ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ನೂತನ ದೇವಸ್ಥಾನದ ಬ್ರಹ್ಮಕಲಶ (ಉದ್ಘಾಟನೆ) ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಮುಸ್ಲಿಮರ ವಿರುದ್ದ ಕೋಮುದ್ವೇಷದ ಭಾಷಣ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಯೇ ಶಾಂತಿ, ಸಾಮರಸ್ಯದ ಊರಿನಲ್ಲಿ ಮತೀಯದ್ವೇಷ ಕಾರಿರುವುದಕ್ಕೆ ಗ್ರಾಮದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ತೆಕ್ಕಾರು ಗ್ರಾಮದ ಭಟ್ರಬೈಲಿನ ದೇವರಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮವನ್ನು 2025 ಏಪ್ರಿಲ್ 25ರಿಂದ ಮೇ 3ರವರೆಗೆ ಆಯೋಜಿಸಲಾಗಿತ್ತು. ಕೊನೆಯ ದಿನವಾದ ಶನಿವಾರ (ಮೇ.3) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹರೀಶ್ ಪೂಂಜಾ, ಬ್ಯಾರಿ ಸಮುದಾಯದವರ (ಸ್ಥಳೀಯ ಮುಸ್ಲಿಮರು) ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ.
ಈ ಕುರಿತ ಕೆಲವು ವಿಡಿಯೋ ತುಣುಕುಗಳು ನಾನುಗೌರಿ.ಕಾಂಗೆ ಲಭ್ಯವಾಗಿದೆ. ತುಳು ಭಾಷೆಯಲ್ಲಿ ಶಾಸಕ ಮಾಡಿರುವ ಪ್ರಚೋದನಕಾರಿ ಭಾಷಣದ ಕನ್ನಡ ಅನುವಾದ ಕೆಳಗಿದೆ.
“ಬ್ಯಾರಿಗಳ (ಮುಸ್ಲಿಮರ) ಆಕ್ರಮಣದಿಂದ ಅಯೋಧ್ಯೆಯ ರಾಮ ಮಂದಿರ ಮಸೀದಿಯಾದ ಬಳಿಕ ನಾವು 500 ವರ್ಷ ಕಾದೆವು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು.. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಂದಾಗ ಅರ್ಥ ಮಾಡಿಕೊಳ್ಳಲಿಲ್ಲ. ನಾವು 500 ವರ್ಷ ಕಾದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದೆವು.”
Video Credit : Screen record From youtube.com/@tulutimeslive
“ತೆಕ್ಕಾರಿನಲ್ಲಿ ಒಬ್ಬನೇ ಒಬ್ಬ ಬ್ಯಾರಿ (ಮುಸ್ಲಿಂ) ಇಲ್ಲದಿದ್ದಾಗಲೂ ನಮ್ಮ ಹಿರಿಯರು ಗೋಪಾಲಕೃಷ್ಣ ದೇವರನ್ನು ನಂಬಿಕೊಂಡು ಬಂದಿದ್ದರು. ಬಳಿಕ ಬ್ಯಾರಿಗಳ ಅಥವಾ ಟಿಪ್ಪುವಿನ ಆಕ್ರಮಣದಿಂದ ಗೋಪಾಲಕೃಷ್ಣ ದೇವಸ್ಥಾನ ಧ್ವಂಸಗೊಂಡು ನೆಲದಡಿಗೆ ಹೋದರೂ, ನಾವು ಹಿಂದೂ ಸಮಾಜ ನಿದ್ದೆಯಲ್ಲಿದ್ದೆವು, ನಾವು ಎದ್ದಿರಲಿಲ್ಲ. ಕಾಲಚಕ್ರ ಉರುಳಿ, ಉರುಳಿ ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆ ಆದ ಮರುವರ್ಷ, ಅಂದರೆ 2025ರಲ್ಲಿ ತೆಕ್ಕಾರಿನಲ್ಲಿ ಇರುವ ಅತ್ಯಲ್ಪ ಹಿಂದೂ ಸಮಾಜ ಒಂದಾಗಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಠೆ ಮಾಡುವ ಸಂಕಲ್ಪ ಬಂತಲ್ವ ಅದಕ್ಕೆ ಗೋಪಾಲಕೃಷ್ಣ ದೇವರ ಪ್ರೇರಣೆ ಇದೆ.”
