Homeಮುಖಪುಟದೇಶದ ಕಾನೂನು ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರೆ, ನೀವು ಮಾಡುತ್ತಿರುವುದು ದೇಶದ್ರೋಹವಲ್ಲವೇ?

ದೇಶದ ಕಾನೂನು ವ್ಯವಸ್ಥೆಯನ್ನೇ ಅಣಕಿಸುತ್ತಿರುವ ವಕೀಲರೆ, ನೀವು ಮಾಡುತ್ತಿರುವುದು ದೇಶದ್ರೋಹವಲ್ಲವೇ?

ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟ, ಮಲೆಂಗಾವ್‌ ಸ್ಫೋಟ ಮುಂತಾದ ಭಯೋತ್ಪಾದನಾ ಪ್ರಕರಣಗಳಲ್ಲಿಯೂ ಸಂಸದೆ ಪ್ರಗ್ಯಾ ಸಿಂಗ್‌ ಥರಹದ ಹಲವಾರು ಆರೋಪಿಗಳ ಪರವಾಗಿ ವಕೀಲರು ಇಂದಿಗೂ ವಾದ ಮಾಡುತ್ತಿದ್ದಾರೆ. 

- Advertisement -
- Advertisement -

ಇಡೀ ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗೆ ಮಾದರಿ ರಾಷ್ಟ್ರವೂ ಹೌದು. “ಕಾನೂನಿನ ಕೈಯಿಂದ ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಚಿಂತೆ ಇಲ್ಲ, ಒಬ್ಬನೇ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎಂಬುದು ಲಿಖಿತ ಸಂವಿಧಾನ ಮತ್ತು ಬಲಿಷ್ಠ ಕಾನೂನನ್ನು ಹೊಂದಿರುವ ಗಣತಂತ್ರ ಭಾರತ ದಂಡ ಸಂಹಿತೆಯ ಏಕೈಕ ಆಶಯ. ಇದೇ ಕಾರಣಕ್ಕೆ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತ ಕಾನೂನು ವ್ಯವಸ್ಥೆ ಸಾಕಷ್ಟು ಉದಾರಿಯೂ ಹೌದು..! ನೇರ ನಿಷ್ಠುರವಾದಿಯೂ ಹೌದು..!

ಪ್ರಜಾಪ್ರಭುತ್ವ ಮತ್ತು ಸಂವಿಧಾನ ದೇಶದ ಒಂದು ಕಣ್ಣಾದರೆ, ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತೀಯ ದಂಡ ಸಂಹಿತೆ ಈ ದೇಶದ ಮತ್ತೊಂದು ಕಣ್ಣು. ಇದೇ ಕಾರಣಕ್ಕೆ ಇಡೀ ದೇಶದ ಶಾಸಕಾಂಗ ಮತ್ತು ಕಾರ್ಯಾಂಗ ಅವ್ಯವಹಾರದಲ್ಲಿ ನಲುಗಿ ಜನರಿಂದ ಛೀಮಾರಿ ಹಾಕಿಸಿಕೊಂಡರೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ ಈಗಲೂ ಜನ ಅಚಲವಾದ ನಂಬಿಕೆ ಇಟ್ಟಿದ್ದಾರೆ.

ಆದರೆ, ಇತ್ತೀಚಿನ ಬೆಳವಣಿಗಗಳ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ನ್ಯಾಯಾಂಗ ವ್ಯವಸ್ಥೆಯ ಮರ್ಯಾದೆ ಮತ್ತು ಘನತೆಯನ್ನು ಕಳೆಯುವ ಕೆಲಸ ಅಥವಾ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಂದೆನಿಸದೆ ಇರದು.
ಏಕೆಂದರೆ ಒಂದೆಡೆ ಯಾವುದೇ ಅಪರಾಧ ಘಟನೆ ನಡೆದರೂ ಸಹ ಆ ಅಪರಾಧ ಘಟನೆಯಲ್ಲಿ ಭಾಗಿಯಾದ ವ್ಯಕ್ತಿ ಅಪರಾಧಿ ಹೌದೋ? ಇಲ್ಲವೋ? ಎಂದು ತೀರ್ಮಾನಿಸುವ ಕೆಲಸ ನ್ಯಾಯಾಲಯದ್ದು. ಆ ತೀರ್ಮಾನ ಆಗುವವರೆಗೆ ಆತ ಆರೋಪಿ ಹೌದೇ ಹೊರತು ಅಪರಾಧಿ ಅಲ್ಲ. ಆದರೆ, ಪ್ರಸ್ತುತ ಈ ದೇಶದಲ್ಲಿ ನ್ಯಾಯಾಧೀಶರಿಗಿಂತ ಮುಂಚಿತವಾಗಿಯೇ ಮಾಧ್ಯಮಗಳು ಹಾಗೂ ವಕೀಲರು ಇಂತಹ ತೀರ್ಪು ಕೊಡುತ್ತಿರುವುದನ್ನು ನ್ಯಾಯಾಂಗ ನಿಂದನೆ ಅಥವಾ ನ್ಯಾಯಾಲಯ ವ್ಯವಸ್ಥೆ ಮೇಲಿನ ಹಸ್ತಕ್ಷೇಪ ಎನ್ನದೆ ವಿಧಿಯಿಲ್ಲ.

