ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪತ್ನಿ ನಿಕಿತಾ ಸಿಂಘಾನಿಯಾ, ಪೊಲೀಸ್ ವಿಚಾರಣೆ ವೇಳೆ ಕಿರುಕುಳದ ಆರೋಪವನ್ನು ನಿರಾಕರಿಸಿದ್ದಾರೆ.
ನಿಕಿತಾ ಮತ್ತು ಅವರ ಕುಟುಂಬದ ವಿರುದ್ಧ ಕಿರುಕುಳ-ಸುಲಿಗೆ ಆರೋಪದ ವೀಡಿಯೊ ಜೊತೆಗೆ, 48 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದ 34 ವರ್ಷದ ಸುಭಾಷ್ ಡಿಸೆಂಬರ್ 9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಮಾರು ಮೂರು ವರ್ಷಗಳಿಂದ ಪತಿಯಿಂದ ದೂರವಾಗಿ ಬದುಕುತ್ತಿದ್ದೇನೆ ಎಂದು ನಿಕಿತಾ ಅವರು ತನಿಖಾಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. “ನಾನು ಹಣಕ್ಕಾಗಿ ಕಿರುಕುಳ ನೀಡಿದರೆ, ನಾನು ಅವನಿಂದ ಏಕೆ ದೂರ ಉಳಿಯುತ್ತೇನೆ” ಎಂದು ಪ್ರಶ್ನಿಸಿರುವ ನಿಕಿತಾ, ತಮ್ಮ ಮದುವೆಯ ಸಮಯದಲ್ಲಿ ಕಿರುಕುಳಕ್ಕೊಳಗಾದವರು ನಾನೆ ಎಂದು ಆರೋಪಿಸಿದ್ದಾರ ಎಂದು ತಿಳಿದುಬಂದಿದೆ. 2022 ರಲ್ಲಿ ಅತುಲ್ ವರದಕ್ಷಿಣೆ ಸಂಬಂಧಿತ ಕಿರುಕುಳ ಮತ್ತು ಹಲ್ಲೆಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದರು.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ನಿಕಿತಾ ಸಿಂಘಾನಿಯಾ (29), ಆಕೆಯ ತಾಯಿ ನಿಶಾ (54) ಮತ್ತು ಸಹೋದರ ಅನುರಾಗ್ (27) ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಿಕಿತಾ ಅವರನ್ನು ಗುರುಗ್ರಾಮ್‌ನ ಹಾಂಗ್‌ಕಾಂಗ್ ಬಜಾರ್ ರಸ್ತೆಯ ಬಳಿ ಬಂಧಿಸಿದ್ದರೆ, ಆಕೆಯ ತಾಯಿ ಮತ್ತು ಸಹೋದರನನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಕರೆದೊಯ್ಯಲಾಯಿತು. ಮೂವರನ್ನೂ ಬೆಂಗಳೂರಿಗೆ ತರಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅವರ ಬಂಧನದ ನಂತರ, ಅತುಲ್ ಸುಭಾಷ್ ಅವರ ತಂದೆ ಮತ್ತು ಸಹೋದರ ಸುಭಾಷ್ ಅವರು, 4 ವರ್ಷದ ಮಗನ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿ, ಆತ ಇರುವ ಸ್ಥಳ ತಿಳಿದಿಲ್ಲ ಎಂದು ಹೇಳಿದ್ದಾರೆ.
ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು, ನಿಕಿತಾ ಮತ್ತು ಅವರ ಕುಟುಂಬದ ವಿರುದ್ಧ ಆರೋಪ ಸಾಬೀತಾದರೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಅತುಲ್‌ನ ಕೈಬರಹದ ಮತ್ತು ಡಿಜಿಟಲ್ ಆತ್ಮಹತ್ಯೆ ನೋಟ್, ಆತನ ಎಲೆಕ್ಟ್ರಾನಿಕ್ ಸಾಧನಗಳನ್ನು ಸಾಕ್ಷ್ಯವಾಗಿ ತೆಗೆದುಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಪೊಲೀಸರು ಕಾಣೆಯಾದ ಸಾಕ್ಷ್ಯದ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಎಲ್ಲಾ ದಾಖಲೆಗಳು ಸುರಕ್ಷಿತವಾಗಿವೆ ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಒತ್ತಿ ಹೇಳಿದರು.
ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಆರೋಪ ಮಾಡಿದ್ದನಿಕಿತಾ ಸಿಂಘಾನಿಯಾ, 2022 ರಲ್ಲಿ ಪೊಲೀಸ್ ದೂರು ನೀಡಿದ್ದರು. ಅತುಲ್ ಸುಭಾಷ್ ತನ್ನನ್ನು ಥಳಿಸುತ್ತಿದ್ದರು ಮತ್ತು ಪತಿ-ಪತ್ನಿ ಸಂಬಂಧವನ್ನು ಮೃಗದಂತೆ ಪರಿಗಣಿಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ. ಮದುವೆಯ ಉಡುಗೊರೆಗಳ ಬಗ್ಗೆ ಅತೃಪ್ತಿ ಮತ್ತು ಹೆಚ್ಚುವರಿ 10 ಲಕ್ಷ ರೂ. ಸೇರಿದಂತೆ ಅತ್ತೆಯ ಬೇಡಿಕೆಗಳು ತನ್ನ ತಂದೆಯ ಆರೋಗ್ಯ ಕ್ಷೀಣಿಸಲು ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗಿವೆ ಎಂದು ನಿಕಿತಾ ಆರೋಪಿಸಿದ್ದಾರೆ.
ಕುಟುಂಬ ವರದಕ್ಷಿಣೆಗಾಗಿ ಒತ್ತಾಯಿಸಿದ ಆಘಾತದಿಂದ ತನ್ನ ತಂದೆ ನಿಧನರಾದರು ಎಂಬ ನಿಕಿತಾ ಅವರ ಹೇಳಿಕೆ ಸುಳ್ಳು ಎಂದು ಸುಭಾಷ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಿಕಿತಾ ಅವರ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ; ಬೆಂಗಳೂರು ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ: ಪತ್ನಿ ನಿಕಿತಾ, ಆಕೆಯ ತಾಯಿ-ಸಹೋದರನ ಬಂಧನ