“ಇತಿಹಾಸವನ್ನು ಮತ್ತೊಮ್ಮೆ ನೀವು ಮರೆತ್ತದ್ದೇ ಆದರೆ, ನಿಮ್ಮ ಊರಿನಲ್ಲಿರುವುದು 150 ಹಿಂದೂಗಳ ಮನೆಗಳು, ಒಂದು ಸಾವಿರಕ್ಕಿಂತಲೂ ಅಧಿಕ ಇರುವುದು ಬ್ಯಾರಿಗಳು. ಇನ್ನು 10 ವರ್ಷ ಕಳೆದರೆ 1,200 ಇರುವ ಬ್ಯಾರಿಗಳ ಸಂಖ್ಯೆ 600ಕ್ಕೆ ಇಳಿಯುವುದಿಲ್ಲ. ಇನ್ನು 10 ವರ್ಷ ಕಳೆದರೆ ತೆಕ್ಕಾರಿನ ಬ್ಯಾರಿಗಳ ಸಂಖ್ಯೆ 5 ಸಾವಿರ ಆಗುತ್ತದೆ. 5 ಸಾವಿರದಿಂದ 10 ಸಾವಿರ ಆದರೂ, ಇಲ್ಲಿರುವ ಹಿಂದೂ ಸಮಾಜ ಸನಾತನವಾಗಿ ಸಾವಿರ ವರ್ಷ ಗೋಪಾಲಕೃಷ್ಣ ದೇವರನ್ನು ಆರಾಧನೆ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡುವ ದಿನ, ಇಂದಿನ ಬ್ರಹ್ಮಕಲಶೋತ್ಸವದ ದಿನ.”
Video Credit : Screen record From youtube.com/@tulutimeslive
“ಬ್ಯಾರಿಗಳಲ್ಲಿ ಎಷ್ಟು ಜಾತಿ ಇದೆ ಎಂದು ಕೇಳಿದರೆ ಅಂಕಿ ಅಂಶ ಹೇಳುತ್ತದೆ, ಮೊನ್ನೆ ಸಿದ್ದರಾಮಯ್ಯ ಜನಗಣತಿ ಮಾಡಿದರು, ಅದರಲ್ಲಿ ಬ್ಯಾರಿಗಳಲ್ಲಿ ಜಾತಿ ಇದೆಯಾ ಕೇಳಿದರೆ, ಜಾತಿ ಇಲ್ಲ ಎಂದಿದ್ದಾರೆ. ಬ್ಯಾರಿಗಳಲ್ಲಿ ಕನಿಷ್ಠ 70-74 ಜಾತಿಗಳಿವೆ. ಆದರೆ, ನಮಗೆ ಯಾವ ಜಾತಿ ಎಂದು ಯಾರಿಗೂ ಗೊತ್ತಿಲ್ಲ. ನಮಗೆ ಗೊತ್ತಿರುವುದು ಏನು ಎಂದರೆ, ಉಸ್ಮಾನಾಕ, ಅಬ್ದುಲ್ಲಾಕ, ಇಬ್ರಾಹಿಂ ಎಲ್ಲಾ ಬ್ಯಾರಿ ಎಂದೇ ಗೊತ್ತಿರುವುದು. ಆದರೆ, ಹಿಂದೂ ಸಮಾಜದಲ್ಲಿ ನಾವು ಆ ರೀತಿಯಲ್ಲ. ಅವನು ಯಾರು..ಅವನು ಬ್ರಾಹ್ಮಣ, ಇವನು ಯಾರು..ಅವನು ಶೆಟ್ಟಿ, ಅವನು ಯಾರು.. ಅವನು ಬಿಲ್ಲವ, ಇವನು ಯಾರು..ಅವನು ಗೌಡ, ಇವನು ಯಾರು..ಅವನು ಕುಲಾಲ, ಈ ರೀತಿಯ ಜಾತಿ-ಜಾತಿ ನಮಗೆ ಮಾತ್ರ ಗೊತ್ತಿರುವುದಲ್ಲ, ಬ್ಯಾರಿಗಳಿಗೂ ಗೊತ್ತಿದೆ.”
