ಜೈಪುರದ ಬಳೆ ಕಾರ್ಖಾನೆಯಲ್ಲಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುವಂತೆ ಒತ್ತಾಯಿಸಲಾಗಿದ್ದ ಏಳು ಮಕ್ಕಳು ಸೋಮವಾರ (ಅ.20) ರಾತ್ರಿ ತಪ್ಪಿಸಿಕೊಂಡು ಸ್ಮಶಾನದಲ್ಲಿ ಅಡಗಿಕೊಂಡಿದ್ದರು, ನಂತರ ಸ್ಥಳೀಯ ನಿವಾಸಿಗಳು ಅವರನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಯಭೀತರಾಗಿ, ಅಳುತ್ತಾ ಮಕ್ಕಳು ಸ್ಮಶಾನದಲ್ಲಿ ಇದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಭಟ್ಟಾ ಬಸ್ತಿ ಪೊಲೀಸ್ ಠಾಣೆ ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಯ ತಂಡವು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ರಕ್ಷಿಸಿದೆ.
“ಈ ಮಕ್ಕಳನ್ನು ಎರಡು ತಿಂಗಳ ಹಿಂದೆ ಬಿಹಾರದ ಹಳ್ಳಿಗಳಿಂದ ಪ್ರವಾಸದ ನೆಪದಲ್ಲಿ ಜೈಪುರಕ್ಕೆ ಕರೆತರಲಾಗಿತ್ತು. ನಂತರ ಜೈಪುರದ ಬಳೆ ಕಾರ್ಖಾನೆಯಲ್ಲಿ ಕಠಿಣ ಪರಿಸ್ಥಿತಿಯಲ್ಲಿ ದಿನಕ್ಕೆ 15-18 ಗಂಟೆಗಳ ಕಾಲ ಕೆಲಸ ಮಾಡುವಂತೆ ಅವರನ್ನು ಒತ್ತಾಯಿಸಲಾಗಿತ್ತು. ಕಿರುಕುಳ ತಡೆಯಲಾಗದೆ ಸೋಮವಾರ ರಾತ್ರಿ ಮಕ್ಕಳು ಕಾರ್ಖಾನೆಯಿಂದ ತಪ್ಪಿಸಿಕೊಂಡಿದ್ದರು. ಆದರೆ, ಭಟ್ಟಾ ಬಸ್ತಿಯ ಜನದಟ್ಟಣೆಯ ಪ್ರದೇಶಗಳಲ್ಲಿ ದಾರಿ ತಪ್ಪಿ ಸ್ಮಶಾನ ತಲುಪಿದ್ದರು. ಅಲ್ಲಿ ಅಡಗಿಕೊಂಡಿದ್ದರು” ಎಂದು ಭಟ್ಟಾ ಬಸ್ತಿ ಪೊಲೀಸ್ ಠಾಣೆಯ ಅಧಿಕಾರಿ ದೀಪಕ್ ತ್ಯಾಗಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆರಂಭದಲ್ಲಿ ಮಕ್ಕಳು ಮಾತನಾಡಲು ನಿರಾಕರಿಸಿದ್ದರು. ನಂತರ ಸಂಸದ್ ಮಿಯಾ ಎಂಬಾತ ಅವರನ್ನು ಜೈಪುರಕ್ಕೆ ಕರೆತಂದಿರುವುದಾಗಿ ತಿಳಿಸಿದರು ಎಂದು ಪೊಲೀಸರು ವಿವರಿಸಿದ್ದು, ಆರೋಪಿ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಕಾರ್ಖಾನೆಯಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಮಕ್ಕಳು ಆರೋಪಿಸಿದ್ದಾರೆ. ದಿನಕ್ಕೆ ಒಂದು ಬಾರಿ ಮಾತ್ರ ಊಟ ನೀಡುತ್ತಿದ್ದರು. 18 ಗಂಟೆಗಳ ಕಾಲ ಕೆಲಸ ಮಾಡುವಾಗ ಅನಾರೋಗ್ಯಕ್ಕೆ ಒಳಗಾದರೆ ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ.
ಜೈಪುರದ ಬಳೆ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರ ಸಮಸ್ಯೆ ದಶಕಗಳಷ್ಟು ಹಳೆಯದಾಗಿದ್ದು, ಕಳೆದ ಕೆಲವು ವರ್ಷಗಳಿಂದ ಅಂತಹ ಕಾರ್ಖಾನೆಗಳ ಮೇಲೆ ಹಲವಾರು ದಾಳಿಗಳು ನಡೆದಿವೆ.
ಪೊಲೀಸರ ಪ್ರಕಾರ, ಮಕ್ಕಳ ಕೈಗಳು ಗಾಜಿನ ಬಳೆಗಳ ಸಂಕೀರ್ಣವಾದ ಕೆಲಸ ಮಾಡುವಷ್ಟು ಚಿಕ್ಕದಾಗಿರುವುದರಿಂದ ಮತ್ತು ವಯಸ್ಕರಿಗೆ ನೀಡುವ ಅರ್ಧದಷ್ಟು ವೇತನಕ್ಕೆ ಅವರನ್ನು ಕೆಲಸ ಮಾಡಿಸಬಹುದು ಎಂಬ ಕಾರಣದಿಂದಾಗಿ ಕಾರ್ಖಾನೆಗಳ ಮಾಲೀಕರು ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ವಸಾಹತುಶಾಹಿಗಿಂತ ‘ರಾಜಕೀಯ ಇಸ್ಲಾಂ’ ಸನಾತನಕ್ಕೆ ದೊಡ್ಡ ಹೊಡೆತ ನೀಡಿದೆ: ಯೋಗಿ ಆದಿತ್ಯನಾಥ್


