ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂಪಾಯಿ ದರೋಡೆಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಿಎಂಎಸ್ ಸೆಕ್ಯುರಿಟೀಸ್ ಕಸ್ಟೋಡಿಯನ್ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್‌ಸ್ಟೇಬಲ್ ಅಣ್ಣಪ್ಪ ನಾಯ್ಕ್ ಬಂಧಿತರು. ಇವರಿಂದ 5.76 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಪ್ರಕರಣ ವರದಿಯಾದ 54 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಆರರಿಂದ 8 ಜನರು ಶಾಮೀಲಾಗಿರುವ ಸಾಧ್ಯತೆಯಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೂರು ತಿಂಗಳಿನಿಂದ ಸಂಚು
ಆರೋಪಿಗಳು ಮೂರು ತಿಂಗಳಿನಿಂದ ದರೋಡೆಗೆ ಸಂಚು ರೂಪಿಸಿದ್ದರು. ಕೃತ್ಯಕ್ಕೆ 15 ದಿನಗಳಿಂದಲೂ ಸ್ಥಳ ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರಿನಲ್ಲಿ ಅಶೋಕ ಪಿಲ್ಲರ್ – ಜಯನಗರ – ಡೇರಿ ಸರ್ಕಲ್ ಮಾರ್ಗದಲ್ಲಿ ಬಂದು, ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿ ತಾವು ಆರ್‌ಬಿಐ ನಿಯಂತ್ರಣಾಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ನಂತರ ಮತ್ತೋರ್ವ ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್ ನತ್ತ ಚಲಾಯಿಸುವಂತೆ ಸೂಚಿಸಿದ್ದ ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದಾರೆ.
ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, ಮೊಬೈಲ್ ಫೋನ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಬಳಿ ಕೆಳಗಿಳಿಸಿ ಪರಾರಿಯಾಗಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಕಳೆದು ಹೋಗಿತ್ತು. ನಂತರ ನಾವು ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿ ಕ್ಯಾಮರಾಗಳು ಇರದ ಸ್ಥಳಗಳನ್ನು ಬಳಸಿಕೊಂಡಿರುವುದು, ಮೊಬೈಲ್ ಫೋನ್ ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಕೂಡ ಸರಣಿ ನಂಬರ್‌ನಲ್ಲಿ ಇರದಿರುವುದು ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೃತ್ಯದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ಎಸ್ಪಿಗಳು, ನೆರೆಯ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ, ಬೆಂಗಳೂರು ಪೊಲೀಸ್ ಇಲಾಖೆಯ ಇಬ್ಬರು ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದ ಸುಮಾರು 200 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ 11 ತಂಡಗಳು ಕೇರಳ, ತಮಿಳುನಾಡು, ತೆಲಂಗಾಣಗಳಿಗೆ ತೆರಳಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.


