ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಕಾಟಾಜೆಯಲ್ಲಿ ಮಲೆಕುಡಿಯ ವ್ಯಕ್ತಿಯ ಕೈ ಬೆರಳುಗಳನ್ನು ಕತ್ತರಿಸಿ, ಅವರ ಮಗನಿಗೆ ಮೆಣಸಿನ ಹುಡಿ ಎರಚಿ, ಅವರ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ (ಫೆ.19) ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.
ನೆರಿಯ ಅಣಿಯೂರು ಗ್ರಾಮದ ಗೋಪಾಲ ಗೌಡ (67), ಬಂದಾರು ಗ್ರಾಮದ ಎ.ದಮಯಂತಿ, ವಸಂತ, ನೆರಿಯ ಅಣಿಯೂರು ಗ್ರಾಮದ ಪುಷ್ಪಲತಾ ಶಿಕ್ಷೆಗೆ ಒಳಗಾದವರು.
ಗೋಪಾಲ ಗೌಡಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ, ದಮಯಂತಿ, ವಸಂತ ಹಾಗೂ ಪುಷ್ಪಲತಾ ಅವರಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 15 ಸಾವಿರ ರೂಪಾಯಿ ದಂಡ ವಿಧಿಸಿ ಒಂದನೇ ಹೆಚ್ಚುರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಹೆಚ್.ಎಸ್ ಅವರು ಆದೇಶ ಹೊರಡಿಸಿದ್ದಾರೆ.
ಗೋಪಾಲ ಗೌಡ ದಂಡ ಪಾವತಿಸಲು ವಿಫಲರಾದರೆ ಆರು ತಿಂಗಳು ಹೆಚ್ಚುವರಿಯಾಗಿ ಸಾದಾ ಜೈಲು ಶಿಕ್ಷೆ ಹಾಗೂ ಉಳಿದ ಅಪರಾಧಿಗಳು ದಂಡ ಪಾವತಿಸಲು ವಿಫಲರಾದರೆ ಮೂರು ತಿಂಗಳು ಹೆಚ್ಚುವರಿ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು. ಜೀವ ಬೆದರಿಕೆ ಒಡ್ಡಿದ್ದಕ್ಕೆ ನಾಲ್ವರು ಅಪರಾಧಿಗಳು ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ದಂಡದ ಮೊತ್ತ 1.45 ಲಕ್ಷ ರೂಪಾಯಿಯನ್ನು ಸಂತ್ರಸ್ತ ಸುಂದರ ಮಲೆಕುಡಿಯ ಅವರಿಗೆ ನೀಡಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಅವರಿಗೆ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ : ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಕಾಟಾಜೆಯ ಬಿ.ಎ ಸುಂದರ ಮಲೆಕುಡಿಯ ಅವರು 2015ರ ಜುಲೈ 26ರಂದು ಪತ್ನಿ ರೇವತಿ, ಮಕ್ಕಳಾದ ಪೂರ್ಣೇಶ್ ಮತ್ತು ಪೂರ್ಣಿಮಾ ಅವರೊಂದಿಗೆ ತಮ್ಮ ಸ್ವಾಧೀನದ ಜಮೀನಿನಲ್ಲಿ ಕಾಡು ಕಡಿಯುತ್ತಿದ್ದರು.
ಆಗ ಅಪರಾಧಿಗಳು ಸ್ಥಳಕ್ಕೆ ಬಂದು “ನಮ್ಮ ಜಾಗದಲ್ಲಿ ಏಕೆ ಕಾಡು ಕಡಿಯುತ್ತಿದ್ದೀರಿ?” ಎಂದು ಆಕ್ಷೇಪಿಸಿದ್ದರು. ಆಗ ಸುಂದರ ಮಲೆಕುಡಿಯ ಅವರು, “ಈ ಜಾಗ ಅರಣ್ಯ ಇಲಾಖೆಯವರು ನಮಗೆ ಬಿಟ್ಟುಕೊಟ್ಟದ್ದು” ಎಂದಿದ್ದಾರೆ. ಆಗ ಗೋಪಾಲ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಂದರ ಮಲೆಕುಡಿಯ ಅವರ ಬೆರಳುಗಳನ್ನು ಕತ್ತರಿಸಿ ಕೊಲೆಗೆ ಯತ್ನಿಸಿದ್ದರು. ಅಲ್ಲದೆ, ಸುಂದರ ಅವರ ಮಗ ಪೂರ್ಣೇಶ್ ಅವರ ಮೇಲೆ ಮೆಣಸಿನ ಹುಡಿ ಎರಚಿದ್ದರು. “ಇನ್ನು ಈ ಜಾಗಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಒಟ್ಟು 29 ಸಾಕ್ಷಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. 52 ದಾಖಲೆಗಳನ್ನು ಗುರುತಿಸಿದೆ. ಅಲ್ಲದೆ, ಸುಂದರ ಮಲೆಕುಡಿಯ ಅವರಿಗೆ ಚಿಕಿತ್ಸೆ ನೀಡಿದ್ದ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ.ನಮ್ರತ್ ಭಾನು ಮತ್ತು ಎ.ಜೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ದಿನೇಶ್ ಕದಮ್ ಸಾಕ್ಷ್ಯ ನುಡಿದಿದ್ದರು ಎಂದು ವರದಿಯಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿದ್ದ ಬೆರಳಿನ ತುಂಡು ಸುಂದರ ಮಲೆಕುಡಿಯ ಅವರದ್ದು ಎಂದು ಡಾ. ಶಹನಾಝ್ ಫಾತಿಮಾ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಡಿಎನ್ಎ ವಿಭಾಗ ತಜ್ಞರು ಸಾಕ್ಷ್ಯ ನುಡಿದಿದ್ದರು ಎಂದು ವರದಿಗಳು ಹೇಳಿವೆ.
ಬಂಟ್ವಾಳ ಉಪವಿಭಾಗದ ಅಂದಿನ ಡಿವೈಎಸ್ಪಿ ರಾಹುಲ್ ಕುಮಾರ್ ಪ್ರಕರಣದ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಜನಪರ ಸಂಘಟನೆಗಳ ಹೋರಾಟಕ್ಕೆ ಜಯ
ಸುಂದರ ಮಲೆಕುಡಿಯ ಮತ್ತು ಅವರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ ಆಪರಾಧಿಗಳಾದ ಗೋಪಾಲಗೌಡ ಮತ್ತು ಇತರರ ಬಂಧನ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳು ತೀವ್ರ ಹೋರಾಟ ನಡೆಸಿತ್ತು. ಆ ಹೋರಾಟಕ್ಕೆ ನ್ಯಾಯಾಲಯದ ತೀರ್ಪಿನ ಮೂಲಕ ಜಯ ಸಿಕ್ಕಂತಾಗಿದೆ.

ಶೇ.90ರಷ್ಟು ಒಂದೇ ಜಾತಿಯವರು ಮಲ ಬಾಚುತ್ತಿರುವುದು ಏಕೆ: ನ್ಯಾ.ನಾಗಮೋಹನ್ ದಾಸ್


