ದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಂಗ್ಲಾದೇಶದ ಇಸ್ಕಾನ್‌ನ ಮಾಜಿ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಅಲ್ಲಿನ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ. ದೇಶದ ಸುಪ್ರೀಂಕೋರ್ಟ್ ಹೈಕೋರ್ಟ್‌ನ ಜಾಮೀನು ಆದೇಶವನ್ನು ತಡೆಹಿಡಿಯದ ಹೊರತು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ವಕೀಲರು ಳಿಸಿದ್ದಾರೆ. ಬಾಂಗ್ಲಾದೇಶ
ಚಿನ್ಮಯ್ ದಾಸ್ ಅವರು ನವೆಂಬರ್ 25 ರಿಂದ ಜೈಲಿನಲ್ಲಿದ್ದಾರೆ. ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸುವ ಸಂಘಟನೆಯಾದ ಸಮ್ಮಿಲಿಟೊ ಸನಾತನಿ ಜಾಗರೋನ್ ಜೋಟ್‌ನ ವಕ್ತಾರರಾಗಿದ್ದಾರೆ.
ಅಕ್ಟೋಬರ್ 25 ರಂದು ಚಿತ್ತಗಾಂಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜವನ್ನು ಅಗೌರವಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ನವೆಂಬರ್‌ನಲ್ಲಿ ದಾಸ್ ಬಂಧನದ ನಂತರ, ಭಾರತದ ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿಗಳ ಬಗ್ಗೆ ತನ್ನ ಕಳವಳವನ್ನು ಪುನರುಚ್ಚರಿಸಿತ್ತು ಮತ್ತು ಚಿನ್ಮಯ್ ದಾಸ್ ಅವರಿಗೆ “ನ್ಯಾಯಯುತ ಮತ್ತು ಪಾರದರ್ಶಕ” ವಿಚಾರಣೆಗೆ ಕರೆ ನೀಡಿತ್ತು.
“ಈ ವಿಷಯದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ – ಮಧ್ಯಂತರ ಸರ್ಕಾರವು ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಉಗ್ರಗಾಮಿ ಹೇಳಿಕೆ, ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಪ್ರಚೋದನೆಯ ಘಟನೆಗಳ ಬಗ್ಗೆ ನಾವು ಕಳವಳಗೊಂಡಿದ್ದೇವೆ… ಇಸ್ಕಾನ್ ಸಾಮಾಜಿಕ ಸೇವೆಯ ದಾಖಲೆಯನ್ನು ಹೊಂದಿರುವ ಜಾಗತಿಕವಾಗಿ ಪ್ರಸಿದ್ಧ ಸಂಸ್ಥೆಯಾಗಿದೆ.” ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು, ಚಿನ್ಮಯ್ ದಾಸ್ ಬಂಧನದ ಸುತ್ತಲಿನ ಬೆಳವಣಿಗೆಗಳು ತಮ್ಮ ದೇಶದ “ಆಂತರಿಕ ವ್ಯವಹಾರಗಳಾಗಿವೆ” ಎಂದು ಹೇಳಿತ್ತು.
“ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಅವರ ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಒಳಗೊಂಡಂತೆ ಅವರ ಹಕ್ಕನ್ನು ರಕ್ಷಿಸಬೇಕು” ಎಂಬ ಭಾರತದ ಹೇಳಿಕೆಯನ್ನು ಅದು ತಿರಸ್ಕರಿಸಿತ್ತು.
ಈ ನಡುವೆ, ಚಿನ್ಮಯ್ ದಾಸ್ ಅವರು ಇನ್ನು ಮುಂದೆ ನಮ್ಮ ಗುಂಪಿನೊಂದಿಗೆ ಸಂಬಂಧ ಹೊಂದಿಲ್ಲ ಎಂದು ಇಸ್ಕಾನ್ ಹೇಳಿತ್ತು. ಅದಾಗ್ಯೂ, ಹಿಂದೂಗಳು ಮತ್ತು ಅವರ ಪೂಜಾ ಸ್ಥಳಗಳನ್ನು ರಕ್ಷಿಸಲು ಶಾಂತಿಯುತ ಪ್ರತಿಭಟನೆಗೆ ಕರೆ ನೀಡುವ ಅವರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ತಮ್ಮ ಬೆಂಬಲವಿದೆ ಎಂದು ಅದು ಒತ್ತಿ ಹೇಳಿತ್ತು.
ಜನವರಿ 2 ರಂದು ಬಾಂಗ್ಲಾದೇಶದ ನ್ಯಾಯಾಲಯವು ಚಿನ್ಮಯ್ ದಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನವೆಂಬರ್ 29 ರಂದು, ಬಾಂಗ್ಲಾದೇಶ ಪೊಲೀಸರು ಇಬ್ಬರು ಹಿಂದೂ ಸನ್ಯಾಸಿಗಳನ್ನು ಬಂಧಿಸಿ ಜೈಲಿನಲ್ಲಿದ್ದ ಚಿನ್ಮಯ್ ದಾಸ್ ಅವರಿಗೆ ಔಷಧಿಗಳನ್ನು ತಲುಪಿಸಿದ್ದರು. ಇದರ ನಂತರ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ.
ಆಗಸ್ಟ್‌ನಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ನಂತರ, ಬಾಂಗ್ಲಾದೇಶದ ಹಲವಾರು ಭಾಗಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಘಟನೆಗಳು ನಡೆದಿವೆ ಎಂದು ವರದಿಯಾಗಿವೆ.
ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ನಲ್ಲಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರನ್ನು ಒತ್ತಾಯಿಸಿದ್ದರು. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಯ ವರದಿಗಳು ಉತ್ಪ್ರೇಕ್ಷಿತ ಎಂದು ಯೂನಸ್ ಆ ಸಮಯದಲ್ಲಿ ಹೇಳಿಕೊಂಡಿದ್ದರು. ಬಾಂಗ್ಲಾದೇಶ