ಈ ಮೇಲಿನ ವಿಶ್ಲೇಷಣೆ ಅಥವಾ ಆರೋಪಕ್ಕೆ ನಮ್ಮದೇ ರಾಜ್ಯದಲ್ಲಿ ಸಾಲು ಸಾಲು ಉದಾಹರಣೆ ಸಿಗುತ್ತವೆ. ಮೈಸೂರಿನಲ್ಲಿ Fress Kashmir ಪೋಸ್ಟರ್ ಹಿಡಿದು ಹೋರಾಟ ನಡೆಸಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿ ನಳಿನಿ ಬಾಲಕೃಷ್ಣನ್, ಹುಬ್ಬಳ್ಳಿಯಲ್ಲಿ Pakisthan Zindabad ಎಂದು ಘೋಷಣೆ ಕೂಗಿದ್ದ ಮೂವರು ಇಂಜಿನಿಯರ್ ವಿದ್ಯಾರ್ಥಿಗಳು, CAA ವಿರೋಧಿ ವೇದಿಕೆಯಲ್ಲಿ Pakisthan Zindabad ಎಂದು ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನ್ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆ ವೇಳೆ Kashmir-CAA-NRC-Transgender Free Free ಎಂದು ಪೋಸ್ಟರ್ ಹಿಡಿದಿದ್ದ ಆರುದ್ರಾ ಹೀಗೆ ಸಾಲು ಸಾಲು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ವಿಪರ್ಯಾಸ ಎಂದರೆ ನಳಿನಿ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳು ಇಂದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಇವರನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪರಾಧಿಗಳು ಎಂದು ಸಾಬೀತುಪಡಿಸಬೇಕಾಗಿರುವ ವಕೀಲರು ಇವರ ಪ್ರಕರಣವನ್ನು ಯಾರೂ ವಾದಿಸಲು ಮುಂದೆ ಬರಬಾರದು ಎಂದು ಫರ್ಮಾನು ಹೊರಡಿಸಿದೆ. ಈ ಮೂಲಕ ನ್ಯಾಯಾಧೀಶರಿಗಿಂತ ಮುಂಚಿತವಾಗಿಯೇ ಇವರೆಲ್ಲರೂ ಅಪರಾಧಿಗಳು ಎಂದು ತೀರ್ಪು ನೀಡಿಬಿಟ್ಟಿದೆ.

ಅಸಲಿಗೆ ನಳಿನಿ, ಅಮೂಲ್ಯ, ಆರಿದ್ರಾ ಮತ್ತು ಹುಬ್ಬಳಿಯಲ್ಲಿ pakisthan Zindabad ಎಂದು ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳು ನಿರಪರಾಧಿಗಳು ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಈ ದೇಶದ ನ್ಯಾಯಾಂಗ ವ್ಯವಸ್ಥೆಗೆ ಒಂದು ಘನತೆ ಇದೆ, ಗೌರವ ಇದೆ. ಅದನ್ನು ಕಾನೂನು ಬಾಹೀರ ಚಟುವಟಿಕೆಗಳಿಂದ ಕಳೆಯಬೇಡಿ ಎಂಬುದಷ್ಟೇ ನಮ್ಮ ಆಶಯ (ವಿ.ಸೂ:-ಓರ್ವ ವ್ಯಕ್ತಿಯ ಪರ ವಕಾಲತ್ತು ವಹಿಸಬಾರದು ಎಂದು ತಾಕೀತು ಮಾಡುವುದು ಸಹ ಕಾನೂನು ಬಾಹೀರ)