Video Credit : Screen record From youtube.com/@tulutimeslive
“ಒಂದು ಸರ್ಕಾರಿ ಜಾಗವಿದೆ, ಅದನ್ನು ಒಬ್ಬ ಬ್ಯಾರಿ ಅತಿಕ್ರಮಣ ಮಾಡಿ ಅಡಿಕೆ ಗಿಡ ನೆಟ್ಟಿದ್ದಾನೆ. ನೀವು ಏನಾದರು ಮಾಡಿ ಸಹಕಾರ ಮಾಡಿದರೆ ನಮಗೆ ದೇವಸ್ಥಾನ ಮಾಡಬಹುದು ಎಂದು ತೆಕ್ಕಾರಿನವರು ಹೇಳಿದ್ದರು. ಎಲ್ಲಾ ಯುವಕರು ಒಂದು ನೆನಪು ಇಟ್ಟುಕೊಳ್ಳಿ ಆವತ್ತು ಇದ್ದಿದ್ದು ಬಿಜೆಪಿ ಸರ್ಕಾರ. ಆವತ್ತು ನಾನು ತಹಶೀಲ್ದಾರ್‌ಗೆ ಕರೆ ಮಾಡಿ ಮರುದಿನ ಹೋಗಿ ಸ್ಥಳ ಮಹಜರು ಮಾಡಿ ವರದಿ ಕೊಡಿ ಎಂದು ಹೇಳಿದ್ದೆ. ನಾನು ಹೇಳಿದ ಮರುದಿನ ತಹಶೀಲ್ದಾರ್ ಬಂದು ಸ್ಥಳ ತನಿಖೆ ಮಾಡಿ ವರದಿ ಕೊಟ್ಟರು. ವರದಿ ಕೊಟ್ಟ ಬಳಿಕ ಡಿಸಿಯಾದ ರವಿ ಅವರಿಗೆ ಆ ಜಾಗದಲ್ಲಿ ಗೋಪಾಲಕೃಷ್ಣ ದೇವಸ್ಥಾನ ಇದೆ ಎಂದು ನಾನು ಹೇಳಿದ್ದೆ. ತಕ್ಷಣ ಆ ಜಾಗದ ಆರ್‌ಟಿಸಿಯನ್ನು ಗೋಪಾಲಕೃಷ್ಣ ದೇವರ ಹೆಸರಿಗೆ ಮಾಡಿ ಕೊಡಿ ಎಂದಿದ್ದೆ. 25 ಸೆಂಟ್ಸ್ ಜಾಗ ಗೋಪಾಲಕೃಷ್ಣ ದೇವರ ಹೆಸರಿಗೆ ಆಯ್ತು. ಇದು ನಾನು, ಡಿಸಿ ಸೇರಿದಂತೆ ಯಾರ ಸಾಧನೆಯೂ ಅಲ್ಲ, ಇತಿಹಾಸದಲ್ಲಿ ಈ ಮೊದಲು ಈ ರೀತಿ ಅಗಿಲ್ಲ, ಮುಂದೆಯೂ ಆಗಲ್ಲ.”
