ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಲಾಗಿದೆ.
ಬಳ್ಳಾರಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಸಾಪದ ಅಧ್ಯಕ್ಷ ಮಹೇಶ್ ಜೋಷಿ, “ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಹಾಗೂ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ದೀಪಾ ಭಾಸ್ತಿ ಅವರನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದಿದ್ದಾರೆ.
ಬಾನು ಮುಷ್ತಾಕ್ ಅವರು ಕಳೆದ ಮೇ 21ರಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಬೂಕರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಅವರ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ‘ಹಾರ್ಟ್ ಲ್ಯಾಂಪ್’ಗೆ ಪ್ರಶಸ್ತಿ ಒಲಿದು ಬಂದಿದೆ.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಭಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳು ಸಂಕಲನವನ್ನು ದೀಪಾ ಭಾಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇಂಗ್ಲಿಷ್ ಕೃತಿಗೆ ‘ಹಾರ್ಟ್ ಲ್ಯಾಂಪ್’ಎಂದು ಹೆಸರಿಡಲಾಗಿದೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.