ಅಫ್ಜಲ್ ಗುರು-ಕಸಬ್‌ನಿಂದ, ಆಸೀಫಾ-ನಿರ್ಭಯಾ ಅತ್ಯಾಚಾರಿಗಳವರೆಗೆ

2001ರಲ್ಲಿ ದೇಶದ ಹೃದಯ ಎಂದೇ ಭಾವಿಸಲಾಗುವ ಸಂಸತ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಕೂದಲೆಳೆಯ ಅಂತರದಲ್ಲಿ ನಮ್ಮ ಸಂಸದರು ಈ ದಾಳಿಯಿಂದ ಪಾರಾಗಿದ್ದರು. ಕಾಶ್ಮೀರ ಮೂಲದ ಅಫ್ಜಲ್ ಗುರು ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಆತನನ್ನು ಬಂಧಿಸಲಾಗಿತ್ತು.
ಆದರೆ, ಈ ದೇಶದ ಕಾನೂನು ವ್ಯವಸ್ಥೆ ಆತನನ್ನು ಗುಂಡಿಟ್ಟು ಕೊಲ್ಲಲಿಲ್ಲ. ಬದಲಾಗಿ ಆತನಿಗೆ ನ್ಯಾಯಾಲಯದ ಎದುರು ವಾದ ಮಂಡಿಸಲು ಒಂದು ಅವಕಾಶ ಕಲ್ಪಿಸಿಕೊಡಲಾಗಿತ್ತು ಮತ್ತು ಆತನಿಗಾಗಿಯೂ ವಕೀಲರನ್ನು ಸರ್ಕಾರವೇ ನೇಮಿಸಿತ್ತು.

ತಾಜ್‌ ಹೋಟೆಲ್‌ ಮೇಲೆ ದಾಳಿ

2008ರಲ್ಲಿ ಇಡೀ ಮುಂಬೈ ನಗರವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ ಅದು. ದೋಣಿಯ ಮೂಲಕ ಗಡಿ ಉಲ್ಲಂಘಿಸಿ ಭಾರತ ಪ್ರವೇಶಿಸಿದ್ದ ಉಗ್ರರು ಮುಂಬೈನ ಪ್ರಸಿದ್ಧ ತಾಜ್ ಹೋಟಲ್‌ಗೆ ನುಗ್ಗಿ ಗುಂಡಿನ ಮಳೆಗೆರೆದಿದ್ದರು. ಈ ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಬಲಿಯಾಗಿದ್ದರೆ, ಹೇಮಂತ್ ಕರ್ಕರೆ, ವಿಜಯ್ ಸಾಲಾಸ್ಕರ್, ಅಶೋಕ್ ಕಾಮ್ಟೆ ಯಂತಹ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ವೇಳೆ ಉಗ್ರರ ಗುಂಡಿಗೆ ಬಲಿಯಾಗಿದ್ದರು.

ಕೊನೆಗೂ ಹರಸಾಹಸಪಟ್ಟ ಭಾರತೀಯ ಸೇನೆ ಉಗ್ರರನ್ನು ಸದೆಬಡಿಯುವಲ್ಲಿ ಸಫಲವಾಗಿತ್ತು. ಅಲ್ಲದೆ, ಅಜ್ಮಲ್ ಕಸಬ್ ಎನ್ನುವ ಓರ್ವ ಪಾಕಿಸ್ತಾನಿ ಉಗ್ರನನ್ನು ಜೀವಂತ ಸೆರೆಹಿಡಿಯುವಲ್ಲಿ ಸಫಲವಾಗಿತ್ತು. ಆದರೂ, ಆತನಿಗೆ ನ್ಯಾಯಾಂಗದ ಎದುರು ವಾದ ಮಂಡಿಸಲು ಅವಕಾಶ ನೀಡಲಾಗಿತ್ತು, ಓರ್ವ ಸರ್ಕಾರಿ ನ್ಯಾಯವಾದಿಯನ್ನೂ ಅದಕ್ಕೆಂದು ನೇಮಿಸಲಾಗಿತ್ತು. ಆದು ಅಪರಾಧಿ ಎಂದು ನ್ಯಾಯಾಲಯ ಮರಣ ದಂಡನೆ ವಿಧಿಸಿತು.

