ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಕಾಂಗ್ರೆಸ್‌ನ ಮಾಲಾ ನಾರಾಯಣ್‌ರಾವ್ ಅವರ ವಿರುದ್ಧ ಸುಮಾರು 20,448 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್ ಶಾಸಕ ನಾರಾಯಣರಾವ್‌ರವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಅನುಕಂಪದ ಅಲೆ ಕಾಂಗ್ರೆಸ್‌ಗೆ ದಕ್ಕಿಲ್ಲದಿರುವುದು ಸ್ಪಷ್ಟವಾಗಿದೆ.
ಬಿಜೆಪಿಯ ಶರಣು ಸಲಗರರವರು 70,556 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಮಾಲಾ ನಾರಾಯಣ್‌ರಾವ್ 50,108 ಮತಗಳನ್ನಷ್ಟೆ ಪಡೆಯಲು ಸಫಲರಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಸೈಯದ್ ಅಲಿ 11,390 ಮತಗಳನ್ನು ಪಡೆದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಖೂಬಾ 9 ಸಾವಿರದಷ್ಟು ಮತಗಳನ್ನು ಪಡೆದರೆ, ಅಬ್ದುಲ್ ಚೌಧರಿ ಎನ್ನುವ ಪಕ್ಷೇತರ ಅಭ್ಯರ್ಥಿ ಸುಮಾರು 2,200 ಓಟು ಪಡೆದಿದ್ದಾರೆ.
ಮರಾಠಿಗರ ಬೆಂಬಲ
ಲಿಂಗಾಯತರು, ಮುಸ್ಲಿಮರ ನಂತರ ಮತದಾರರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಮರಾಠಿ ಭಾಷಿಕರು ಇಲ್ಲಿ ನಿರ್ಣಾಯಕ. ಕಳೆದ ಮೂರು ದಶಕಗಳಲ್ಲಿ ಹಿಂದೂತ್ವದ ಕಡೆ ಹೊರಳಿದ ಇವರೆಲ್ಲ ಕಳೆದ ಸಲ ಸರಳ ನಡೆಯ ಕಾಂಗ್ರೆಸ್‌ನ ನಾರಾಯಣರಾವ್ ಪರ ಇದ್ದರು ಎನ್ನಲಾಗಿದೆ.
ಈ ಸಲ ಇಲ್ಲಿ ಮರಾಠಾ ಸಮುದಾಯ ಸಭೆ ನಡೆಸಿ ಎನ್‌ಸಿಪಿಯಿಂದ ಅಭ್ಯರ್ಥಿಯನ್ನು ಹಾಕಿತು. ಆದರೆ ಈ ಅಭ್ಯರ್ಥಿ ಕೊನೆ ಕ್ಷಣದಲ್ಲಿ ಬಿಜೆಪಿ ಪರ ಬೆಂಬಲ ಘೋಷಿಸಿ ಕಣದಿಂದ ಹಿಂದೆ ಸರಿದರು! ಇದೆಲ್ಲವೂ ಬಿಜೆಪಿಗೆ ವರದಾನವಾಗಿದೆ.
ನಿಗಮಗಳು, ಅನುಭವ ಮಂಟಪವೂ….
ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ವದಂತಿ ಇತ್ತು. ಅದಕ್ಕೆ ತಕ್ಕಂತೆಯೇ ಅವರು ಚುನಾವಣೆ ಘೋಷಣೆಗೆ ಮೊದಲು ಇಲ್ಲಿ ಹಲವಾರು ಆಂತರಿಕ ಬಿಜೆಪಿ ಸಭೆಗಳನ್ನು ನಡೆಸಿದ್ದರು. ಅವರ ಗೆಲುವಿಗೆಂದೇ ನೂರಾರು ಕೋಟಿಗಳ ಅನುಭವ ಮಂಟಪ ಘೋಷಿಸಿ, ಭೂಮಿಪೂಜೆಯನ್ನು ಮಾಡಲಾಗಿತು. ಬೆಳಗಾವಿ ಮತ್ತು ಬಸವ ಕಲ್ಯಾಣ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮರಾಠಾ ಅಭಿವೃದ್ಧಿ ನಿಗಮ ಮತ್ತು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಯಿತು. ಕೊನಗೆ ಅಭ್ಯರ್ಥಿ ಬದಲಾದರೂ ಗೆಲುವು ಮಾತ್ರ ಬಿಜೆಪಿಯದಾಯಿತು.
- ಪಿ.ಕೆ. ಮಲ್ಲನಗೌಡರ್
ಇದನ್ನೂ ಓದಿ: ಮಸ್ಕಿ: ನೀರಾವರಿ ಹೋರಾಟದ ಕಾಲುವೆಯಲ್ಲಿ ಕೊಚ್ಚಿ ಹೋದ ಬಿಜೆಪಿಯ ಹಣದ ಹೊಳೆ…