Video Credit : Screen record From youtube.com/@tulutimeslive
“ಇಲ್ಲಿನ ಕಂತ್ರಿ (ದುಷ್ಟ) ಬ್ಯಾರಿಗಳು ಟ್ಯೂಬ್‌ಲೈಟ್ ಪುಡಿಗೈದಾಗ, ಸಂಖ್ಯೆ ಕಡಿಮೆ ಇದ್ದರೂ ಜನ ಸಾಗರ ಇರುವ ಗ್ರಾಮದ ರೀತಿ ತೆಕ್ಕಾರಿನವರು ಯಾರೂ ಎದೆಗುಂದಲಿಲ್ಲ. ಅಣ್ಣ ದಿನ ಬೆಳಗಾದರೆ ತೆಕ್ಕಾರಿನ ಕಂತ್ರಿ ಬ್ಯಾರಿಗಳು ಬಂದು ಟ್ಯೂಬ್ ಲೈಟ್ ಪುಡಿ ಮಾಡುತ್ತಿದ್ದಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ನಮ್ಮ ಯುವಕರು ಹೇಳಿದ್ದಾರೆ. ನಾನು ಹೇಳಿದೆ ನೀವು ಏನೂ ತಲೆಬಿಸಿ ಮಾಡಿಕೊಳ್ಳಬೇಡಿ. ಬ್ರಹ್ಮಕಲಶ ಆಗಿ ನಾಡಿದ್ದು ದೊಡ್ಡ ಕಲಶ ಆಗುವ ಮುನ್ನ ಟ್ಯೂಬ್‌ಲೈಟ್ ಪುಡಿ ಮಾಡಿದವರಲ್ಲಿ ಯಾರಿಗಾದರು ಗೊತ್ತಾಗುತ್ತದೆ. ಗೋಪಾಲಕೃಷ್ಣ ದೇವರು ಎಲ್ಲಾದರು ತೋರಿಸುತ್ತಾರೆ, ನೀವು ಗಡಿಬಿಡಿ ಮಾಡಲು ಹೋಗಬೇಡಿ ಎಂದು ಹೇಳಿದೆ.”
“ನಿಮಗಿದು ಗೊತ್ತಿರಲಿ, ನಮ್ಮ ದೇವಸ್ಥಾನದ ನಮ್ಮ ದೊಡ್ಡ ತಪ್ಪು ಯಾವುದೆಂದರೆ, ನಾವು ಎಲ್ಲರನ್ನು ಸೌಹಾರ್ದತೆಯಿಂದ ಕೊಂಡೊಯ್ಯಲು ನೋಡುವುದು. ನಾವು ಮಸೀದಿಗೆ ಏಕೆ ಆಹ್ವಾನ ಪತ್ರಿಕೆ ಕೊಡಬೇಕಿತ್ತು? ಮಸೀದಿಗೆ ಹೋಗಿ ಆಹ್ವಾನ ಪತ್ರಿಕೆ ಕೊಟ್ಟಿದ್ದಕ್ಕಲ್ವ ಟ್ಯೂಬ್ ಲೈಟ್ ಪುಡಿಯಾಗಿದ್ದು? ಆಹ್ವಾನ ಪತ್ರಿಕೆ ಕೊಟ್ಟಿಲ್ಲದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನಮಗೂ ಅವರಿಗೂ (ಮುಸ್ಲಿಮರು) ಸಂಬಂಧ ಇಲ್ಲ. ನಾವು ಯಾವುದನ್ನೂ ಸರಿದೂಗಿಸಿಕೊಂಡು ಹೋಗುವ ಅಗತ್ಯ ಇಲ್ಲ. ನಾವು ಹಿಂದೂಗಳು ಹಿಂದೂಗಳೇ, ಅದರಲ್ಲಿ ಎರಡು ಮಾತಿಲ್ಲ. ಟ್ಯೂಬ್‌ಲೈಟ್ ಪುಡಿ ಮಾಡಿದ್ದು ನಾನೇ ಎಂದು, ಕಂತ್ರಿ ಬ್ಯಾರಿಯನ್ನು ತೆಕ್ಕಾರಿನ ಜನತೆಯ ಮುಂದೆ ಗೋಪಾಲಕೃಷ್ಣ ದೇವರು ತೋರಿಸಲಿ”
Video Credit : Screen record From youtube.com/@tulutimeslive
“ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಮುಸ್ಲಿಮರು ವಾಸವಿರುವ ಗ್ರಾಮಗಳಲ್ಲಿ ತೆಕ್ಕಾರು ಗ್ರಾಮವೂ ಒಂದು. