ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಗಳಿಗೆ ಹಿಂದುತ್ವ ಸಂಘಟನೆಗಳು ಸನ್ಮಾನ ಮಾಡಿರುವುದನ್ನು ಖಂಡಿಸಿ ಇಂದು (ಅ.22) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಗೌರಿ ಬಳಗದಿಂದ ಪ್ರತಿಭಟನೆ ನಡೆಯಿತು.
ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ಗೌರಿ ಹತ್ಯೆ ಪ್ರಕರಣದ ಆರೋಪಿಗಳಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ವಿಜಯಪುರದಲ್ಲಿ ಸನ್ಮಾನ ಮಾಡಿರುವುದು ಮತ್ತು ಇನ್ನೋರ್ವ ಆರೋಪಿ ಶ್ರೀಕಾಂತ್ ಪಾಂಗಾರ್ಕರ್ ಅನ್ನು ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಸೇರಿಸಿಕೊಂಡಿರುವುದರ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯವ್ಯಾಪಿ ನಾಗರಿಕ ಆಕ್ರೋಶದ ಭಾಗವಾಗಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌರಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಿ.ಎಸ್ ಶ್ರೀಧರ್ ಅವರು, “ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು ದೊರೆತಿದೆಯಷ್ಟೆ, ಅವರು ಆರೋಪ ಮುಕ್ತರಾಗಿಲ್ಲ. ಜಾಮೀನು ಸಿಕ್ಕಾಗಲೇ ಅವರಿಗೆ ಸನ್ಮಾನ ಮಾಡಿರುವುದು ಆತಂಕದ ವಿಚಾರ. ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆಯ ಹಿಂದೆ ಇರುವುದು ನಾವೇ ಎಂದು ಸಂಘ ಪರಿವಾರ ಒಪ್ಪಿಕೊಳ್ಳುತ್ತಿದೆ” ಎಂದರು.
ಈದಿನ.ಕಾಂನ ಬಿ.ಸಿ ಬಸವರಾಜ್ ಅವರು ಮಾತನಾಡಿ, “ಹತ್ಯೆ, ಅತ್ಯಾಚಾರ ಆರೋಪಿಗಳಿಗೆ ಸನ್ಮಾನ ಮಾಡುವ ಪ್ರಕರಣಗಳು ಉತ್ತರ ಭಾರತದಲ್ಲಿ ವರದಿಯಾಗುತ್ತಿತ್ತು. ಕರ್ನಾಟಕದಲ್ಲಿ ಆದ ಉದಾಹರಣೆಗಳಿಲ್ಲ. ಇಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆ. ಕುವೆಂಪು, ಬವಸಣ್ಣನ ನಾಡಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ವಿಷಾದನೀಯ” ಎಂದು ಹೇಳಿದರು.
ಚಿಂತಕ ಶಿವಸುಂದರ್ ಅವರು ಮಾತನಾಡಿ, “ಆರೋಪಿಗಳಿಗೆ ಸನ್ಮಾನ ಮಾಡುವ ಮೂಲಕ ಗೌರಿ ಹತ್ಯೆ ಹಿಂದೆ ನಾವೇ ಇರುವುದು ಎಂದು ಸಂಘ ಪರಿವಾರ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದೆ. ಗೌರಿ ಹತ್ಯೆ ಪ್ರಕರಣದ ವಿಚಾರಣೆಯಲ್ಲೂ ವಿಳಂಬವಾಗುತ್ತಿದೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದರೂ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ವಿಳಂಬವಾಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ತ್ವರಿತ ವಿಚಾರಣೆ ನಡೆಯಬೇಕಿದೆ” ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಕರ್ನಾಟಕ ಶ್ರಮಿಕ ಶಕ್ತಿಯ ಚೆನ್ನಮ್ಮ, ವಕೀಲರಾದ ವಿನಯ್ ಶ್ರೀನಿವಾಸ್, ಪೂರ್ಣ, ಹೋರಾಟಗಾರ್ತಿ ಎಸ್ ವರಲಕ್ಷಿ ಸೇರಿದಂತೆ ಗೌರಿ ಲಂಕೇಶ್ ಸಂಗಾತಿಗಳು, ಪ್ರಗತಿಪರ ಚಿಂತಕರು, ಹೋರಾಟಗಾರರು ಇದ್ದರು.
ಇದನ್ನೂ ಓದಿ : ಗೌರಿ ಹತ್ಯೆ ಆರೋಪಿಯನ್ನು ಹುದ್ದೆಯಿಂದ ಹೊರಗಿಟ್ಟ ಶಿವಸೇನೆ | ಚುನಾವಣೆಗಾಗಿ ನೈತಿಕತೆಯ ಮುಸುಕು : ಸುಪ್ರಿಯಾ ಸುಳೆ