ನಿರ್ಭಯಾ ಅತ್ಯಾಚಾರ

2012 ಡಿಸೆಂಬರ್ 12ರ ರಾತ್ರಿ. ದೆಹಲಿಯಲ್ಲಿ ನಡೆದ ಆ ಒಂದು ರಣ ಭಯಂಕರ ಘಟನೆ ಭಾಗಶಃ ಭಾರತ ಇಡೀ ವಿಶ್ವದ ಎದುರು ತಲೆ ತಗ್ಗಿಸುವಂತೆ ಮಾಡಿತ್ತು. ಚಲಿಸುವ ಬಸ್ಸಿನಲ್ಲಿ ಓರ್ವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿ ರಸ್ತೆಯಲ್ಲೇ ಆಕೆಯ ದೇಹವನ್ನು ಎಸೆದುಹೋಗಲಾಗಿತ್ತು.

ಆ ಘಟನೆಗೆ ಭಾರತೀಯರು ತೋರಿಸಿದ ಕಿಚ್ಚಿಗೆ ಅಂದೇ ಎಲ್ಲಾ ಆರೋಪಿಗಳನ್ನು ಗುಂಡಿಟ್ಟು ಕೊಲ್ಲಬಹುದಿತ್ತು. ಆ ಅವಕಾಶವೂ ಪೊಲೀಸರ ಬಳಿ ಇತ್ತು. ಆದರೆ, ದೇಶದ ನ್ಯಾಯಾಂಗ ವ್ಯವಸ್ಥೆ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಾಗಿ ಅವರ ಪರವಾಗಿಯೂ ವಾದ ಮಂಡಿಸಲು ನ್ಯಾಯವಾದಿಗಳನ್ನು ನೇಮಕ ಮಾಡಲಾಯಿತು. ಸತತ 8 ವರ್ಷಗಳ ನ್ಯಾಯಾಂಗ ತನಿಖೆ ಕೊನೆಗೂ ಮುಗಿದಿದ್ದು, ಆರೋಪಿಗಳ ಅಪರಾಧ ಸಾಬೀತಾಗಿದ್ದು, ಎಲ್ಲರಿಗೂ ಗಲ್ಲುಶಿಕ್ಷೆ ವಿಧಿಸಲಾಗಿದೆ. ಈಗಲೂ ಅವರ ಗಲ್ಲುಶಿಕ್ಷೆಯನ್ನು ತಪ್ಪಿಸಲು ನಮ್ಮದೇ ವಕೀಲರಿಂದ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಅರಗಿಸಿಕೊಳ್ಳಲು ಸಾಧ್ಯವಾಗದ ಕಟು ಸತ್ಯ.

ಕಾಮುಕರಿಗೆ ಬಲಿಯಾದ ಆಸೀಫಾ

ಭಾಗಶಃ ಆಸೀಫಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಜಗತ್ತು ಎಂದಿಗೂ ಭಾರತವನ್ನು ಕ್ಷಮಿಸದೇನೋ? ಕಾಶ್ಮೀರದ ಕತುವಾ ಎಂಬಲ್ಲಿ ಪಾಪ ಕುದುರೆ ಮೇಯಿಸಲು ಮನೆಯಿಂದ ಆಚೆ ಹೋದ 8 ವರ್ಷ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಪೊಲೀಸ್ ಪ್ರಕರಣ ದಾಖಲಿಸಿ ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಆದರೆ, ಆಕೆ ಸಿಕ್ಕಾಗ ಜೀವ ಇರಲಿಲ್ಲ.

ಆಕೆ ಮುಸ್ಲಿಂ ಹುಡುಗಿ ಎಂಬ ಏಕೈಕ ಕಾರಣಕ್ಕೆ 6 ಜನ ಆಕೆಯನ್ನು ಒಂದು ವಾರಗಳ ಕಾಲ ದೇವಾಸ್ಥಾನವೊಂದರಲ್ಲಿ ಕೂಡಿ ಹಾಕಿ ಸತತವಾಗಿ ಅತ್ಯಾಚಾರವೆಸಗಿ ಕೊಲೆಗೈದಿದ್ದರು. ಹೀಗೆ ಅತ್ಯಾಚಾರ ಎಸಗಿದವರ ಪೈಕಿ 15 ವರ್ಷದ ಬಾಲಕನೂ ಪ್ರಮುಖ ಆರೋಪಿ. ಈ ಪ್ರಕರಣದ ವಿರುದ್ಧ ಇಡೀ ದೇಶ ಸಿಡಿದೆದ್ದಿತ್ತು. ಪರಿಣಾಮ ಎಲ್ಲಾ ಆರೋಪಿಗಳ ಬಂಧನವಾಯಿತು. ಆದರೆ, ನೆನಪಿರಲಿ ಈ ಪ್ರಕರಣದಲ್ಲೂ ಸಹ ಇವರ ಪರ ವಾದ ಮಂಡಿಸಲು ನ್ಯಾಯವಾದಿ ಇದ್ದಾರೆ.

