ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಮರಿಯಪ್ಪನಪಾಳ್ಯ ಮುಖ್ಯ ರಸ್ತೆಗೆ ಕಳಪೆ ಡಾಂಬರೀಕರಣ ಮಾಡಿರುವ ಪ್ರಕರಣ ಕುರಿತು ಗುರುವಾರ ಆರ್‌ಆರ್‌ನಗರ ವಿಭಾಗದ ಮೂವರು ಎಂಜಿನಿಯರ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೋಕಾಸ್ ನೋಟಿಸ್ ನೀಡಿದೆ.
ಡಾ. .ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಬಳಿಯ ರಸ್ತೆಯನ್ನು ಬೇಸ್ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಮೋದಿ ಭೇಟಿ ನೀಡುವ ಕೆಲವೇ ದಿನಗಳ ಮುಂಚೆ ಹಾಕಲಾಗಿತ್ತು. ಇದಕ್ಕೆ 6 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ, ಮೂರೇ ದಿನಕ್ಕೆ ರಸ್ತೆ ಕುಸಿದಿದ್ದು, ಡಾಂಬರ್ ಪದರ ಎದ್ದು ರಸ್ತೆ ಕಿತ್ತು ಬರುತ್ತಿದೆ.
ಈ ರಸ್ತೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿಷಯ ಪ್ರಧಾನಿ ಕಚೇರಿಯವರೆಗೂ ತಲುಪಿತ್ತು. ಇದರ ಬಗ್ಗೆ ವರದಿ ನೀಡುವಂತೆ ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿಗಳಿಗೆ ಸೂಚನೆ ಬಂದಿತ್ತು. ಇದರ ಬೆನ್ನಲೇ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಗುರುವಾರ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ: 24 ಕೋಟಿ ರೂಪಾಯಿ ವೆಚ್ಚ ಮಾಡಿದ ಬಿಬಿಎಂಪಿ
Bruhat Bengaluru Mahanagara Palike (BBMP) has issued showcause notice to three engineers of RR Nagar Division over "sub-standard" asphalting of Mariyappanapalya main road in Bangalore University campus.
CM Bommai yesterday said that an inquiry will be ordered into the matter. pic.twitter.com/DvzJfyGd6E
— ANI (@ANI) June 24, 2022
ಆರ್‌ಆರ್‌ನಗರದ ಕಾರ್ಯಪಾಲಕ ಎಂಜಿನಿಯರ್ ಎಂ.ಟಿ. ಬಾಲಾಜಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಜೆ ರವಿ ಮತ್ತು ಸಹಾಯಕ ಎಂಜಿನಿಯರ್ ಐ.ಕೆ. ವಿಶ್ವಾಸ್ ಅವರಿಗೆ ನೋಟಿಸ್ ನೀಡಲಾಗಿದೆ.
‘ಬೆಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಮರಿಯಪ್ಪನಪಾಳ್ಯ ಮುಖ್ಯರಸ್ತೆಯಲ್ಲಿ ಮಾಡಲಾಗಿರುವ ಡಾಂಬರೀಕರಣ ಕಾಮಗಾರಿ ಕಳಪೆ ಕಾಮಗಾರಿ ಎಂದು ವರದಿಯಾಗಿದ್ದು, ಕೆಲಸದ ಅನುಷ್ಠಾನದಲ್ಲಿ ಯಾವುದೇ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಎಂದು ಭಾವಿಸಲಾಗಿದೆ. ಆದ್ದರಿಂದ, ಪರೀಕ್ಷಾ ವರದಿಗಳ ಜೊತೆಗೆ ಈ ಸಮಸ್ಯೆಯ ಬಗ್ಗೆ ನಿಮ್ಮ ವಿವರಣೆಯನ್ನು ಕೇಳಲು ಈ ಮೂಲಕ ಶೋಕಾಸ್ ನೋಟಿಸ್ ನೀಡಲಾಗಿದೆ. ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ ಪ್ರಕಾರ ಕೆಲಸವನ್ನು ಕಾರ್ಯಗತಗೊಳಿಸಲು ವಿಫಲವಾದ ಮತ್ತು ಸೈಟ್‌ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾಗಿರುವ ಕಾರಣ ನಿಮ್ಮ ಮೇಲೆ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂಬುದನ್ನು ವಿವರಿಸಬೇಕು” ಎಂದು ಶೋಕಾಸ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದರು. ಆಗ ಬಿಬಿಎಂಪಿ 24 ಕೋಟಿ ರೂಪಾಯಿ ವೆಚ್ಚ ಮಾಡಿ ರಸ್ತೆ, ವಿದ್ಯುತ್ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿತ್ತು. ಇದರ ಭಾಗವಾಗಿ ಜ್ಞಾನಭಾರತಿಯ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಮಿಕ್ಸ್ (ಬೇಸ್) ಕ್ಯಾಂಪಸ್ ಬಳಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅದೇ ರಸ್ತೆ ಕುಸಿದಿದೆ.
ಈ ರಸ್ತೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲಾಣದಲ್ಲಿ ವೈರಲ್ ಆಗಿದ್ದವು. ಕಳಪೆ ಕಾಮಗಾರಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಾಕ್ಷಿ ಎಂದೆಲ್ಲ ಟೀಕೆ ವ್ಯಕ್ತವಾಗಿತ್ತು. ಇದರಿಂದ ಪ್ರಧಾನಿ ಕಚೇರಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ವರದಿ ಕೇಳಿತ್ತು. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಬಿಬಿಎಂಪಿಗೆ ವರದಿ ನೀಡಿ, ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ಇದನ್ನೂ ಓದಿ: ಮೋದಿ ಭೇಟಿಗಾಗಿ ಡಾಂಬರೀಕರಣ ಮಾಡಿದ್ದ 6 ಕೋಟಿ ವೆಚ್ಚದ ರಸ್ತೆ ಮೂರೇ ದಿನಕ್ಕೆ ಕುಸಿತ, ವರದಿ ಕೇಳಿದ ಪ್ರಧಾನಿ ಕಚೇರಿ


