ಮಕ್ಕಳ ಶಿಕ್ಷಣಕ್ಕಾಗಿ ಪಡೆದಿದ್ದ ಸಾಲವನ್ನು ಮರುಪಾವತಿಸಿಲ್ಲವೆಂದು ಆರೋಪಿಸಿ ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಸಹೋದರಿಯರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಎರಡು ದಿನಗಳ ಕಾಲ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು. ಹಲ್ಲೆಯ ವೀಡಿಯೊಗಳು ವೈರಲ್ ಆದ ನಂತರವೇ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆನೇಕಲ್ ತಾಲೂಕಿನ ದೊಡ್ಡಬೊಮ್ಮಸಂದ್ರ ವ್ಯಾಪ್ತಿಯಲ್ಲಿ ಮನಕಲಕುವ ಘಟನೆ ನಡೆದಿದ್ದು, ರಾಮಕೃಷ್ಣ ರೆಡ್ಡಿ, ಸುನೀಲ್ ಕುಮಾರ್, ಇಂದ್ರಮ್ಮ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೊಡ್ಡಬೊಮ್ಮಸಂದ್ರ ಸಮೀಪದ ನೆರಿಗಾ ಗ್ರಾಮದ ರಾಮಕೃಷ್ಣ ರೆಡ್ಡಿ ಎಂಬುವವರಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಹಿಳೆಯೊಬ್ಬರು ಶೇ.30ರ ಬಡ್ಡಿಗೆ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಸಂಪೂರ್ಣ ಸಾಲದ ಮೊತ್ತವನ್ನು ಒಂದೇ ಬಾರಿಗೆ ಮರುಪಾವತಿಸುವಂತೆ ಸಾಲ ನೀಡಿದವರು ಒತ್ತಾಯಿಸಿದ್ದರು. ತಮ್ಮ ಜಮೀನು ಮಾರಾಟ ಮಾಡಿದ ನಂತರ ಸಾಲದ ಮೊತ್ತವನ್ನು ಮರುಪಾವತಿಸುವುದಾಗಿ ಸಂತ್ರಸ್ತರು ಶಾಂತಿ ಒಪ್ಪಂದ ಮಾಡಿಕೊಂಡಿದ್ದರು.
ಇದರ ಹೊರತಾಗಿಯೂ, ಆರೋಪಿಗಳು ನಿವಾಸದೊಳಗೆ ನುಗ್ಗಿ ಸಂತ್ರಸ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ. ಬಳಿಕ ಸಂತ್ರಸ್ತರು ಸರ್ಜಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಇಂಬ್ರಾಪುರ ಅವರು ದೂರು ಸ್ವೀಕರಿಸಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ.
ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಸಾಲ ನೀಡಿದವರೊಂದಿಗೆ ಮಾತನಾಡಿ ಎಂದು ಇನ್ಸ್‌ಪೆಕ್ಟರ್ ಸಂತ್ರಸ್ತರಿಗೆ ಸೂಚಿಸಿದ್ದರು. ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಹಾಗೂ ಆರೋಪಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಅಯೋಧ್ಯಾ: ಪತಿ ತನ್ನ ಪತ್ನಿಗೆ ‘ಮುತ್ತು’ ಕೊಟ್ಟಿದ್ದಕ್ಕೆ ಗುಂಪು ಹಲ್ಲೆ!
ಪ್ರಕರಣ ಮತ್ತೊಂದು ತಿರುವು ಪಡೆದ ಬಳಿಕ ಪೊಲೀಸರು ಸಂತ್ರಸ್ತರನ್ನು ಠಾಣೆಗೆ ಕರೆಸಿ ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ ಎಂದು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವರದಿ ಮಾಡಿವೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಇನ್‌ಸ್ಪೆಕ್ಟರ್ ರಾಘವೇಂದ್ರ ಇಂಬ್ರಾಪುರ, “ಸಂತ್ರಸ್ತರು ಸುಮಾರು ಜನರ ಬಳಿ ಸಾಲ ಪಡೆದಿದ್ದಾರೆ. ಪಡೆದ ಸಾಲ ವಾಪಸ್ ನೀಡಲ್ಲವೆಂದು ಅನೇಕರು ಆರೋಪಿಸಿದ್ದಾರೆ. ನೀಡಿದ ದುಡ್ಡನ್ನು ವಾಪಸ್ ಕೇಳಲು ಹೋದಾಗ ಗಲಾಟೆಯಾಗಿದೆ. ಸಾಲ ನೀಡಿದವರು ಹೊಡೆದಿರುವುದು ನಿಜ. ಆದರೆ ಬಟ್ಟೆ ಬಿಚ್ಚಿ ಹೊಡೆದಿರುವುದು ಸುಳ್ಳು. ತಮ್ಮ ಮೇಲಾಗಿರುವ ದಾಳಿಯಿಂದಾಗಿ ಮೈಮೇಲಾಗಿರುವ ಬಾಸುಂಡೆಗಳನ್ನು ಬಟ್ಟೆ ಬಿಚ್ಚಿ ಸಂತ್ರಸ್ತರು ತೋರಿಸಿದ್ದಾರೆಯೇ ಹೊರತು ವಿವಸ್ತ್ರಗೊಳಿಸಿ ಯಾರೂ ಹಲ್ಲೆ ಮಾಡಿಲ್ಲ. ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆಂಬುದು ಸುಳ್ಳು ಸುದ್ದಿಯಾಗಿದೆ. ತಪ್ಪಿತಸ್ಥರ ವಿರುದ್ಧ ಐಪಿಸಿ ಸೆಕ್ಷನ್ 354 (ಬಿ), 504, 506, 323, 324 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.



ಈ ಪ್ರಕರಣದಲ್ಲಿ ಪೊಲೀಸರ ವಾದ ಸಮರ್ಥನೀಯವಲ್ಲ. ದುರ್ಬಲರ ದೂರುಗಳನ್ನು ದಾಕಲಿಸದಿರುವ ಕೆಟ್ಟ ಚಾಳಿಯನ್ನು ನಮ್ಮ ಪೊಲೀಸರು ಮೊದಲು ಕೈಬಿಡಬೇಕು.