ಈ ನಾಲ್ಕು ಪ್ರಕರಣಗಳು ಕೇವಲ ಉದಾಹರಣೆಗಳಷ್ಟೇ. ದೇಶದಲ್ಲಿ ಪ್ರತಿನಿತ್ಯ ಇಂತಹ ನೂರಾರು ಘಟನೆಗಳು ಸಂಭವಿಸುತ್ತಲೇ ಇರುತ್ತವೆ, ಅತ್ಯಾಚಾರ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಗಳಾಗಿವೆ ಬಿಡಿ. ಬಿಜೆಪಿಯ ಕುಲದೀಪ್‌ ಸಿಂಗ್‌ ಸೆಂಗಾರ್‌, ಚಿನ್ಮಯಾನಂದ್‌ನಂತಹ ಹಲವಾರು ರಾಜಕಾರಣಿಗಳು ಅತ್ಯಾಚಾರ, ಕೊಲೆಯಂತಹ ಘೋರ ಆರೋಪಗಳನ್ನು ಎದರಿಸುತ್ತಿದ್ದಾರೆ. ರಾಜಕಾರಣಿಗಳಲ್ಲಿ ಸುಮಾರು ಅರ್ಧದಷ್ಟು ಜನ ಗಂಭೀರ ಪ್ರಕರಣಗಳ ಆರೋಪ ಹೊತ್ತಿದ್ದಾರೆ. ಆದರೆ, ಅವರ ಪರ ವಾದ ಮಂಡಿಸಲು ವಕೀಲರು ಮಾತ್ರ ನಾ ಮುಂದು ತಾ ಮುಂದು ಎಂದು ಮುಂದೆ ಬರುತ್ತಲೇ ಇರುತ್ತಾರೆ.

ಸಂಜೋತಾ ಎಕ್ಸ್‌ಪ್ರೆಸ್‌ ಸ್ಫೋಟ, ಮಲೆಂಗಾವ್‌ ಸ್ಫೋಟ ಮುಂತಾದ ಭಯೋತ್ಪಾದನಾ ಪ್ರಕರಣಗಳಲ್ಲಿಯೂ ಸಂಸದೆ ಪ್ರಗ್ಯಾ ಸಿಂಗ್‌ ಥರಹದ ಹಲವಾರು ಆರೋಪಿಗಳ ಪರವಾಗಿ ವಕೀಲರು ಇಂದಿಗೂ ವಾದ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಯಾವ ವಕೀಲರ ಸಂಘಟನೆಯೂ ಈ ಪ್ರಕರಣವನ್ನು ಯಾರೂ ವಾದಿಸಬಾರದು ಎಂದು ಘೋಷಣೆ ಕೂಗುವುದಿಲ್ಲ, ಕರಪತ್ರ ಹಂಚುವುದಿಲ್ಲ. ಆದರೆ, ಇತ್ತೀಚೆಗೆ ಈ ಪ್ರವೃತ್ತಿ ಹೆಚ್ಚಾಗಿದೆ. ಅತ್ಯಾಚಾರ, ಕೊಲೆ ಮತ್ತು ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದವರ ಮೇಲೆ ಪ್ರೀತಿ ತೋರಿಸಿದ ವಕೀಲರು ಇಂದು ನಳಿನಿ, ಅಮೂಲ್ಯ, ಆರಿದ್ರಾ ಎಂಬ ಎಳಸುಗಳ ವಿರುದ್ಧ ಬ್ರಹ್ಮಾಸ್ತ್ರ ಹೂಡುತ್ತಿರುವುದು ಏಕೆ? ಅಸಲಿಗೆ ಇದು ನ್ಯಾಯಾಂಗ ನಿಂಧನೆಯಲ್ಲವೇ? ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವುದು ನಿಜವಾದ ದೇಶದ್ರೋಹವಲ್ಲವೇ? ಈ ಪ್ರಶ್ನೆಗೆಲ್ಲಾ ಉತ್ತರಿಸುವವರು ಯಾರು……..?

(ಲೇಖಕರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...