬೋಗಿಗಳನ್ನು ಸೇರಿಸುವುದು, ವಿಳಂಬವಾದ ಮಾರ್ಗಗಳನ್ನು ತ್ವರಿತಗೊಳಿಸುವುದು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಆದ್ಯತೆ ನೀಡಬೇಕು” ಎಂದು ಸಂಸದ ಮೋಹನ್ ಹೇಳಿದ್ದಾರೆ.
“ಮಟ್ರೋ ಭದ್ರತೆಯನ್ನು ಹೆಚ್ಚಿಸಿ, ಪ್ರವೇಶ ಮತ್ತು ನಿರ್ಗಮನವನ್ನು ಸುಗಮಗೊಳಿಸಬೇಕು. ಪಾರ್ಕಿಂಗ್, ಕ್ಯೂ ವ್ಯವಸ್ಥೆಗಳು ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಬೇಕು. ಈ ಸಮಸ್ಯೆಗಳನ್ನು ಸರಿಪಡಿಸದೆ ಪ್ರಯಾಣ ದರಗಳನ್ನು ಹೆಚ್ಚಿಸಿದರೆ ಜನರು ಖಾಸಗಿ ವಾಹನಗಳತ್ತ ಹೊರಳುತ್ತಾರೆ. ನಗರದ ದಟ್ಟಣೆ ಇನ್ನಷ್ಟು ಹದಗೆಡುತ್ತದೆ. ಬಿಎಂಆರ್‌ಸಿಎಲ್ ತನ್ನ ಆದ್ಯತೆಗಳನ್ನು ಪುನರ್ವಿಮರ್ಶಿಸಬೇಕು” ಎಂದು ಅವರು ಶುಕ್ರವಾರ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂಓದಿ: ‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು
‘ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ’ : ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು


