ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಶುಕ್ರವಾರ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿಯ ಚರಂಡಿಯಲ್ಲಿ ಹಳ್ಳದಲ್ಲಿ ಏಳು ಭ್ರೂಣಗಳನ್ನು ಡಬ್ಬಗಳಲ್ಲಿ ಹಾಕಿ ತೇಲಿ ಬಿಟ್ಟಿದ್ದಾರೆ.
ಐದು ಚಾಕಲೇಟ್ ಡಬ್ಬಿಗಳಲ್ಲಿ ಗರ್ಭಪಾತ ಮಾಡಿ ತೆಗೆದ ಏಳು ಭ್ರೂಣಗಳನ್ನು ಹಾಕಿ ಚರಂಡಿಗೆ ಎಸೆಯಲಾಗಿದೆ. ಇದನ್ನು ಕಂಡ ಜನತೆ ಗಾಬರಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೀಗೆ ಭ್ರೂಣಗಳನ್ನು ಯಾರು ಎಸೆದಿದ್ದಾರೆ ಎನ್ನುವುದು ಇನ್ನು ನಿಗೂಢವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮಹೇಶ್ ಕೋಣಿ ಘಟನೆಯನ್ನು ಖಚಿತಪಡಿಸಿದ್ದು, ಮೇಲ್ನೋಟಕ್ಕೆ ಇದು ಲಿಂಗ ಪತ್ತೆ ಮತ್ತು ಭ್ರೂಣಹತ್ಯೆಯ ಪ್ರಕರಣವಾಗಿ ಕಂಡುಬರುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮಂಡ್ಯ: ಬರ್ಬರವಾಗಿ ಕೊಲೆಯಾದ ಮಹಿಳೆಯರ ಸುಳಿವು ನೀಡಿದರೆ 1 ಲಕ್ಷ ಬಹುಮಾನ
’ಎಲ್ಲಾ ಭ್ರೂಣಗಳಿಗೂ ಐದು ತಿಂಗಳಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಮೂಲಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಭ್ರೂಣಗಳನ್ನು ಏಕೆ ಹತ್ಯೆ ಮಾಡಲಾಗಿದೆ, ಎಲ್ಲಿಂದ ತರಲಾಗಿದೆ, ಯಾವಾಗ ಹಳ್ಳಕ್ಕೆ ಎಸೆಯಲಾಗಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಮಹೇಶ್ ಕೋಣಿ ತಿಳಿಸಿದ್ದಾರೆ.
’ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಭ್ರೂಣಗಳನ್ನು ಇರಿಸಲಾಗಿದೆ. ದೂರು ದಾಖಲಾದ ನಂತರ, ಭ್ರೂಣಗಳನ್ನು ಪರೀಕ್ಷೆ ನಡೆಸಲು ಬೆಳಗಾವಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕೊಂಡೊಯ್ಯಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ನಂತರ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುವುದು ’ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೋದಿ ಭೇಟಿಗಾಗಿ ಡಾಂಬರೀಕರಣ ಮಾಡಿದ್ದ 6 ಕೋಟಿ ವೆಚ್ಚದ ರಸ್ತೆ ಮೂರೇ ದಿನಕ್ಕೆ ಕುಸಿತ, ವರದಿ ಕೇಳಿದ ಪ್ರಧಾನಿ ಕಚೇರಿ


