ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದರೆ ಬಂದ್‌ಗೆ ಹಲವು ವಲಯಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಬಂದ್ ಮಾಡಿದರೇ ತೊಂದರೆ, ನಷ್ಟ ಅನುಭವಿಸುವುದು ನಾವೇ ಎನ್ನುವ ಹೇಳಿಕೆಗಳು ಬರುತ್ತಿದೆ.
ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ, ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೇ ಕಷ್ಟ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಿ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ, “ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ಕರೆ ನೀಡಲಾಗಿದೆ. ಬಂದ್ ಮಾಡುವುದರಿಂದ ಏನು ಪ್ರಯೋಜನ..? ಅನುಕೂಲ ಯಾರಿಗೆ..? ಅನನುಕೂಲ ಯಾರಿಗೆ..? ಅನ್ನೋದು ಮುಖ್ಯ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ: ದೇಶದ ನಾಯಕರ ಮೌನ ಪ್ರಶ್ನಿಸಿದ ಅಂತರರಾಷ್ಟ್ರೀಯ ಮಾಧ್ಯಮಗಳು
’ಎಂಇಎಸ್ ಸೇರಿದಂತೆ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರ ಮುಲಾಜಿಲ್ಲದೆ ಮುಂದಾಗಬೇಕು. ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸರ್ಕಾರ ಮೀನಾಮೇಷ ಇಲ್ಲದೇ ಮುಂದಾಗಬೇಕು. ಕಠಿಣ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆಯಿಂದ ನಮ್ಮ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‌ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು’ ಎಂದು ಮಾಜಿ ಸಿಎಂ ಹೇಳಿದ್ದಾರೆ.
’ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆಗುತ್ತದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನ್ನಡ ದ್ರೋಹಿಗಳನ್ನು ಹತ್ತಿಕ್ಕಲು ಏನು ಬೇಕೋ ಆ ಕ್ರಮ ಕೈಗೊಳ್ಳಲು ಒತ್ತಡ ಹೇರಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
“ಎಂಇಎಸ್ ಸಂಘಟನೆಯನ್ನು ಕಾನೂನಾತ್ಮಕವಾಗಿ ನಿಷೇಧ ಮಾಡಬೇಕು. ಸರಿಯಾದ ತೀರ್ಮಾನ ಮಾಡಬೇಕು. ಕೋರ್ಟ್‌ಗೆ ಹೋಗಿ ತಡೆ ತರುವಂತೆ ನಿಷೇಧ ಹೇರಬಾರದು. ಸರ್ಕಾರ ಈ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಿ” ಎಂದಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಸಿರುವ ಪುಂಡಾಟಿಕೆ ವಿರೋಧಿಸಿರುವ ವಿವಿಧ ಕನ್ನಡ ಪರ ಸಂಘಟನೆಗಳು, ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿ, ಕರೆ ನೀಡಿವೆ.


