ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರುದ್ರಣ್ಣ ಯಡವಣ್ಣನವರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ಸೋಮು ಹಾಗೂ ರುದ್ರಣ್ಣ ಅವರ ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ವಿರುದ್ದ ಪ್ರಕರಣದ ದಾಖಲಾಗಿದೆ.
ಮೃತ ರುದ್ರಣ್ಣ ಅವರ ತಾಯಿ ಮಲ್ಲವ್ವ ನೀಡಿದ ದೂರಿನ ಆಧಾರದ ಮೇಲೆ ಮೂವರ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರುದ್ರಣ್ಣ ಅವರನ್ನು ನವೆಂಬರ್ 5ರಂದು ಸವದತ್ತಿ ತಹಶೀಲ್ದಾರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ತನ್ನ ವರ್ಗಾವಣೆ ಹಿಂದೆ ತಹಶೀಲ್ದಾರ್ ಬಸವರಾಜ್ ನಾಗರಾಳ, ಸೋಮು ಹಾಗೂ ಅಶೋಕ ಕಬ್ಬಲಿಗೇರ್ ಅವರ ಕೈವಾಡ ಇದೆ ಎಂದು ರುದ್ರಣ್ಣ ಆರೋಪಿಸಿದ್ದರು. ಸಾವಿಗೂ ಮುನ್ನ ತಮ್ಮ ಇತರ ಸಹೋದ್ಯೋಗಿಗಳಿಗೆ ವಾಟ್ಸಾಪ್ ಸಂದೇಶ ಕಳಿಸಿದ್ದರು.
“ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಮತ್ತು ಸೋಮು ಅವರೇ ನೇರ ಕಾರಣ. ಅಶೋಕ್ ಕಬ್ಬಲಿಗೇರ್ ಕೂಡ ಕಾರಣ. ಬೆಳಗಾವಿ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು” ಎಂದು ರುದ್ರಣ್ಣ ವಾಟ್ಸಾಪ್ ಸಂದೇಶದಲ್ಲಿ ಹೇಳಿದ್ದರು ಎನ್ನಲಾಗಿದೆ.
ಸಂದೇಶ ಕಳುಹಿಸಿದ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿದ್ದ ರುದ್ರಣ್ಣ, ತಹಶೀಲ್ದಾರ್ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮಗನ ಸಾವಿಗೆ ಬಸವರಾಜ್ ನಾಗರಾಳ, ಸೋಮು ಹಾಗೂ ಅಶೋಕ್ ಕಬ್ಬಲಿಗೇರ್ ಕಾರಣ. ಅವರನ್ನು ಬಂಧಿಸಬೇಕು, ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರುದ್ರಣ್ಣ ತಾಯಿ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಮೂವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ನನ್ನ ಪಿಎ ಭಾಗಿಯಾದ ಬಗ್ಗೆ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
“ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರಣ್ಣ ಯಡವಣ್ಣವರ ಅವರ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸೋಮು ಭಾಗಿಯಾದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