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಜೈನರು ಬಹಳ ಅನ್ಯೋನ್ಯತೆಯಿಂದ ಬದುಕುತ್ತಿದ್ದೇವೆ. ನೂತನ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶಕ್ಕೆ ಮುಸ್ಲಿಮರು ಕೂಡ ಕೈಲಾದ ಸಹಾಯ ಮಾಡಿದ್ದಾರೆ. ಬ್ಯಾನರ್‌ಗಳನ್ನು ಹಾಕಿ ಸಂತೋಷದಿಂದ ಶುಭಕೋರಿದ್ದಾರೆ. ಕಾರ್ಯಕ್ರಮಕ್ಕೆ ಬಂದವರ ವಾಹನ ಪಾರ್ಕಿಂಗ್‌ಗೆ ಜಾಗ ಕೊಟ್ಟಿದ್ದಾರೆ. ಬ್ರಹ್ಮಕಲಶದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗ ಶಾಸಕರು ಬಂದು ಕೋಮುದ್ವೇಷದ ಭಾಷಣ ಮಾಡಿರುವುದು ಕೇದಕರ” ಎಂದು ತೆಕ್ಕಾರು ಗ್ರಾಮದ ವ್ಯಕ್ತಿಯೊಬ್ಬರು ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಗೃಹ ಸಚಿವರು ‘ಕೋಮುದ್ವೇಷ ನಿಗ್ರಹ ಘಟಕ’ ಘೋಷಿಸಿದ ದಿನವೇ ದ್ವೇಷ ಭಾಷಣ
ಮಂಗಳೂರು ನಗರದ ಹೊರವಲಯಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೇರಳದ ಮೂಲದ ಅಶ್ರಫ್ ಮತ್ತು ರೌಡಿ ಶೀಟರ್ ಸುಹಾಸ್ ಎಂಬವರ ಹತ್ಯೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಭಯದ ವಾತಾವಾರಣ ನಿರ್ಮಾಣವಾಗಿದೆ.
ಶನಿವಾರ ಮಂಗಳೂರಿಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪೊಲೀಸ್ ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಗೃಹ ಸಚಿವರು, ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಕೋಮುದ್ವೇಷ ನಿಗ್ರಹ ಘಟಕ’ (Anti Communal Force) ಆರಂಭಿಸುವುದಾಗಿ ಘೋಷಿಸಿದ್ದಾರೆ. ಕೋಮುದ್ವೇಷದ ಭಾಷಣ ಮಾಡುವ, ಹೇಳಿಕೆ ಕೊಡುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲು ಈ ಘಟಕಕ್ಕೆ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರ ನೀಡಲಾಗುವುದು ಎಂದಿದ್ದಾರೆ. ಆದರೆ, ಅದೇ ದಿನ ರಾತ್ರಿ ಜನ ಪ್ರತಿನಿಧಿಯಾದ ಶಾಸಕರೇ ಕೋಮುದ್ವೇಷದ ಭಾಷಣ ಮಾಡಿದ್ದಾರೆ. ಹಾಗಾಗಿ, ಶಾಸಕ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರಾ? ಎಂದು ಜನರು ಪ್ರಶ್ನಿಸಿದ್ದಾರೆ.
ಎರಡು ಕೋಮುಗಳ ಇಬ್ಬರು ವ್ಯಕ್ತಿಗಳ ಹತ್ಯೆಯಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಜನಪ್ರತಿನಿಧಿಯಾದ ಶಾಸಕ ಶಾಂತಿ, ಸಾಮರಸ್ಯ ಕಾಪಾಡಲು ಪ್ರಯತ್ನಿಸುವ ಬದಲು ಸೌಹಾರ್ದತೆಯ ಊರಿನಲ್ಲಿ ದ್ವೇಷ ಭಾಷಣ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಜನರು ಹೇಳಿದ್ದಾರೆ.
ಮಂಗಳೂರು| ಕೋಮು ಶಕ್ತಿಗಳ ನಿಗ್ರಹದ ಕುರಿತು ಗೃಹ ಸಚಿವರ ಹೇಳಿಕೆಯಲ್ಲಿ ವಿಶ್ವಾಸಾರ್ಹತೆಯ ಕೊರತೆ : ಸಿಪಿಎಂ


